ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜೆಗೆ ಹೂ ಬೆಲೆ ಮುಳ್ಳು

Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸೂರ್ಯೋದಯಕ್ಕೂ ಮುನ್ನವೇ ಅಲ್ಲಿ ಜನದಟ್ಟಣೆ. ಕೆಂಪು ಗುಲಾಬಿ, ಸುನಾಮಿ ಗುಲಾಬಿ, ಕಣಗಿಲೆ ಮಾಲೆ, ದುಂಡು ಮಲ್ಲೆ... ಹೀಗೆ ತರಹೇವಾರಿ ಹೂಗಳ ಸುಗಂಧ. ಕೋಳಿ ಕೂಗುವ ಹೊತ್ತಿನಲ್ಲಿ ವ್ಯಾಪಾರಿಗಳ ಕಾರುಬಾರು. ಬೆಳಿಗ್ಗೆ 10 ಗಂಟೆಯೊಳಗೆ ಅಂದಿನ ವ್ಯಾಪಾರದ ಲಾಭವನ್ನು ಅವರೆಲ್ಲಾ ಜೇಬಿಗಿಳಿಸಿಕೊಂಡಿರುತ್ತಾರೆ. ಆದರೆ ಆ ಸಮಯ ಸೃಷ್ಟಿಯಾಗುವ ವಾತಾವರಣ ಹಳ್ಳಿಗಳ ಜಾತ್ರೆಯನ್ನೇ ನೆನಪಿಸುವಂತಿರುತ್ತದೆ.

ಸದಾ ಜನಜಂಗುಳಿಯಿಂದ ತುಂಬಿರುವ ಕೆ.ಆರ್‌. ಮಾರುಕಟ್ಟೆಯ ಹೂವಿನ ಮಾರುಕಟ್ಟೆ ಮುಂಜಾನೆ ಕಂಡು ಬರುವುದು ಹೀಗೆ. ಬೆಳಗಾಗುವುದರೊಳಗೆ ಮಾರುಕಟ್ಟೆ ಪ್ರವೇಶಿಸುವ ಕೂಲಿಕಾರ್ಮಿಕರು ಮೂಟೆ ಮೂಟೆಗಳಲ್ಲಿ ತುಂಬಿದ ಹೂವುಗಳನ್ನು ತೆಗೆದು ಕಟ್ಟಲು ಮುಂದಾಗುತ್ತಾರೆ. ಸೂಜಿಯಿಂದ ಪಟಪಟನೆ ಪೋಣಿಸುವ ಹೂಗಳು ಸುಂದರ ಹಾರದ ರೂಪ ಪಡೆದುಕೊಳ್ಳುತ್ತವೆ.

ಇದು ನಿತ್ಯದ ಕಾಯಕವೂ ಆಗಿದೆ. ಇನ್ನು ಹಬ್ಬಗಳ ಸಂದರ್ಭಗಳಲ್ಲಂತೂ ಹೆಚ್ಚು ಶ್ರಮ ಪಡಲೇಬೇಕು. ಮಾರುಕಟ್ಟೆ ಎದುರಿಗಿನ ಚಿಲ್ಲರೆ ವ್ಯಾಪಾರಿಗಳದ್ದು ಮತ್ತೊಂದು ಲೋಕ. ಪಕ್ಕದಲ್ಲೇ ಸಗಟು ಬೆಲೆಗೋ ಅಥವಾ ರೈತರಿಂದಲೋ ನೇರವಾಗಿ ಖರೀದಿಸಿ ಮಾರಾಟ ಮಾಡುತ್ತಾರೆ. ಕಣಗಿಲೆ, ಗುಲಾಬಿ, ಸೇವಂತಿಗೆ, ದುಂಡುಮಲ್ಲೆ, ಕನಕಾಂಬರ, ರುದ್ರಾಕ್ಷಿ, ತಾವರೆ ಹೂ ಹಾಗೂ ತುಳಸಿ  ಹಾರಗಳು ಬಿಕರಿಯಾಗುತ್ತವೆ.

ವರ್ಷದಿಂದ ವರ್ಷಕ್ಕೆ ಹೂವಿನ ಬೆಲೆ ಹೆಚ್ಚುತ್ತಿರುವುದರಿಂದ ವ್ಯಾಪಾರದಲ್ಲೂ ಏರಿಳಿತ ಕಂಡುಬಂದಿದೆಯಂತೆ. ಇಪ್ಪತ್ತೈದು ವರ್ಷಗಳ ಹಿಂದೆ ಗಣೇಶ ಚತುರ್ಥಿ, ದಸರಾ ಹಬ್ಬಗಳ ಸಂದರ್ಭಗಳಲ್ಲಿ ಇಲ್ಲಿನ ವ್ಯಾಪಾರಿಗಳಿಗೆ ಬರುತ್ತಿದ್ದ ಆರ್ಡರ್‌ನ ಪ್ರಮಾಣ ಇತ್ತೀಚಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ತೀರ ಕಡಿಮೆಯಾಗಿದೆಯಂತೆ. ಕಾರಣ ಹೆಚ್ಚುತ್ತಿರುವ ಹೂವಿನ ಬೆಲೆ ಹಾಗೂ ಹಾರ ಮಾಡಿ ಮಾರುವವರ ಸಂಖ್ಯೆ. 

‘ನಮ್ಮಲ್ಲಿ ಐದುನೂರು ರೂಪಾಯಿ ಹಾರಗಳನ್ನು ಹೆಚ್ಚಾಗಿ ಮಾಡುತ್ತೇವೆ. ಒಂದು ಹಾರಕ್ಕೆ 500 ಗುಲಾಬಿ ಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಆರ್ಡರ್‌ ಬರುವುದೂ ಕಡಿಮೆಯಾಗಿದೆ. ಮುಂಚೆ ಗಣೇಶನನ್ನು ಕೂರಿಸುವವರು ಬಂದು ಆರ್ಡರ್‌ ಕೊಡುತ್ತಿದ್ದರು. ನೂರರಿಂದ 200 ಹಾರಗಳನ್ನು ಮಾಡುತ್ತಿದ್ದೆವು. ಆದರೆ ಈಗ ದಿನಕ್ಕೆ 10ರಿಂದ 20 ಹಾರಗಳನ್ನಷ್ಟೇ ಮಾಡುತ್ತೇವೆ.

ಹಬ್ಬದ ಹಿಂದಿನ ದಿನ ಮಾರುಕಟ್ಟೆಗೆ ಬಂದು ಎಲ್ಲೆಂದರಲ್ಲಿ ಹಾರಗಳು ಸಿಗುವುದರಿಂದ ಅಲ್ಲೇ ಖರೀದಿಸಿ ಹೋಗು

ತ್ತಾರೆ. ಹಾಗಾಗಿ ನಮ್ಮಲ್ಲೂ ವ್ಯಾಪಾರ ಪ್ರಮಾಣ ಇಳಿಮುಖವಾಗಿದೆ’ ಎಂದು ಹೇಳುತ್ತಾರೆ 35 ವರ್ಷಗಳಿಂದ ಹೂವಿನ ವ್ಯಾಪಾರ ಮಾಡುತ್ತಿರುವ ಮುತ್ತು.

ಇಲ್ಲಿನ ಮಾರುಕಟ್ಟೆಗೆ ಬಿಡದಿ, ಹೊಸೂರು, ಹೊಸಕೋಟೆ, ಕುಂಬಳಗೋಡು, ಮಾಲೂರು, ಯಲಹಂಕ, ನೆಲಮಂಗಲ, ತುಮಕೂರು ಜಿಲ್ಲೆಯ ಹಳ್ಳಿಗಳಿಂದಲೂ ಹೂ ಬರುತ್ತದೆ. ಲಾರಿಗಟ್ಟಲೆ ಬರುವ ಹೂವಿನ ಹರಾಜು ಸಹ ಇಲ್ಲಿಯೇ ನಡೆಯುತ್ತದೆ. ಸಗಟು ವ್ಯಾಪಾರಿಗಳು ತಮಗೆ ಬೇಕಾದ ಹೂ ಖರೀದಿಸಲು ಮುಂಜಾನೆಯಿಂದಲೇ ಮಾರುಕಟ್ಟೆಯಲ್ಲಿ ಜಮಾಯಿಸಿರುತ್ತಾರೆ.

ಹೂವಿನ ಮಾರುಕಟ್ಟೆಯ ಹೊರಭಾಗದಲ್ಲಿ ಬೆಳಿಗ್ಗೆ 10ರವರೆಗೂ ವ್ಯಾಪಾರಿಗಳ ಭರಾಟೆ ಕಂಡುಬರುತ್ತದೆ. ಇಪ್ಪತ್ತು ಗುಲಾಬಿ ಹೂವುಗಳ ಒಂದು ಕಟ್ಟು ಮಾಡಿ ಮಾರುತ್ತಾರೆ. ಸಾಮಾನ್ಯ ದಿನಗಳಲ್ಲಿ 20ರಿಂದ 30 ರೂಪಾಯಿ ಇರುವ ಒಂದು ಕಟ್ಟಿನ ಬೆಲೆ ಹಬ್ಬಗಳ ಸಂದರ್ಭದಲ್ಲಿ ಮೂರಂಕಿ ದಾಟುತ್ತದೆ.

‘ಬೆಂಗಳೂರು ಸುತ್ತಮುತ್ತಲಿನ ಹಳ್ಳಿಗಳಿಂದ ಗುಲಾಬಿ ಬರುತ್ತದೆ. ಬಿಳಿ, ಹಳದಿ, ನಸುಗೆಂಪು ಹಾಗೂ ಕೆಂಪು ಗುಲಾಬಿ ಮಾರುತ್ತೇವೆ. ದಿನವೂ 100ರಿಂದ 200 ಕಟ್ಟು ವ್ಯಾಪಾರ ಮಾಡುತ್ತೇವೆ. ಗಣೇಶ ಚತುರ್ಥಿಗೆ 400ರಿಂದ 500 ಕಟ್ಟು ಹೂ ಹಾಕುತ್ತೇವೆ. ಡೆಕೊರೇಟರ್‌ಗಳಿಂದ ಆರ್ಡರ್‌ ಬಂದಿದೆ. ಹೆಚ್ಚಾಗಿ ಕೆಂಪು ಗುಲಾಬಿಗೆ ಬೇಡಿಕೆ ಇದೆ’ ಎಂದು ಹಬ್ಬದ ಬೇಡಿಕೆ ಬಗ್ಗೆ ಮಾಹಿತಿ ನೀಡುತ್ತಾರೆ ರವಿ ಕುಮಾರ್‌.

ಜರ್ಬೆರಾಗೆ ಹೆಚ್ಚಿದ ಬೇಡಿಕೆ

ಗುಲಾಬಿ ಹೂವಿನಷ್ಟೇ ಬೇಡಿಕೆ ಜರ್ಬೆರಾಗೂ ಇದೆ. ನಗರದ ವ್ಯಾಪಾರಿಗಳಲ್ಲದೇ ತಮಿಳುನಾಡು, ಆಂಧ್ರಪ್ರದೇಶದಿಂದಲೂ ವ್ಯಾಪಾರಿಗಳು ಇಲ್ಲಿಗೆ ಬಂದು ಜರ್ಬೆರಾ ಕೊಳ್ಳುತ್ತಾರೆ. ಒಂದು ಕಟ್ಟು ಜರ್ಬೆರಾ ಬೆಲೆ 15ರಿಂದ 20 ರೂಪಾಯಿ ಇದ್ದದ್ದು ಹಬ್ಬ ಸಮೀಪಿಸುತ್ತಿದ್ದಂತೆ 40ರಿಂದ 50 ಆಗಿದೆಯಂತೆ.

‘ಚಿಂತಾಮಣಿ, ದೊಡ್ಡಬಳ್ಳಾಪುರದಿಂದ ಹೆಚ್ಚಾಗಿ ಜರ್ಬೆರಾ ಬರುತ್ತದೆ. ಹಬ್ಬಕ್ಕೆ 800ರಿಂದ 900 ಕಟ್ಟು ವ್ಯಾಪಾರದ ನಿರೀಕ್ಷೆಯಿದೆ. ಇದರಲ್ಲಿ ಐದು ಬಣ್ಣಗಳಿವೆ. ಗಣೇಶನನ್ನು ಕೂರಿಸುವ ಪ್ರಭಾವಳಿ ಅಲಂಕಾರಕ್ಕೆ ಹೆಚ್ಚಾಗಿ ಖರೀದಿಸುತ್ತಾರೆ’ ಎನ್ನುತ್ತಾರೆ ನಾಯಂಡಹಳ್ಳಿಯ ಶಿವಕುಮಾರ್‌.

ಹೂಕಟ್ಟುವ ಕಾರ್ಮಿಕರು
ನಗರದ ಬೇರೆ ಬೇರೆ ಪ್ರದೇಶಗಳಿಂದ ಬಂದು ಮಾರುಕಟ್ಟೆ ಆವರಣದಲ್ಲೇ ರಾಶಿರಾಶಿ ಹೂ ಹಾಕಿಕೊಂಡು ಕಟ್ಟುವ ಕೂಲಿಕಾರ್ಮಿಕರಿದ್ದಾರೆ. ಕೆ.ಜಿ.ಗೆ 10 ರೂಪಾಯಿಯಂತೆ ದಿನವೆಲ್ಲಾ ಹೂಕಟ್ಟಿ ಸಂಪಾದನೆ ಮಾಡುತ್ತಾರೆ. ‘ನಮ್ಮಲ್ಲಿ ಎಂಟು ಮಂದಿ ಹೂ ಕಟ್ಟುವವರಿದ್ದಾರೆ. ದಿನಕ್ಕೆ ಒಬ್ಬರು 30 ಕೆ.ಜಿ. ಹೂ ಪೋಣಿಸುತ್ತಾರೆ. 100 ಕೆ.ಜಿ.ಗೂ ಅಧಿಕ ಹೂ ಮಾರುತ್ತೇವೆ’ ಎನ್ನುತ್ತಾರೆ ಹಳೆಗುಡ್ಡದಹಳ್ಳಿಯ ಮುನಿರತ್ನಮ್ಮ.

ವರ್ಷದಿಂದ ವರ್ಷಕ್ಕೆ ಹೂವಿನ ಬೆಲೆ ಹೆಚ್ಚುತ್ತಿರುವುದರಿಂದ ವ್ಯಾಪಾರಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆಯಂತೆ. ಗ್ರಾಹಕರ ನಿರೀಕ್ಷೆಯಲ್ಲಿ ಕಟ್ಟುವ ಹಾರಗಳು ಸಮಯಕ್ಕೆ ಸರಿಯಾಗಿ ಬಿಕರಿಯಾದರೆ ಹಾಕಿದ ಬಂಡವಾಳಕ್ಕೆ ಮೋಸವಿಲ್ಲ ಎಂದು ಹೇಳುವ ಇಲ್ಲಿನ ಬಹುತೇಕ ವ್ಯಾಪಾರಿಗಳು ಗಣೇಶ ಚತುರ್ಥಿಯ ವಾ್ಯಪಾರದ ನಿರೀಕ್ಷೆಯಲ್ಲಿದ್ದಾರೆ.
ಚಿತ್ರಗಳು: ಸವಿತಾ ಬಿ.ಆರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT