ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂನಾ ಒಪ್ಪಂದ ಇತಿಹಾಸದ ಕೆಲವು ಮರೆತ ಪುಟಗಳು

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸೆಪ್ಟೆಂಬರ್ 13, 1932: 9 ತಿಂಗಳಿನಿಂದ ಯರವಾಡಾ ಜೈಲಿನಲ್ಲಿದ್ದ ಗಾಂಧಿ ಬ್ರಿಟಿಷ್ ಸರ್ಕಾರದ ಜೊತೆ ತಮ್ಮ ಪತ್ರ ವ್ಯವಹಾರ ವಿಫಲವಾದ ಕಾರಣ ಸೆಪ್ಟೆಂಬರ್ 20ನೇ ತಾರೀಕಿನಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಪ್ರಕಟಿಸಿದರು.

ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಬ್ರಿಟಿಷರು ದಮನಿತ ವರ್ಗಗಳಿಗೆ ಪ್ರತ್ಯೇಕ ಮತದಾನ ಕಲ್ಪಿಸಿದ್ದು ಕಾನೂನು ಪ್ರಕಾರ ಹಿಂದೂ ಧರ್ಮವನ್ನು ಹೋಳಾಗಿಸುವ ಕ್ರಮವಾಗಿದ್ದು, ಈ ಧರ್ಮಸಂಕಟ ನಿವಾರಣೆಗೆ ಆಮರಣಾಂತ ಉಪವಾಸ ಮಾಡುತ್ತಿರುವುದಾಗಿಯೂ, ಅದು ಬ್ರಿಟಿಷರ ವಿರುದ್ಧವಲ್ಲ ಎಂದೂ ಸ್ಪಷ್ಟಪಡಿಸಿದರು. ಸೂಕ್ತ ಧಾರ್ಮಿಕ ಮಾರ್ಗದಲ್ಲಿ ನಡೆಯುವಂತೆ ಹಿಂದೂ ಧಾರ್ಮಿಕ ಪ್ರಜ್ಞೆಯನ್ನು ಕುಟುಕಿ ಎಚ್ಚರಿಸುವುದೇ ಉಪವಾಸದ ಮುಖ್ಯ ಉದ್ದೇಶವೆಂದು ಹೇಳಿಕೊಂಡರು.

ಸೆ. 15: ಗಾಂಧಿ, `ನನ್ನ ಪ್ರಾಣ ಹೋದರೆ ಅದಕ್ಕೆ ಪ್ರತಿಯೊಬ್ಬ ಹಿಂದೂವೂ ಜವಾಬ್ದಾರ. ಮೇಲ್ಜಾತಿ ಹಿಂದೂಗಳು ಮತ್ತು ದಮನಿತ ವರ್ಗಗಳ ನಡುವೆ ಕಾಟಾಚಾರದ ಒಪ್ಪಂದ ನನ್ನ ಉದ್ದೇಶವಲ್ಲ.

ಹಿಂದೂ ಸಮಾಜವು ಅಸ್ಪೃಶ್ಯತೆಯನ್ನು ಬೇರುಕಾಂಡ ಸಹಿತ ಕಿತ್ತುಹಾಕಲು ತಯಾರಿಲ್ಲದಿದ್ದರೆ ನನ್ನನ್ನು ಕಳೆದುಕೊಳ್ಳಲು ಹಿಂಜರಿಯಬಾರದು~ ಎಂದು ಬರೆದುಕೊಂಡರು.
ರಾಜಕೀಯ, ಧಾರ್ಮಿಕ ನಾಯಕರು ಚುರುಕಾದರು. ಹರಿಜನ ಪ್ರತಿನಿಧಿ ಎಮ್.ಸಿ. ರಾಜಾ ಗಾಂಧೀಜಿ ನಿಲುವಿನ ಪರ ನಿಂತರು. ಸಂವಿಧಾನ ತಜ್ಞ ತೇಜ್‌ಬಹಾದುರ್ ಸಪ್ರು ಗಾಂಧೀಜಿಯನ್ನು ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದರು. ಮದರಾಸಿನ ಮುಸ್ಲಿಂ ಮುಖಂಡ ಯಾಕೂಬ್ ಹುಸೇನ್ ಹರಿಜನರು ಪ್ರತ್ಯೇಕ ಮತದಾನ ಬೇಡಿಕೆ ಕೈಬಿಡುವಂತೆ ಆಗ್ರಹಿಸಿದರು.

ಹರಿಜನರನ್ನು ದೇವಾಲಯ, ಬಾವಿ, ಶಾಲೆ, ಸಾರ್ವಜನಿಕ ಸ್ಥಳಗಳಿಗೆ ಬಿಟ್ಟುಕೊಳ್ಳುವ ಮೂಲಕ ಹಿಂದೂಗಳು ಗಾಂಧೀಜಿಯ ಜೀವ ಉಳಿಸಬೇಕೆಂದು ರಾಜೇಂದ್ರ ಪ್ರಸಾದ್ ಕೇಳಿಕೊಂಡರು. ರಾಜಗೋಪಾಲಾಚಾರಿ 20ನೇ ತಾರೀಖು ದೇಶಬಾಂಧವರು ಪ್ರಾರ್ಥನೆ, ಉಪವಾಸ ಕೈಗೊಳ್ಳುವಂತೆ ಕೇಳಿಕೊಂಡರು.

ಗಾಂಧಿ ಹಲವು ನಿಯೋಗಗಳನ್ನು, ಪತ್ರಕರ್ತರನ್ನು ಜೈಲಿನಲ್ಲಿ ಭೇಟಿಯಾದರು. `ಉಪವಾಸವು ನನ್ನ ಕರ್ತವ್ಯ ಮತ್ತು ಅವಕಾಶವಾಗಿದೆ. ಇದು ತಲೆಮಾರುಗಳಲ್ಲಿ ಎಲ್ಲೋ ಕೆಲವರಿಗೆ ಸಿಗುವ ಅವಕಾಶವಾಗಿದೆ~ ಎಂದು ಗಾಂಧಿ ದೇಶವಿದೇಶದ ಗೆಳೆಯರಿಗೆ ಪತ್ರ ಬರೆದರು.

ಸೆ. 20: ಗಾಂಧಿ ಬೆಳಗಿನ ಎರಡೂವರೆಗೆ ಎದ್ದರು. ಉಪವಾಸದ ಕಟು ಟೀಕಾಕಾರರೂ, ತಮ್ಮ ಅಭಿಮಾನಿ ಸ್ನೇಹಿತರೂ ಆಗಿದ್ದ ಟ್ಯಾಗೋರರ ಒಪ್ಪಿಗೆ ಮತ್ತು ಹಾರೈಕೆ ಕೇಳುತ್ತ ಪತ್ರ ಬರೆದರು. ಅದನ್ನು ಅಂಚೆಗೆ ಹಾಕುವಷ್ಟರಲ್ಲಿ `ಭಾರತದ ಏಕತೆ ಮತ್ತು ಸಾಮಾಜಿಕ ಸಮಗ್ರತೆಗೆ ಅಮೂಲ್ಯ ಜೀವವನ್ನು ತ್ಯಾಗ ಮಾಡುವುದು ಯೋಗ್ಯವಾದುದು~ ಎಂದು ಟ್ಯಾಗೋರ್ ಅನುಮೋದಿಸಿದ್ದ ಟೆಲಿಗ್ರಾಂ ಬಂತು. ಬೆಳಿಗ್ಗೆ 11.30ಕ್ಕೆ ಕೊನೆಯ ಊಟ - ಬಿಸಿನೀರಿನ ಜೊತೆ ಜೇನು ಹಾಗೂ ನಿಂಬೆಹಣ್ಣಿನ ಶರಬತ್ತು ಸೇವಿಸಿದರು. ಬಿಳಿಯ ಕಬ್ಬಿಣದ ಮಂಚದ ಮೇಲೆ ಮಾವಿನ ಮರದಡಿ ಮಲಗಿದರು.

ಹೊರಗಿನ ಸಭಾಂಗಣದಲ್ಲಿ ವಿವಿಧ ಮುಖಂಡರು ಸೇರಿ ಸಭೆ ನಡೆಸಿದರು. ಅದರಲ್ಲಿ ಸಪ್ರು, ರಾಜಗೋಪಾಲಾಚಾರಿ, ಚಿಮ್ಮನ್‌ಲಾಲ್ ಮೆಹ್ತಾ, ಜಿ.ಡಿ.ಬಿರ್ಲಾ, ರಾಜೇಂದ್ರ ಪ್ರಸಾದ್, ಜಯಕರ್, ಡಾ.ಅಂಬೇಡ್ಕರ್, ಡಾ.ಸೋಲಂಕಿ ಮುಂತಾದವರಿದ್ದರು. ಹಿಂದೂ ಮತ್ತು ಹರಿಜನರಿಗೆ ಒಂದೇ ಮತದಾನ ವ್ಯವಸ್ಥೆಯನ್ನು ಗಾಂಧಿ ಬಯಸಿದ್ದರು.

ಇಬ್ಬರೂ ಸೇರಿ ಹಿಂದೂ-ಹರಿಜನ ಪ್ರತಿನಿಧಿಗಳನ್ನು ಪ್ರಜಾಪ್ರತಿನಿಧಿ ಸಭೆಗೆ ಆರಿಸಿ ಕಳಿಸಲಿ ಎಂದು ಬಯಸಿದ್ದರು. ದುಂಡುಮೇಜಿನ ಪರಿಷತ್ತಿನಲ್ಲಿ ಹರಿಜನರಿಗೆ ಸ್ಥಾನ ಮೀಸಲನ್ನು ಒಪ್ಪಿರದಿದ್ದರೂ ಉಪವಾಸದ ಮುನ್ನಾದಿನ ಹರಿಜನರಿಗೆ ನಿಗದಿತ ಸ್ಥಾನ ಮೀಸಲಿಡಲು ತಮ್ಮ ಅಭ್ಯಂತರವಿಲ್ಲ ಎಂದು ಹೇಳಿದ್ದರು. ಅದಕ್ಕೆ ಅಂಬೇಡ್ಕರ್ ಆಕ್ಷೇಪಿಸಿದರು.

ಅಸೆಂಬ್ಲಿಗೆ ಚುನಾಯಿತರಾಗುವ ದಮನಿತ ವರ್ಗದ ಅಭ್ಯರ್ಥಿಗಳು ಹಿಂದೂ ಮತ್ತು ಹರಿಜನ ಓಟುಗಳಿಂದ ಚುನಾಯಿತರಾದರೆ ಹರಿಜನ ಹಿತಾಸಕ್ತಿಯನ್ನು ಇತರೆ ಹಿಂದೂಗಳ ಒತ್ತಡದೆದುರು ಕಾಯಲು ವಿಫಲರಾಗುತ್ತಾರೆ. ಹಾಗೇನಾದರೂ ಹರಿಜನ ಪ್ರತಿನಿಧಿ ಇತರೆ ಹಿಂದೂಗಳ ಹಿತಾಸಕ್ತಿ ಕಾಯದಿದ್ದಲ್ಲಿ ನಂತರದ ಚುನಾವಣೆಯಲ್ಲಿ ಬಹುಸಂಖ್ಯಾತ ಹಿಂದೂಗಳು ಆತನನ್ನು ಸೋಲಿಸಿ, ವಿಧೇಯ ಹರಿಜನ ಪ್ರತಿನಿಧಿಯನ್ನೇ ಆಯ್ಕೆ ಮಾಡುತ್ತಾರೆ ಎನ್ನುವುದು ಅವರ ಆತಂಕವಾಗಿತ್ತು.

ಈ ನ್ಯಾಯಬದ್ಧ ಆಕ್ಷೇಪಣೆಯನ್ನು ಸರಿಪಡಿಸಲು ಸಪ್ರು ಒಂದು ಯೋಜನೆ ಸಿದ್ಧಪಡಿಸಿದರು. ಎಲ್ಲ ಹರಿಜನ ಪ್ರತಿನಿಧಿಗಳು ಹಿಂದೂ ಮತ್ತು ಹರಿಜನ ಮತದಾರರಿಂದ ಒಟ್ಟಿಗೇ ಆರಿಸಲ್ಪಡುತ್ತಾರೆ. ಹಿಂದೂ-ಹರಿಜನ ಸೀಟುಗಳ ಸಂಖ್ಯೆಯನ್ನು ಮೊದಲೇ ನಿರ್ಧರಿಸಲಾಗುತ್ತದೆ.
 
ಹರಿಜನ ಅಭ್ಯರ್ಥಿಗಳನ್ನು ಹಿಂದೂ-ಹರಿಜನ ಮುಖಂಡರ ಜೊತೆ ಚರ್ಚಿಸಿ ಸಿದ್ಧಪಡಿಸಲಾಗುವುದು. ಹರಿಜನ ಮೀಸಲು ಸ್ಥಾನದ ಅಭ್ಯರ್ಥಿಯ ಆಯ್ಕೆ ಎರಡು ಹಂತಗಳಲ್ಲಿ ನಡೆಯುವುದು. ಪ್ರಾಥಮಿಕ ಹಂತದಲ್ಲಿ ಹರಿಜನ ಮತದಾರರು ಮಾತ್ರ ಮತ ಹಾಕಿ ಮೂರು ಜನರ ಪಟ್ಟಿ ಸಿದ್ಧಪಡಿಸುತ್ತಾರೆ.
 
ಹಿಂದೂ ಹರಿಜನ ಮತದಾರರು ನಂತರ ಒಟ್ಟಿಗೇ ಮತಹಾಕಿ ಆ ಮೂವರಲ್ಲಿ ಒಬ್ಬರನ್ನು ಚುನಾಯಿಸುತ್ತಾರೆ. ಹಿಂದೂಗಳಿಗೆ ಮೂವರಲ್ಲಿ ಒಬ್ಬನನ್ನು ಆರಿಸುವ ಹಕ್ಕು ಮಾತ್ರ ಇರುತ್ತದೆ. ಹರಿಜನರಿಗೆ ತಮ್ಮಲ್ಲೆ ಧೈರ್ಯಶಾಲಿ ಸಮರ್ಥ ಅಭ್ಯರ್ಥಿಯನ್ನು ಆರಿಸುವ ಅವಕಾಶವೂ ಇರುತ್ತದೆ.

ಸಪ್ರು ಪ್ರಸ್ತಾಪದ ಬಗೆಗೆ ಅಂಬೇಡ್ಕರ್ ಏನು ಹೇಳಬಹುದೆಂದು ಎಲ್ಲರೂ ಆತಂಕಿತರಾಗಿ ಕಾಯುತ್ತಿದ್ದರು. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಅಂಬೇಡ್ಕರ್ ತಮ್ಮ ಸಹವರ್ತಿಗಳ ಸಲಹೆ ಪಡೆದರು. ಕೊನೆಗೆ ಈ ಪ್ರಸ್ತಾಪ ಒಪ್ಪಿದ ಅವರು ತಮ್ಮದೂ ಕೆಲ ಸೂಚನೆಗಳಿದ್ದು ಅವುಗಳನ್ನು ಸೇರಿಸಿ ಒಂದು ಸೂತ್ರ ರೂಪಿಸುವುದಾಗಿ ಹೇಳಿದರು. ಇದಕ್ಕೆ ಗಾಂಧೀಜಿ ಏನು ಹೇಳಿಯಾರೋ ಎಂಬ ಆತಂಕದಲ್ಲಿ ರಾತ್ರಿ ಕಳೆಯಿತು.

ಸೆ. 21: ಬೆಳಿಗ್ಗೆ ಏಳು ಗಂಟೆಗೇ ಯರವಾಡಾ ಜೈಲಿನ ಸಭಾಂಗಣದಲ್ಲಿ ಮುಖಂಡರು ಸಭೆ ಸೇರಿದರು. ಒಂದೇ ದಿನಕ್ಕೆ ಶಕ್ತಿಹೀನರಾದಂತೆ ಕಂಡ ಗಾಂಧಿ ನಿಧಾನ ನಡೆದು ಬಂದು ಅಧ್ಯಕ್ಷ ಗಾದಿಯಲ್ಲಿ ಕುಳಿತು ನಸುನಕ್ಕು `ಮುಂದುವರೆಯಲಿ~ ಎಂದರು. ಸಪ್ರು ಪ್ರಾಥಮಿಕ ಚುನಾವಣೆಯ ವಿಷಯ ಎತ್ತಿದಾಗ ಉಳಿದವರು ಅದಕ್ಕೆ ದನಿಗೂಡಿಸಿದರು. ಗಾಂಧೀಜಿ ಪ್ರತಿಕ್ರಿಯಿಸಲಿಲ್ಲ. ಅರ್ಧ ತಾಸು ಕಳೆಯಿತು. ಕೊನೆಗೆ `ನಿಮ್ಮ ಯೋಜನೆಗೆ ಒಪ್ಪಿದೆ, ಅದನ್ನು ವಿವರವಾಗಿ ಬರೆದುಕೊಡಿ, ನಾನು ಅಂಬೇಡ್ಕರ್ ಹಾಗೂ ರಾಜಾ ಅವರನ್ನೂ ಭೇಟಿಯಾಗ ಬಯಸುತ್ತೇನೆ?~ ಎಂದು ಹೇಳಿದರು.
ಅವರಿಬ್ಬರಿಗೂ ಕರೆ ಹೋಯಿತು. ರಾತ್ರಿ ಕಳೆಯಿತು.

 ಸೆ. 22: ಸಪ್ರು ಯೋಜನೆ ಬಗ್ಗೆ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು. `ಪ್ರಾಥಮಿಕ ಚುನಾವಣೆಯಲ್ಲಿ ಹರಿಜನ ಮೀಸಲು ಕ್ಷೇತ್ರದಲ್ಲಿ ಮಾತ್ರ ಹರಿಜನ ಅಭ್ಯರ್ಥಿಯನ್ನು ನಿಲ್ಲಿಸಬೇಕೇಕೆ? ಎಲ್ಲ ಸ್ಥಾನಗಳಲ್ಲೂ ನಿಲ್ಲಿಸಲಾಗದೇ? ಹರಿಜನರಿಂದಲೇ ಆಯ್ಕೆಯಾದವರು ಹಾಗೂ ಹಿಂದೂ-ಹರಿಜನರಿಂದ ಒಟ್ಟಾಗಿ ಆಯ್ಕೆಯಾದವರು ಎಂದು ಹರಿಜನರಲ್ಲೇ ಏಕೆ ಎರಡು ಭಾಗ ಮಾಡುವಿರಿ? ಆ ರೀತಿಯ ಯಾವ ಪ್ರತ್ಯೇಕತೆಯೂ ಬರಬಾರದು. ಚುನಾಯಿತ ಹರಿಜನ ನಾಯಕರು ಹಿಂದೂ ಮತದಾರನ ಋಣದಲ್ಲಿರುವಂತಾಗುವುದು ಬೇಡ~ ಎಂದರು. ಸಂಧಾನಕಾರರು ಖುಷಿಯಾಗಿಹೋದರು. ಅಂಬೇಡ್ಕರ್ ಬಯಸಿದ್ದಕ್ಕಿಂತ ಹೆಚ್ಚು ಕೊಡಲು ಗಾಂಧಿ ಸಿದ್ಧವಾಗಿದ್ದರು.

ಅಂದು ಮಧ್ಯಾಹ್ನ ಅಂಬೇಡ್ಕರ್ ಗಾಂಧೀಜಿಯ ಬಳಿ ಬಂದರು. ಅವರೇ ಹೆಚ್ಚು ಮಾತನಾಡಿದರು. `ನಿಮ್ಮ ಪ್ರಾಣ ಉಳಿಸಲು ನಾನು ಸಿದ್ಧ ಮಹಾತ್ಮಾಜೀ, ಆದರೆ ಅದಕ್ಕೆ ನನಗೆ ಪರಿಹಾರ ಬೇಕು~ ಎಂದರು.

ಗಾಂಧಿ ಕುಸಿಯತೊಡಗಿದ್ದರು. ಹಿಂದಿನ ಉಪವಾಸಗಳಲ್ಲಿ ಅವರು ನಿಯಮಿತವಾಗಿ ನೀರು ಕುಡಿಯುತ್ತಿದ್ದರು. ಈಗ ಅನಿಯಮಿತವಾಗಿ ಎಲ್ಲೋ ಸ್ವಲ್ಪ ನೀರು ಕುಡಿಯುತ್ತಿದ್ದರು.

ಮಸಾಜ್ ಬೇಡವೆಂದಿದ್ದರು. ಸ್ನಾನಕ್ಕೆ ಸ್ಟ್ರೆಚರಿನಲ್ಲಿ ಕರೆದೊಯ್ಯಬೇಕಿತ್ತು. ಸ್ವಲ್ಪ ಅಲುಗಾಡಿದರೂ ವಾಕರಿಕೆ ಶುರುವಾಗುತ್ತಿತ್ತು. ಪರಿಹಾರದ ಮಾತು ಕೇಳಿದ ಕೂಡಲೇ ಎದ್ದು ಕುಳಿತ ಗಾಂಧಿ, ಅಸ್ಪೃಶ್ಯರ ಕುರಿತ ತನ್ನ ನಿಷ್ಠೆಯನ್ನು ವಿವರಿಸಿ ಸಪ್ರು ಯೋಜನೆಯ ಸಾಲುಸಾಲನ್ನೂ ಚರ್ಚಿಸಿದರು. ಎಲ್ಲ ಹರಿಜನ ಅಭ್ಯರ್ಥಿಗಳೂ ಹರಿಜನರಿಂದಲೇ ನಾಮಕರಣಗೊಳ್ಳಲಿ ಎಂದು ಸೂಚಿಸಿ, ದಣಿದು ಮಲಗಿದರು.

ಸಾಯುತ್ತಿರುವ ಮಹಾತ್ಮನೆದುರು ಅಂಬೇಡ್ಕರ್ ಒತ್ತಡಕ್ಕೊಳಗಾಗುವರೆಂದು ಭಾವಿಸಲಾಗಿತ್ತು. ಆದರೆ ಗಾಂಧಿ ಹರಿಜನ ಹಿತಾಸಕ್ತಿಯನ್ನು ಕಾಯುವಲ್ಲಿ ಅಂಬೇಡ್ಕರರಿಗಿಂತ ಒಂದು ಹೆಜ್ಜೆ ಮುಂದಿಟ್ಟರು. ಅಂಬೇಡ್ಕರ್ ಗಾಂಧೀಜಿಯ  ಪ್ರಸ್ತಾಪವನ್ನು ಸ್ವಾಗತಿಸಿದರು.

ಅಂದೇ ಕಸ್ತೂರಬಾ ಸಬರಮತಿ ಜೈಲಿನಿಂದ ಯರವಾಡಾ ಜೈಲಿಗೆ ಬಂದರು. ಮಲಗಿದ ಗಂಡನನ್ನು ನೋಡಿದವರೇ ಅತ್ತಿತ್ತ ತಲೆಯಾಡಿಸಿ, `ಮತ್ತೆ, ಅದೇ ಕತೆ~ ಎಂದಾಗ ಗಾಂಧಿ ನಸುನಕ್ಕರು. ಅವರು ಬಂದಿದ್ದು ಗಾಂಧೀಜಿಯನ್ನು ಖುಷಿಗೊಳಿಸಿತ್ತು.

ಸೆ. 23: ಡಾ.ಗಿಲ್ಡರ್ ಹಾಗೂ ಡಾ.ಪಟೇಲ್ ಗಾಂಧೀಜಿ ದೇಹಸ್ಥಿತಿಯನ್ನು ಪರೀಕ್ಷಿಸಿದರು. ಅವರ ಬಿಪಿ ಏರುತ್ತಿತ್ತು. ಯಾವ ಸಮಯದಲ್ಲಾದರೂ ಸಾವು ಸಂಭವಿಸಬಹುದಾಗಿತ್ತು.

ಅಂದೇ ಅಂಬೇಡ್ಕರ್ ಹಿಂದೂ ಮುಖಂಡರೊಂದಿಗೆ ದೀರ್ಘವಾಗಿ ಚರ್ಚಿಸಿ ತಮ್ಮ ಬೇಡಿಕೆ ಮಂಡಿಸಿದರು. ಮ್ಯಾಕ್‌ಡೊನಾಲ್ಡ್ ನೀಡಿದ್ದು 71 ಸೀಟುಗಳಾದರೆ ಅಂಬೇಡ್ಕರ್ ಅದನ್ನು 197ಕ್ಕೆ ಏರಿಸಬೇಕೆಂದು ಹೇಳಿದರು. ಸಪ್ರು ಪ್ರಾಥಮಿಕ ಚುನಾವಣೆಯಲ್ಲಿ ಮೂವರು ಹರಿಜನ ಅಭ್ಯರ್ಥಿಗಳ ಪಟ್ಟಿ ತಯಾರಾಗಬೇಕೆಂದಿದ್ದರೆ ಗಾಂಧಿ ಐದು ಜನರ ಪಟ್ಟಿ ಎಂದಿದ್ದರು. ಅದನ್ನು ಅಂಬೇಡ್ಕರ್ ಎರಡಕ್ಕೆ ಇಳಿಸಬಯಸಿದರು.

ಐದು ವರ್ಷದ ನಂತರ ಪ್ರಾಥಮಿಕ ಆಯ್ಕೆ ರದ್ದಾಗಬೇಕೆಂದು ಗಾಂಧಿ ಬಯಸಿದ್ದರು. ಆದರೆ ಐದು ವರ್ಷದಲ್ಲಿ ಅಸ್ಪೃಶ್ಯತೆ ಹೋದೀತೆಂದು ಅಂಬೇಡ್ಕರ್ ಭಾವಿಸಿರಲಿಲ್ಲ. ಹಾಗಾಗಿ ಅದನ್ನು ಹದಿನೈದು ವರ್ಷಕ್ಕೆ ಏರಿಸಬೇಕೆಂದರು. ನಂತರ ಅಂದೇ ಅಂಬೇಡ್ಕರ್ ಗಾಂಧೀಜಿ ಬಳಿ ಹೋದರು. ಬಿಸಿಲ ಧಗೆಯ ದಿನ. ಮಾವಿನ ಎಲೆ ಕೂಡಾ ಅಲುಗುತ್ತಿರಲಿಲ್ಲ. ಗಾಂಧೀಜಿ ಪಿಸುಮಾತಷ್ಟೇ ಆಡಬಲ್ಲವರಾಗಿದ್ದರು. ಅಂಬೇಡ್ಕರ್ ಸೂಚಿಸಿದ ಬದಲಾವಣೆಗೆ ಗಾಂಧೀಜಿ ಪೂರ್ಣ ಒಪ್ಪಲಿಲ್ಲ. ಯಾವುದೂ ನಿರ್ಧಾರವಾಗಲಿಲ್ಲ.

ಸೆ. 24: ಅಂಬೇಡ್ಕರ್ ಮತ್ತೆ ಹಿಂದೂ ಮುಖಂಡರೊಟ್ಟಿಗೆ ಮಾತನಾಡಿದರು. ಬೆಳಿಗ್ಗೆಯಿಡೀ ಕಾವೇರಿದ ಚರ್ಚೆಯ ನಂತರ ಮಧ್ಯಾಹ್ನ ಗಾಂಧೀಜಿಯವರನ್ನು ಭೇಟಿ ಮಾಡಿದರು. ಹರಿಜನರಿಗೆ 147 ಸ್ಥಾನವನ್ನಾದರೂ ಕೊಡಲೇಬೇಕು ಎಂಬ ಅಂಬೇಡ್ಕರ್ ಬೇಡಿಕೆಯನ್ನು ಗಾಂಧೀಜಿ ಅನುಮೋದಿಸಿದರು.

ಪ್ರಾಥಮಿಕ ಚುನಾವಣೆಯನ್ನು ಹತ್ತು ವರ್ಷದ ನಂತರ ರದ್ದು ಮಾಡಬಹುದೆಂದು ಒಲ್ಲದ ಮನಸ್ಸಿನಿಂದ ಅಂಬೇಡ್ಕರ್ ಒಪ್ಪಿದ್ದನ್ನು ಗಾಂಧೀಜಿ ಒಪ್ಪಲಿಲ್ಲ. ಐದು ವರ್ಷಕ್ಕಿಂತ ಹೆಚ್ಚು ಸಾಧ್ಯವಿಲ್ಲ ಎಂದು ಪಟ್ಟುಹಿಡಿದರು. ಅದನ್ನು ಅಂಬೇಡ್ಕರ್ ನಿರಾಕರಿಸಿದರು. ಅಂಬೇಡ್ಕರ್ ತಮ್ಮ ಸಹವರ್ತಿಗಳೊಡನೆ ಚರ್ಚಿಸಿದ ನಂತರ ಹತ್ತು ವರ್ಷಕ್ಕಿಂತ ಕಡಿಮೆ ಸಾಧ್ಯವೇ ಇಲ್ಲ ಎಂದಾಗ ಸಂಧಾನ ಮತ್ತೆ ಮುರಿಯಿತು.

ಗಾಂಧಿ ಎಚ್ಚರ ತಪ್ಪುತ್ತಿದ್ದರು. ಈಗ ರಾಜಗೋಪಾಲಾಚಾರಿಯವರ ಒಂದು ಉಪಾಯ ಗಾಂಧೀಜಿಯ ಜೀವ ಉಳಿಸಿತು. ಗಾಂಧೀಜಿಯವರನ್ನು ಕೇಳದೆ ಅಂಬೇಡ್ಕರ್ ಮತ್ತು ರಾಜಗೋಪಾಲಾಚಾರಿ `ಪ್ರಾಥಮಿಕ ಚುನಾವಣೆ ರದ್ಧತಿ ಕಾಲದ ಕುರಿತು ನಂತರ ಚರ್ಚಿಸಿ ನಿರ್ಧರಿಸಲಾಗುವುದು~ ಎಂದು ಪ್ರಕಟಿಸಿದರು. ಗಾಂಧೀಜಿಯವರನ್ನು ಹೊರತುಪಡಿಸಿ ಯರವಾಡಾ ಒಪ್ಪಂದಕ್ಕೆ ಹಿಂದೂ-ಹರಿಜನ ನಾಯಕರ ಒಪ್ಪಿಗೆಯ ಮುದ್ರೆ ಬಿದ್ದಿತು.

 ಸೆ. 25: ಮುಂಬಯಿಯಲ್ಲಿ ಮುಖಂಡರ ಪೂರ್ಣಪ್ರಮಾಣದ ಸಮ್ಮೇಳನ ನಡೆದು ಒಪ್ಪಂದವನ್ನು ಅಂಗೀಕರಿಸಲಾಯಿತು. ಅಲ್ಲಿ ಮಾತನಾಡಿದ ಅಂಬೇಡ್ಕರ್, `ಗಾಂಧೀಜಿಯನ್ನು ಭೇಟಿಯಾದಾಗ ನನ್ನ ಮತ್ತು ಅವರ ನಡುವೆ ಎಷ್ಟೊಂದು ಸಮಾನ ಅಂಶಗಳಿವೆಯಲ್ಲ ಎಂದು ಅತ್ಯಾಶ್ಚರ್ಯವಾಯಿತು.

ಸಂಧಾನದ ಮಾತುಕತೆಯ ವೇಳೆ ಹಿಂದೂ ಮುಖಂಡರೊಂದಿಗೆ ಕೆಲವು ಅಂಶಗಳ ಬಗ್ಗೆ ಭಿನ್ನಾಭಿಪ್ರಾಯ ಶುರುವಾದಾಗ ಅದನ್ನು ಗಾಂಧೀಜಿ ಬಳಿ ಒಯ್ಯಲಾಗುತ್ತಿತ್ತು. ಆಶ್ಚರ್ಯವೆಂದರೆ ಪ್ರತಿಬಾರಿಯೂ ಗಾಂಧಿ ನನ್ನ ಬೆಂಬಲಕ್ಕೇ ಧಾವಿಸಿ ಬರುತ್ತಿದ್ದರು. ಇಂಥ ಕಷ್ಟದ ಸನ್ನಿವೇಶ ನಿಭಾಯಿಸಲು ಸಹಾಯ ಮಾಡಿದ ಮಹಾತ್ಮರಿಗೆ ನಾನು ಕೃತಜ್ಞನಾಗಿದ್ದೇನೆ.

ನನ್ನ ಒಂದೇ ಪಶ್ಚಾತ್ತಾಪವೆಂದರೆ ಇದೇ ನಿಲುವನ್ನು ದುಂಡುಮೇಜಿನ ಪರಿಷತ್ತಿನಲ್ಲಿ ಅವರೇಕೆ ತಳೆಯಲಿಲ್ಲ ಎನ್ನುವುದು. ಈಗಿನ ಕಾಳಜಿಯನ್ನೇ ಆಗ ತೋರಿದ್ದರೆ ಉಪವಾಸದ ಈ ಕಠಿಣ ಪರೀಕ್ಷೆ ಹಾದುಬರುವ ಪ್ರಮೇಯವೇ ಇರುತ್ತಿರಲಿಲ್ಲ. ಆದರೂ.. ಅವೆಲ್ಲ ಹಳೆಯ ಮಾತಾಯಿತು. ಈ ಠರಾವನ್ನು ನಾನು ಸಂತೋಷದಿಂದ ಬೆಂಬಲಿಸುತ್ತೇನೆ~.

ಆದರೆ ಒಪ್ಪಂದ ಅಧಿಕೃತವಾಗಲು ಬ್ರಿಟಿಷರು ಅದನ್ನು ಒಪ್ಪಿಕೊಳ್ಳಬೇಕಿತ್ತು. ಮ್ಯಾಕ್‌ಡೊನಾಲ್ಡ್ ನೀಡಿದ ಪ್ರಸ್ತಾಪಕ್ಕೆ ಬದಲು ಈ ಸೂತ್ರವನ್ನು ಅಧಿಕೃತವಾಗಿ ಒಪ್ಪಬೇಕಿತ್ತು. ಒಪ್ಪಂದದ ಪಠ್ಯವನ್ನು ಟೆಲಿಗ್ರಾಫ್ ಮೂಲಕ ಲಂಡನ್ನಿಗೆ ಕಳಿಸಲಾಯಿತು.

ಲಂಡನ್ನಿನಲ್ಲಿ ಗಾಂಧೀಜಿಯ ಗೆಳೆಯರಾದ ಸಿ.ಎಫ್.ಆಂಡ್ರ್ಯೂಸ್, ಪೊಲಾಕ್ ಮತ್ತಿತರರು ಸರ್ಕಾರವು ತುರ್ತು ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದರು. ಅಂದು ಭಾನುವಾರ. ಅನೇಕ ಮಂತ್ರಿಗಳು ಹೊರಗಿದ್ದರು. ಪ್ರಧಾನಿ ಮ್ಯಾಕ್‌ಡೊನಾಲ್ಡ್ ಮದುವೆಯೊಂದಕ್ಕೆ ಸಸೆಕ್ಸ್‌ಗೆ ಹೋಗಿದ್ದರು. ಪೂನಾ ಒಪ್ಪಂದದ ಸುದ್ದಿ ತಿಳಿದು ಮ್ಯಾಕ್‌ಡೊನಾಲ್ಡ್ ಮತ್ತಿತರರು ಲಂಡನ್ನಿಗೆ ಧಾವಿಸಿ ನಡುರಾತ್ರಿಯ ತನಕ ಒಪ್ಪಂದದ ಸಾಲುಸಾಲನ್ನೂ ಪರಿಶೀಲಿಸಿದರು.

ಸೆ. 26: ರವೀಂದ್ರನಾಥ್ ಟ್ಯಾಗೋರ್ ಕಲಕತ್ತಾದಿಂದ ಪೂನಾಗೆ ಬಂದರು. ಆಯ್ದ ಬಂಗಾಳಿ ಗೀತೆಗಳನ್ನು ಹಾಡಿದರು. ಧಾರ್ಮಿಕ ಗೀತೆಗಳನ್ನು ಕಲಾವಿದರ ವಾದ್ಯವೃಂದವು ನುಡಿಸಿತು. ಅವರೆಡೆ ಕ್ಷೀಣನಗೆ ಬೀರಿದ ಗಾಂಧಿ ತಮ್ಮ ಸುತ್ತ ಇರುವ ಕೆಲವೇ ವಸ್ತುಗಳಲ್ಲಿ ಯಾವುದು ಯಾರಿಗೆ ಎಂದು ಕಸ್ತೂರಿಬಾ ಬಳಿ ಸೂಚಿಸುತ್ತಿದ್ದರು.

ಕೆಲ ಗಂಟೆಗಳ ನಂತರ ಲಂಡನ್, ದೆಹಲಿ ಎರಡೂ ಕಡೆ ಒಂದೇ ಸಾರಿ ಯರವಾಡಾ ಒಪ್ಪಂದವನ್ನು ಅಂಗೀಕರಿಸಿದ್ದಾಗಿ ಬ್ರಿಟಿಷ್ ಸರ್ಕಾರ ಪ್ರಕಟಿಸಿತು. ಮಧ್ಯಾಹ್ನ 5.15ಕ್ಕೆ ಟ್ಯಾಗೋರ್, ಪಟೇಲ್, ಮಹದೇವ ದೇಸಾಯಿ, ಸರೋಜಿನಿ ನಾಯ್ಡು, ಪತ್ರಿಕಾ ಪ್ರತಿನಿಧಿಗಳು, ಸಂಧಾನಕಾರರು ಎಲ್ಲರೆದುರಿಗೆ ಕಸ್ತೂರಿಬಾ ಒಂದು ಲೋಟ ಕಿತ್ತಳೆಹಣ್ಣಿನ ರಸವನ್ನು ಗಾಂಧೀಜಿಗೆ ಕುಡಿಸಿದರು.

ಅಂಬೇಡ್ಕರ್ ಜೊತೆಗಿನ ಒಪ್ಪಂದಕ್ಕಾಗಿ ಮಾತ್ರವಾಗಿದ್ದರೆ ಗಾಂಧಿ ಉಪವಾಸ ಕೂರುವ ಅಗತ್ಯವಿರಲಿಲ್ಲ. ಭಾರತೀಯರ ಜೊತೆ ಗಾಂಧೀಜಿಗೆ ತರ್ಕ ಮತ್ತು ಕಾನೂನಿಗೆ ನಿಲುಕದ ಸಂಬಂಧವಿತ್ತು.
 
ಅಸ್ಪೃಶ್ಯತೆಯಿಂದ ಕಳಂಕಿತಗೊಂಡ, ಜಾತಿಪದ್ಧತಿಯಿಂದ ಹೋಳಾಗಿರುವ ಹಿಂದೂಧರ್ಮ ಅಸ್ಪೃಶ್ಯರಿಗೆ ವಿಶೇಷ ಮತದಾನ ವ್ಯವಸ್ಥೆ ನೀಡಿದರೆ ಮತ್ತಷ್ಟು ಛಿದ್ರವಾದೀತು; ಶತಮಾನಗಳ ನಂತರ ಮೇಲ್ಜಾತಿ ಹಿಂದೂಗಳು ಸುಧಾರಣೆಯ ಕುರಿತು ಯೋಚಿಸುತ್ತಿರುವಾಗ ಇಂತಹ ಕ್ರಮವು ಒಡಕನ್ನುಂಟುಮಾಡುತ್ತದೆನ್ನುವುದು ಅವರ ನಿಲುವಾಗಿತ್ತು. ವ್ಯಕ್ತಿಗತ ಬದಲಾವಣೆಯಲ್ಲಿ ಹೆಚ್ಚು ನಂಬಿಕೆ ಇಟ್ಟ ಗಾಂಧೀಜಿ ಬರಿಯ ಕಾನೂನಷ್ಟೇ ಅಲ್ಲ, ಹಿಂದೂಗಳ ಮನಃಪರಿವರ್ತನೆಯಾಗಬೇಕೆಂದು ಬಯಸಿದ್ದರು.

ಗಾಂಧಿ ಉಪವಾಸದಿಂದ ಹೆಚ್ಚುಕಮ್ಮಿ 25 ಕೋಟಿ ಹಿಂದೂಗಳು ಧಾರ್ಮಿಕ ಭಾವತೀವ್ರತೆಗೆ  ಒಳಗಾದರು. ಉಪವಾಸದ ಮುನ್ನಾದಿನ ಅಲಹಾಬಾದಿನ 12 ದೇವಾಲಯಗಳು ಮೊತ್ತಮೊದಲ ಬಾರಿಗೆ ಹರಿಜನರಿಗೆ ಬಾಗಿಲು ತೆರೆದವು.

ಉಪವಾಸದ ಮೊದಲ ದಿನ ದೇಶದಾದ್ಯಂತ ಹಲವು ದೇವಾಲಯಗಳು ಹರಿಜನರಿಗೆ ಪ್ರವೇಶ ಅಂಗೀಕರಿಸಿದವು. ಕಲಕತ್ತಾದ ಕಾಳಿಘಾಟ್ ದೇವಾಲಯ, ಕಾಶಿಯ ರಾಮಮಂದಿರಗಳು ಅಸ್ಪೃಶ್ಯರಿಗೆ ತೆರೆದುಕೊಂಡವು. ದೆಹಲಿಯ ಬೀದಿಗಳಲ್ಲಿ, ದೇವಸ್ಥಾನಗಳಲ್ಲಿ ಮೇಲ್ಜಾತಿ ಹಿಂದೂಗಳು, ಹರಿಜನರು ಒಟ್ಟಾಗಿ ಮೆರವಣಿಗೆ ನಡೆಸಿದರು.
ಮುಂಬಯಿಯ ನ್ಯಾಷನಲಿಸ್ಟ್ ಮಹಿಳಾ ಸಂಘಟನೆ ಏಳು ದೊಡ್ಡ ದೇವಾಲಯದೆದುರು ಅಸ್ಪೃಶ್ಯರ ದೇವಾಲಯ ಪ್ರವೇಶದ ಕುರಿತು ಸ್ವಯಂಸೇವಕರ ಸಹಾಯದಿಂದ ಮತದಾನವೊಂದನ್ನು ಏರ್ಪಡಿಸಿತು. 24,797 ಜನರು ದೇವಾಲಯ ಪ್ರವೇಶದ ಪರವಾಗಿ, 445 ಜನರು ವಿರುದ್ಧವಾಗಿ ಮತ ಚಲಾಯಿಸಿದ್ದರು. ಅದರ ಪರಿಣಾಮವಾಗಿ ಇದುವರೆಗೆ ಹರಿಜನರು ಕಾಲಿಡದ ದೇವಾಲಯಗಳು ಅವರಿಗೆ ತೆರೆದುಕೊಂಡವು.

ಇದು ಸೆ. 26ರವರೆಗೆ ಮುಂದುವರೆಯಿತು. ಸೆ. 26ರಿಂದ ಗಾಂಧಿ ಹುಟ್ಟಿದ ದಿನವಾದ ಅಕ್ಟೋಬರ್ 2ರವರೆಗೆ ಒಂದು ವಾರವನ್ನು `ಅಸ್ಪೃಶ್ಯತಾ ವಿರೋಧಿ ವಾರ~ ಎಂದು ಕರೆಯಲಾಗಿತ್ತು. ಎಷ್ಟೆಷ್ಟೋ ಹಿಂದೂ ಪವಿತ್ರ ಸ್ಥಳಗಳು ಹರಿಜನರನ್ನು ಒಳಬಿಟ್ಟುಕೊಳ್ಳಲು ಶುರುಮಾಡಿದವು.
 
ದಿನದಿನವೂ ನೂರಾರು ದೇವಾಲಯಗಳ ಯಾದಿ ಪ್ರಕಟವಾಗತೊಡಗಿತು. ಹಳ್ಳಿ-ಪಟ್ಟಣ-ನಗರಗಳಲ್ಲಿ ಅಸ್ಪೃಶ್ಯರ ವಿರುದ್ಧ ತಾರತಮ್ಯ ನಿಲ್ಲಿಸುವಂತೆ ಗೊತ್ತುವಳಿ ಸ್ವೀಕರಿಸಲಾಯಿತು. ಸುಧಾರಣೆಯ ಚೈತನ್ಯ, ಪಶ್ಚಾತ್ತಾಪ, ಆತ್ಮಶುದ್ಧಿಯ ಯತ್ನಗಳು ದೇಶದಾದ್ಯಂತ ಹರಡಿದವು.

ಉಪವಾಸವಿಲ್ಲದೇ ಅಂಬೇಡ್ಕರ್-ಗಾಂಧೀಜಿ ನಡುವೆ ಕಾಗದದ ಮೇಲೆ ಸಹಿಯಷ್ಟೇ ಆಗಿದ್ದರೆ ಪೂನಾ ಒಪ್ಪಂದ ದೇಶವಾಸಿಗಳ ಮೇಲೆ ಈ ಪರಿಣಾಮ ಬೀರಲು ಸಾಧ್ಯವಿರಲಿಲ್ಲ.

ಪೂನಾ ಒಪ್ಪಂದದ ಕುರಿತ ಹಲವು ಧ್ವನಿಗಳ ನಡುವೆ, ಪ್ರಶ್ನಾರ್ಹ ಸಾಲುಗಳ ನಡುವೆ ಫಿಶರ್ ದಾಖಲಿಸಿದ್ದು ಇದು.

ಇದು ಉಪವಾಸ- ಸತ್ಯಾಗ್ರಹ- ಹೋರಾಟಗಳನ್ನು ಮತ್ತೆ ಮುನ್ನೆಲೆಯ ಚರ್ಚೆಗೆ ತಂದಿರುವ ಕಾಲ. ಅಣ್ಣಾ ಹಜಾರೆ ಉಪವಾಸ, ಅದಕ್ಕೆ ದೇಶದಾದ್ಯಂತ ವ್ಯಕ್ತವಾದ ಬೆಂಬಲ ಗಮನಿಸಿ ಅದನ್ನು ಗಾಂಧೀಜಿಯ ಉಪವಾಸ ಸತ್ಯಾಗ್ರಹ ಹಾಗೂ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಹೋಲಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಮರೆತೇ ಹೋಗಿರಬಹುದಾದ ಇತಿಹಾಸದ ಕೆಲವು ಪುಟಗಳನ್ನು ಮರುಪರಿಶೀಲಿಸುವುದು ಒಳ್ಳೆಯದು.
 `ತನ್ನ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ಅದು~ ಎಂದು ಅಂಬೇಡ್ಕರ್ ನಂತರ ಪರಿತಪಿಸಿದ್ದ ಪೂನಾ ಒಪ್ಪಂದಕ್ಕೆ ಸಹಿ ಮಾಡಿದ ದಿನ ಸೆಪ್ಟೆಂಬರ್ 25. ಅಕ್ಟೋಬರ್ 2 ನಮಗೆ ಇನ್ನೂ ಅರ್ಥವಾಗದ ಗಾಂಧಿಯೆಂಬ ಮಹಾ ಚತುರ ರಾಜಕಾರಣಿ-ಸಂತ ಹುಟ್ಟಿದ ದಿನ. ವೈಯಕ್ತಿಕ ಸುಧಾರಣೆಗೆ ಒತ್ತುಕೊಟ್ಟ ಗಾಂಧೀಜಿ ಹಾಗೂ ಹಕ್ಕಿನ ಪ್ರಶ್ನೆಯೆತ್ತಿ ಸಾಮಾಜಿಕ ಬದಲಾವಣೆಯನ್ನು ಕಾನೂನಿನ ಮೂಲಕ, ಸ್ವಾಭಿಮಾನಿ ಹೋರಾಟದ ಮೂಲಕ ಪಡೆದ ಅಂಬೇಡ್ಕರ್ ಇವರ ವೈರುಧ್ಯಗಳು ಮುಖಾಮುಖಿಯಾದದ್ದು ಆಗಲೇ.
ಭಾರತದಲ್ಲಿ `ನ್ಯೂಯಾರ್ಕ್ ಟೈಮ್ಸ~ ಪತ್ರಿಕೆಯ ವರದಿಗಾರನಾಗಿದ್ದ ಲೂಯಿಸ್ ಫಿಶರ್ ತನ್ನ `ಮಹಾತ್ಮಾ ಗಾಂಧಿ - ಹಿಸ್ ಲೈಫ್ ಅಂಡ್ ಟೈಮ್ಸ~ ಎಂಬ ಪುಸ್ತಕದ ಒಂದು ಅಧ್ಯಾಯದಲ್ಲಿ ಗಾಂಧಿ ಉಪವಾಸ ಶುರುವಾದಾಗಿನಿಂದ ಮುಗಿಯುವ ತನಕ ನಡೆದ ಘಟನಾವಳಿಗಳನ್ನು ದಾಖಲಿಸಿದ್ದಾರೆ. 1921ರ ನಂತರ ಯೂರೋಪ್, ಏಷಿಯಾಗಳಲ್ಲಿ 25 ವರ್ಷ ಕಳೆದ, ಎರಡನೆಯ ಮಹಾಯುದ್ಧದ ವೇಳೆ ಲಂಡನ್-ಪ್ಯಾರಿಸ್ ಮಧ್ಯೆ ಚೆಂಡಿನಂತೆ ತಿರುಗಾಡಿದ ಫಿಶರ್ ಅಲೆಮಾರಿಯಂತೆ ಪ್ರಪಂಚ ಸುತ್ತಿದ್ದಾರೆ. ಭಾರತದ ಹಲವು ನಿರ್ಣಾಯಕ ಘಳಿಗೆಗಳನ್ನು ಸಾಕ್ಷಿಯಾಗಿ ದಾಖಲಿಸಿದ್ದಾರೆ. ಐತಿಹಾಸಿಕ ಪೂನಾ ಒಪ್ಪಂದದ ಸಮಯದಲ್ಲಿ ಫಿಶರ್ ದಿನಚರಿಯಂತೆ ಬರೆದ ದಾಖಲಾತಿಯನ್ನುಳ್ಳ ಅಧ್ಯಾಯದ ಕೆಲ ಪುಟಗಳ ಸಂಗ್ರಹಾನುವಾದ ಇದು:

 - ಡಾ. ಎಚ್.ಎಸ್.ಅನುಪಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT