ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರಿ ಶೈಲಿಯ ಆ್ಯಕ್ಷನ್ ಚಿತ್ರ (ಚಿತ್ರ: ಬಿಜಿನೆಸ್‌ಮನ್ (ತೆಲುಗು))

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ಇದೊಂದು `ಮಾಫಿಯಾ ಗೇಮ್~. ಸೂರ್ಯ ಹೆಸರಿನ ಸಾಮಾನ್ಯ ಯುವಕ ದೇಶದ ವಾಣಿಜ್ಯ ರಾಜಧಾನಿಯಲ್ಲಿ ಸೂರ್ಯ ಭಾಯಿ ಆಗಿ ರೂಪಾಂತರಗೊಳ್ಳುವ ಆಟ. ವಸೂಲಿ ದಂದೆಗೆ ಸಾಂಸ್ಥಿಕ ಸ್ವರೂಪ ನೀಡಿ ಆ ಮೂಲಕ ಸಂಸತ್ತಿನ ಮೇಲೆಯೂ ಹಿಡಿತ ಸಾಧಿಸುವ ಹುನ್ನಾರದ ಆಟ.

ಈ ರೂಪಾಂತರ ಆಕಸ್ಮಿಕ ಅಲ್ಲ; ಉದ್ದೇಶಪೂರ್ವಕ. ಮಾಫಿಯಾ ದೊರೆ ಆಗಬೇಕು ಎಂಬುದೇ ಈ `ಬಿಜಿನೆಸ್‌ಮನ್~ ಗುರಿ. ಈ ನಿಟ್ಟಿನಲ್ಲಿ ಆತನ ಛಲ, ಬದ್ಧತೆ, ಪಕ್ಕಾ ಯೋಜನೆ ಮತ್ತು ಅದನ್ನು ಪ್ರಯೋಗಿಸುವ ಪರಿ ಚಿತ್ರದಲ್ಲಿ ಪದರಗಳಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಆದರೆ, ಕಥೆಯಲ್ಲಿ ದಮ್ಮಿಲ್ಲ. ತೆಳುವಾದ ಒಂದು ಎಳೆಯನ್ನು ಇಟ್ಟುಕೊಂಡು ಎರಡೂವರೆ ತಾಸಿನ ಸಾಹಸದಾಟವನ್ನು ತೆರೆಗೆ ಅಳವಡಿಸಿದ್ದಾರೆ `ಪೋಕಿರಿ~ ಖ್ಯಾತಿಯ ನಿರ್ದೇಶಕ ಪೂರಿ ಜಗನ್ನಾಥ್. ಕಥೆಯಲ್ಲಿನ ಕೊರತೆಯನ್ನು ಚಿತ್ರಕಥೆ ಮೂಲಕ ತುಂಬಲೆತ್ನಿಸಿದ್ದಾರೆ.

`ಗನ್ಸ್ ಡೋಂಟ್ ನೀಡ್ ಅಗ್ರಿಮೆಂಟ್ಸ್~ ಎಂಬುದು ಚಿತ್ರದ ಅಡಿಟಿಪ್ಪಣಿ. ಅದರಂತೆಯೇ ಇಡೀ ಚಿತ್ರಕ್ಕೆ ಯಾವ ತರ್ಕವೂ ಅನ್ವಯಿಸದು. ಹಾಗಂತ ತೆಗೆದುಹಾಕುವಂತಹ ಚಿತ್ರವಲ್ಲ.

`ಸ್ಟೈಲಿಷ್~ ಆಗಿ ಒಡಮೂಡಿದೆ. ಮಾತಿಗೆ ಬಾಣದ ಮೊನಚಿದೆ. ಆ್ಯಕ್ಷನ್ ದೃಶ್ಯಗಳು ಮೈನವಿರೇಳಿಸುವಂತೆ ಸಂಯೋಜನೆಗೊಂಡಿವೆ. ಹಾಡುಗಳು ಕಣ್ಣಿಗೆ ಹಿತವಾಗಿ ಚಿತ್ರೀಕೃತಗೊಂಡಿವೆ.

ಚಿತ್ರದ ತುಂಬ ನಾಯಕನಟ ಮಹೇಶ್‌ಬಾಬು ಅವರೇ ತುಂಬಿಕೊಂಡಿದ್ದಾರೆ. ಆತ ಸಂಭಾಷಣೆ ಒಪ್ಪಿಸುವ ರೀತಿ, ಅಭಿನಯ ಸೊಗಸಾಗಿದೆ. ನಾಯಕಿ ಕಾಜಲ್ ಪಾತ್ರ, ಪೋಕಿರಿ ಚಿತ್ರದಲ್ಲಿನ ಇಲಿಯಾನಾ ಪಾತ್ರವನ್ನು ನೆನಪಿಸುತ್ತದೆ.
 
ಆ ಚಿತ್ರದ ಗುಂಗಿನಿಂದ ಪೂರಿ ಇನ್ನೂ ಪೂರ್ತಿ ಹೊರಬಂದಿಲ್ಲ ಎಂಬುದಕ್ಕೆ ಇದಲ್ಲದೆ ಇನ್ನೂ ಹಲವು ನಿದರ್ಶನಗಳು ಸಿಗುತ್ತವೆ. ಮಾಫಿಯಾ ದಂದೆ ಚಿತ್ರದ ಉದ್ದಕ್ಕೂ ಸಮರ್ಥನೀಯ ನೆಲೆಯಲ್ಲಿ ಪ್ರತಿಪಾದನೆ ಆಗಿರುವುದು ಅಪಾಯಕಾರಿ ಅಂಶವಾಗಿ ಚಿತ್ರ ನೋಡಿದ ಯಾರಿಗಾದರೂ ಅನ್ನಿಸುತ್ತದೆ.

ಹಾಸ್ಯರಸ ಕಡೆಗಣನೆಗೆ ಒಳಗಾಗಿದೆ. ಪೂರಕ ಪಾತ್ರಗಳಿಗೂ ಒತ್ತು ದೊರೆತಿಲ್ಲ. ಮುಂಬೈನ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಾಸಿರ್, ಕೇಂದ್ರ ಸಚಿವರಾಗಿ ಪ್ರಕಾಶ್ ರೈ, ಲಾಲೂ ಪಾತ್ರದಲ್ಲಿ ಸಯ್ಯಾಜಿ ಶಿಂಧೆ ಕಾಣಿಸಿಕೊಂಡಿದ್ದಾರೆ. ಶಾಮ್ ಕೆ. ನಾಯ್ಡು ಅವರ ಛಾಯಾಗ್ರಹಣ ಚಿತ್ರದ ಅರೆಕೊರೆಗಳನ್ನು ಮರೆಸುವಷ್ಟು ಪರಿಣಾಮಕಾರಿಯಾಗಿದೆ. ತಮನ್ ಸಂಗೀತ ಒದಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT