ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣ ಅನುದಾನ ಬಳಕೆಗೆ ಸಲಹೆ

Last Updated 18 ಡಿಸೆಂಬರ್ 2013, 5:16 IST
ಅಕ್ಷರ ಗಾತ್ರ

ಚಾಮರಾಜನಗರ: ‘ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಬಿಡುಗಡೆಗೊಳಿಸಿದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎಚ್. ನರಸಿಂಹಮೂರ್ತಿ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಪರಿಶಿಷ್ಟ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟರ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ನಿಗದಿಯಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಖಾತೆ ಕೂಡ ತೆರೆಯಲಾಗಿದೆ. ಆದರೆ, ಬಿಡುಗಡೆಯಾಗಿರುವ ಅನುದಾನ ಬಳಕೆಯಲ್ಲಿ ನಿರೀಕ್ಷಿತ ಗುರಿ ತಲುಪುತ್ತಿಲ್ಲ. ಆದ್ದರಿಂದ, ಪರಿಶಿಷ್ಟ ಕಲ್ಯಾಣಕ್ಕಾಗಿ ಮೀಸಲಾಗಿರುವ ಶೇ. 22.75 ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು ಎಂದು  ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇಲಾಖೆ ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳ ಸಭೆ ಕರೆದು ತ್ವರಿತವಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು. ತಾಲ್ಲೂಕು ನೋಡಲ್ ಅಧಿಕಾರಿಗಳು ಪರಿಶಿಷ್ಟ ಜನತೆಯ ಅಭಿವೃದ್ಧಿಗಾಗಿ ಬಿಡುಗಡೆಯಾಗುವ ಅನುದಾನ ಸದ್ವಿನಿಯೋಗ ಆಗುತ್ತಿದೆಯೇ ಎಂಬುದನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಿ. ದೇವರಾಜು ಮಾತನಾಡಿ, ‘ಸರ್ಕಾರ ಪರಿಶಿಷ್ಟ ಜಾತಿ, ವರ್ಗಗಳ ಶ್ರೇಯೋಭಿವೃದ್ಧಿಗಾಗಿ ನೀಡುತ್ತಿರುವ ಅನುದಾನ ಬಳಕೆ ಬಗ್ಗೆ ಕಾಲಕಾಲಕ್ಕೆ ಪ್ರಗತಿ ಪರಿಶೀಲಿಸಬೇಕು. ತಾಲ್ಲೂಕು, ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳಿಂದ ಪೂರ್ಣ ಮಾಹಿತಿ ಪಡೆಯಬೇಕು. ಅರ್ಹರಿಗೆ ಸೌಲಭ್ಯ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜೇಶ್ ಗೌಡ ಮಾತನಾಡಿ, ‘ಪರಿಶಿಷ್ಟರ ಕಲ್ಯಾಣಕ್ಕಾಗಿ ಬಳಕೆ ಮಾಡಬೇಕಿರುವ ವಿಶೇಷ ಅನುದಾನ ಕುರಿತು ಈಗಾಗಲೇ, ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲಾಗಿದೆ. ಪ್ರತಿ ಇಲಾಖೆಗೂ ಪರಿಶಿಷ್ಟರ ಅಭಿವೃದ್ಧಿಗಾಗಿ ಪ್ರತ್ಯೇಕ ಅನುದಾನ ನಿಗದಿಯಾಗುತ್ತಿದೆ. ಆರ್ಹ ಫಲಾನುಭವಿಗಳಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ತಲುಪಿಸಲಾಗುವುದು. ಶೀಘ್ರವೇ ಸುತ್ತೋಲೆ ಹೊರಡಿಸಿ ಪ್ರಗತಿಯಲ್ಲಿ ಹಿಂದೆ ಬಿದ್ದಿರುವ ತಾಲ್ಲೂಕಿನಲ್ಲಿ ವಿಶೇಷ ಕ್ರಮಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕ್ರಮ ಕೈಗೊಳ್ಳಲಾಗುವುದು’ ಎಂದರು.

ಸಾಮಾಜಿಕ ಅರಣ್ಯ ಇಲಾಖೆ ಪ್ರಗತಿ ಪರಿಶೀಲಿಸಿದ ಅಧ್ಯಕ್ಷೆ ಯಶೋದಾ ಪ್ರಭುಸ್ವಾಮಿ ಮಾತನಾಡಿ, ‘ಇಲಾಖೆಯ ಅಧಿಕಾರಿಗಳು ಪ್ರಗತಿ ಅನುಷ್ಠಾನ ಮಾಹಿತಿಯನ್ನು ಜನಪ್ರತಿನಿಧಿಗಳಿಗೆ ತಿಳಿಸಬೇಕು. ಜಿಲ್ಲೆಯ ಯಾವುದೇ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿ ಅನುಷ್ಠಾಗೊಳಿಸುವಾಗ ಆಯಾ ಭಾಗದ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸಬೇಕು’ ಎಂದರು. ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ ಹಾಜರಿದ್ದರು.

ವಾಸ್ತವ್ಯ: ವಾರ್ಡನ್‌ಗಳ ವಿರುದ್ಧ ಕ್ರಮ
‘ವಿದ್ಯಾರ್ಥಿನಿಲಯ, ಆಶ್ರಮ ಶಾಲೆಗಳಲ್ಲಿ ನಿಲಯ ಪಾಲಕರು ವಾಸ್ತವ್ಯ ಹೂಡುತ್ತಿಲ್ಲ. ಕೆಲ ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ’ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಆರ್. ಕಾವೇರಿ ಆರೋಪಿಸಿದರು.

ಸಿಇಒ ಡಾ. ಕೆ.ಎಚ್. ನರಸಿಂಹಮೂರ್ತಿ ಮಾತನಾಡಿ, ‘ಹಾಸ್ಟೇಲ್, ಆಶ್ರಮ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಗುವುದು. ವಿದ್ಯಾರ್ಥಿನಿಲಯ, ಆಶ್ರಮ ಶಾಲೆಗಳಲ್ಲಿ ವಾರ್ಡನ್ ಗಳು ಉಳಿದುಕೊಳ್ಳದಿರುವುದು ಕಂಡುಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT