ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಚಂದ್ರ ತೇಜಸ್ವಿ ಶ್ರೇಷ್ಠ ಬರಹಗಾರ-ಶಿವಪ್ರಸಾದ್

Last Updated 17 ಜುಲೈ 2013, 10:01 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: `ಮಧ್ಯಮ ಮಾರ್ಗ'ದ ಎಳೆ ಹಿಡಿದು ಕಥನ ಕಟ್ಟಿದ ಶ್ರೇಷ್ಠ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಎಂದು ಕಲಾವಿದ ಕೆ.ಟಿ.ಶಿವಪ್ರಸಾದ್ ಅಭಿಪ್ರಾಯಪಟ್ಟರು.

ಪಟ್ಟಣದ ನವೋದಯ ಕಾಲೇಜಿನಲ್ಲಿ ಸೋಮವಾರ ನಡೆದ `ಹೊಸ ಪೀಳಿಗೆಗಾಗಿ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ' ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, `ಇಲ್ಲಿ ಯಾರೂ ಮುಖ್ಯರಲ್ಲ; ಅಮುಖ್ಯರೂ ಅಲ್ಲ. ವಿಕಾಸಕ್ಕೆ ಆರಂಭವೂ ಇಲ್ಲ; ಅಂತ್ಯವೂ ಇಲ್ಲ' ಎಂಬ `ಮಧ್ಯಮ ಮಾರ್ಗ'ದ ಅರಿವು ಮತ್ತು ಎಚ್ಚರ ತೇಜಸ್ವಿ ಸಾಹಿತ್ಯದಲ್ಲಿ ಎದ್ದು ಕಾಣುತ್ತದೆ ಎಂದರು.

ಮಾಂತ್ರಿಕ ವಾಸ್ತವವಾದವನ್ನು ಜಗತ್ತಿಗೆ ತೆರೆದಿಟ್ಟ ಮಾರ್ಕ್ವೇಸ್ ಮತ್ತು ಗಟ್ಟಿತನದಿಂದ ವಿಶ್ವ ಸಾಹಿತ್ಯದಲ್ಲಿ ಸ್ಥಾನ ಪಡೆದ ಬೋರೆಸ್ ಸಾಲಿಗೆ ತೇಜಸ್ವಿ ನಿಸ್ಸಂದಿಗ್ಧವಾಗಿ ಸೇರುತ್ತಾರೆ. ಪತ್ರಿಕಾ ವರದಿಗಾರಿಕೆ-ಹಾಸ್ಯದ ಮೂಲಕ ದುಃಖವನ್ನು ಅನುಸಂಧಾನ ಮಾಡುವ ವಿಶಿಷ್ಟ ಶೈಲಿಯನ್ನು ಕಥನ ಕ್ರಮದಲ್ಲಿ ತೇಜಸ್ವಿ ಅನುಕರಿಸಿದರು. ಹಾಸ್ಯದ ಮೂಲಕ ಬದುಕಿನ ವಿಡಂಬನೆ ಮಾಡಿದ ಶ್ರೇಷ್ಠ ಕಲಾವಿದ ಚಾರ್ಲಿ ಚಾಪ್ಲಿನ್ ಜತೆಗೆ ತೇಜಸ್ವಿಯನ್ನು ಹೋಲಿಸಬಹುದು ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕಂಪ್ಯೂಟರ್‌ನಲ್ಲಿ ಕನ್ನಡ ಬಳಕೆ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ತೇಜಸ್ವಿ ನನಗೆ ಪ್ರೇರಣೆ ನೀಡಿದ್ದರು. ಕುವೆಂಪು ಅವರ ಸಮಾಧಿಯನ್ನು ಮೈಸೂರಿನ ಗಂಗೋತ್ರಿಯಲ್ಲಿ ಮಾಡುವ ವಿಚಾರವನ್ನು ತೇಜಸ್ವಿ ಆಶಯದಂತೆ ನಾನು ವಿರೋಧಿಸಿದ್ದೆ ಎಂದರು.

ತೇಜಸ್ವಿ ಕೇವಲ ಲೇಖಕರಲ್ಲ. ಅವರೊಬ್ಬ ವಿಜ್ಞಾನಿ, ಸಂಶೋಧಕ. ವಿಜ್ಞಾನ ಜಗತ್ತಿನ ಜ್ಞಾನ ಕನ್ನಡದ ಯುವ ಪೀಳಿಗೆಗೆ ಸುಲಭವಾಗಿ ದಕ್ಕಲಿ ಎಂಬ ಮಹದಾಸೆಯಿಂದ ಬರೆದ ಏಕೈಕ ಲೇಖಕ. ಇಂದಿನ ಯುವಕರಿಗೆ ಮಾದರಿ ಎಂದು ಹೇಳಿದರು.
ಸಂಸ್ಥೆ ಕಾರ್ಯದರ್ಶಿ ಬಿ.ಕೆ.ಚಂದ್ರಶೇಖರ್, ಪ್ರೊ.ಬಿ.ಎಸ್.ಬಸವಲಿಂಗಯ್ಯ ಉಪಸ್ಥಿತರಿದ್ದರು.

ಸಹಜಯಾನದ ಮಾರ್ಗ ಅನುಸರಿಸಿದ ತೇಜಸ್ವಿ
ಚಿಕ್ಕನಾಯಕನಹಳ್ಳಿ: `ಕೇವಲ ಮಾತು' ಮತ್ತು `ಪುಸ್ತಕದ ಜ್ಞಾನ'ದಿಂದ ಹೊರ ಬಂದ ಪೂರ್ಣಚಂದ್ರ ತೇಜಸ್ವಿ `ಸಹಜ ಯಾನ'ದ ಮಾರ್ಗ ಅನುಸರಿಸಿದರು. `ಶ್ರಾವಕ ಪ್ರತಿಭೆ'ಯ ಎಚ್ಚರದೊಂದಿಗೆ `ಸಂಬಂಧ ಆಧಾರಿತ' ಮಯಾಲೋಕ ಸೃಷ್ಟಿಸಿದರು ಎಂದು ಸಂಸ್ಕೃತಿ ಚಿಂತಕ ಡಾ.ಎಸ್.ನಟರಾಜ್ ಬೂದಾಳ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ನಡೆದ `ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ' ಕುರಿತ ವಿಚಾರ ಸಂಕಿರಣದಲ್ಲಿ `ತೇಜಸ್ವಿ ಸಾಹಿತ್ಯ ಮೀಮಾಂಸೆಯ ನಿಲುವು' ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.

`ಪ್ರಕ್ರಿಯಾ ಮೀಮಾಂಸೆ'ಯನ್ನು ಪ್ರತಿಪಾದಿಸಿದ ತೇಜಸ್ವಿಯವರ ಬಗ್ಗೆ, ಕನ್ನಡ ಸಾಹಿತ್ಯಲೋಕಕ್ಕೆ ಸಂಸ್ಕೃತ ಪ್ರೇರಿತ ಕಾವ್ಯ ಮೀಮಾಂಸೆ ನೀಡಿದ ಚಿಕ್ಕನಾಯಕನಹಳ್ಳಿ ನೆಲದಲ್ಲಿ ನಿಂತು ಮಾತನಾಡುವುದು ಸತ್ಯದ ಬಾಲವನ್ನು ಸುಳ್ಳಿನ ಬಾಯಿಗೆ ಇಟ್ಟುಕೊಂಡ ಗ್ರೀಕ್ ಡೆಲಿಫಸ್ ದೇವಸ್ಥಾನದ ನಾಣ್ಯದ ಕತೆಯಂತಿದೆ ಎಂದು ವಿಶ್ಲೇಷಿಸಿದರು.

ಜಗತ್ತಿನಲ್ಲಿ ಸಿದ್ಧ ವಸ್ತು ಅಥವಾ ಪರಿಪೂರ್ಣ ಸೃಷ್ಟಿ ಎಂಬುದು ಯಾವುದೂ ಇಲ್ಲ. ಜಗತ್ತು ಸದಾ ವಿಕಾಸವಾಗುತ್ತಿರುತ್ತದೆ. ವಿಕಾಸದ `ಪ್ರಕ್ರಿಯೆ'ಯನ್ನು ಸಾಹಿತ್ಯದಲ್ಲಿ ತೇಜಸ್ವಿ ಯಶಸ್ವಿಯಾಗಿ ಬಿಂಬಿಸಿದರು ಎಂದು ನುಡಿದರು.

`ತೇಜಸ್ವಿ ಸಾಹಿತ್ಯ; ವರ್ತಮಾನದ ಪ್ರಸ್ತುತತೆ' ವಿಷಯದ ಬಗ್ಗೆ ಮಾತನಾಡಿದ ಕವಯತ್ರಿ ಡಾ.ತಾರಿಣಿ ಶುಭದಾಯಿನಿ, ತೇಜಸ್ವಿ ಅವರ ಎಲ್ಲ ಕೃತಿಗಳೂ ಒಂದಿಲ್ಲೊಂದು ಉತ್ಪಾತಗಳ ಅಸಂತುಲಿತ ನಡೆಯಿಂದ ಸಂಭವಿಸುವ ಸಮಸ್ಯೆಗಳ ಚಿತ್ರಣದಿಂದಲೇ ಪ್ರಾರಂಭವಾಗುತ್ತವೆ. ಇಲ್ಲಿಯವರೆಗೆ ಜಾರಿಯಲ್ಲಿಲ್ಲದ ಹೊಸ ನುಡಿಗಟ್ಟು ತೇಜಸ್ವಿ ಯುಗಧರ್ಮಕ್ಕೆ ಅನುವಾದ ಬರಹಗಾರ ಎಂದರು.

`ತೇಜಸ್ವಿ ನಿಸರ್ಗದ ಅನುಸಂಧಾನ' ವಿಷಯ ಕುರಿತು ಡಾ.ಚಂದ್ರಶೇಖರ್ ನಂಗಲಿ, ಅನ್ನ ಮತ್ತು ಬೇಸಾಯ ತೇಜಸ್ವಿ ನಿಲುವುಗಳು ಎಂಬ ವಿಷಯದ ಬಗ್ಗೆ ಆಹಾರ ತಜ್ಞ ಕೆ.ಸಿ.ರಘು, `ತೇಜಸ್ವಿ ಸಾಹಿತ್ಯದಲ್ಲಿ ವಿಜ್ಞಾನದ ಅನುಸಂಧಾನ' ವಿಷಯದ ಬಗ್ಗೆ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿದರು.

ತಳ ಸಮುದಾಯ ಒಗ್ಗೂಡಲಿ: ಬಂಜಗೆರೆ ಜಯಪ್ರಕಾಶ್
ಚಿಕ್ಕನಾಯಕನಹಳ್ಳಿ: ಸ್ಥಾಪಿತ ಸಾಮಾಜಿಕ, ಸಾಂಸ್ಕೃತಿಕ ಹಿತಾಸಕ್ತಿ ವಿರೋಧಿಸಿ ತಳ ಸಮುದಾಯಗಳು ಆತ್ಮವಿಶ್ವಾಸ ರೂಪಿಸಿಕೊಂಡು ಸಮ ಸಮಾಜದತ್ತ ನಡೆಯಬೇಕಾದರೆ ಎಲ್ಲ ತುಳಿತಕ್ಕೊಳಗಾದ ಸಮುದಾಯಗಳು ತಮ್ಮ ಮಿತಿ ದಾಟಿ ಐಕ್ಯಗೊಳ್ಳಬೇಕು. ಆ ಮೂಲಕ ದೂರಗಾಮಿ ಸಾಂಸ್ಕೃತಿಕ ನಡೆ ರೂಪಗೊಳ್ಳಬೇಕು ಎಂದು ಸಂಶೋಧಕ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.

ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಮಂಗಳವಾರ ನಡೆ ನುಡಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ನೆಲದ ಕರುಣೆಯ ದನಿ-ತಳಸಮುದಾಯಗಳ ಸಾಂಸ್ಕೃತಿಕ ಕಥನ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ದಮನಿತ ಜಾತಿಗಳೊಳಗಿನ ಒಡಕುಗಳು ಸಂಘಟನೆಗೊಳ್ಳದಂತೆ ತುಳಿತಕ್ಕೊಳಗಾದವರನ್ನು ತಡೆಯುತ್ತಿವೆ. ಕ್ಷುಲ್ಲಕ ಕಾರಣಕ್ಕೆ ವಿಗಟನೆಗೊಳ್ಳುವುದು ಎಷ್ಟು ಅಪಾಯವೋ ತಕ್ಷಣದ ಕಾರಣಕ್ಕೆ ಗುಂಪುಗೂಡುವುದು ಅಷ್ಟೇ ಅಪಾಯಕಾರಿ ಎಂಬ ಎಚ್ಚರ ಸಂಘಟನೆಗಳಿಗೆ ಇರಬೇಕು ಎಂದರು.

ಎಲ್ಲ ಜನಜನಾಂಗಗಳು ಒಗ್ಗೂಡಿ ಐಕ್ಯ ವೇದಿಕೆ ರೂಪಿಸಿಕೊಳ್ಳಬೇಕು. ಆ ಮೂಲಕ ಪ್ರಜಾಪ್ರಭುತ್ವವನ್ನು ಜನ ರಾಜಕಾರಣದ ಯಂತ್ರವನ್ನಾಗಿ ರೂಪಿಸಿ ಜನಪರ ಕಾಳಜಿ ಕಡೆ ಆಡಳಿತವನ್ನು ತಿರುಗಿಸಬೇಕು. ಇಲ್ಲವಾದರೆ ಇದುವರೆವಿಗೂ ಬೆಳೆದು ಬಂದಿರುವ ಸಮಾನತೆಯ ಚಳವಳಿಗಳು ಮಹತ್ವ ಕಳೆದುಕೊಳ್ಳುತ್ತವೆ ಜತೆಗೆ ಬಲಿಷ್ಠರಿಗೆ ನೆಲ ಮೂಲ ಸಮುದಾಯಗಳ ನಡುವಿನ ಬಿರುಕುಗಳೇ ಬಲಿಷ್ಠರಿಗೆ ವರದಾನವಾಗುತ್ತವೆ ಎಂದು ಕಿವಿಮಾತು ಹೇಳಿದರು.

ಕೋಟಗಾನಹಳ್ಳಿ ರಾಮಯ್ಯ ನೆಲಮೂಲ ಸಂಸ್ಕೃತಿ ಮೇಲೆ ಪುರೋಹಿತಶಾಹಿ ಯಜಮಾನ್ಯ ಎಂಬ ವಿಷಯ ಕುರಿತು ಮಾತನಾಡಿದರು. ವಡ್ಡಗೆರೆ ನಾಗರಾಜಯ್ಯ ನವಪುರೋಹಿತಶಾಹಿಯನ್ನು ಎದುರುಗೊಳ್ಳಲು ಬೇಕಾದ ಸಾಹಿತ್ಯಿಕ ಹತಾರಗಳ ಬಗ್ಗೆ ಮಾತನಾಡಿದರು. ಹೋರಾಟಗಾರ್ತಿ ಜಯಲಕ್ಷ್ಮೀ, ಚಿಂತಕರಾದ ದೊರೈರಾಜ್, ಎಸ್.ಜಿ.ಸಿದ್ಧರಾಮಯ್ಯ, ಎಸ್.ಗಂಗಾಧರಯ್ಯ, ಲಕ್ಷ್ಮಿಪತಿ ಕೋಲಾರ, ಶ್ರೀಪಾದ ಭಟ್, ಶಿವನಂಜಯ್ಯ ಬಾಳೆಕಾಯಿ, ಕೃಷ್ಣಮೂರ್ತಿ ಬಿಳಿಗೆರೆ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT