ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಾನಂದರ ಜಾಯಿಕಾಯಿ ಶೋಧ

Last Updated 2 ಅಕ್ಟೋಬರ್ 2012, 5:35 IST
ಅಕ್ಷರ ಗಾತ್ರ

ಕಾರವಾರ: ಕಲಿತದ್ದು ಬಿಎ ಪದವಿ; ಮಾಡಿದ್ದು ತೋಟಗಾರಿಕೆ ಬೆಳೆಯಲ್ಲಿ ಸಂಶೋಧನೆ! ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಕಲಬೇಣದ ಪ್ರಗತಿಪರ ರೈತ ಪೂರ್ಣಾನಂದ ಭಟ್ಟರ ಯಶೋಗಾಥೆ.

ಬೀಜವನ್ನು ನೋಡಿಯೇ ಜಾಯಿಕಾಯಿ ಸಸಿಯನ್ನು ಹೆಣ್ಣು, ಗಂಡು ಮತ್ತು ಮಿಶ್ರತಳಿ ಎಂದು ಗುರುತಿಸುವುದನ್ನು ಭಟ್ಟರು ತಮ್ಮ ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ ಜಾಯಿಕಾಯಿ ಸಸಿ ನೆಟ್ಟ ಏಳು ವರ್ಷಗಳ ನಂತರ ಅದು ಫಲ ನೀಡುತ್ತದೆ. ಫಲ ಕೊಟ್ಟಗಾಲೇ ಅದು ಹೆಣ್ಣು ಅಥವಾ ಗಂಡು ಎನ್ನುವುದನ್ನು ಗುರುತಿಸಲಾಗುತ್ತಿತ್ತು. ಇದರಿಂದ ಏಳು ವರ್ಷಗಳ ಶ್ರಮ ವ್ಯರ್ಥವಾಗುತ್ತಿತ್ತು.

ಈ ಕಾರಣದಿಂದಾಗಿಯೇ ಕೃಷಿಕರು ಜಾಯಿಕಾಯಿ ಬೆಳೆ ಬೆಳೆಸುವಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿರಲಿಲ್ಲ. ಭಟ್ಟರು ಮಾಡಿರುವ ಸಂಶೋಧನೆ ಬೆಳೆಗಾರರಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ತಾವು ಮಾಡಿದ ಸಂಶೋಧನೆಯ ನಂತರ ಭಟ್ಟರು ತಮ್ಮ 19 ಎಕರೆ ತೋಟದಲ್ಲಿ ಒಟ್ಟು 2,500 ಗಿಡಗಳನ್ನು ಬೆಳೆಸಿದಿದ್ದಾರೆ. ರಾಜ್ಯದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜಾಯಿಕಾಯಿ ಗಿಡವನ್ನು ಯಾರೂ ಬೆಳೆಸಿಲ್ಲ.

ಜಾಯಿಕಾಯಿ ಸಸಿ ತಂದು ನೆಟ್ಟು ಏಳು ವರ್ಷಗಳ ನಂತರ ಅದು ಫಲ ನೀಡದಿದ್ದರೆ ಕಡಿದು ಹಾಕುವುದು ಭಟ್ಟರಿಗೆ ಬೇಸರ ತರಿಸಿತು. ಈ ವಿಷಯದಲ್ಲಿ ಆಳವಾದ ಅಧ್ಯಯ ಮಾಡಬೇಕು ಎಂದು ದೃಢ ನಿರ್ಧಾರ ಮಾಡಿದರು. ಕೇರಳದ ಕಲ್ಲಿಕೋಟೆ ವಿಶ್ವವಿದ್ಯಾಲಯಕ್ಕೆ ಹೋಗಿ ಜಾಯಿಕಾಯಿ ಸಸಿಗಳ ಕುರಿತಾದ ಸಾಹಿತ್ಯ ಅಧ್ಯಯನ ಮಾಡಿ ಸಂಶೋಧನೆಗೆ ಬೇಕಾದ ವಿಷಯ ಸಂಗ್ರಹ ಮಾಡಿದರು. ನಂತರ ತಮ್ಮ ತೋಟದಲ್ಲಿ ಪ್ರಯೋಗ ಮಾಡಿದರು. ನಿರಂತರ ಹತ್ತು ವರ್ಷಗಳ ಸಂಶೋಧನೆ ನಂತರ ಭಟ್ಟರಿಗೆ ಫಲ ದೊರೆಕಿದೆ.
ಭಟ್ಟರು ತಮ್ಮ ಸಂಶೋಧನೆಯಿಂದ ಜಾಯಿಕಾಯಿ ಜಾತಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರುವುದು ಅಷ್ಟೇ ಅಲ್ಲ ಈ ಗಿಡಗಳು ನೆಟ್ಟ ಮೂರೇ ವರ್ಷಕ್ಕೆ ಫಲ ನೀಡುತ್ತದೆ!

ಭಟ್ಟರ ತೋಟಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯ, ಶಿರಸಿ ತೋಟಗಾರಿಕೆ ಕಾಲೇಜು, ಕೊಚ್ಚಿನ್ ಸಾಂಬಾರು ಮಂಡಳಿ ನಿರ್ದೇಶಕರು, ಭಾರತೀಯ ಸಾಂಬಾರು ಸಂಶೋಧನಾ ಸಂಸ್ಥೆ ಹಿರಿಯ ವಿಜ್ಞಾನಿಗಳು ಭೇಟಿ ನೀಡಿ ಜಾಯಿಕಾಯಿಯಲ್ಲಿ ಮಾಡಿರುವ ಸಂಶೋಧನೆ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

`ತೋಟಗಾರಿಕೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಸಂಶೋಧನೆ ಕೈಗೊಂಡೆ. ಅದರಲ್ಲಿ ಯಶಸ್ಸು ಸಿಕ್ಕಿದೆ. ಜಾಯಿಕಾಯಿ ಸಂಶೋಧನೆಗೆ ಭಾರತೀಯ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಿದ್ದೇನೆ. ಜಾಯಿಕಾಯಿ ಸಿಪ್ಪೆಯಿಂದ ಉಪ್ಪಿಕಾಯಿ ಮತ್ತು ಜಾಮ್ ತಯಾರಿಸಿದ್ದು ಅದನ್ನು ರಫ್ತು ಮಾಡಲು ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ್ದೇನೆ~ ಎನ್ನುತ್ತಾರೆ ಪೂರ್ಣಾನಂದ ಭಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT