ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವಾಪರ ತಿಳಿದು ಆತಂಕಗೊಂಡ ಸ್ಥಳೀಯರು

ಸ್ಪೀಕ್‌ ಏಷ್ಯಾ ಸಂಸ್ಥೆಯ ಪ್ರವರ್ತಕನ ಬಂಧನ
Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ₨ 2,200 ಕೋಟಿ ವಂಚನೆ ಪ್ರಕರಣ ಸಂಬಂಧ ದೆಹಲಿ ಪೊಲೀಸರು ಇತ್ತೀಚೆಗೆ ವೈಟ್‌ಫೀಲ್ಡ್‌ನಲ್ಲಿ ಬಂಧಿಸಿದ ‘ಸ್ಪೀಕ್‌ ಏಷ್ಯಾ’ ಸಂಸ್ಥೆಯ ಪ್ರವರ್ತಕ ರಾಮ್‌ ನಿವಾಸ್‌ ಪಾಲ್‌ನ ‘ಪೂರ್ವಾ­ಪರ’ ಆತನ ಮನೆ ಮಾಲೀಕರು ಹಾಗೂ ನೆರೆಹೊರೆಯವರಲ್ಲಿ ಆಘಾತ ಉಂಟು ಮಾಡಿದೆ.

ಅಭಯ್‌ ಸಿಂಗ್‌ ಚಂದೇಲ್‌ ಎಂದು ಹೆಸರು ಬದಲಾಯಿಸಿಕೊಂಡಿದ್ದ ಪಾಲ್‌, ಪತ್ನಿ ಹಾಗೂ ಎಂಟು ತಿಂಗಳ ಮಗುವಿ­ನೊಂದಿಗೆ ವೈಟ್‌ಫೀಲ್ಡ್‌ನಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದ. ಕಾಲೊ­ನಿಯ ನಿವಾಸಿಗಳೊಂದಿಗೆ ಮಾತನಾ­ಡದೆ, ಶಾಂತ ಸ್ವಭಾವದ ವ್ಯಕ್ತಿಯಂತೆ ವರ್ತಿಸುತ್ತಿದ್ದ ಆತನ ವಂಚನೆ ಪ್ರಕರಣ ಇದೀಗ ಸ್ಥಳೀಯರನ್ನು ಘಾಸಿಗೊಳಿಸಿದೆ.

ಆರೋಪಿಯ ಪತ್ನಿ ಕೂಡ ಉತ್ತರ ಪ್ರದೇಶದಲ್ಲಿ ಸಂಬಂಧಿಕರ ಮದುವೆಗೆ ತೆರಳುವುದಾಗಿ ಸ್ಥಳೀಯರಿಗೆ ತಿಳಿಸಿ ಮಗುವಿನೊಂದಿಗೆ ಮನೆ ಖಾಲಿ ಮಾಡಿದ್ದಾರೆ. ‘ಮನೆ ಬಾಡಿಗೆಗೆ ಇರುವುದಾಗಿ ಜೂನ್‌ ತಿಂಗಳಲ್ಲಿ ಅಂತ­ರ್ಜಾಲ ಮತ್ತು ಕೆಲ ಪತ್ರಿಕೆಗಳಲ್ಲಿ ಜಾಹೀ­ರಾತು ನೀಡಿದ್ದೆ. ಆ ಜಾಹೀರಾತನ್ನು ನೋಡಿ ಕರೆ ಮಾಡಿದ್ದ ಆತ, ತನ್ನನ್ನು ಅಭಯ್‌ ಸಿಂಗ್‌ ಚಂದೇಲ್‌ ಎಂದು ಪರಿಚಯಿಸಿಕೊಂಡ.

ನಂತರ ಮಧ್ಯವರ್ತಿ­ಯೊಂದಿಗೆ ಮನೆಗೆ ಬಂದು ಬಾಡಿಗೆ ಪಡೆದಿದ್ದ. ಆದರೆ, ಬಹುಕೋಟಿ ಹಗರಣ ಸಂಬಂಧ ವಿವಿಧ ದೇಶಗಳ ಪೊಲೀಸರಿಗೆ ಬೇಕಾಗಿದ್ದ ಆರೋಪಿ, ಇಷ್ಟು ದಿನ ನಮ್ಮ ಮನೆಯಲ್ಲೇ ತಲೆಮರೆಸಿಕೊಂಡಿದ್ದ ಎಂಬ ಸಂಗತಿ ಕೇಳಿ ಆಘಾತ ಉಂಟಾಗಿದೆ’ ಎಂದು ಮನೆ ಮಾಲೀಕ ಅವಿನಾಶ್‌ ದೀಪಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೆ ಬಾಡಿಗೆ ಹಣವನ್ನು ಚೆಕ್‌ ಮುಖಾಂತರ ನೀಡುವಂತೆ ಹೇಳಿದ್ದೆ. ಆದರೆ, ಆತ ಒಮ್ಮೆಯೂ ಚೆಕ್‌ ಮುಖಾಂತರ ಪಾವತಿಸಲಿಲ್ಲ. ಅಲ್ಲದೆ, ಮನೆ ಬಾಡಿಗೆ ನೀಡುವ ಸಂದರ್ಭದಲ್ಲಿ ಕಚೇರಿಯ ಗುರುತಿನ ಚೀಟಿ ಸೇರಿದಂತೆ ಮತ್ತಿತರ ದಾಖಲೆಗಳನ್ನು ಕೇಳಿದ್ದೆವು. ಆದರೆ, ಈವರೆಗೆ ಆತ ಯಾವುದೇ ದಾಖಲೆಗಳನ್ನು ಕೊಟ್ಟಿಲ್ಲ.  ಕಳೆದ ಒಂದು ವಾರದಿಂದ ಆತನ ಮೂರೂ ಮೊಬೈಲ್‌­ಗಳು ಸ್ವಿಚ್‌ ಆಫ್‌ ಆಗಿದ್ದ­ರಿಂದ ಸಂಪರ್ಕಿ­ಸಲು ಸಾಧ್ಯವಾಗಿರಲಿಲ್ಲ’ ಎಂದು ಹೇಳಿದರು.

‘ಆತ ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ದೊಡ್ಡ ಗಾತ್ರದ ಸೂಟ್‌ಕೇಸ್‌ನೊಂದಿಗೆ ನಸುಕಿನಲ್ಲೇ ಮನೆಯಿಂದ ಹೊರಡುತ್ತಿದ್ದ ಆತ, ತಡರಾತ್ರಿ ವಾಪಸಾಗುತ್ತಿದ್ದ. ಆತನ ಈ ವರ್ತನೆ ಅನುಮಾನಕ್ಕೆ ಕಾರಣವಾಗಿತ್ತು. ಆದರೆ, ಇಂತಹದೊಂದು ಗಂಭೀರ ಸ್ವರೂಪದ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಕಲ್ಪನೆ ಕೂಡ ಇರಲಿಲ್ಲ’ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.

ಅಂತರ್ಜಾಲ ಮಾರುಕಟ್ಟೆ ಸಮೀಕ್ಷಾ ಸಂಸ್ಥೆಯಾಗಿದ್ದ ಸ್ಪೀಕ್‌ ಏಷ್ಯಾ, ₨11,000ಕ್ಕೆ ಗ್ರಾಹಕರಿಗೆ ಸದಸ್ಯತ್ವ ನೀಡಿತ್ತು. ಬಹುರಾಷ್ಟ್ರೀಯ ಕಂಪೆನಿ­ಗಳು ನಡೆಸುವ ಆನ್‌ಲೈನ್‌ ಸಮೀಕ್ಷಾ ಅರ್ಜಿಗಳನ್ನು ಗ್ರಾಹಕರು ತುಂಬ­ಬೇಕಿತ್ತು. ಇದಕ್ಕೆ ಪ್ರತಿಯಾಗಿ ವಾರ್ಷಿಕ­ವಾಗಿ ₨52,000 ಮೊತ್ತ ನೀಡುವು­ದಾಗಿ ಸಂಸ್ಥೆ ಭರವಸೆ ನೀಡಿತ್ತು.

ಆರಂಭದಲ್ಲಿ ಬಂಡವಾಳ ಹೂಡಿದ್ದ ಕೆಲವರಿಗೆ ನಿಗದಿತ ಮೊತ್ತ ನೀಡಿದ ಕಂಪೆನಿ, 2011ರಲ್ಲಿ ತನ್ನ ಕಾರ್ಯಾ­ಚರಣೆ ಸ್ಥಗಿತಗೊಳಿಸಿತ್ತು. ಆ ಮೂಲಕ ಸಂಸ್ಥೆಯಲ್ಲಿ ಬಂಡವಾಳ ಹೂಡಿದ್ದ 24 ಲಕ್ಷ ಗ್ರಾಹಕರಿಗೆ ₨2,276 ಕೋಟಿ ವಂಚನೆಯಾಗಿತ್ತು. ಹಗರಣದ ಮತ್ತೊಬ್ಬ ಆರೋಪಿ ಪಾಲ್‌ನ ತಮ್ಮ, ರಾಮ್‌ ಸುಮಿರನ್‌ ಪಾಲ್‌ನನ್ನು ದೆಹಲಿ ಪೊಲೀಸರು ಕಳೆದ ವಾರ ಬಂಧಿಸಿದ್ದರು. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಆಧರಿಸಿ ವೈಟ್‌ಫೀಲ್ಡ್‌ನಲ್ಲಿ ನೆಲೆಸಿದ್ದ ರಾಮ್‌ ನಿವಾಸ್‌ ಪಾಲ್‌ನನ್ನು ನ.30ರಂದು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT