ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್ ಬೆಲೆರೂ 1.60 ಇಳಿಕೆ ಸಾಧ್ಯತೆ

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರಾಟ ಕಂಪೆನಿಗಳು ಶೀಘ್ರದಲ್ಲೇ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರಿಗೆ ರೂ1.60ರಷ್ಟು ತಗ್ಗಿಸುವ ಸಾಧ್ಯತೆ ಇದೆ.

`ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿದಿರುವುದು, ಡಾಲರ್ ಎದುರು ರೂಪಾಯಿ ಮೌಲ್ಯ ಸ್ಥಿರಗೊಂಡಿರುವುದರಿಂದ ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ ಪರಿಶೀಲಿಸುತ್ತಿದ್ದೇವೆ~ ಎಂದು ತೈಲ ಮಾರಾಟ ಕಂಪೆನಿಯ ಹಿರಿಯ ಅಧಿಕಾರಿ ಬುಧವಾರ ಇಲ್ಲಿ ಸುದ್ದಿಗಾರರಿಗೆ ಹೇಳಿದರು.

ರೂಪಾಯಿ ಮೌಲ್ಯ ಸದ್ಯ 5 ತಿಂಗಳ ಗರಿಷ್ಠ ಮಟ್ಟಕ್ಕೆ (ರೂ52.28) ಏರಿದೆ. ಇದರಿಂದ ತೈಲ ಕಂಪೆನಿಗಳಿಗೆ ಆಮದು ವೆಚ್ಚ ಕಡಿಮೆ ಆಗಿದ್ದು, ಅ. 1ರಿಂದ ಪ್ರತಿ ಲೀಟರ್ ಪೆಟ್ರೋಲ್ ಮಾರಾಟ ಮೇಲೆ ರೂ1.60 ಲಾಭವಾಗುತ್ತಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 126.11 ಡಾಲರ್‌ನಿಂದ 122.31 ಡಾಲರ್‌ಗೆ ಇಳಿದಿದೆ. ಈ ದರ ಇನ್ನಷ್ಟು ಸ್ಥಿರಗೊಂಡ ನಂತರ ಲಾಭವನ್ನು ಗ್ರಾಹಕರಿಗೆ ಖಂಡಿತ ವರ್ಗಾಯಿಸುವ ಬದ್ಧತೆ ಹೊಂದಿದ್ದೇವೆ ಎಂದಿದ್ದಾರೆ.

ಜುಲೈ 24ರಂದು ಕೊನೆ ಬಾರಿ ಪೆಟ್ರೋಲ್ ಲೀಟರಿಗೆ 70 ಪೈಸೆ ಹೆಚ್ಚಿಸಲಾಗಿತ್ತು. ಜೂನ್ 3ರಂದು ರೂ2.02ರಷ್ಟು ತಗ್ಗಿಸಲಾಗಿತ್ತು. ಸದ್ಯ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ68.48 ರಷ್ಟಿದೆ.

ಚುನಾವಣಾ ಕೊಡುಗೆ

ತೈಲ ಕಂಪೆನಿಗಳು ಪೆಟ್ರೋಲ್ ಬೆಲೆ ಇಳಿಕೆಗೆ ನಿಗದಿತ ದಿನವನ್ನಿನ್ನೂ  ಗೊತ್ತುಪಡಿಸಿಲ್ಲ. ಗುಜರಾತ್, ಮತ್ತು ಹಿಮಾಚಲ ಪ್ರದೇಶ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೆಲೆ ಇಳಿಕೆ ಪ್ರಕಟ ನಿರೀಕ್ಷೆ ಇದೆ ಎಂದು ಉದ್ಯಮ ವಲಯ ಅಂದಾಜು ಮಾಡಿದೆ.

ಡೀಸೆಲ್‌ಗೆ ರೂ12 ನಷ್ಟ
ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಕಂಪೆನಿಗಳು ಸದ್ಯ ಪ್ರತಿ ಲೀಟರ್ ಡೀಸೆಲ್ ಮಾರಾಟದ ಮೇಲೆ ರೂ12 ಮತ್ತು ಸೀಮೆಎಣ್ಣೆ ಮಾರಾಟದ ಮೇಲೆ ರೂ35.63 ನಷ್ಟ ಅನುಭವಿಸುತ್ತಿವೆ. 14.2 ಕೆ.ಜಿ `ಎಲ್‌ಪಿಜಿ~ ಸಿಲಿಂಡರ್ ಮಾರಾಟದಿಂದ ಕಂಪೆನಿಗಳಿಗೆ ರೂ468.50 ನಷ್ಟವಾಗುತ್ತಿದೆ.

ಸಬ್ಸಿಡಿ ರಹಿತ `ಎಲ್‌ಪಿಜಿ~ ರೂ127 ತುಟ್ಟಿ
ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ (14.2ಕೆ.ಜಿ)ಬೆಲೆ ರೂ127ರಷ್ಟು ಹೆಚ್ಚಿಸಿದ್ದು,ಸಿಲಿಂಡರ್ ದರ ರೂ883.50ಕ್ಕೇರಿದೆ.

ಪ್ರತಿ ಕುಟುಂಬಕ್ಕೆ ಸಬ್ಸಿಡಿ ಇರುವ ಎಲ್‌ಪಿಜಿ ಸಿಲಿಂಡರ್ ವರ್ಷಕ್ಕೆ ಆರು ಮಾತ್ರ ನೀಡಲು ಕೇಂದ್ರ ಸರ್ಕಾರದ ಮಿತಿ ವಿಧಿಸಿದೆ. ವರ್ಷಕ್ಕೆ ಆರಕ್ಕೂ ಹೆಚ್ಚು ಸಿಲಿಂಡರ್ ಬಳಸುವ ಕುಟುಂಬಗಳಿಗೆ ಈಗಿನ ದರ ಹೆಚ್ಚಳ ಕ್ರಮ ಇನ್ನಷ್ಟು ಹೊರೆ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT