ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟೆ ಮೇಲೆ ಬಾಹ್ಯ ಸಂಗತಿ ಪ್ರಭಾವ

Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಸಾಲಪತ್ರ ಖರೀದಿಗೆ ಸಂಬಂಧಿಸಿದಂತೆ ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌ ಸೆ. 18ರಂದು ನಡೆಸಲಿರುವ ಸಭೆ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣ­ಕಾಸು ನೀತಿ ಪರಾಮರ್ಶೆ (ಸೆ. 20) ಈ ವಾರ ಷೇರು­ಪೇಟೆಯ ಏರಿಳಿತ ನಿರ್ಧ­ರಿಸಲಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಅಮೆರಿಕದ ಫೆಡರಲ್‌ ರಿಸರ್ವ್‌ ಸುಮಾರು 8,500 ಕೋಟಿ ಡಾಲರ್ ಮೌಲ್ಯದ ಸಾಲಪತ್ರ ಖರೀದಿಗಾಗಿ ಯೋಜನೆ ರೂಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮುಕ್ತ ಮಾರುಕಟ್ಟೆ ಸಮಿತಿಯ ಸಭೆ ಸೆ. 17 ಮತ್ತು 18ರಂದು ನಡೆಯಲಿದ್ದು, ಅಂದು ಅಂತಿಮ ನಿರ್ಧಾರ ಹೊರ­ಬೀಳಲಿದೆ. ಭಾರತವೂ ಸೇರಿದಂತೆ ಜಾಗತಿಕ ಷೇರುಪೇಟೆಗಳ ಮೇಲೆ ಈ ಸಂಗತಿ ತೀವ್ರವಾದ ಪರಿಣಾ­ಮ ಬೀರಲಿದೆ ಎಂದು ‘ಏಂಜೆಲ್‌ ಬ್ರೋ­ಕಿಂಗ್‌’ ಸಂಸ್ಥೆ ಭವಿಷ್ಯ ನುಡಿದಿದೆ.

‘ದೇಶದ ಚಾಲ್ತಿ ಖಾತೆ ಕೊರತೆ (ಸಿಎಡಿ) ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಜತೆಗೆ ಹಣದುಬ್ಬರವೂ ಏರಿಕೆ ಯಾಗುವ ಸೂಚನೆ ಇದೆ. ಈ ಸಂಗತಿ ಕೂಡ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ‘ಬೊನಾಂಜಾ ಪೋರ್ಟ್‌­ಫೋಲಿಯೊ’ ಸಂಸ್ಥೆ ಉಪಾಧ್ಯಕ್ಷ ರಾಕೇಶ್‌ ಗೋಯಲ್‌ ಅಭಿಪ್ರಾಯ­ಪಟ್ಟಿದ್ದಾರೆ.

ಹಣಕಾಸು ನೀತಿ
‘ಕಳೆದ ಎರಡು ವಾರಗಳಲ್ಲಿ ಷೇರುಪೇಟೆ ಸಂವೇದಿ ಸೂಚ್ಯಂಕ ಒಟ್ಟಾರೆ ಶೇ 2.4ರಷ್ಟು(463 ಅಂಶಗಳಷ್ಟು) ಏರಿಕೆ ಕಂಡಿದೆ. ಮೂರ­ನೇ ವಾರವೂ ಏರಿಕೆ ಮುಂದು­ವರಿ­ಯುವ ಸಾಧ್ಯತೆ ಇದೆ. ‘ಆರ್‌ಬಿಐ’ನ ಹೊಸ ಗವರ್ನರ್‌ ರಘುರಾಂ ರಾಜನ್ ಅವರ ಮೊದಲ ಹಣಕಾಸು ನೀತಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ’ ಎಂದು ಕೊಟಕ್‌ ಸೆಕ್ಯುರಿಟೀಸ್‌ನ  ಮುಖ್ಯಸ್ಥ ದಿಪಿನ್‌ ಷಾ ಹೇಳಿದ್ದಾರೆ.

ಆಗಸ್ಟ್‌ ತಿಂಗಳ ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ಅಂಕಿ –ಅಂಶಗಳು ಸೆ. 16ರಂದು ಪ್ರಕಟ­ಗೊಳ್ಳಲಿವೆ. ಈ ಅಂಕಿ–ಅಂಶಗಳನ್ನು ಆಧರಿಸಿ ‘ಆರ್‌ಬಿಐ’ ಬಡ್ಡಿದರ ಕಡಿತ ಮಾಡಬೇಕೇ ಬೇಡವೇ ಎನ್ನುವುದನ್ನು ನಿರ್ಧರಿಸಲಿದೆ. ಹೀಗಾಗಿ ಈ ಅಂಶ ಕೂಡ ಪ್ರಭಾವಿಯಾಗಿದೆ ಎಂದು ಇನ್ವೆಂಚರ್‌ ಗ್ರೋಥ್‌ ಅಂಡ್‌ ಸೆಕ್ಯುರಿಟೀಸ್‌ ಅಧ್ಯಕ್ಷರಾದ ನಗ್ಜಿ ಕೆ.ರೀಟಾ ಅಭಿಪ್ರಾಯಪಟ್ಟಿದ್ದಾರೆ.
ವಾರಾಂತ್ಯದಲ್ಲಿ ಡಾಲರ್‌ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ 63.48ರಲ್ಲಿ ಸ್ಥಿರಗೊಂಡಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT