ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟೆಯ ಮಕ್ಕಳಿಗೆ ಹಳ್ಳಿಯೆಂದರೆ ಅನಾದರ ಏಕೆ ?

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹಳ್ಳಿ ಮನೆಯೊಂದರ ಸಮಾರಂಭ. ಅಲ್ಲಿಗೆ ರಾಜಧಾನಿಯಲ್ಲಿ ವಾಸವಿರುವ ಒಂದೆರಡು ಕುಟುಂಬಗಳೂ ಬಂದಿದ್ದುವು. ಭೋಜನಕ್ಕೆ ನೆಲದ ಮೇಲೆ ಚಾಪೆ ಹಾಸಿ, ಬಾಳೆಲೆ ಇಟ್ಟು ಬಡಿಸುವ ಪ್ರಕ್ರಿಯೆ ಶುರು.

ಹೆಣ್ಮಗಳೊಬ್ಬಳು ಲೋಟಕ್ಕೆ ನೀರು ಸುರಿಯುತ್ತಿದ್ದಂತೆ, ಪಂಕ್ತಿಯ ಮಧ್ಯದಲ್ಲಿದ್ದ ಸುಮಾರು 10-12 ವರುಷದ ಬಾಲಕರಿಬ್ಬರು,  `ಛೀ.. ಈ ನೀರನ್ನು ಕುಡಿಯುವುದಾ.. ನಮಗೆ ಬಾಟಲ್ ನೀರೇ ಬೇಕು~ ಅಂತ ರಂಪಾಟ ಮಾಡಿದವು. ಬಾಟಲ್ ನೀರು ತರಬೇಕೆಂದರೆ ಏನಿಲ್ಲವೆಂದರೂ 15-20 ಕಿ.ಮೀ.ದೂರದ ಪೇಟೆಗೆ ಹೋಗಲೇಬೇಕು.  `ಇಲ್ಲವೆಂದರೆ ನಮಗೆ ಊಟವೇ ಬೇಡ~ ಅಂತ ದಡಬಡನೆ ಎದ್ದುಹೋದರು.

ನಮ್ಮ ಮಕ್ಕಳಿಗೆ ನಗರ ಕಲಿಸಿಕೊಡುವ ಸಂಸ್ಕಾರ. ಹತ್ತು ಮಂದಿ ಸೇರಿದಲ್ಲಿ ಕನಿಷ್ಠ ಸೌಜನ್ಯವಾದರೂ ಬೇಡವೇ? ಪೇಟೆಯಲ್ಲೇ ಹುಟ್ಟಿ ಬೆಳೆದ ಮಕ್ಕಳಿಗೆ ಬಾಟಲಿ ನೀರು ಅಮೃತ! ನೈಸರ್ಗಿಕವಾಗಿ ಸಿಗುವ ಹಳ್ಳಿಯ ಬಾವಿಯ ನೀರು ವಿಷ! ನಗರದ ಬಹುತೇಕ ವ್ಯವಸ್ಥೆಗಳು ಹಳ್ಳಿಯನ್ನು ಕೆಟ್ಟದಾಗಿ ಚಿತ್ರಿಸಿರುವ ಫಲ.

ಅಂದು ಸಂಜೆ ಮಕ್ಕಳೆಲ್ಲಾ ಗದ್ದೆಯಲ್ಲಿ ಆಡುತ್ತಿದ್ದರು. ಈ ಪೇಟೆಯ ಹೈದಗಳು ಗುಂಪಿನಿಂದ ಬೇರೆಯಾಗಿ ಕುಳಿತಿದ್ದರು. `ನೀವ್ಯಾಕೆ ಅವರೊಂದಿಗೆ ಆಡುವುದಿಲ್ಲ~ ಎಂದು ಪ್ರಶ್ನಿಸಿದೆ.  `ಛೇ.. ಅವರು ಆಡುವ ಜಾಗ ನೋಡಿದ್ರಾ.. ಅವರ ಕೈ ಮೈಯೆಲ್ಲಾ ಮಣ್ಣಾಗಿದೆ ನೋಡಿ~ ಎಂದು ಮುಖ ಸಿಂಡರಿಸಿಕೊಂಡರು!  `ಎಂತ ಊರು ಮಾರಾಯ್ರೆ. ಇಲ್ಲಿ ರೇಂಜ್ ಕೂಡಾ ಸಿಗ್ತಾ ಇಲ್ಲ~ ಅಂತ ಮೊಬೈಲಲ್ಲಿ ಬೆರಳಾಡಿಸುತ್ತಿದ್ದರು. ಮಣ್ಣೆಂದರೆ ಹೇಸಿಗೆ, ಮಣ್ಣಿನಲ್ಲಾಡುವ ಮಕ್ಕಳೆಂದರೆ ಹೇಸಿಗೆ. ನಗರದಲ್ಲಿ ಬೆಳೆದು ಅಲ್ಲಿನ ಮಣ್ಣಿನೊಂದಿಗೆ ಆಡಿದ ಮಕ್ಕಳಿಗೆ ಹಳ್ಳಿಯ ಮಣ್ಣು ಕೆಸರು!

`ಮಣ್ಣಿನಲ್ಲಾಡಿದರೆ ರೋಗ ಬರುತ್ತಂತೆ. ವೈರಸ್ ದೇಹ ಪ್ರವೇಶಿಸುತ್ತದಂತೆ. ನಮ್ಗೆ ನಾಡಿದ್ದು ಪರೀಕ್ಷೆ ಇದೆ. ಎಲ್ಲಾದರೂ ಜ್ವರ ಬಂದರೆ.. ಹಾಗಾಗಿ ನಾವು ಅವರೊಂದಿಗೆ ಆಟವಾಡದೆ ಇಲ್ಲೇ  ಇದ್ದೆೀವೆ?~  ಪಾಪ, ಮುಗ್ಧ ಮನಸ್ಸುಗಳೊಳಗೆ ಹಳ್ಳಿಯ ಕುರಿತಾಗಿ ಅದೆಷ್ಟು ತಪ್ಪು ಕಲ್ಪನೆ.  ಇಲ್ಲೊಂದು ಆಶ್ಚರ್ಯ ನೋಡಿ.
 
ಇದೇ ಅಪ್ಪಾಮ್ಮ, ಈ ಹಳ್ಳಿಯ ನೀರು ಕುಡಿದು, ಮಣ್ಣು ಮೆತ್ತಿಸಿಕೊಂಡೇ ಬಾಲ್ಯವನ್ನು ಕಳೆದವರು. ಅವರೀಗ ನಗರದಲ್ಲಿ ಲವಲವಿಕೆಯಿಂದ ಇರುವುದಕ್ಕೆ ಹಳ್ಳಿಯ ಈ ಮಣ್ಣೂ ಕಾರಣವಲ್ವಾ!

ವರುಷಪೂರ್ತಿ ಮಣ್ಣಿನೊಂದಿಗೆ ಮಾತನಾಡುತ್ತಾ ಜೀವಿಸುವ, ನಗರದ ಹಸಿದ ಹೊಟ್ಟೆಗಳಿಗೆ ತುತ್ತನ್ನೀಯುವ ಕೃಷಿಕನಿರುವುದು ಹಳ್ಳಿಯಲ್ಲಿ ತಾನೆ.

ದಿನವಿಡೀ ಮೈ ಕೈಗೆ ಕೆಸರು ಮೆತ್ತಿಸಿಕೊಂಡು ಬದುಕುತ್ತಿದ್ದರೂ ಒಮ್ಮೆಯೂ ವೈದ್ಯರ ಭೇಟಿಯಾಗದ ಎಷ್ಟು ಮಂದಿ ಬೇಕು? ಅವರಿನ್ನೂ ಆರೋಗ್ಯವಾಗಿದ್ದಾರೆ.

ಗಟ್ಟಿಮುಟ್ಟಾಗಿದ್ದಾರೆ. ಶುಗರ್, ಬಿಪಿ ಅವರ ಹತ್ತಿರ ಸುಳಿದಿಲ್ಲ. ಅರುವತ್ತು ವರ್ಷ ದಾಟಿದರೂ ಅರುವತ್ತು ಕಿಲೋ ಭಾರವನ್ನು ನಿರಾಯಾಸವಾಗಿ ಬೆನ್ನಿಗೇರಿಸಬಲ್ಲರು. ಮೈಲುಗಟ್ಟಲೆ ನಡೆಯಬಲ್ಲರು.

ಆ ಸಮಾರಂಭದಲ್ಲಿ ಸಂಜೆ ಎಲ್ಲರಿಗೂ ಕಾಫಿ, ಅವಲಕ್ಕಿ ಸಮಾರಾಧನೆ. ರಾತ್ರಿ ಭೋಜನ. ನಿತ್ಯ ಡೈನಿಂಗ್ ಮೇಜಲ್ಲಿ ಉಂಡ ಈ ಮಕ್ಕಳು ಪಂಕ್ತಿಯಲ್ಲಿ ಕೂರಲು ಪಟ್ಟ ಸಾಹಸ ನೋಡಬೇಕು! ಕೊನೆಗೆ ಎತ್ತರದ ಬೆಂಚನ್ನಿಟ್ಟು, ಅದರಲ್ಲಿ ಡೈನಿಂಗ್ ಮೇಜನ್ನು ಆವಾಹಿಸಿ ಕೂರಿಸಿದಾಗಲೇ ಉಂಡರು.

ಸರಿ ಬೆಳಿಗ್ಗೆಯಾಯಿತು. ಪುಂಡಿ, (ಅಕ್ಕಿಯಿಂದ ಮಾಡುವ ತಿಂಡಿ) ಸಾಂಬಾರು ರೆಡಿ. ಇವಕ್ಕೆ ತಿಂಡಿ ಎಲ್ಲಿ ಗೊತ್ತು?  `ಚಪಾತಿ ಬೇಕೆಂಬ ಹಟ~!  `ಏನ್ರೋ, ಒಂದಿನ ಅಲ್ವಾ. ಸ್ವಲ್ಪ ಅಡ್ಜಸ್ಟ್ ಮಾಡ್ರಪ್ಪಾ~ ಅಪ್ಪನ ಮನವಿ.  `ಅವನಿಗೆ ಇದೆಲ್ಲಾ ರೂಢಿಯಿಲ್ಲ~ ಅಮ್ಮನ ಸರ್ಟಿಫಿಕೇಟ್. ಚಪಾತಿಯೇನೋ ಸಿದ್ಧವಾಯಿತು. ಗಸಿ ಬೇಕಲ್ವಾ!

ಒಂದು ದಿವಸದಲ್ಲಿ ಯಾವ ವ್ಯವಸ್ಥೆಗೂ ಒಗ್ಗಿಕೊಳ್ಳಲಾಗದೆ ಒದ್ದಾಡಿದ ಆ ಮಕ್ಕಳನ್ನು ಗ್ರಹಿಸಿದಾಗ ಅಯ್ಯೋ ಅನ್ನಬೇಕು. ಇತ್ತ ಹಳ್ಳಿಯ ಬದುಕನ್ನು ಅನುಭವಿಸಿ ಗೊತ್ತಿಲ್ಲ. ನಗರಕ್ಕಿಂತಲೂ ಹೊರತಾದ ಶುಭ್ರ ಬದುಕೊಂದಿದೆ ಅಂತ ಅಪ್ಪಾಮ್ಮ ಹೇಳಿಕೊಟ್ಟಿಲ್ಲ. ಇಂತಹ ಹೊತ್ತಲ್ಲಿ ಪಾಪ, ಮಕ್ಕಳನ್ನು ದೂರಿ ಏನು ಪ್ರಯೋಜನ? ಅವಾದರೂ ಏನು ಮಾಡಿಯಾವು? ನಮ್ಮ ಮಕ್ಕಳಿಗೆ ನಾವೇ ಶತ್ರುಗಳು.

ನಗರವೆಂದರೆ ಶುಚಿ, ರುಚಿ! ಎಲ್ಲಾ ಆಧುನಿಕ ಸೌಲಭ್ಯಗಳು ಬೆರಳ ತುದಿಯಲ್ಲಿವೆ. ಪೇಪರ್ ಬೆಳ್ಳಂಬೆಳಿಗ್ಗೆ ಜಗಲಿಯಲ್ಲಿ ಬಿದ್ದಿರುತ್ತದೆ. ಹಾಲೂ ಅಷ್ಟೇ. ದಿನಪೂರ್ತಿ ಕರೆಂಟ್. ಕೆಡದ ದೂರವಾಣಿ. ಕೈತುಂಬಾ ಕಾಂಚಾಣ. ಇಷ್ಟಕ್ಕೆ ಬದುಕು ನಿಂತುಬಿಡುತ್ತದೆ. ನಗರದ ಈ ವ್ಯವಸ್ಥೆಗೆ ಬದುಕು ಒಗ್ಗಿಹೋಗಿರುತ್ತದೆ. ಇದಕ್ಕೆ `ಅನಿವಾರ್ಯ~ದ ಹಣೆಪಟ್ಟಿ.

ಹಾಗಿದ್ದರೆ ಖುಷಿ ಎಲ್ಲಿದೆ? ಹಳ್ಳಿಯಲ್ಲಿ ಹಲವು ಸಮಸ್ಯೆಗಳಿದ್ದರೂ ಖುಷಿಗೇನೂ ಬರವಿಲ್ಲ. ನಮ್ಮ ಊಟದ ಬಟ್ಟಲನ್ನು ತುಂಬುವುದು ಹಳ್ಳಿ. ಕಾಫಿಗೆ ಹಾಲು ಬರುವುದು ಹಳ್ಳಿಯಿಂದ. ಹಸಿರು ಸೊಪ್ಪು, ತರಕಾರಿಗಳನ್ನು ಯಾವುದೇ ಫ್ಯಾಕ್ಟರಿ ಸಿದ್ಧಮಾಡುವುದಿಲ್ಲ. ಅವೆಲ್ಲಾ ಬರುವುದು ಹಳ್ಳಿಯಿಂದ. ಒಂದು ದಿವಸ ಹಳ್ಳಿಯಿಂದ ನಗರಕ್ಕೆ ತರಕಾರಿ ಹೋಗದಿದ್ದರೆ ನಗರದ ಎಲ್ಲಾ `ಅಡುಗೆ ಮನೆ~ಗಳು ಬಂದ್!

ಹಳ್ಳಿ ಎಂಬ ಅನಾದರ ಬೇಡ. ನಗರದ ಬೇರು ಇರುವುದು ಹಳ್ಳಿಯಲ್ಲಿ. ಹಳ್ಳಿಯಲ್ಲಿದ್ದವರಿಗೂ ಮನಸ್ಸು ಇದೆ. ಬದುಕು ಇದೆ. ಕುಟುಂಬ ಇದೆ. ಅವರಿಗೂ ಬೇಕು-ಬೇಡ ಗಳಿವೆ. ಹಾಗಾಗಿ ಹಳ್ಳಿಯ ಬಗ್ಗೆ ಅನಾದರ ಉಂಟಾಗುವಂತೆ ಬೋಧನೆ ಬೇಡ.

ನೀವು ಹಳ್ಳಿಯಲ್ಲಿ ಹುಟ್ಟಿ ಬೆಳೆದು, ಈಗ ನಗರದಲ್ಲಿದ್ದರೆ ಕನಿಷ್ಠ ತಿಂಗಳಿಗೊಮ್ಮೆಯಾದರೂ ಸಂಸಾರದೊಂದಿಗೆ ಹಳ್ಳಿಗೆ ಬನ್ನಿ. ಮಕ್ಕಳಿಗೆ ಹಳ್ಳಿಯ ಸೊಬಗನ್ನು, ಶುಚಿ-ರುಚಿಯಾದ ವಾತಾವರಣವನ್ನು ಸವಿಯಲು ಅವಕಾಶ ಮಾಡಿ ಕೊಡಿ.
                -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT