ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಪರ್‌ಮೌಲ್ಡ್, ಮಣ್ಣಿನ ಮೂರ್ತಿಗಳ ಪೈಪೋಟಿ

Last Updated 30 ಆಗಸ್ಟ್ 2011, 9:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಕ್ರತುಂಡ, ವಿಘ್ನನಿವಾರಕ, ಶಿವಪುತ್ರ, ಗಜೇಂದ್ರ, ಸಂಕಷ್ಟ ನಿವಾರಕ...ಹೀಗೆ ಬಗೆಬಗೆಯ ನಾಮಗಳಿಗೆ ತಕ್ಕಂತೆ ಸುಂದರ ಗಜಮುಖದ ಗಣೇಶನ ಮೂರ್ತಿಗಳು ಸಾಲುಸಾಲಾಗಿ ಬಿ.ಬಿ.ರಸ್ತೆ ಬದಿಯಲ್ಲಿ ಅನಾವರಣಗೊಂಡಿವೆ. 

 ಕೆಲ ಮೂರ್ತಿಗಳು ಶಿವನ ಆಶ್ರಯದಲ್ಲಿದ್ದರೆ, ಇನ್ನೂ ಕೆಲ ಮೂರ್ತಿಗಳು ಏಳು ಹೆಡೆಗಳ ಸರ್ಪದ ನೆರಳಲ್ಲಿವೆ. ಕೆಲ ಮೂರ್ತಿಗಳು ಆಪ್ತ ಮೂಷಕನೊಂದಿಗೆ ಕಂಗೊಳಿಸಿದರೆ, ಇನ್ನೂ ಕೆಲ ಪುಟಾಣಿ ಮೂರ್ತಿಗಳು ಬೃಹದಾಕಾರಾದ ಮೂರ್ತಿಗಳೊಂದಿಗೆ ಚೆಂದ ಕಾಣುತ್ತಿವೆ.

ಸೆಪ್ಟೆಂಬರ್ 1ರ ಗಣೇಶನ ಹಬ್ಬಕ್ಕಾಗಿ ಬಗೆಬಗೆ ಬಣ್ಣಬಣ್ಣದ ವಿವಿಧ ಆಕಾರದ ಮೂರ್ತಿಗಳು ನಗರಕ್ಕೆ ಆಗಮಿಸಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಬಡಾವಣೆಗಳಲ್ಲಿ ಮತ್ತು ಮನೆಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರು ಈಗಾಗಲೇ ಕೆಲವಾರು ಮೂರ್ತಿ ಗಳನ್ನು ಖರೀದಿಸಿಯೂ ಇದ್ದಾರೆ. ಇನ್ನೂ ಕೆಲವರು ತಮ್ಮ ಸಂಘಸಂಸ್ಥೆಯ ಹೆಸರನ್ನು ನೋಂದಾಯಿಸಿ ಶೀಘ್ರವೇ ಮೂರ್ತಿ ಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಪರಿಸರ ಸ್ನೇಹಿ ರೂಪದಲ್ಲಿ ಹಬ್ಬವನ್ನು ಆಚರಿಸಬೇಕು ಎಂಬ ಉದ್ದೇಶದಿಂದ ಮೂರ್ತಿ ತಯಾರಕರು ಪರಿಸರಕ್ಕೆ ಹಾನಿ ಉಂಟು ಮಾಡಬಲ್ಲ ಯಾವುದೇ ರಾಸಾಯನಿಕ ಅಂಶಗಳನ್ನು ತಯಾರಿಸಿದ್ದರೆ, ಮಾರಾಟಗಾರರು ಸಹ ಪರಿಸರಸ್ನೇಹಿಯಾದ ಮೂರ್ತಿಗಳನ್ನು ಮಾರಲು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ, ಮಾರಾಟದ ವಿಷಯದಲ್ಲಿ ಪೇಪರ್‌ಮೌಲ್ಡ್ ಮೂರ್ತಿಗಳು ಮತ್ತು ಮಣ್ಣಿನಿಂದ ತಯಾರಿಸಲ್ಪಟ್ಟ ಮೂರ್ತಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಪೇಪರ್‌ಮೌಲ್ಡನಿಂದ ತಯಾರಿಸಲ್ಪಟ್ಟ ಮೂರ್ತಿಗಳು ನೂರು ರೂಪಾಯಿಯಿಂದ ಐದು ಸಾವಿರ ರೂಪಾಯಿವರೆಗೆ ಮಾರಲ್ಪಟ್ಟರೆ, ಮಣ್ಣಿನಿಂದ ತಯಾರಿಸಲ್ಪಟ್ಟ ಮೂರ್ತಿಗಳು 100 ರೂಪಾಯಿಯಿಂದ 15 ಸಾವಿರ ರೂಪಾಯಿವರೆಗೆ ಮಾರಲ್ಪಡುತ್ತಿವೆ. ಕಡಿಮೆ ತೂಕದ ಮತ್ತು ನೀರಿನಲ್ಲಿ ಶೀಘ್ರವೇ ಕರಗಬಲ್ಲ ಪೇಪರ್‌ಮೌಲ್ಡ್‌ನಿಂದ ತಯಾರಿಸಲ್ಪಟ್ಟ ಮೂರ್ತಿಗಳನ್ನು ಕೆಲವರು ಖರೀದಿಸಿದರೆ, ಇನ್ನೂ ಕೆಲವರು ದುಬಾರಿಯಾದರೂ ಮತ್ತು ಹೆಚ್ಚು ತೂಕವಿದ್ದರೂ ಮಣ್ಣಿನ ಮೂರ್ತಿಗಳನ್ನೇ ಇಷ್ಟಪಡುತ್ತಿದ್ದಾರೆ.

`ಪರಿಸರಸ್ನೇಹಿಯಾಗಿ ಗಣೇಶನ ಹಬ್ಬ ಆಚರಿಸಬೇಕು ಎಂದು ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಪೇಪರ್‌ಮೌಲ್ಡ್ ಮೂರ್ತಿಗಳನ್ನೇ ಹೆಚ್ಚಾಗಿ ತಯಾರಿಸಿದ್ದೇವೆ. ಈ ಮೂರ್ತಿಗಳು ಕಡಿಮೆ ತೂಕದ್ದು ಇರುತ್ತವೆ ಮತ್ತು ನೀರಿನಲ್ಲಿ ಶೀಘ್ರವೇ ಕರಗುತ್ತವೆ. ವಾಟರ್‌ಪೇಂಟ್ ಬಳಸಿರುವ ಕಾರಣ ಪರಿಸರಕ್ಕೂ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ~ ಎಂದು ಗೌರಿಬಿದನೂರು ತಾಲ್ಲೂಕಿನ ಹಾಲಗನಹಳ್ಳಿಯ ಮೂರ್ತಿ ತಯಾರಕರಾದ ಶಂಕರ್ ಮತ್ತು ರವಿಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

`ಒಂದು ಅಥವಾ ಎರಡು ಅಡಿಯ ಮೂರ್ತಿಗಳನ್ನು ಮಣ್ಣಿನಿಂದ ತಯಾರಿಸಿದ್ದೇವೆ. 5 ರಿಂದ 6 ಅಡಿ ಎತ್ತರದ ಮೂರ್ತಿಗಳನ್ನು ವಿವಿಧ ರೂಪಗಳಲ್ಲಿ ವಿನ್ಯಾಸಗೊಳಿಸಿ ತಯಾರಿಸಿದ್ದೇವೆ. ಪೇಪರ್‌ಮೌಲ್ಡ್‌ನಿಂದ ತಯಾರಿಸಲ್ಪಟ್ಟ ಮೂರ್ತಿಗಳು 30 ಕೆಜಿಯಷ್ಟು ತೂಗುತ್ತವೆ. ಇಬ್ಬರು ಅಥವಾ ಮೂವರು ಎತ್ತಿಕೊಳ್ಳಬಹುದು. ಆದರೆ ಮಣ್ಣಿನ ಮೂರ್ತಿಗಳು 80 ರಿಂದ 100 ಕೆಜಿಗಳಷ್ಟು ಇರುತ್ತವೆ. ಅವುಗಳನ್ನು ಎತ್ತಲು 8 ರಿಂದ 10 ಜನರು ಬೇಕು~ ಎಂದು ಅವರು ತಿಳಿಸಿದರು.

`ಪೇಪರ್‌ಮೌಲ್ಡ್ ಮೂರ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಲ್ಪಟ್ಟರೂ ಬಹುತೇಕ ಮಂದಿ ಮಣ್ಣಿನ ಮೂರ್ತಿಗಳನ್ನೇ ಇಷ್ಟಪಡುತ್ತಾರೆ. ಮಣ್ಣಿನ ಮೂರ್ತಿಗಳಿಂದ ಹಬ್ಬಕ್ಕೆ ಕಳೆ ಬರುತ್ತದೆ. ವಿಶೇಷ ಆಕರ್ಷಣೆಯಿಂದ ಕೂಡಿರುತ್ತವೆ. ಹಲವಾರು ವರ್ಷಗಳಿಂದ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವ ಸಂಘಸಂಸ್ಥೆಗಳ ಸದಸ್ಯರು ಮತ್ತು ಕುಟುಂಬಗಳು ಮಣ್ಣಿನ ಮೂರ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ~ ಎಂದು ದೇವನಹಳ್ಳಿ ತಾಲ್ಲೂಕಿನ ಬುಲಹಳ್ಳಿಯ ಮೂರ್ತಿ ತಯಾರಕರಾದ ಜಗನ್ನಾಥ ಮತ್ತು ಮುರಳಿ ತಿಳಿಸಿದರು.

`ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಮೂರ್ತಿಗಳ ದರವನ್ನು ಹೆಚ್ಚಿಸಲಾಗಿದೆ. ಮೂರ್ತಿ ತಯಾರಿಕೆಗೆ ಅಗತ್ಯವಿರುವ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಅನಿವಾರ್ಯವಾಗಿ ಮೂರ್ತಿಗಳ ಬೆಲೆ ಏರಿಸಬೇಕಾಗಿದೆ. ದುಬಾರಿಯಾದರೂ ವಹಿವಾಟಿಗೆ ಯಾವುದೇ ತೊಂದರೆಯಾಗಿಲ್ಲ. ಜನರು ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ~ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT