ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಪ್‌ಲೈನ್ ಸಮಸ್ಯೆ: ತಪ್ಪದ ನೀರಿನ ಗೋಳು

Last Updated 17 ಏಪ್ರಿಲ್ 2013, 9:54 IST
ಅಕ್ಷರ ಗಾತ್ರ

ಕುರುಗೋಡು: ಸಮೀಪದ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಅಭಾವ ಹಾಗೂ ಹೊಸ ಪೈಪ್‌ಲೈನ್ ಅಳವಡಿಸದ ಕಾರಣ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು,  ಗ್ರಾಮದಿಂದ ಅಂದಾಜು 2 ಕಿ.ಮೀ. ದೂರದ ಕೆರೆ ಸಂಪಿನ ನೀರಿಗೆ ಜನರು ಮುಗಿಬಿದ್ದಿದ್ದಾರೆ.

ಗ್ರಾಮದಲ್ಲಿ ಅಂದಾಜು ರೂ 1.20 ಕೋಟಿ ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರಿನ ಕೆರೆ ನಿರ್ಮಾಣಗೊಂಡರೂ ಪ್ರಯೋಜನವಾಗಿಲ್ಲ.
ಕೆರೆ ನೀರನ್ನು ಜನರಿಗೆ ಪೂರೈಸಲು ಅಂದಾಜು ರೂ 19 ಲಕ್ಷ ವೆಚ್ಚದಲ್ಲಿ 1 ಲಕ್ಷ ಲೀ. ಹಾಗೂ 50 ಸಾವಿರ ಲೀ. ನೀರು ಸಂಗ್ರಹ ಸಾಮರ್ಥ್ಯದ ಮೇಲಸ್ಥರದ ಎರಡು ಟ್ಯಾಂಕ್ ನಿರ್ಮಾಣಗೊಂಡಿವೆ. ಆದರೆ ಈ ಟ್ಯಾಂಕ್‌ನಲ್ಲಿ ಸಂಗ್ರಹಗೊಂಡ ನೀರನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿಸಲು ಅಗತ್ಯವಾದ ಪೈಪ್‌ಲೈನ್ ಅಳವಡಿಸಿಲ್ಲ. ಈ ದೋಷವೇ ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ಹಳೇ ಕೊಳವೆ ಜೋಡಣೆಯಲ್ಲಿ ಸೋರಿಕೆ ಇದೆ. ಇದರ ಮೂಲಕ ನೀರು ಸಬರಾಜುಗೊಳಿಸಿದರೆ ಗ್ರಾಮದ ಎಲ್ಲಾ ಓಣಿಗೆ ನೀರು ತಲುಪಲು ಸಾಧ್ಯವಾಗುತ್ತಿಲ್ಲ. ಹೊಸ ಪೈಪ್‌ಲೈನ್ ಜೋಡಣೆ ಕಾಮಗಾರಿ ಬಗ್ಗೆ ಗ್ರಾಪಂ. ಅನೇಕ ಬಾರಿ ಕಳಿಸಿದ ಪ್ರಸ್ತಾವ ತಾ.ಪಂ. ಕಡತದಲ್ಲಿ ಕೊಳೆಯುತ್ತಿದೆ.   

ಸದ್ಯಕ್ಕೆ ಗ್ರಾಮದ ಕೆಲ ಬಡಾವಣೆಗೆ ಕುರುಗೋಡು ಗ್ರಾಮದ ಕೊಳವೆ ಬಾವಿಯಿಂದ  ನೀರು ಸರಬರಾಜಾಗುತ್ತಿದೆ. ಆದರೆ ಈ ನೀರಿನಲ್ಲಿ ಹೆಚ್ಚಿನ ಲವಣಾಂಶವಿದ್ದು, ಇದನ್ನು ಸೇವಿಸಿದ ಜನರು ಕೈಕಾಲು ಕೀಲು ನೋವಿಗೆ ತುತ್ತಾಗಿದ್ದಾರೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು.ಬಳಕೆಗೆ ನೇರವಾಗಿ ಬರುವ ನೀರು ಸಹ ಅರೆಬರೆಯಾಗಿ ಸರಬರಾಜುಗೊಳ್ಳುವುದು ಸಮಸ್ಯೆಗೆ ಕಾರಣವಾಗಿದೆ. 

ಪ್ರತಿವರ್ಷ ಗ್ರಾಮದ ಜನರಿಗೆ ಹಾಗೂ ಕೃಷಿ ನೀರಿನ ಸಮಸ್ಯೆಗೆ ಪರಿಹಾರವಾಗಿದ್ದ ದೊಡ್ಡ ಹಳ್ಳ ಪ್ರಸಕ್ತ ಸಾಲಿನಲ್ಲಿ ಮಳೆ ಬಾರದೆ ಬತ್ತಿದ ಕಾರಣ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದೆ. ಇತ್ತೀಚೆಗೆ ಗ್ರಾಮದಲ್ಲಿ   ಸಮಸ್ಯೆ ನಿವಾರಣೆಗೆ ತಾಪಂ. ತುರ್ತು ಘಟಕ ಸ್ಥಾಪಿಸಿದ್ದರೂ ಪ್ರಯೋಜನವಾಗಿಲ್ಲ. ತುರ್ತು ಘಟಕಕ್ಕೆ ಸಾರ್ವಜನಿಕರು ಕರೆ ಮಾಡಿದರೂ ಬರೀ ಬ್ಯುಸಿ ಎಂಬ ಉತ್ತರ ಮಾತ್ರ ದೊರೆಯುತ್ತಿದೆ. ಬೇಸಿಗೆಯಲ್ಲಿ ತಾ.ಪಂ. ಸ್ಥಾಪಿಸಿದ ತುರ್ತು ನಿಧಿ ಅಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಓಣಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜುಗೊಳಿಸಬಹುದಿತ್ತು. ಆದರೆ ಈ ಬಗ್ಗೆ ಅಧಿಕಾರಿಗಳ ಯಾವುದೇ ಕ್ರಮ ಕೈಗೊಂಡಿಲ್ಲ  ಎಂಬುದು ಹಲವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT