ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈರಸಿ ತಡೆ ಮಸೂದೆಗೆ ವಿರೋಧ...!

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಆನ್‌ಲೈನ್ ಹಕ್ಕುಸ್ವಾಮ್ಯ ಉಲ್ಲಂಘನೆ ತಡೆಗಟ್ಟುವ ನಿಟ್ಟಿನಲ್ಲಿ ಅಮೆರಿಕ ಸರ್ಕಾರ ಜಾರಿಗೆ ತರಲು ಹೊರಟಿರುವ ಎರಡು ಮಸೂದೆಗಳಿಗೆ ಅಂತರ್ಜಾಲ ಕಂಪೆನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆನ್‌ಲೈನ್ ಪೈರಸಿ ತಡೆ ಕಾಯ್ದೆ (Stop Online Piracy Act-SOPA ) ಮತ್ತು ಬೌದ್ಧಿಕ ಆಸ್ತಿ ರಕ್ಷಣೆ ಕಾಯ್ದೆ (Protect Intellec­tual Pro­perty Act -PIPA) ವಿರೋಧಿಸಿ ಕಳೆದ ವಾರ ಮುಕ್ತ ಆನ್‌ಲೈನ್ ವಿಶ್ವಕೋಶ ವಿಕಿಪೀಡಿಯಾ, ತನ್ನ ಇಂಗ್ಲಿಷ್ ಭಾಷಾ ಆವೃತ್ತಿಯ ಅಂತರಜಾಲ (ವೆಬ್) ಪುಟವನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಿತ್ತು. ವಿಕಿಪಿಡಿಯಾ ಕಪ್ಪು ಮುಖಪುಟ ಪ್ರಕಟಿಸುವ (ಬ್ಲ್ಯಾಕ್ ಹೋಮ್‌ಪೇಜ್) ಮೂಲಕ ಕರಾಳ ದಿನ ಆಚರಿಸಿತು. ಗೂಗಲ್ ಕೂಡ `ತನ್ನ ವೆಬ್‌ತಾಣದಲ್ಲಿ `ಗೂಗಲ್~ ಎನ್ನುವ ಪದಕ್ಕೆ ಕಪ್ಪು ಬಣ್ಣ ಬಳಿದು ಪ್ರತಿಭಟನೆಗೆ ಬೆಂಬಲ ಸೂಚಿಸಿತು.

`ಮಾಹಿತಿ ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಿ~ ಎಂಬ ಧ್ಯೇಯ ವಾಕ್ಯದೊಂದಿಗೆ ವಿಕಿಪಿಡಿಯಾ ಮಸೂದೆ ವಿರೋಧಿ ಚಳವಳಿಗೆ ಮುನ್ನುಡಿ ಬರೆದಿದೆ. ಅಮೆರಿಕ ಸರ್ಕಾರ ಜಾರಿಗೊಳಿಸಲು ಹೊರಟಿರುವ ಈ ಎರಡು ಮಸೂದೆಗಳು ಇಂಟರ್‌ನಟ್ ಭವಿಷ್ಯಕ್ಕೆ ಮಾರಕವಾಗಿವೆ.

ಇದರಿಂದ ಇಂಟರ್‌ನೆಟ್ ಸೇವಾ ಪೂರೈಕೆ ಕಂಪೆನಿಗಳು ಸರ್ಕಾರದ ನಿಗಾ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸರ್ಚ್ ಎಂಜಿನ್ ಫಲಿತಾಂಶಗಳನ್ನು ಕೂಡ ನಿರ್ಬಂಧಿಸಲಾಗುತ್ತದೆ. ಇಂಟರ್‌ನೆಟ್ ಬಳಸುತ್ತಿರುವ ಮತ್ತು ಇಂಟರ್‌ನೆಟ್ ಅನ್ನೇ ನೆಚ್ಚಿಕೊಂಡಿರುವ ಸಹಸ್ರಾರು ಜನರು ನೀವು ಜಾರಿಗೊಳಿಸಲು ಹೊರಟಿರುವ ಈ ಮಸೂದೆ ಮತ್ತು ಇದರ ಸಂಭಾವ್ಯ ಪರಿಣಾಮಗಳನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ವಿಕಿಪಿಡಿಯಾದ ಸಹ ಸ್ಥಾಪಕ ಜಿಮ್ಮಿ ವೇಲ್ಸ್, `ನ್ಯೂಯಾರ್ಕ್ ಟೈಮ್ಸ~ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

 ಕಳೆದ ಅಕ್ಟೋಬರ್ ತಿಂಗಳಲ್ಲಿ ಇಟಲಿಯ ಸಂಸತ್ತು ಇಂತಹುದೇ ಒಂದು ಮಸೂದೆಯನ್ನು ಮಂಡಿಸಲು ಹೊರಟಾಗ `ವಿಕಿಪಿಡಿಯಾ ಇಟಲಿ ಭಾಷಾ ಆವೃತ್ತಿಯನ್ನು ಸ್ಥಗಿತಗೊಳಿಸಿ ಪ್ರತಿಭಟಿಸಿತ್ತು. ಆದರೆ, ಕಳೆದ ಮಂಗಳವಾರ ದಾಖಲಾದ ಜನ ಬೆಂಬಲಕ್ಕೆ ಹೋಲಿಸಿದರೆ ಅದು ತುಂಬಾ ಚಿಕ್ಕದಿತ್ತು ಎಂದು ಸ್ಮರಿಸುವ ಜಿಮ್ಮಿ, ಈ ಮಸೂದೆಯನ್ನು ಹಿಂದಕ್ಕೆ ಪಡೆಯುವಂತೆ ಬಳಕೆದಾರರು ತಮ್ಮ ಜನಪ್ರತಿನಿಧಿಗಳ ಮೂಲಕ ಸರ್ಕಾರಕ್ಕೆ ಆಗ್ರಹಿಸಬೇಕು ಎನ್ನುತ್ತಾರೆ.

ವಿಕಿಪಿಡಿಯಾ ನಡೆಸುತ್ತಿರುವ ಪ್ರತಿಭಟನೆಗೆ ರೆಡ್‌ಇಟ್‌ಡಾಟ್ ಕಾಂ, (Reddit.com)  ಸಾಮಾಜಿಕ ಸುದ್ದಿ ತಾಣ ಬೋಯಿಂಗ್‌ಬೋಯಿಂಗ್, ಮತ್ತು ಸಾವಿರಾರು ಬ್ಲಾಗ್‌ಗಳು ಬೆಂಬಲ ಸೂಚಿಸಿವೆ. `ಬ್ಲಾಗಿಂಗ್ ತಾಣ     `ವರ್ಡ್‌ಪ್ರೆಸ್~ ತನ್ನ ಮುಖಪುಟದಲ್ಲೇ ಪ್ರತಿಭಟನೆಗೆ ಬೆಂಬಲ ಸೂಚಿಸಿತ್ತು. ಕೆಲವು ತಾಣಗಳು ತಮ್ಮ ವೆಬ್ ಪುಟಗಳನ್ನು ಸ್ಥಗಿತಗೊಳಿಸದಿದ್ದರೂ, ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದವು.

 ಫೇಸ್‌ಬುಕ್, ಗೂಗಲ್, ಯಾಹೂ, ಟ್ವಿಟ್ಟರ್, ಇ-ಬೇ ಸೇರಿದಂತೆ ಹಲವು ತಾಣಗಳು ಚೀನಾ, ಮಲೇಷ್ಯಾ, ಇರಾನ್‌ನಲ್ಲಿ ಅನುಸರಿಸಿರುವ ವೆಬ್ ಸೆನ್ಸಾರ್ ನೀತಿ ಬೇಕಾದರೆ ಸರ್ಕಾರ ಅನುಸರಿಸಲಿ, ಆದರೆ, ಈ ಮಸೂದೆ ತಮ್ಮ ವಹಿವಾಟು ವಿಸ್ತರಣೆಗೆ ಮಾರಕವಾಗಲಿದೆ ಎಂದಿವೆ. ಅಲ್ಲದೇ `ಸೊಪಾ~ ಜಾರಿಯಿಂದ  ಕೆಲವು ಸೂಕ್ಷ್ಮ ದತ್ತಾಂಶಗಳು ಹ್ಯಾಕಿಂಗ್ ದಾಳಿಗೆ ತುತ್ತಾಗುವ ಸಾಧ್ಯತೆಗಳೂ ಇವೆ ಎಂದು ಆರೋಪಿಸಿವೆ.
 
ಉದಾಹರಣೆಗೆ ವರ್ಡ್‌ಪ್ರೆಸ್ ಅಥವಾ ಬ್ಲಾಗ್‌ಪೋಸ್ಟ್‌ನಂತಹ  ತಾಣಗಳು  ಹಕ್ಕುಸ್ವಾಮ್ಯ ಹೊಂದಿದ ಮಾಹಿತಿ ಪ್ರಕಟಿಸಿದರೆ, ಇಂತಹ ಬ್ಲಾಗ್‌ಗಳನ್ನು ಅಮೆರಿಕ ಸರ್ಕಾರ ನಿಷೇಧಿಸಬಹುದು. ಬಳಕೆದಾರನೊಬ್ಬ ಗೊತ್ತಿದ್ದೋ, ಗೊತ್ತಿಲ್ಲದೆಯೋ ಹಕ್ಕುಸ್ವಾಮ್ಯ ಹೊಂದಿರುವ ಕಡತವನ್ನು ಟ್ವಿಟ್ಟರ್, ಫೇಸ್‌ಬುಕ್, ಗೂಗಲ್ ಅಥವಾ ಇನ್ಯಾವುದೇ ಸಾಮಾಜಿಕ ತಾಣದಲ್ಲಿ ಪ್ರಕಟಿಸಿದರೂ ಆ ತಾಣ ನಿಷೇಧ ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ.   ಒಟ್ಟಿನಲ್ಲಿ ಇಡೀ ಇಂಟರ್‌ನೆಟ್ ಉದ್ಯಮವನ್ನೇ ಈ ಮಸೂದೆ ಬಳಸಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಪ್ರಸ್ತಾವಿತ `ಸೊಪಾ~ ನಿಯಮದಡಿ ಹಕ್ಕುಸ್ವಾಮ್ಯ ಹೊಂದಿದ ಕಡತಗಳು, ದೃಶ್ಯಗಳು, ವಿಡಿಯೊಗಳನ್ನು (ಆರು ತಿಂಗಳ ನಡುವೆ 10 ಬಾರಿ) ಆನ್‌ಲೈನ್‌ನಲ್ಲಿ ಪ್ರಕಟಿಸಲಾಗಿದ್ದರೆ ಸಂಬಂಧಪಟ್ಟ ವ್ಯಕ್ತಿ, ಕಂಪೆನಿಗೆ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದು. ಅಂತಹ ಜಾಲತಾಣಗಳ ವೆಬ್ ವಿಳಾಸವನ್ನು ಸ್ಥಗಿತಗೊಳಿಸಬಹುದು. ಆದ್ದರಿಂದ ಇದರ ಬದಲಿಗೆ ಈಗಾಗಲೇ ಜಾರಿಯಲ್ಲಿರುವ ಅಮೆರಿಕದ ಡಿಜಿಟಲ್ ಶತಮಾನ ಹಕ್ಕುಸ್ವಾಮ್ಯ ಕಾಯ್ದೆಯನ್ನೇ (Digital Millennium Copy­right Act-DMCA)ಮುಂದುವರೆಸಿಕೊಂಡು ಹೋಗಬೇಕು ಎನ್ನುವುದು ಕಂಪೆನಿಗಳ ಆಗ್ರಹ.

ಯಾಕೆ ಈ ಮಸೂದೆ
ಸಿನಿಮಾ, ಸಂಗೀತ, ಟಿವಿ ಕಾರ್ಯಕ್ರಮಗಳು ಸೇರಿದಂತೆ ಇತರೆ ಮಾಹಿತಿಗಳನ್ನು (ಡಿಜಿಟಲ್ ಕಂಟೆಂಟ್) ಇಂಟರ್‌ನೆಟ್‌ನಿಂದ ಕಾನೂನುಬಾಹಿರವಾಗಿ ಡೌನ್‌ಲೋಡ್ ಮಾಡಿಕೊಳ್ಳುವುದು ಈ ಮಸೂದೆಯಿಂದ ತಪ್ಪಲಿದೆ.  ಹಕ್ಕುಸ್ವಾಮ್ಯ ಹೊಂದಿದ ಅಮೆರಿಕದ ಚಲನಚಿತ್ರಗಳು, ಮ್ಯೂಸಿಕ್ ಮತ್ತು ಇತರೆ ಮಾಹಿತಿಗಳ ಆನ್‌ಲೈನ್ ಮಾರಾಟ ತಡೆಯುವುದು ಇದರ ಮುಖ್ಯ ಉದ್ದೇಶ. ಆದ್ದರಿಂದ ಹಾಲಿವುಡ್ ಸ್ಟುಡಿಯೊ  ಮತ್ತು ಮ್ಯೂಸಿಕ್ ಕಂಪೆನಿಗಳು ಈ ಮಸೂದೆಗೆ ಬೆಂಬಲ ಸೂಚಿಸಿವೆ. 

ಮೋಷನ್ ಪಿಕ್ಚರ್ ಅಸೋಷಿಯೇಷನ್ ಆಫ್ ಅಮೆರಿಕ (ಎಂಪಿಎಎ) ಮತ್ತು ಅಮೆರಿಕದ ರೆಕಾರ್ಡಿಂಗ್ ಇಂಡಸ್ಟ್ರಿ ಅಸೋಷಿಯೇಷನ್ (ಆರ್‌ಐಎಎ) ಮಸೂದೆ ಜಾರಿಗೆ ಆಗ್ರಹಿಸಿವೆ. ಇದರಿಂದ ಅಕ್ರಮ ಡಿಜಿಟಲ್ ಕಂಟೆಂಟ್ ಬಳಕೆಗೆ ಕಡಿವಾಣ ಬೀಳುತ್ತದೆ ಮತ್ತು ಉದ್ಯೋಗ ಮತ್ತು ಬೌದ್ಧಿಕ ಆಸ್ತಿ  ರಕ್ಷಿಸಬಹುದು ಎನ್ನುವುದು ಬೆಂಬಲಿಗರ ವಾದ.

ವಿರೋಧ ಯಾಕೆ?
ಆನ್‌ಲೈನ್ ಎನ್ನುವುದು ಎಲ್ಲರಿಗೆ ಮುಕ್ತ ಮತ್ತು ಉಚಿತ. ಇಲ್ಲಿ ಕೃತಿಚೌರ್ಯ ಎಂಬ ಪದಕ್ಕೆ ಅರ್ಥವಿಲ್ಲ ಎನ್ನುವುದು ಮಸೂದೆ ವಿರೋಧಿಸುವ ಕಂಪೆನಿಗಳ ವಾದ. ಬೇಕಾದರೆ ಸಂಬಂಧಿಸಿದ ಸಂಸ್ಥೆಗಳೇ ಅಕ್ರಮ ಬಳಕೆ ತಡೆಯಲು ಸ್ವಯಂ ನಿಯಂತ್ರಣ ತಂತ್ರಜ್ಞಾನ ಅಳವಡಿಸಿಕೊಳ್ಳಲಿ. ಆದರೆ, ಈ ಮಸೂದೆ ಇಡೀ ಅಂತರ್ಜಾಲ ಉದ್ಯಮಕ್ಕೇ ಮರಣ ಶಾಸನವಾಗಲಿದೆ ಎನ್ನುತ್ತದೆ ವಿಕಿಪಿಡಿಯಾ.

ಕೆಲವು ಕಂಪೆನಿಗಳು ಪೈರಸಿ ಹೊಂದಿದ ಮಾಹಿತಿ ಮತ್ತು ವೆಬ್ ಲಿಂಕ್‌ಗಳನ್ನು ತಮ್ಮ ತಾಣದಲ್ಲಿ ಪ್ರಕಟಿಸುತ್ತವೆ. ಇಂತಹ ತಾಣಗಳ ಮೇಲೆ ಈ ಮಸೂದೆಯಡಿ ನಿರ್ಬಂಧ ವಿಧಿಸಬಹುದು. ಆದರೆ,  ಗೂಗಲ್‌ನಂತ ಸರ್ಚ್ ಎಂಜಿನ್ ಕೂಡ ತನ್ನ ಶೋಧ ಫಲಿತಾಂಶದಲ್ಲಿ ಇಂತಹ ತಾಣಗಳ ಮಾಹಿತಿ ಮತ್ತು ಕೊಂಡಿಯನ್ನು  ಬಳಕೆದಾರರಿಗೆ ನೀಡಬಾರದು ಎನ್ನುತ್ತದೆ ನಿಯಮ.  ಪೇ-ಪಾಲ್‌ನಂತಹ ಕ್ರೆಡಿಟ್ ಕಾರ್ಡ್ ಕಂಪೆನಿಗಳು ಜಾಹೀರಾತು ಪ್ರಕಟಿಸಬಾರದು ಎನ್ನುತ್ತದೆ ಮತ್ತೊಂದು ನಿಯಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT