ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Last Updated 19 ಸೆಪ್ಟೆಂಬರ್ 2013, 8:21 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಆಲ್ದೂರಿನಲ್ಲಿ ನಡೆದ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ನಾಗರಿಕರ ಮೇಲೆ ಪೊಲೀಸರು ನಡೆಸಿ­ರುವ ದೌರ್ಜನವನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳು­ವಂತೆ ಒತ್ತಾಯಿಸಿ ನಾಗರಿಕ ಹಿತ­ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಾರ್ವ­ಜ­ನಿಕರು ಬುಧವಾರ ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

ಮುಖ್ಯ ರಸ್ತೆಯಲ್ಲಿ ಮೆರವಣಿಗೆ­ಯಲ್ಲಿ ಆಗಮಿಸಿದ ಪ್ರತಿಭಟನಾ ನಿರತರು, ಜಿಲ್ಲಾ ಪೊಲೀಸ್‌್ ಮುಖ್ಯಾಧಿ­ಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು. ದೌರ್ಜನ್ಯ ನಡೆಸಿರುವ ಠಾಣಾಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಂ.ಪಿ.­ಕುಮಾರಸ್ವಾಮಿ, ನಿಷ್ಪಕ್ಷಪಾತ ತನಿಖೆ ನಡೆಸಿ ದೌರ್ಜನ್ಯ ನಡೆಸಿದವರನ್ನು ಕೂಡಲೇ ಅಮಾನತು ಪಡಿಸಬೇಕು. ಇಲ್ಲದಿದ್ದರೆ ನ್ಯಾಯ ಸಿಗುವತನಕ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯ­ವಾಗುತ್ತದೆ ಎಂದು ಎಚ್ಚರಿಸಿದರು.

ಸ್ಥಳೀಯ ಮುಖಂಡ ಸುರೇಶಗೌಡ ಮಾತನಾಡಿ, ದೌರ್ಜನ್ಯ ನಡೆಸಿರುವ­ವರನ್ನು ಕೂಡಲೇ ಅಮಾನತು ಪಡಿಸ­ಬೇಕೆಂದು ಒತ್ತಾಯಿಸಿದರು. ಪೊಲೀ­ಸರ ಮೇಲೆ ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳುವಂತೆ ಆಲ್ದೂರು ಠಾಣಾ­ಧಿಕಾರಿ ಮತ್ತು ಕೆಲವು ಸಿಬ್ಬಂದಿ ನಡೆದುಕೊಂಡಿದ್ದಾರೆಂದು ತಾ.ಪಂ. ಸದಸ್ಯ ಮಹೇಶ್‌ ತಿಳಿಸಿದರು.

ಹಳಿಯೂರು ಗ್ರಾಮದ ರಮೇಶ್‌ ಮಾತನಾಡಿ, ತಪ್ಪು ಮಾಡಿದವರ ವಿರುದ್ಧ ಕ್ರಮಕೈಗೊಂಡರೆ ಯಾವುದೇ ಅಭ್ಯಂತರವಿಲ್ಲ. ಆದರೆ ದಾರಿಯಲ್ಲಿ ಹೋಗುತ್ತಿದ್ದವರು ಮತ್ತು ಮನೆಯಲ್ಲಿ­ದ್ದ­ವರನ್ನು ಪೊಲೀಸರು ಕರೆತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದ್ವೇಷ­­ದಿ­ಂದ ಕೃತ್ಯ ಎಸಗಿರುವುದು ಕಂಡು­­­­ಬರುತ್ತದೆ ಎಂ­ದರು.

ಶಾಸಕ ಸಿ.ಟಿ.ರವಿ ಮಾತನಾಡಿ, ನಾಗರಿಕ ಸಮಾಜ ತಲೆತಗ್ಗಿಸುವಂತೆ ಆಲ್ದೂರು ಪೊಲೀಸರು ನಡೆದು­ಕೊಂಡಿದ್ದಾರೆ. ಇದೇ ಪ್ರವೃತ್ತಿ ಮುಂದು­ವರೆದರೆ ಜನರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ. ಸಾರ್ವ­ಜನಿ­ಕರ ಮೇಲೆ ಸುಳ್ಳು ಮೊಕದ್ದಮೆ ದಾಖ­ಲಿಸುವ ಮೂಲಕ ನೆಮ್ಮದಿಗೆ ಭಂಗವ­ನ್ನುಂಟು ಮಾಡಲಾಗಿದೆ ಎಂದರು.

ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿತಸ್ಥರನ್ನು ಕೂಡಲೇ ಅಮಾನತು ಪಡಿಸಿ ಕಾನೂನು ಕ್ರಮ ಜರುಗಿಸ­ಬೇಕೆಂದು ಒತ್ತಾಯಿಸಿದರು. ನಿರಪರಾ­ಧಿ­ಗಳ ಮೇಲೆ ಹಾಕಿರುವ ಮೊಕದ್ದಮೆ­ಯನ್ನು ಹಿಂದಕ್ಕೆ ಪಡೆಯಬೇಕು. 10ದಿನದೊಳಗೆ ಅಗತ್ಯ ಕ್ರಮಕೈಗೊಳ್ಳ­ದಿದ್ದರೆ ದೌರ್ಜನ್ಯಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದರು.

ಮನವಿ ಸ್ವೀಕರಿಸಿದ ಹೆಚ್ಚುವರಿ ಪೊಲೀಸ್‌ ಮುಖ್ಯಾಧಿಕಾರಿ ಮಿತ್ರ ಹೆರಾಜೆ ನಿಷ್ಪಕ್ಷಪಾತ ತನಿಖೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ಕಳುಹಿಸಿ­ಕೊಡಲಾಗುವುದು ಎಂದರು. ನಾರಾಯಣ ಆಚಾರ್‌, ರುದ್ರೇ­ಗೌಡ, ಕವೀಶ, ಸತೀಶ್‌ ಬಿಜೆಪಿ ಮುಖಂಡ­ರಾದ ಪ್ರೇಂಕುಮಾರ್‌, ಕೋಟೆ ರಂಗನಾಥ್‌, ಕಲ್ಮರಡಪ್ಪ, ತಮ್ಮಯ್ಯ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT