ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಮೇಲೆ ಹಲ್ಲೆ: ಬಂಧನ

Last Updated 14 ಅಕ್ಟೋಬರ್ 2012, 7:25 IST
ಅಕ್ಷರ ಗಾತ್ರ

ಕೋಲಾರ: ಅಕ್ರಮ ಮರಳು ಫಿಲ್ಟರ್ ದಂಧೆಯನ್ನು ತಡೆಯಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿದ ನಾಲ್ವರ ಪೈಕಿ ಒಬ್ಬನನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ವಿಲ್ಲತ್‌ನಗರದ ಸಾದಿಕ್‌ಪಾಶಾ ಬಂಧಿತ ಆರೋಪಿ. ರಾತ್ರಿ 11ರ ವೇಳೆಗೆ ವೇಮಗಲ್‌ನಿಂದ ತಪ್ಪಿಸಿಕೊಂಡು ಹೋಗುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿ ರಾತ್ರಿಯೇ ನ್ಯಾಯಾಂಗ ವಶಕ್ಕೆ ನೀಡಲಾಯಿತು.

ಮತ್ತೊಬ್ಬ ಆರೋಪಿ ಅನ್ವರ್ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಉಳಿದ ಇಬ್ಬರ ಹೆಸರು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಹೊರವಲಯದ ಅರಹಳ್ಳಿ ಕೆರೆಯಲ್ಲಿ ಅಕ್ರಮ ಮರಳು ಫಿಲ್ಟರ್ ದಂಧೆ ನಡೆಯುತ್ತಿದೆ. ಅದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಕೆಲವು ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಶುಕ್ರವಾರ ಸಂಜೆ ಡಿವೈಎಸ್‌ಪಿ ಶ್ರೀಹರಿ ಬರಗೂರು, ತಹಶೀಲ್ದಾರ್ ಡಾ.ವೆಂಕಟೇಶಮೂರ್ತಿ, ಕಂದಾಯ ನಿರೀಕ್ಷಕ ನಾಗರಾಜ್ ಅವರಿದ್ದ ತಂಡ ಕೆರೆಗೆ ಭೇಟಿ ನೀಡಿತ್ತು.

ಈ ಸಂದರ್ಭದಲ್ಲಿ ಎರಡು ಯಂತ್ರಗಳಿಂದ ಮರಳು ತೆಗೆಯಲಾಗುತ್ತಿತ್ತು. ನಂಬರ್‌ಪ್ಲೇಟ್ ಇಲ್ಲದ ಲಾರಿ ಮತ್ತು ಎರಡು ಟ್ರ್ಯಾಕ್ಟರ್‌ಗಳಿಗೆ ಮರಳನ್ನು ತುಂಬಲಾಗುತ್ತಿತ್ತು. ನಾಲ್ವರು ದುಷ್ಕರ್ಮಿಗಳನ್ನು ತಂಡದ ಸದಸ್ಯರು ಹಿಡಿಯಲು ಮುಂದಾಗುತ್ತಿದ್ದಂತೆಯೇ ಸಮೀಪದ ಮೊಂಬಡಿ ನಗರದ ನೂರಾರು ಮಂದಿ ಸ್ಥಳಕ್ಕೆ ಧಾವಿಸಿ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾದರು. ಕೂಡಲೇ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಜನರನ್ನು ಚದುರಿಸಲಾಯಿತು. ನಾಲ್ವರು ದುಷ್ಕರ್ಮಿಗಳೂ ಪರಾರಿಯಾದರು. ಎರಡು ಜೆಸಿಬಿ, ಒಂದು ಲಾರಿಯನ್ನು ವಶಪಡಿಸಿಕೊಂಡ ತಂಡ ವಾಪಸಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT