ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಲಘು ಲಾಠಿ ಪ್ರಹಾರ

ಎಪಿಎಂಸಿ: ರೈತರ, ಏಜೆಂಟರ ಮಧ್ಯೆ ಘರ್ಷಣೆ; ಘಟನೆ ಖಂಡಿಸಿ ಪ್ರತಿಭಟನೆ
Last Updated 11 ಜುಲೈ 2013, 12:02 IST
ಅಕ್ಷರ ಗಾತ್ರ

ಚಿಂತಾಮಣಿ: ಕಮೀಷನ್ ವಿಷಯಕ್ಕೆ ಸಂಬಂಧಿಸಿದಂತೆ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಮತ್ತು ಕಮೀಷನ್ ಏಜೆಂಟರ ನಡುವೆ ನಡೆದ ಘರ್ಷಣೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ ಘಟನೆ ಬುಧವಾರ ನಡೆದಿದೆ.

ಎಪಿಎಂಸಿಯ ಊಲವಾಡಿ ಕೃಷ್ಣಪ್ಪ ಎಂಬುವವರ ಅಂಗಡಿ ಎದುರು ಕಮೀಷನ್ ವಿಷಯವಾಗಿ ರೈತರು ಗುಂಪು ಸೇರಿ ವಾದ ವಿವಾದ ನಡೆಸುತ್ತಿದ್ದರು ಎನ್ನಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.

ರಸ್ತೆ ತಡೆ: ಪೊಲೀಸರು ರೈತರ ಗುಂಪಿನ ಮೇಲೆ ಏಕಾಏಕಿ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಆರೋಪಿಸಿ ರೈತರು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.

ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ. ನೂರಾರು ರೈತರು ರಸ್ತೆಯಲ್ಲಿ ಕುಳಿತು ಘಟನೆಗೆ ಕಾರಣರಾದ ವ್ಯಾಪಾರಿಗಳು ಮತ್ತು ಪೊಲೀಸರ ಮೇಲೆ ಕ್ರಮಕೈಗೊಳ್ಳದಿದ್ದರೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ. ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟುಹಿಡಿದು ಕುಳಿತರು.

ಡಿವೈಎಸ್ಪಿ ವಿ.ಶೇಖರ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ವರ್ತಕರು ಅಧಿಕೃತ ರಸೀದಿ ನೀಡಬೇಕು. ರೈತರಿಂದ ಕಮೀಷನ್ ಪಡೆಯುವುದನ್ನು ಕೂಡಲೇ ನಿಲ್ಲಿಸಬೇಕು. ಲಾಠಿ ಪ್ರಹಾರ ನಡೆಸಿದ ಪೊಲೀಸರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಾನೂನು ಪ್ರಕಾರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರೈತರು, ವರ್ತಕರು ಮತ್ತು ಆಡಳಿತ ಮಂಡಳಿ ಅವರ ಸಭೆಯನ್ನು ಕರೆದು ಕೂಲಂಕುಷವಾಗಿ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಿದರು.

ಲಾಠಿ ಪ್ರಹಾರ: ರೈತ ಸಂಘ ಖಂಡನೆ
ಚಿಂತಾಮಣಿ:
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ತೀವ್ರವಾಗಿ ಖಂಡಿಸಿದೆ.

ಎಪಿಎಂಸಿ ಆಡಳಿತ ಮಂಡಳಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಘಟನೆಗೆ ಕಾರಣವಾಗಿದೆ. ವ್ಯಾಪಾರಿಗಳು ಅಧಿಕೃತ ರಸೀದಿ ನೀಡದೆ ಬಿಳಿಯ ಕಾಗದದ ಮೇಲೆ ಬರೆದುಕೊಟ್ಟು ರೈತರ ಶೋಷಣೆ ಮಾಡುತ್ತಾರೆ. ಕಾನೂನಿನ ಪ್ರಕಾರ ಅಧಿಕೃತ ರಸೀದಿ ನೀಡಬೇಕು. ಆಡಳಿತ ಮಂಡಳಿಯು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದರೆ ಅಹಿತಕರ ಘಟನೆ ನಡೆಯುತ್ತಿರಲಿಲ್ಲ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಗೋಪಿನಾಥ್ ತಿಳಿಸಿದ್ದಾರೆ.

ವರ್ತಕರು ರೈತರಿಂದ ಕಮೀಷನ್ ಪಡೆಯುವುದನ್ನು ನಿಲ್ಲಿಸಲು ಆಡಳಿತ ಮಂಡಳಿ ಕ್ರಮಕೈಗೊಳ್ಳಬೇಕು. ರೈತರಿಗೆ ಅಧಿಕೃತ ರಸೀದಿಗಳನ್ನು ನೀಡಬೇಕು. ಇಂದಿನ ಘಟನೆಯಲ್ಲಿ ರೈತರ ಮೇಲೆ ಲಾಠಿ ಬೀಸಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT