ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ವಿರುದ್ಧ ರಶ್ದಿ ಕಿಡಿ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಜೈಪುರ (ಪಿಟಿಐ, ಐಎಎನ್‌ಎಸ್): `ಜೈಪುರ ಸಾಹಿತ್ಯ ಉತ್ಸವದಿಂದ ನನ್ನನ್ನು ದೂರ ಇಡುವ ಉದ್ದೇಶದಿಂದಲೇ ರಾಜಸ್ತಾನದ ಪೊಲೀಸರು `ಜೀವ ಬೆದರಿಕೆ~ಯ ಸುಳ್ಳು ಕತೆ ಕಟ್ಟಿದ್ದಾರೆ~ ಎಂದು ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಆಕ್ರೋಶ ವ್ಯಕ್ತಪಡಿಸ್ದ್ದಿದಾರೆ.

`ಈ ವಿಷಯ ತನಿಖೆಯಿಂದ ಗೊತ್ತಾಗಿದೆ. ಇದರಿಂದ ನನಗೆ ಅಸಾಧ್ಯ ಕೋಪ ಬಂದಿದೆ~ ಎಂದು ಅವರು ಕಿಡಿ ಕಾರಿದ್ದಾರೆ. ಆ ಮೂಲಕ ತಮ್ಮ ಭಾರತ ಭೇಟಿಯ ಕುರಿತು ಎದ್ದಿರುವ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ರಶ್ದಿ ಅವರ ಈ ಆರೋಪಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಜಸ್ತಾನ ಸರ್ಕಾರ, ಜೀವ ಬೆದರಿಕೆಯ ಬಗ್ಗೆ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ಉತ್ಸವದ ಸಂಘಟಕರಿಗೆ ತಿಳಿಸಲಾಗಿತ್ತು. ಅದರಂತೆ ಅವರು ನಡೆದುಕೊಂಡಿದ್ದಾರೆಯೇ ಹೊರತು ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.

`ಪೊಲೀಸರು ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ಈ ರೀತಿ ಹೇಳುವಂತೆ ನಿರ್ದೇಶಿಸ್ದ್ದಿದು ಯಾರು ಎಂದು ತಿಳಿಯದು. ಬಹುಶಃ ಲೇಖಕರಾದ ಹರಿ ಕುಂಜ್ರು, ಅಮಿತಾವ್ ಜೀತ್ ಮತ್ತು ರುಚಿರ್ ಅವರನ್ನು ಬಂಧಿಸಲು ಹೇಳಿದ ಶಕ್ತಿಗಳೇ ಇರಬಹುದು. ಒಟ್ಟಾರೆ ವಿವಾದ ನನಗೆ ಅಸಹ್ಯ ಮೂಡಿಸಿದೆ~ ಎಂದು ರಶ್ದಿ ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಲ್ಮಾನ್ ಬೆಂಬಲಿಸಿದ ಲೇಖಕರ ವಿರುದ್ಧ ದೂರು
ಸಲ್ಮಾನ್ ರಶ್ದಿ ಅವರ ನಿಷೇಧಿತ `ಸೆಟಾನಿಕ್ ವರ್ಸಸ್~ ಪುಸ್ತಕದ ಕೆಲವು ಭಾಗಗಳನ್ನು ಸಾಹಿತ್ಯ ಉತ್ಸವದಲ್ಲಿ ಓದಿದ ನಾಲ್ವರು ಲೇಖಕರ ವಿರುದ್ಧ ಜೈಪುರದ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ಲೇಖಕರಾದ ಹರಿ ಕುಂಜ್ರು, ಅಮಿತಾವ್, ಜೀತ್ ಥಯಿಲ್ ಮತ್ತು ರುಚಿರ್ ಜೋಶಿ ಅವರ ವಿರುದ್ಧ ಅಶೋಕ್ ಕುಮಾರ್ ಎಂಬುವವರು ದೂರು ನೀಡಿದ್ದಾರೆ. ದೂರನ್ನು ಪರಿಶೀಲಿಸಲಾಗುತ್ತಿದ್ದು ಇನ್ನೂ ಎಫ್‌ಐಆರ್ ದಾಖಲಾಗಿಲ್ಲ ಎಂದು ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಈ ನಡುವೆ ನಾಲ್ವರು ಲೇಖಕರು ಈಗಾಗಲೇ ಉತ್ಸವದಿಂದ ತೆರಳಿದ್ದಾರೆ ಎನ್ನಲಾಗಿದೆ. ಆದರೆ, ಅವರು ಇನ್ನೂ ನಗರದಲ್ಲಿ ಇರುವ ಅಥವಾ ಇಲ್ಲದಿರುವ ಬಗ್ಗೆ ಸ್ಪಷ್ಟ ಮಾಹಿತಿಗಳು ಇಲ್ಲ ಎಂದು ಮೂಲಗಳು ತಿಳಿಸಿವೆ.



`ಟ್ವಿಟ್ಟರ್‌ನಲ್ಲಿ ರಶ್ದಿ ಅವರು ನೀಡಿರುವ ಹೇಳಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ರಾಜಸ್ತಾನ ಪೊಲೀಸರ ವಿರುದ್ಧ ಅವರು ಮಾಡಿರುವ ಆರೋಪ ನಿರಾಧಾರ~ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಶ್ದಿ ಭಾರತಕ್ಕೆ ಬರಲು ಸ್ವತಂತ್ರರು ಎಂದು ಹೇಳಿದ ಅವರು, ಸಂಘಟಕರ ಕೋರಿಕೆಯ ಮೇರೆಗೆ ಉತ್ಸವಕ್ಕೆ ಸೂಕ್ತ ರಕ್ಷಣೆ ನೀಡಲಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಗದ್ದಲ ಎಬ್ಬಿಸಲು ಯಾರೊಬ್ಬರು ಬಯಸಲಾರರು ಎಂದಿದ್ದಾರೆ.

ರಾಜಸ್ತಾನ ಪೊಲೀಸ್ ಇಲಾಖೆ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದಷ್ಟೇ ಸಮಜಾಯಿಷಿ ನೀಡಿದೆ.

ನಿಷೇಧ ಕೈಬಿಡಲು ಆಗ್ರಹ
ರಶ್ದಿ ಅವರ `ಸೆಟಾನಿಕ್ ವರ್ಸಸ್~ ಮೇಲೆ ಭಾರತದಲ್ಲಿ 23 ವರ್ಷಗಳಿಂದ ಹೇರಲಾದ ನಿಷೇಧ ಹಿಂತೆಗೆದುಕೊಳ್ಳುವಂತೆ ಸ್ವತಂತ್ರ ಬರಹಗಾರರ ಮತ್ತು ಚಿತ್ರ ಕಲಾವಿದರ ಗುಂಪು ಜೈಪುರದ ಸಾಹಿತ್ಯ ಉತ್ಸವ ಸಂಘಟಕರಿಗೆ ಮನವಿ ಸಲ್ಲಿಸಿದೆ.

ಗೋಷ್ಠಿಯಲ್ಲಿ ಮಾತನಾಡಿದ ಲೆಬನಾನ್ ಲೇಖಕಿ ಹನಾನ್ ಅಲ್ ಶೇಖ್ `ರಶ್ದಿ ಈ ಸಮ್ಮೇಳನದಲ್ಲಿ ಭಾಗವಹಿಸಬೇಕಿತ್ತು. ಅವರ ಅನುಪಸ್ಥಿತಿ ತುಂಬಾ ಕಾಡುತ್ತಿದೆ~ ಎಂದು ವಿಷಾದ ವ್ಯಕ್ತಪಡಿಸಿದರು. ಅದಕ್ಕೆ ಅಲ್ಲಿದ್ದ ಬಹುತೇಕರು ಸಹಮತ ವ್ಯಕ್ತಪಡಿಸಿದರು.

ಆಗ ಅಲ್ಲಿಗೆ ಆಗಮಿಸಿದ ಸಂಘಟಕರಲ್ಲಿ ಒಬ್ಬರಾದ ವಿಲ್ಲಿಯಂ ಡಾರ್ಲಿಂಪಲ್, ಉತ್ಸವದ ಕೊನೆಯ ದಿನವಾದ ಮಂಗಳವಾರ ನ್ಯೂಯಾರ್ಕ್‌ನಿಂದ ಸಲ್ಮಾನ್ ರಶ್ದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಸಮ್ಮೇಳನದಲ್ಲಿ ಮಾತನಾಡುವ ನಿರೀಕ್ಷೆ ಇದೆ ಎಂದು ಘೋಷಿಸಿದರು.

ಓಪ್ರಾ ಹಾಜರಿಯಲ್ಲೂ ಕಾಡಿದ ರಶ್ದಿ ಗೈರು
ಅಮೆರಿಕದ ಪ್ರಸಿದ್ಧ ಟಿ.ವಿ ಕಾರ್ಯಕ್ರಮ ನಿರೂಪಕಿ ಓಪ್ರಾ ವಿನ್‌ಫ್ರೇ  ಅವರ ಉಪಸ್ಥಿತಿಯ ಹೊರತಾಗಿಯೂ ರಶ್ದಿ ಅನುಪಸ್ಥಿತಿ ವಿವಾದ ಮೂರನೇ ದಿನವೂ ಸಂಘಟಕರನ್ನು ಕಾಡಿತು.

ಗೋಷ್ಠಿಯೊಂದರಲ್ಲಿ ಓಪ್ರಾ ಮಾತನಾಡುತ್ತಿದ್ದ ಸಂದರ್ಭದಲ್ಲಿಯೇ ಗದ್ದಲ ಆರಂಭವಾಯಿತು. ರಶ್ದಿ ಮತ್ತು ಅವರನ್ನು ಬೆಂಬಲಿಸುತ್ತಿರುವ ಲೇಖಕರನ್ನು ಉತ್ಸವದಿಂದ ದೂರ ಇಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಪ್ರಕಾಶಕ ಎಸ್. ಆನಂದ ಎಂಬುವವರು ಸಂಘಟಕರೊಂದಿಗೆ  ಜಟಾಪಟಿಗೆ ಇಳಿದರು. ವೇದಿಕೆಯಲ್ಲಿ ರಶ್ದಿ ಅವರ ಕೆಲವು ಸಾಲುಗಳನ್ನು ಓದಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿದರು.

ಆಗ ಮಧ್ಯ ಪ್ರವೇಶಿಸಿದ ಸಂಘಟಕಿ ನಮಿತಾ ಗೋಖಲೆ, 265 ಲೇಖಕರು ಭಾಗವಹಿಸಿದ್ದರೂ ವಿವಾದ ಉತ್ಸವದ ಉದ್ದೇಶ ಮತ್ತು ಗಂಭೀರ ವಿಷಯಗಳನ್ನು ಗೌಣವಾಗಿಸಿದೆ ಎಂದರು. ಒಂದು ವರ್ಗದ ಜನರು ಉದ್ದೇಶಪೂರ್ವಕವಾಗಿ ವದಂತಿ ಹರಡುತ್ತಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT