ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಸೋಗು:ಕಳವು

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೊರಮಾವು ಮುಖ್ಯರಸ್ತೆ ಮತ್ತು ಇಂದಿರಾನಗರದಲ್ಲಿ ಬುಧವಾರ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಪೊಲೀಸರ ಸೋಗಿನಲ್ಲಿ ಮಹಿಳೆಯರ ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.

ಇಂದಿರಾನಗರ ನೂರು ಅಡಿ ರಸ್ತೆಯಲ್ಲಿ ಕಿಡಿಗೇಡಿಗಳು ಧನಲಕ್ಷ್ಮಿ (61) ಎಂಬುವರ ಗಮನ ಬೇರೆಡೆ ಸೆಳೆದು 114 ಗ್ರಾಂ ಆಭರಣಗಳನ್ನು ದೋಚಿದ್ದಾರೆ.

ಇಂದಿರಾನಗರ ಬಳಿಯ `ಎಚ್~ ಕಾಲೊನಿ ನಿವಾಸಿಯಾದ ಧನಲಕ್ಷ್ಮಿ ಅವರು ಮಧ್ಯಾಹ್ನ 12.30ರ ಸುಮಾರಿಗೆ ಅಂಚೆ ಕಚೇರಿಗೆ ಹೋಗಿ ಮನೆಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಪೊಲೀಸರೆಂದು ಪರಿಚಯಿಸಿಕೊಂಡು ಚಿನ್ನಾಭರಣ ದೋಚಿದ್ದಾರೆ.


ಅವರಿಗೆ ಅಪರಿಚಿತ ವ್ಯಕ್ತಿಗಳು ಪೊಲೀಸ್ ಗುರುತಿನ ಚೀಟಿಯೊಂದನ್ನು ತೋರಿಸಿ, `ಮುಂದಿನ ರಸ್ತೆಯಲ್ಲಿ ಕೊಲೆಯಾಗಿದೆ. ಆಭರಣಗಳನ್ನು ಬಿಚ್ಚಿ ಪರ್ಸ್‌ನಲ್ಲಿ ಇಟ್ಟುಕೊಳ್ಳಿ~ ಎಂದು ಹೇಳಿದ್ದಾರೆ. ಇದರಿಂದ ಆತಂಕಗೊಂಡ ಅವರು ಆಭರಣಗಳನ್ನು ಬಿಚ್ಚಿದ್ದಾರೆ. ಈ ವೇಳೆ ಅವರಿಗೆ ನೆರವು ನೀಡುವ ನೆಪದಲ್ಲಿ ಆಭರಣಗಳನ್ನು ಪಡೆದ ಕಿಡಿಗೇಡಿಗಳು ಅವುಗಳನ್ನು ಪರ್ಸ್‌ನಲ್ಲಿ ಹಾಕಿದಂತೆ ಮಾಡಿ ಪರಾರಿಯಾಗಿದ್ದಾರೆ.
 
ಧನಲಕ್ಷ್ಮಿ ಅವರು ಮನೆಗೆ ಹೋಗಿ ಪರ್ಸ್ ತೆರೆದು ನೋಡಿದಾಗ ಆಭರಣಗಳು ಇಲ್ಲದಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿನ್ನದ ಎರಡು ಬಳೆ, ಸರ ಮತ್ತು ಉಂಗುರವನ್ನು ಕಿಡಿಗೇಡಿಗಳು ದೋಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೊರಮಾವು ರಸ್ತೆ: ಮತ್ತೊಂದು ಪ್ರಕರಣ
 ಹೊರಮಾವು ಮುಖ್ಯರಸ್ತೆಯಲ್ಲಿ ಬೆಳಿಗ್ಗೆ 11.45ರ ಸುಮಾರಿಗೆ ಇದೇ ರೀತಿಯ ಘಟನೆ ನಡೆದಿದ್ದು, ದುಷ್ಕರ್ಮಿಗಳು ಮಧು (62) ಎಂಬ ಮಹಿಳೆಯ 60 ಗ್ರಾಂ ಆಭರಣಗಳನ್ನು ದೋಚಿದ್ದಾರೆ.

ವಿಜಯಾ ಬ್ಯಾಂಕ್ ಕಾಲೊನಿ ನಿವಾಸಿಯಾದ ಮಧು ಅವರು ಸಮೀಪದ ಅಂಗಡಿಯೊಂದರಲ್ಲಿ ಮೀನು ತೆಗೆದುಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಮೂವರು ಅಪರಿಚಿತರು ಪೊಲೀಸರೆಂದು ಪರಿಚಯಿಸಿಕೊಂಡು ಈ ಕೃತ್ಯ ಎಸಗಿದ್ದಾರೆ.

`ಒಂದೇ ತಂಡದ ಸದಸ್ಯರು ಇಂದಿರಾನಗರ ಮತ್ತು ಹೊರಮಾವು ಮುಖ್ಯರಸ್ತೆಯಲ್ಲಿ ಈ ಕೃತ್ಯ ಎಸಗಿರುವ ಶಂಕೆ ಇದೆ. ಪೊಲೀಸರೆಂದು ಪರಿಚಯಿಸಿಕೊಳ್ಳುವ ವ್ಯಕ್ತಿಗಳ ಬಗ್ಗೆ ಮಹಿಳೆಯರು ಸ್ವಲ್ವ ಎಚ್ಚರ ವಹಿಸಬೇಕು. ಅಂತಹ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಆಭರಣಗಳನ್ನು ಬಿಚ್ಚಿ ಕೊಡಬಾರದು~ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ನಾಲ್ಕು ಲಕ್ಷ ರೂಪಾಯಿ ದರೋಡೆ
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಾಪಾರಿಯೊಬ್ಬರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ನಾಲ್ಕು ಲಕ್ಷ ರೂಪಾಯಿ ಹಣ ದರೋಡೆ ಮಾಡಿರುವ ಘಟನೆ ಬ್ಯಾಟರಾಯನಪುರ ಎರಡನೇ ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬ್ಯಾಟರಾಯನಪುರ ನಿವಾಸಿ ಅಶೋಕ್‌ಕುಮಾರ್ ದರೋಡೆಗೆ ಒಳಗಾದವರು. ಪ್ಲಾಸ್ಟಿಕ್ ಚಾಪೆ, ಡೋರ್ ಮ್ಯಾಟ್ ಮತ್ತಿತರ ಸಾಮಗ್ರಿಗಳ ಸಗಟು ವ್ಯಾಪಾರಿಯಾದ ಅವರು ಕುಂಬಾರಪೇಟೆಯಲ್ಲಿ ಅಂಗಡಿ ಇಟ್ಟುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 
ವಹಿವಾಟು ಮುಗಿದ ನಂತರ ಅಶೋಕ್‌ಕುಮಾರ್ ಅವರು ನಾಲ್ಕು ಲಕ್ಷ ಹಣವನ್ನು ದ್ವಿಚಕ್ರ ವಾಹನದ ಬಾಕ್ಸ್‌ನಲ್ಲಿ ಇಟ್ಟುಕೊಂಡು ಅಂಗಡಿಯಿಂದ ಮನೆಗೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಅವರಿಗೆ ಉದ್ದೇಶಪೂರ್ವಕವಾಗಿ ವಾಹನ ಗುದ್ದಿಸಿ ಕೆಳಗೆ ಬೀಳಿಸಿದ್ದಾರೆ. ಈ ವೇಳೆ ಅವರಿಗೆ ನೆರವು ನೀಡುವ ಸೋಗಿನಲ್ಲಿ ಗಮನ ಬೇರೆಡೆ ಸೆಳೆದು, ವಾಹನದ ಬಾಕ್ಸ್‌ನಲ್ಲಿದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

ಅಪಘಾತ; ಬೈಕ್ ಸವಾರ ಸಾವು
ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬುಧವಾರ ಸಂಜೆ ನಡೆದಿದೆ.

ಮೈಸೂರು ರಸ್ತೆಯ ವಿನಾಯಕ ಚಿತ್ರಮಂದಿರ ಸಮೀಪದ ಫ್ಲವರ್ ಗಾರ್ಡನ್ ನಿವಾಸಿ ರಾಮಲಿಂಗಂ (42) ಮೃತಪಟ್ಟವರು. ಅವರು ಅಲಂಕಾರ್ ಪ್ಲಾಜಾದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅವರು ಸ್ನೇಹಿತ ರಮೇಶ್ ಜತೆ ರಾಜರಾಜೇಶ್ವರಿನಗರಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಬಿಎಂಟಿಸಿ ಬಸ್ ಅವರ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ರಾಮಲಿಂಗಂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಹಿಂಬದಿ ಸವಾರ ರಮೇಶ್ (32) ಅವರ ಕಾಲು ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಮೆಜೆಸ್ಟಿಕ್‌ನಿಂದ ಬಿಡದಿಗೆ ಹೋಗುತ್ತಿತ್ತು. ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ವಿದ್ಯಾರ್ಥಿನಿಗೆ ಗಾಯ
ಕಂಟೇನರ್ ವಾಹನ ಕಾರು ಮತ್ತು ದ್ವಿಚಕ್ರ ವಾಹನದ ಮೇಲೆ ಉರುಳಿ ಬಿದ್ದು ವಿದ್ಯಾರ್ಥಿನಿಯೊಬ್ಬರು ಗಾಯಗೊಂಡಿರುವ ಘಟನೆ ಮಾಗಡಿ ರಸ್ತೆಯ ಕೊಟ್ಟಿಗೆಪಾಳ್ಯ ಸಮೀಪ ಬುಧವಾರ ಸಂಜೆ ನಡೆದಿದೆ.
ಮಾಗಡಿಯ ಶ್ವೇತಾ (19) ಗಾಯಗೊಂಡ ವಿದ್ಯಾರ್ಥಿನಿ. ಅವರು ನಗರದ ಖಾಸಗಿ ಕಾಲೇಜು ಒಂದರ ಬಿಬಿಎಂ ವಿದ್ಯಾರ್ಥಿನಿ ಎಂದು ಪೊಲೀಸರು ತಿಳಿಸಿದ್ದಾರೆ.

ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ ಕಂಟೇನರ್ ಚಾಲಕ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ವಾಹನ ಗುದ್ದಿಸಿದ್ದಾನೆ. ಈ ವೇಳೆ ಕಂಟೇನರ್ ಉರುಳಿ, ಪಕ್ಕದಲ್ಲೇ ಬರುತ್ತಿದ್ದ ಕಾರು ಮತ್ತು ಶ್ವೇತಾ ಅವರ ದ್ವಿಚಕ್ರ ವಾಹನದ ಮೇಲೆ ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. ಶ್ವೇತಾ ಅವರ ಕಾಲು ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ಜಖಂಗೊಂಡಿವೆ. ಕಂಟೇನರ್ ಚಾಲಕ ಪರಾರಿಯಾಗಿದ್ದಾನೆ.

ಅಪಘಾತ ನಡೆದ ಸ್ಥಳದಲ್ಲಿ ಒಂದು ಗಂಟೆಗೂ ಹೆಚ್ಚುಕಾಲ ಸಂಚಾರ ಸ್ಥಗಿತಗೊಂಡಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT