ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರನ್ನು ಸಂವೇದನಾಶೀಲರಾಗಿಸಿ

Last Updated 2 ಜನವರಿ 2014, 19:30 IST
ಅಕ್ಷರ ಗಾತ್ರ

ಶಿಕ್ಷಾರ್ಹ ಅಪರಾಧಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ನೀಡಿದರೂ  ಪೊಲೀಸರು ಕಡ್ಡಾಯವಾಗಿ ಮೊದಲು ಎಫ್ಐಆರ್ ದಾಖಲಿಸಬೇಕು   ಎಂದು ಸುಪ್ರೀಂಕೋರ್ಟ್ ಕಳೆದ ನವೆಂಬರ್‌ನಲ್ಲಿ ಸ್ಪಷ್ಟವಾಗಿ ಹೇಳಿದೆ.  ಈ ಬಗ್ಗೆ ನಮ್ಮ ಪೊಲೀಸ್‌ ಠಾಣೆಗಳಲ್ಲಿ ಇನ್ನೂ ಜಾಗೃತಿ ಮೂಡಿದಂತಿಲ್ಲ.  ಅತ್ಯಾ­ಚಾರ­ದಂತಹ ಶಿಕ್ಷಾರ್ಹ ಅಪರಾಧಗಳ ಕುರಿತಾದ ದೂರುಗಳನ್ನು ದಾಖಲಿ­ಸಿ­ಕೊಳ್ಳಲು ಪೊಲೀಸ್ ಠಾಣೆಗಳಲ್ಲಿ ಸಾಮಾನ್ಯವಾಗಿ ನಿರಾಕರಿಸಲಾಗುತ್ತದೆ ಎಂಬು­ದನ್ನು ಹಾವೇರಿ ಹಾಗೂ ಕುಂದಗೋಳ  ಪೊಲೀಸ್ ಠಾಣೆಗಳು ಮತ್ತೊಮ್ಮೆ ಸಾಬೀತುಪಡಿಸಿವೆ. 

ಈ ತರಹದ ಅನುಭವಗಳಿಂದಾಗಿಯೇ ರಾಷ್ಟ್ರ­ದಲ್ಲಿ ಅದೆಷ್ಟು ಅತ್ಯಾಚಾರ ಪ್ರಕರಣಗಳು ವರದಿಯಾಗದೇ ಹೋಗು­ತ್ತಿರ­ಬಹುದು ಎಂಬುದನ್ನು ಊಹಿಸಬಹುದು.  ಈ ಪ್ರಕರಣದಲ್ಲಿ ಸಾಮೂ­ಹಿಕ ಅತ್ಯಾಚಾರಕ್ಕೆ ಗುರಿಯಾಗಿರುವಾಕೆ   ಎಂಟನೇ ತರಗತಿಯಲ್ಲಿ ಓದುತ್ತಿ­ರುವ ಬಾಲಕಿ. ಕಡೆಗೂ ಧಾರವಾಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇ­ಶನದ ನಂತರವಷ್ಟೇ ತಡವಾಗಿ ಪೊಲೀಸರು ದೂರು ದಾಖಲು ಮಾಡಿ­ಕೊಂಡಿದ್ದಾರೆ ಎಂಬಂತಹ ಪೋಷಕರ ಆರೋಪ ನಮ್ಮ ಆಡಳಿತದ ಜಡ ವ್ಯವಸ್ಥೆಗೆ ದ್ಯೋತಕ.

ಅತ್ಯಾಚಾರ ಪ್ರಕರಣದ ಬಗ್ಗೆ ಬಾಲಕಿಗೆ ಪದೇಪದೇ ಪ್ರಶ್ನಿಸಿ ನೀಡಲಾಗಿರುವ ಕಿರುಕುಳವಂತೂ ಅಮಾನವೀಯವಾದದ್ದು. ದೂರು ತೆಗೆದುಕೊಳ್ಳುವುದು ತಡವಾದಷ್ಟೂ ಅತ್ಯಾಚಾರ ಪ್ರಕರಣಗಳಿಗೆ ಅತ್ಯ­ಗ­ತ್ಯವಾದ ವೈದ್ಯಕೀಯ ಸಾಕ್ಷ್ಯಗಳು ನಾಶವಾಗುತ್ತವೆಂಬ ಪ್ರಾಥಮಿಕ ಅರಿವೂ ನಮ್ಮ ಪೊಲೀಸ್ ವ್ಯವಸ್ಥೆಗೆ ಇಲ್ಲದಿರುವುದು ದುರದೃಷ್ಟಕರ.

ದೆಹಲಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ  ಪ್ರಕರಣದ ನಂತರ ಕಳೆದ  ಇಡೀ ವರ್ಷ   ಅತ್ಯಾಚಾರ ವಿಷಯ  ಕುರಿತು  ರಾಷ್ಟ್ರ­ದಾ­ದ್ಯಂತ ಬಹಳಷ್ಟು ಚರ್ಚೆಗಳು ನಡೆದಿವೆ.  ಈ ಸಂದರ್ಭದಲ್ಲಿ ಪೊಲೀಸರ ಅಮಾ­ನವೀಯ ಹಾಗೂ ಅಸೂಕ್ಷ್ಮ ವರ್ತನೆಗಳೂ ಸಾಕಷ್ಟು ಟೀಕೆ­ಗೊಳಗಾಗಿವೆ. ಹೀಗಿದ್ದೂ ಲೈಂಗಿಕ ಅಪರಾಧಗಳ ನಿರ್ವಹಣೆಯಲ್ಲಿ  ಪೊಲೀಸ್ ವ್ಯವಸ್ಥೆಯಲ್ಲಿ ಸೂಕ್ಷ್ಮತೆ ಬೆಳೆಯದೆ ಜನವಿರೋಧಿಯಾಗೇ ಉಳಿದು­ಕೊಂಡಿರುವುದು ಅಕ್ಷಮ್ಯ.  ಚಿಕ್ಕ ವಯಸ್ಸಿನ ಹುಡುಗಿಯರು ಲೈಂಗಿಕ ದೌರ್ಜನ್ಯ­ಗಳಿಗೆ  ಇತ್ತೀಚಿನ ದಿನಗಳಲ್ಲಿ ಸುಲಭ ಬಲಿಪಶುಗಳಾಗುತ್ತಿರುವು ದಂತೂ ಆತಂಕಕಾರಿ.

ರಾಷ್ಟ್ರದಲ್ಲಿ ಪ್ರತಿ 20 ನಿಮಿಷಗಳಿಗೊಮ್ಮೆ ಅತ್ಯಾಚಾರ ಪ್ರಕ­ರಣ ನಡೆಯುತ್ತದೆ. ಅದರಲ್ಲಿ ಪ್ರತಿ ಮೂರನೇ ಬಲಿಪಶು ಚಿಕ್ಕ ವಯಸ್ಸಿನ ಬಾಲೆ­ಯರಾಗಿರುತ್ತಾರೆ ಎಂಬುದನ್ನು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ  ಅಂಕಿಅಂಶಗಳೂ ತಿಳಿಸಿವೆ. ವಾಸ್ತವವಾಗಿ ಅತ್ಯಾಚಾರ ಅಪರಾಧ­ಗಳಿಗೆ ಶಿಕ್ಷೆಯಾಗುವ ಪ್ರಮಾಣವೇ ಕಡಿಮೆ. ಇದಕ್ಕೆ  ದೋಷಯುಕ್ತವಾದ ಎಫ್ಐಆರ್‌ಗಳೇ ಮುಖ್ಯ ಕಾರಣ. ವೈದ್ಯಕೀಯ ಸಾಕ್ಷ್ಯಗಳನ್ನು ಸಂಗ್ರಹಿ­ಸುವಲ್ಲಿನ ದೋಷಪೂರ್ಣ ವಿಧಾನಗಳು ಹಾಗೂ ಕಳಪೆ ತನಿಖಾ ವಿಧಾನ­ಗಳು ಮತ್ತಷ್ಟು ಕಾರಣಗಳಾಗುತ್ತವೆ.

 ಮಹಿಳೆ ವಿಚಾರಗಳನ್ನು ಗಂಭೀರವಾಗಿ ಗ್ರಹಿಸ­ಲಾಗದ  ಪೂರ್ವಗ್ರಹಗಳು ತುಂಬಿದ ಪೊಲೀಸ್ ವ್ಯವಸ್ಥೆಯೇ ಇದಕ್ಕೆ ಕಾರಣ.  ಲೈಂಗಿಕ ಅಪರಾಧಗಳಿಗೆ ‘ಆಡಳಿತ ವೈಫಲ್ಯ’ವೇ ಮೂಲ ಕಾರಣ ಎಂಬು­­ದನ್ನು ಲೈಂಗಿಕ ಅಪರಾಧಗಳ ಕಾನೂನುಗಳ ಪುನರ್ವಿಮರ್ಶೆಗೆ ನೇಮಕ­­ಗೊಂಡಿದ್ದ  ನ್ಯಾಯಮೂರ್ತಿ  ಜೆ.ಎಸ್.ವರ್ಮಾ ಸಮಿತಿಯೂ ಗುರು­ತಿ­­ಸಿದೆ. ಸರ್ಕಾರ, ಪೊಲೀಸ್ ಹಾಗೂ ಸಾರ್ವಜನಿಕ  ನಿರ್ಲಕ್ಷ್ಯವನ್ನು ಈ ಸಮಿತಿ ಕಟುವಾಗಿ ಟೀಕಿಸಿದ್ದರೂ ನಾವಿನ್ನೂ ಎಚ್ಚೆತ್ತುಕೊಳ್ಳದಿರುವುದು ವಿಷಾದ­ಕರ.  ಕಾನೂನು ಜಾರಿ ವ್ಯವಸ್ಥೆಗಳು ಇನ್ನಾದರೂ ಚುರುಕಾಗಬೇಕು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ,  ಪೊಲೀಸ್ ವ್ಯವಸ್ಥೆಯನ್ನು ಸಂವೇದನಾಶೀಲವಾಗಿಸಲು  ಕ್ರಮಗಳನ್ನು ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT