ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಲ್ಲಿ ಅಶಿಸ್ತು ಏಕೆ ಹೆಚ್ಚುತ್ತಿದೆ?

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

ಜೂನ್ ಎರಡರಂದು ಪತ್ರಿಕೆಗಳಲ್ಲಿ ವರದಿಯಾದ ಎರಡು ಸುದ್ದಿಗಳನ್ನು ಓದಿ ಆಘಾತವಾಯಿತು. ಯಾದಗಿರಿ ಜಿಲ್ಲೆಯ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಜೈಲಿನಲ್ಲಿರುವ ಕೈದಿಯೊಬ್ಬನನ್ನು ಕೊಲೆ ಮಾಡಿಸಲು ಅಕ್ರಮ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಕೊಲೆಗಡುಕರಿಗೆ ಸರಬರಾಜು ಮಾಡಲು ಒಪ್ಪಿ ಆ ಸಮಯದಲ್ಲಿ ಬಂಧಿತನಾಗಿದ್ದಾನೆ ಎನ್ನುವುದು ಮೊದಲ ಸುದ್ದಿಯಾದರೆ, ಬೆಂಗಳೂರು ನಗರದ ಕಾನ್ಸ್‌ಟೇಬಲ್ ಒಬ್ಬಾತ ಮನೆಗಳಲ್ಲಿ ರಾತ್ರಿ ನಡೆಯುವ ಮೋಜು ಕೂಟಗಳನ್ನು ಗುರಿಪಡಿಸಿಕೊಂಡು ಆ ಮನೆಗಳಿಗೆ ನುಗ್ಗಿ ಮೋಜು ಕೂಟ ನಡೆಸುವವರನ್ನು ಹೆದರಿಸಿ ಬೆದರಿಸಿ ಐದರಿಂದ ಹತ್ತು ಸಾವಿರ ರೂಪಾಯಿ ಸುಲಿಗೆ ಮಾಡುತ್ತಿದ್ದ ಹಾಗೂ ಸದರಿ ಕಾನ್ಸ್‌ಟೇಬಲ್ ಇತ್ತೀಚೆಗಷ್ಟೇ ಪೊಲೀಸ್ ಇಲಾಖೆಗೆ ಸೇರಿದ್ದ ಎನ್ನುವುದು ಎರಡನೇ ಸುದ್ದಿ. 

ಪೊಲೀಸ್ ಇಲಾಖೆಯಲ್ಲಿ ಇರುವ `ಕಪ್ಪು ಕುರಿಗಳ~ ಸಂಖ್ಯೆ ಕಡಿಮೆಯೇನೂ ಅಲ್ಲ. ಆದರೆ ಚಿಂತಿಸಬೇಕಾದಂತಹ ವಿಷಯವೆಂದರೆ ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ ಪೊಲೀಸ್ ಇಲಾಖೆಗೆ ನಡೆಸಿರುವ ನೇಮಕಾತಿ ಪ್ರಕ್ರಿಯೆ ಅತ್ಯಂತ ಪ್ರಾಮಾಣಿಕವಾಗಿ ಅತ್ಯಂತ ಪಾರದರ್ಶಕವಾಗಿ ನಡೆದು ಬೇರೆ ರಾಜ್ಯಗಳಿಗೆ ಹಾಗೂ ಕೇಂದ್ರ ಪೊಲೀಸ್ ಸಂಸ್ಥೆಗಳಿಗೆ ಮಾದರಿಯಾಗಿ ಇರುವಂತಹದು.

ಈ ನೇಮಕ ಪ್ರಕ್ರಿಯೆಯಲ್ಲಿ ಸಾಕಷ್ಟು ಕಾಲ ತೊಡಗಿಸಿಕೊಂಡಿದ್ದ ನನ್ನ ಅಭಿಪ್ರಾಯದಲ್ಲಿ ಕರ್ನಾಟಕದಲ್ಲಿ ಪೊಲೀಸ್ ಇಲಾಖೆಗೆ ಸೇರಬೇಕಾದರೆ ಯಾವುದೇ ರೀತಿಯ ಹಣ ಅಥವಾ ಪ್ರಭಾವ ಬೇಕಾಗಿಯೇ ಇಲ್ಲ. ಕೇವಲ ಅರ್ಹತೆಯ ಆಧಾರದ ಮೇರೆಗೇ ನೇಮಕ ನಡೆಯುತ್ತದೆ. ವಸ್ತುಸ್ಥಿತಿ ಹೀಗಿರುವಾಗ ನೌಕರಿಗೆ ಸೇರಿದ  2-3 ವರ್ಷಗಳಲ್ಲಿ ಪೊಲೀಸರು ಲಂಚದ ಅಮಿಷಕ್ಕೆ ಏಕೆ ಬಲಿಯಾಗುತ್ತಿದ್ದಾರೆ ಎನ್ನುವುದು ಚಿಂತಿಸಬೇಕಾದ ವಿಷಯ. 

ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಕೆಟ್ಟ ಕೆಲಸಗಳಿಗೆ ಏಕೆ ಕೈ ಹಾಕುತ್ತಾರೆ?  ಯಾದಗಿರಿ ಜಿಲ್ಲೆಯ ಪೊಲೀಸ್ ಇನ್ಸ್‌ಪೆಕ್ಟರ್ ಕೊಲೆ ಕೇಸಿನಲ್ಲಿ ಶಾಮೀಲಾಗಲು ಸಿದ್ದನಾಗಿದ್ದು ಯಾವ ಕಾರಣಕ್ಕಾಗಿ? ಯಾವುದೇ ಹಣ ಕೊಡದೇ ಪೊಲೀಸ್ ಇಲಾಖೆಗೆ ಸೇರಿದ ಕಾನ್ಸ್‌ಟೇಬಲ್ ಕೆಲವೇ ವರ್ಷಗಳಲ್ಲಿ ಲಂಚಕೋರನಾಗಿದ್ದು ಯಾವ ಕಾರಣಕ್ಕಾಗಿ ಎನ್ನುವುದನ್ನು ನಾವು ತೀವ್ರತರವಾಗಿ ಆಲೋಚಿಸಬೇಕಾಗಿದೆ.

ನನ್ನ ಅಭಿಪ್ರಾಯದಲ್ಲಿ ಹಣ ಮಾಡುವ ಅವಕಾಶಗಳು ಸುಲಭವಾಗಿ ಬಂದಾಗ ಬೇಡ ಎಂದು ಹೇಳುವ ನೈತಿಕ ಸ್ಥೈರ್ಯ ಬಹಳಷ್ಟು ಜನ ಕಳೆದುಕೊಂಡಿದ್ದಾರೆ. ತಮ್ಮ ಸೇವಾವಧಿ ಪರ್ಯಂತ ಅತ್ಯಂತ ಪ್ರಾಮಾಣಿಕರಾಗಿ ಕೆಲಸ ಮಾಡಿರುವ ಕಾನ್ಸ್‌ಟೇಬಲ್, ಸಬ್ ಇನ್ಸ್‌ಪೆಕ್ಟರ್ ಮುಂತಾದ ಬಹಳಷ್ಟು ಅಧಿಕಾರಿಗಳೂ ಇದ್ದಾರೆ. ಆದರೆ ಇವರ ಸಂಖ್ಯೆ ಬರಬರುತ್ತಾ ಕ್ಷೀಣಿಸುತ್ತಿದೆ ಎಂದು ನನಗನನಿಸುತ್ತದೆ.

ಹಲವಾರು ಸಭೆ ಸಮಾರಂಭಗಳಲ್ಲಿ ನನ್ನನ್ನು ಜನ ಪ್ರಶ್ನಿಸುತ್ತಾರೆ, ಪೊಲೀಸರಿಗೆ ಸಂಬಳ ಹೆಚ್ಚು ಮಾಡಿದರೆ ಇಲಾಖೆಯಲ್ಲಿ ಲಂಚಗುಳಿತನ ಕಡಿಮೆಯಾಗಬಹುದೇ ಎಂದು? ನನ್ನ ಸ್ಪಷ್ಟ ಅಭಿಪ್ರಾಯ ಹಣ ಎಷ್ಟೇ ಗಳಿಸಿದರೂ ಕೆಲವು ಜನ ಅಕ್ರಮ ಸಂಪಾದನೆಯ ದಾರಿ ನೋಡುತ್ತಾರೆ.

ಐಎಎಸ್ ಅಧಿಕಾರಿಗಳಿಗೆ ಕೊಡುವ ಸಂಬಳ ಸವಲತ್ತು ಸಮಾಧಾನಕರ ಎಂದು ನಾವೆಲ್ಲರೂ ಭಾವಿಸಿರುವಾಗ ಮಧ್ಯಪ್ರದೇಶದ ಐಎಎಸ್ ದಂಪತಿಗಳು 300 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಗಳಿಸಿದ ನಿದರ್ಶನ ನಮ್ಮ ಮುಂದೆಯೇ ಇದೆ. ಅಂದಹಾಗೆ ನಮ್ಮ ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಕೊಡುತ್ತಿರುವ ಸಂಬಳ ಸವಲತ್ತು ಸಾಕಷ್ಟು ತೃಪ್ತಿಕರವಾಗಿಯೇ ಇದೆ.

ಹೀಗಾಗಿ ಸಮಸ್ಯೆ ಎಲ್ಲಿದೆ? ನನ್ನ ಅಭಿಪ್ರಾಯದಲ್ಲಿ ಮೊದಲಿಗೆ ಸಮಸ್ಯೆ ಇರುವುದು ಪೊಲೀಸ್ ಸಿಬ್ಬಂದಿಯ ಮೇಲೆ ಮೇಲಧಿಕಾರಿಗಳು ಸರಿಯಾದ ನಿಗಾ ಇಡದೇ ಇರುವುದು. ನಾನು ನೌಕರಿಗೆ ಸೇರಿದಾಗ ಪೊಲೀಸ್ ಉಪ ವಿಭಾಗಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಪ್ರತಿಯೊಂದು ಪೊಲೀಸ್ ಠಾಣೆಯ ವಾರ್ಷಿಕ ತಪಾಸಣೆಯನ್ನು ಕೈಗೊಂಡು ಪ್ರತಿಯೊಬ್ಬ ಪೊಲೀಸನ ಕಾರ್ಯವೈಖರಿಯನ್ನು ವಿಮರ್ಶಿಸಿ ಆತನ ಕಾರ್ಯನಿರ್ವಹಣೆ ಪುಸ್ತಕದಲ್ಲಿ ತಮ್ಮ ಅನಿಸಿಕೆಗಳನ್ನು ಬರೆಯಬೇಕಾಗಿತ್ತು. ಒಂದು ವರ್ಷದಲ್ಲಿ ಒಬ್ಬ ಕಾನ್ಸ್‌ಟೇಬಲ್‌ನ ಕಾರ್ಯ ವೈಖರಿಯನ್ನು ಕಡಿಮೆಯೆಂದರೆ ಮೂರು ಬಾರಿ ವಿಮರ್ಶಿಸಲಾಗುತ್ತಿತ್ತು.

ಆದರೆ ಈಗಿನ ಪರಿಸ್ಥಿತಿಯೇ ಬೇರೆ.  ಪೊಲೀಸ್ ಠಾಣೆಗಳ ತಪಾಸಣೆ ಆಗೊಮ್ಮೆ ಈಗೊಮ್ಮೆ ನಡೆಯುತ್ತದೆ. ನಡೆದರೂ ಸೂಕ್ತವಾಗಿ ನಡೆಯುವುದಿಲ್ಲ. ಪೊಲೀಸ್ ಸಿಬ್ಬಂದಿ ವರ್ಗದ ಕಾರ್ಯನಿರ್ವಹಣೆಯನ್ನು ಯಾರೂ ಪರಾಮರ್ಶಿಸುವುದಿಲ್ಲ. ಹೀಗಾಗಿ ತಮ್ಮನ್ನು ಕೇಳುವವರು ಯಾರೂ ಇಲ್ಲ ಎಂದು ಪೊಲೀಸರು ನಿರ್ಭಯದಿಂದ ಇದ್ದಿರಬಹುದು.  ಈ ಹಿಂದೆ ವಾರಕ್ಕೆ ಎರಡು ಬಾರಿ, ಪೊಲೀಸ್ ಸಿಬ್ಬಂದಿ ವರ್ಗ ಕವಾಯತನ್ನು ಮಾಡಬೇಕಾಗಿತ್ತು. ಕವಾಯತಿನ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಸಿಬ್ಬಂದಿ ವರ್ಗದ ವೃತ್ತಿಪರತೆಯನ್ನು ಅಳೆಯುವುದಲ್ಲದೇ ಸಿಬ್ಬಂದಿ ವರ್ಗದ ಕುಂದುಕೊರತೆಗಳನ್ನೂ ಆಲಿಸುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಕವಾಯತು ಆಗೊಮ್ಮೆ ಈಗೊಮ್ಮೆ ನಡೆಯುತ್ತದೆ.

ಸಿಬ್ಬಂದಿ ವರ್ಗದ ವೃತ್ತಿಪರತೆ ಹೆಚ್ಚಾಗಬೇಕಾದರೆ ಅವರುಗಳಿಗೆ ಕಾಲಕಾಲಕ್ಕೆ ತರಬೇತಿ ನೀಡುವುದು ಅವಶ್ಯ. ಇಂದಿನ ದಿನಗಳಲ್ಲಿ ಪೊಲೀಸ್ ತರಬೇತಿಗೆ ಮಹತ್ವ ಕಡಿಮೆ ಆಗುತ್ತಿದೆ. ನೌಕರಿಗೆ ಸೇರಿದಾಗ ಒಮ್ಮೆ ಬುನಾದಿ ತರಬೇತಿ ಪಡೆದರೆ ವೃತ್ತಿ ಜೀವನದಲ್ಲಿ ಬಹಳಷ್ಟು ಜನ ಹೆಚ್ಚಿನ ತರಬೇತಿಯನ್ನೇ ಪಡೆಯುವುದಿಲ್ಲ. ಹೀಗಾಗಿ ವೃತ್ತಿಪರತೆ ಮಾಯವಾಗಿ ಆಶಿಸ್ತು ಹೆಚ್ಚುವುದು ಸಹಜವೇ.

ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಈ ಇಲಾಖೆಯಲ್ಲಿ ಸದಾಕಾಲವೂ ಶಿಸ್ತು ಇರುವಂತೆ ನೋಡಿಕೊಳ್ಳಬೇಕು. ಹಿಂದಿನ ದಿನಗಳಲ್ಲಿ ಏನಾದರೂ ಒಂದು ಸಣ್ಣ ತಪ್ಪು ಮಾಡಿದರೂ ಮೇಲಧಿಕಾರಿಗಳು ತಪ್ಪನ್ನು ಕಂಡುಹಿಡಿದು ಸೂಕ್ತ ಶಿಕ್ಷೆ ಕೊಡುತ್ತಿದ್ದರು. ಇಂದು ಪೊಲೀಸ್ ಇಲಾಖೆಗಳ ಶಿಸ್ತಿನ ಪ್ರಕರಣಗಳ ಅಂಕಿಸಂಖ್ಯೆಗಳನ್ನು ನೋಡಿದರೆ ಆಘಾತವೇ ಕಾದಿದೆ.

ಇತ್ತೀಚಿನ ದಿನಗಳಲ್ಲಿ ಮೇಲಧಿಕಾರಿಗಳು ತಮ್ಮ ಸಿಬ್ಬಂದಿಗಳ ಅಶಿಸ್ತನ್ನು ಸಹಿಸಿಕೊಳ್ಳುವ ಶಕ್ತಿ ಹೊಂದಿದ್ದಾರೆಂದು ಮೇಲ್ನೋಟಕ್ಕೇ ತೋರುತ್ತದೆ. ಗುರುತರ ಆರೋಪಗಳಿಗೆ ಸಿಕ್ಕಿ ನೌಕರಿ ಕಳೆದುಕೊಂಡವರ ಸಂಖ್ಯೆ ಬರಬರುತ್ತಾ ಕಡಿಮೆ ಆಗುತ್ತಿದೆ. ಹೀಗಾಗಿ ನಾನು ಏನು ತಪ್ಪು ಮಾಡಿದರೂ ನನಗೆ ಏನೂ ಆಗುವುದಿಲ್ಲ ಎನ್ನುವ ಭಾವನೆಯನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ರೂಢಿಸಿಕೊಂಡಂತೆ ಕಂಡುಬರುತ್ತದೆ. ಒಂದು ವೇಳೆ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡರೂ ಹಾಗೂ ಹೀಗೂ ಬಿಡಿಸಿಕೊಂಡು ಬರಬಹುದು ಎನ್ನುವ ಭಾವನೆಯೂ ಹಲವಾರು ಪೊಲೀಸರಲ್ಲಿ ಇರುವುದರಿಂದ ಶಿಸ್ತಿನ ಕ್ರಮಕ್ಕೆ ಯಾರೂ ಹೆದರುವುದೇ ಇಲ್ಲ. 

ಸುಪ್ರೀಂಕೋರ್ಟ್ ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಸರ್ವತೋಮುಖ ಸುಧಾರಣೆಗೆ ಹಲವಾರು ಸೂಚನೆಗಳನ್ನು ನೀಡಿದೆ. ಇವುಗಳಲ್ಲಿನ ಒಂದು ಸೂಚನೆ ಪೊಲೀಸರ ಮೇಲಿನ ದೂರುಗಳನ್ನು ಆಲಿಸಲು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ  ್ಲಸಮಿತಿಯ ರಚನೆ. ಈ ಸಮಿತಿಗಳು ರಚನೆಯಾಗಿ ಸಮರ್ಪಕವಾದ ಕೆಲಸ ಮಾಡಿದಾಗ ಪೊಲೀಸರ ಮೇಲಿನ ದೂರುಗಳು ಕಡಿಮೆ ಆಗಬಹುದು.

ಆದರೆ ನನ್ನ ಅಭಿಪ್ರಾಯದಲ್ಲಿ ಕೆಟ್ಟ ಕೃತ್ಯಗಳನ್ನು ನಡೆಸುವ ಪೊಲೀಸ್ ಸಿಬ್ಬಂದಿ ಸರಿ ದಾರಿಯಲ್ಲಿ ಬರಬೇಕಾದರೆ ಅವರ ಮೇಲೆ ಅತಿ ಶೀಘ್ರವಾದ, ಸೂಕ್ತ ಹಾಗೂ ಸಮರ್ಪಕವಾದ ಶಿಸ್ತಿನ ಕ್ರಮ ನಡೆಯಲೇಬೇಕು. ಎಲ್ಲಿಯವರೆಗೆ ನಮ್ಮ ಅಧಿಕಾರಿಗಳು `ಅಂದರಿಕಿ ಮಂಚಿವಾಡು ಅನಂತಯ್ಯ~ ಎನ್ನುವ ಪರಿಸ್ಥಿತಿ ರೂಢಿಸಿಕೊಂಡು ತಪ್ಪಿತಸ್ಥ ಅಧಿಕಾರಿಗಳ ಕುಕೃತ್ಯಗಳನ್ನು ಸಹಿಸಿಕೊಂಡಿರುತ್ತಾರೋ, ಎಲ್ಲಿವರೆಗೆ ಪೊಲೀಸ್ ತರಬೇತಿಗೆ ಸೂಕ್ತ ಮಹತ್ವ ಸಿಗುವುದಿಲ್ಲವೋ ಅಲ್ಲಿಯವರೆಗೆ ಕೆಟ್ಟ ಕೆಲಸ ಮಾಡುವ ಪೊಲೀಸರು ತಮ್ಮನ್ನು ತಾವು ತಿದ್ದಿಕೊಳ್ಳಲು ಹೋಗುವುದಿಲ್ಲ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT