ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಂದ ನಕ್ಸಲ್ ಹಣೆಪಟ್ಟಿ: ವಿಠಲ ಮಲೆಕುಡಿಯ ಆರೋಪ

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ನನ್ನ ಜನಾಂಗದ ಹಕ್ಕುಗಳಿಗಾಗಿ ಹೋರಾಟ ನಡೆಸಲು ಮುಂದಾಳತ್ವ ವಹಿಸಿದ್ದನ್ನು ಸಹಿಸದ ನಕ್ಸಲ್ ನಿಗ್ರಹ ಪಡೆಯ (ಎಎನ್‌ಎಫ್) ಪೊಲೀಸ್ ಅಧಿಕಾರಿಗಳು ನಕ್ಸಲ್ ಬೆಂಬಲಿತ ಎಂಬ ಹಣೆಪಟ್ಟಿ ಕಟ್ಟಿ ಜೈಲಿಗೆ ಕಳುಹಿಸಿದರು~ ಎಂದು ಜಾಮೀನಿನ ಮೇಲೆ ಬಿಡುಗಡೆಯಾಗಿರುವ ವಿಠಲ ಮಲೆಕುಡಿಯ ಆರೋಪಿಸಿದರು.

`ವಿದ್ಯಾರ್ಥಿ ವಿಠಲ ಮಲೆಕುಡಿಯ ಮತ್ತು ಅವರ ತಂದೆಯ ಬಿಡುಗಡೆಗಾಗಿ ರಕ್ಷಣಾ ಸಮಿತಿ~ ಸದಸ್ಯರು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

`ಬೆಳ್ತಂಗಡಿಯಿಂದ 12 ಕಿ.ಮೀ ದೂರದಲ್ಲಿರುವ ಕಾಡಿನಲ್ಲಿ ನಾವು ವಾಸವಿದ್ದೇವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದ ನೆಪದಲ್ಲಿ ಪೊಲೀಸರು ಈ ಭಾಗದಲ್ಲಿನ ಬುಡಕಟ್ಟು ಜನಾಂಗದವರನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಸಿದ್ದರು. ಈ ಬಗ್ಗೆ ಅಧ್ಯಯನ ಮಾಡಲು ಬಂದ ಪತ್ರಕರ್ತ ಮಿತ್ರರಿಂದ ಈ ವಿಚಾರ ತಿಳಿದುಕೊಂಡೆ. ಆ ನಂತರವೇ ಜನಾಂಗವನ್ನು ಸಂಘಟಿಸಿ ಚುನಾವಣಾ ಬಹಿಷ್ಕಾರದ ಮೂಲಕ ಜನಪ್ರತಿನಿಧಿಗಳಿಗೆ ಚುರುಕು ಮುಟ್ಟಿಸಿದೆವು. ಎಎನ್‌ಎಫ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಅನ್ಯಾಯವನ್ನು ಪ್ರತಿಭಟಿಸಿದೆವು. ಇದನ್ನು ಸಹಿಸದೇ ಹೀಗೆ ಮಾಡಲಾಗಿದೆ~ ಎಂದು ದೂರಿದರು.

`ಆದಿವಾಸಿಗಳಿಗೆ ಸೂರು ಇಲ್ಲದಂತೆ ಅತಂತ್ರ ಸ್ಥಿತಿ ಸೃಷ್ಟಿಸಿರುವ ಸರ್ಕಾರ ಈ ಭಾಗದಲ್ಲಿ ಪ್ರವಾಸೋದ್ಯಮ, ಕೈಗಾರಿಕೆ ಸ್ಥಾಪನೆಯಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಿದ್ಧವಾಗಿದೆ. ಇದಕ್ಕಾಗಿ ಜನಾಂಗಕ್ಕೆ ಹಣ ನೀಡಿ ಜಾಗ ಖಾಲಿ ಮಾಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ವಿವಿಧ ಪ್ರಗತಿಪರ ಸಂಘಟನೆಗಳ ಸಹಾಯದಿಂದ ಹಲವು ಕುಟುಂಬಗಳು ಬೀಡುಬಿಟ್ಟಿವೆ. ಇವರ ಮೇಲೆ ಹಲವು ಸುಳ್ಳು ಆರೋಪ ಹೊರಿಸಿ ಹಿಂಸಿಸಲಾಗುತ್ತಿದೆ~ ಎಂದು ಅಳಲು ತೋಡಿಕೊಂಡರು.

ಪೊಲೀಸ್ ದೌರ್ಜನ್ಯ: `ಆದಿವಾಸಿ ಜನಾಂಗದವರು ಕಾಡಿನ ಉಪ ಉತ್ಪನ್ನಗಳನ್ನು ಮಾರಾಟ ಮಾಡಿ ಗಳಿಸುತ್ತಿದ್ದ ಹಣವನ್ನು ಪೊಲೀಸರು ವಸೂಲಿ ಮಾಡುತ್ತಿದ್ದರು. ಆದಿವಾಸಿ ಕುಟುಂಬವೊಂದು ಒಂದು ಸೇರು ಅಕ್ಕಿ ಹೆಚ್ಚು ಖರೀದಿಸಿದರೆ, ನಕ್ಸಲ್‌ರಿಗೆ ಅಡುಗೆ ತಯಾರಿಸುತ್ತಿರಬಹುದು ಎಂಬ ಸಂಶಯದ ಮೇಲೆ ಆ ಮನೆಯ ಸುತ್ತ ಪೊಲೀಸ್ ಕಾವಲಿರುತ್ತಿತ್ತು. ಪೊಲೀಸರ ದೌರ್ಜನ್ಯಕ್ಕೆ ಹೆದರಿ ನನ್ನ ಓರಗೆಯವರು ಇತರೆ ಊರುಗಳಿಗೆ ವಲಸೆ ಹೋಗಿದ್ದಾರೆ. ಆದರೆ, ನನಗೆ ಕುಟುಂಬವನ್ನು ಬಿಟ್ಟು ಇರಲು ಇಷ್ಟವಿರಲಿಲ್ಲ. ಜನಪರ ಚಳವಳಿಯಲ್ಲಿ ಸಕ್ರಿಯನಾಗಿದ್ದರಿಂದಲೇ ಇಂತಹದ್ದೊಂದು ಆರೋಪವನ್ನು ಹೊರಬೇಕಾಯಿತು. ಆದರೆ, ದೌರ್ಜನ್ಯ ವಿರುದ್ಧ ದನಿ ಇರುತ್ತದೆ, ಈ ವಿಚಾರದಲ್ಲಿ ರಾಜಿ ಇಲ್ಲ~ ಎಂದು ಸ್ಪಷ್ಟಪಡಿಸಿದರು.

ನಂತರ ಮಾತನಾಡಿದ ಚಿಂತಕ ಜಿ.ಕೆ.ಗೋವಿಂದರಾವ್, `ದೌರ್ಜನ್ಯ ಅನುಭವಿಸುವ ಸಲುವಾಗಿಯೇ ಬುಡಕಟ್ಟು ಜನಾಂಗವಿದೆ ಎಂಬ ರೀತಿಯಲ್ಲಿ ಸರ್ಕಾರ ವರ್ತಿಸುತ್ತಿದೆ. ಯಾವುದೇ ಸಮರ್ಪಕ ದಾಖಲೆಗಳಿಲ್ಲದೆ ಏಕಾಏಕಿ ನಕ್ಸಲ್ ಬೆಂಬಲಿತ ಎಂದು ಆರೋಪಿಸಿ ವಿಠಲ ಮತ್ತು ಅವರ ತಂದೆಯನ್ನು ಜೈಲಿಗೆ ಕಳುಹಿಸಿರುವುದು ಪ್ರಜಾಪ್ರಭುತ್ವದ ಅಣಕ~ ಎಂದು ವಿಷಾದಿಸಿದರು.

`ಉನ್ನತ ಶಿಕ್ಷಣ ಸಚಿವರು ಸೇರಿದಂತೆ ಸರ್ಕಾರದಲ್ಲಿ ಹಲವು ಪ್ರಭಾವಿ ಸಚಿವರು ನಿರೀಕ್ಷಣಾ ಜಾಮೀನು ಪಡೆಯುತ್ತಾರೆ. ಆದರೆ, ಯಾವುದೇ ಅಪರಾಧ ಮಾಡದ ವಿಠಲನ ತಂದೆಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಈ ಬಗ್ಗೆ ಎಲ್ಲ ಪ್ರಗತಿಪರ ಸಂಘಟನೆಗಳು ಒಟ್ಟುಗೂಡಿ ಹೋರಾಟ ನಡೆಸಬೇಕು~ ಎಂದು ಕರೆ ನೀಡಿದರು.

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ಡಿವೈಎಫ್‌ಐನ ರಾಜ್ಯ ಘಟಕದ ಉಪಾಧ್ಯಕ್ಷ ಮುನೀರ್ ಕಾಟಿಪಾಳ್ಯ, ಕಾರ್ಯದರ್ಶಿ ಬಿ.ರಾಜಶೇಖರಮೂರ್ತಿ ಇತರರು ಉಪಸ್ಥಿತರಿದ್ದರು.

`ಮುಂದಿನ ತರಗತಿಗೆ ಪ್ರವೇಶ ನೀಡಿ~

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಎರಡನೇ ಸೆಮಿಸ್ಟರ್‌ನಲ್ಲಿ ಅಧ್ಯಯನ ಮಾಡುತ್ತಿದ್ದ ವಿಠಲ ಮಲೆಕುಡಿಯ ಅವರನ್ನು ಪೊಲೀಸರು ಮಾರ್ಚ್ 4ರಂದು ಬಂಧಿಸಿ ಜೈಲಿಗೆ ಕಳುಹಿಸಿದ್ದರು.  ಆ ನಂತರ ಅವರು ಸುಮಾರು ನಾಲ್ಕು ತಿಂಗಳ ಕಾಲ ಜೈಲಿನಲ್ಲಿದ್ದರು. ಈ ನಡುವೆ ವಿ.ವಿಯು ದ್ವಿತೀಯ ಸೆಮಿಸ್ಟರ್‌ನ ಪರೀಕ್ಷೆ ಬರೆಯಲು ಅವರಿಗೆ ಅವಕಾಶ ನೀಡಿತ್ತು. ಆದರೆ, ಈಗ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿಲ್ಲ ಮತ್ತು ಮುಂದಿನ ಸೆಮಿಸ್ಟರ್‌ಗೆ ಪ್ರವೇಶಾವಕಾಶ ನಿರಾಕರಿಸಿದೆ.

ಈ ಸಂಬಂಧ `ಪ್ರಜಾವಾಣಿ~ ಜತೆ ಮಾತನಾಡಿದ ವಿಠಲ ಮಲೆಕುಡಿಯ, `ಪತ್ರಕರ್ತರ ಸ್ನೇಹವಲಯ ಆರಂಭದಲ್ಲೇ ಇದ್ದುದ್ದರಿಂದ ಸಹಜವಾಗಿ ನನಗೆ ಪತ್ರಕರ್ತನಾಗಬೇಕೆಂಬ ಆಸೆಯಿದೆ. ಒಟ್ಟು ವ್ಯವಸ್ಥೆಯ ದಬ್ಬಾಳಿಕೆಯ ಸಂಕೇತವಾಗಿ ನನಗೆ ಪ್ರವೇಶ ನಿರಾಕರಿಸಲಾಗಿದೆ. ಆದರೆ, ನಾನು ಕಾನೂನು ಹೋರಾಟದ ಮೂಲಕ ಪ್ರವೇಶ ಪಡೆಯಲು ಸಿದ್ಧನಿದ್ದೇನೆ~ ಎಂದರು.

ಇದಕ್ಕೆ ದನಿಗೂಡಿಸಿದ ವಿಮರ್ಶಕ ಡಾ.ಕೆ.ಮರುಳಸಿದ್ದಪ್ಪ, `ಪರೀಕ್ಷೆಗೆ ಅನುಮತಿ ನೀಡಲು ವಿವೇಚನೆ ಬಳಸಿದ ವಿ.ವಿಯು, ಪ್ರವೇಶಾವಕಾಶ ನಿರಾಕರಿಸಿರುವುದು ವಿ.ವಿ ಕೂಡ ಸರ್ಕಾರದ ಮತ್ತೊಂದು ಭಾಗವೆಂಬುದನ್ನು ಸಾಬೀತುಪಡಿಸಿದೆ. ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಹಾಜರಾತಿ ಲೆಕ್ಕಿಸದ ವಿ.ವಿ, ಮುಂದಿನ ಸೆಮಿಸ್ಟರ್‌ನ ಪ್ರವೇಶಕ್ಕಾಗಿ ಹಾಜರಾತಿ ಕೇಳುವುದು ತಪ್ಪಾಗುತ್ತದೆ. ಈ ವಿಚಾರದಲ್ಲಿ ವಿ.ವಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ಪ್ರಗತಿಪರ ಸಂಘಟನೆಗಳು ಬೀದಿಗಿಳಿಯಲಿವೆ~ ಎಂದು ಎಚ್ಚರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT