ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಂದ ಹಣ ವಸೂಲಿ: ಆರೋಪ

Last Updated 10 ಫೆಬ್ರುವರಿ 2012, 5:50 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕೆಲವು ಪೊಲೀಸರು ಮೊಕದ್ದಮೆ ದಾಖಲಾದವರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ಬಂದಿವೆ ಎಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿ.ನಿಲೇಶ್ ಗುರುವಾರ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಆರೋಪಿಸಿದರು. 

  ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸಬ್‌ಇನ್ಸ್‌ಪೆಕ್ಟರ್ ಉತ್ತಮ ಕಾರ್ಯ ಮಾಡುತ್ತಿದ್ದರೂ ಇವರಿಲ್ಲದ ಸಮಯ ದಲ್ಲಿ ಕೆಲವು ಪೊಲೀಸರು ಮೊಕದ್ದಮೆ ದಾಖಲಾದ ವ್ಯಕ್ತಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದರು. ಇದಕ್ಕೆ ಉತ್ತರಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಡಿ.ಟಿ. ಪ್ರಭು, ಪೊಲೀಸರು ಹಣ ವಸೂಲಿ ಮಾಡಿರುವ ನಿರ್ದಿಷ್ಟ ಪ್ರಕರಣ ತಿಳಿಸಿದರೆ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಹಣವಸೂಲಿ ಪ್ರಕರಣ ಸಹಿಸಿ ಕೊಳ್ಳಲು ಸಾಧ್ಯವಿಲ್ಲ ಎಂದರು.

 ಬಾಳೆಹೊನ್ನೂರು ಮತ್ತು ಮಾಗುಂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರು ಬಂದಿರುವ ಬಗ್ಗೆ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಜಿ.ನಾಗರಾಜ್ ವೈದ್ಯಾಧಿಕಾರಿ ಹಾಗೂ ಸಂಬಂಧಪಟ್ಟ ವೈದ್ಯರಿಂದ ವಿವರಣೆ ಪಡೆದುಕೊಂಡರು.

ಸಾರ್ವಜನಿಕರಿಂದ ದೂರು ಬರದಂತೆ ಕಾರ್ಯನಿರ್ವಹಿಸಿ ಎಂದು ವಿಷಯಕ್ಕೆ ತೆರೆ ಎಳೆದರು. ಇದೇ 19 ಮತ್ತು ಏ.1ರಿಂದ ಎರಡು ಹಂತದಲ್ಲಿ      ಪಲ್ಸ್ ಪೊಲೀಯೊ ಕಾರ್ಯಕ್ರಮವಿದ್ದು 7,426ಮಕ್ಕಳಿಗೆ 95 ಬೂತ್‌ಗಳಲ್ಲಿ ಹನಿ ಹಾಕಲಾಗುತ್ತದೆ. 380 ಮಂದಿ ಕಾರ್ಯನಿರ್ವಹಿಸಲಿದ್ದು, 19ಜನ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಭಾಕರ್ ಮಾಹಿತಿ ನೀಡಿದರು. ಹಾಗೂ ಚುನಾಯಿತ ಜನಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡ ಬೇಕೆಂದು ಮನವಿ ಮಾಡಿದರು.

ತಾಲ್ಲೂಕಿನ ಸುಗ್ಗಪ್ಪನ ಮಠದ ಸಿರಿಗಳಲೆ ರಸ್ತೆಯಲ್ಲಿ ಎಂಪಿಎಂಗೆ ಸೇರಿದ ಪ್ಲಾಂಟೇಷನ್ ಅನ್ನು ನಿವೇಶನ ನೀಡಲು ಬಿಟ್ಟುಕೊಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಎಸ್‌ಎಫ್‌ಡಿಸಿ ಅಧಿಕಾರಿ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರು. ಖಾಲಿ ಇರುವ 1ಎಕರೆ ಪ್ರದೇಶವನ್ನು ಆಶ್ರಯ ನಿವೇಶನಕ್ಕೆ ಹಂಚಿಕೆ ಮಾಡಲು ಬಿಟ್ಟು ಕೊಡಬೇಕೆಂದು ಮೇಲಧಿಕಾರಿಗಳಿಗೆ ಪತ್ರ ಬರೆಯಲು ಸಭೆ ತೀರ್ಮಾನಿಸಿತು.

ತಾಲ್ಲೂಕಿನ ಬಿ.ಕಣಬೂರು ಗ್ರಾಮದಲ್ಲಿ ಕಸವಿಲೇವಾರಿ ಮಾಡುವ ದಾರಿಗೆ ತೋಟಗಾರಿಕಾ ಇಲಾಖೆಯವರು ಬೇಲಿ ಹಾಕಿದ್ದಾರೆಂದು ಪಿಡಿಓ ಸಭೆಯ ಗಮನಕ್ಕೆ ತಂದರು. ಈ ಜಾಗದ ಬಗ್ಗೆ ಸರ್ವೆ ಮಾಡಿಸಿ ಒಂದು ವೇಳೆ ತೋಟಗಾರಿಕಾ ಇಲಾಖೆಯವರು ಜಾಗ ಒತ್ತುವರಿ ಮಾಡಿದ್ದರೆ ಅದನ್ನು ಬಿಡಿಸಿ ನಿವೇಶನ ಹಂಚಿ ಎಂದು ಸಭೆ ಪಿಡಿಓಗೆ ಸೂಚಿಸಿತು. 

 ಇನ್ನು ಮುಂದೆ ಪ್ರತಿ ತಿಂಗಳ 5ರಂದು ಮಾಸಿಕ ಕೆಡಿಪಿ ಸಭೆ ನಡೆಸಲು ಸಭೆ ತೀರ್ಮಾನಿಸಿತು. ಕಮಲಾಪುರ ಗ್ರಾಮದಲ್ಲಿರುವ ಓಲ್ಟೇಜ್ ಸಮಸ್ಯೆ ಬಗೆಹರಿಸಲು ಒಂದು ತಿಂಗಳೊಳಗೆ ಹೊಸ ವಿದ್ಯುತ್‌ಪರಿವರ್ತಕ ಅಳವಡಿಲಾಗುವುದೆಂದು ಮೆಸ್ಕಾಂ ಎಂಜಿನಿಯರ್ ಸಭೆಗೆ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ವಹಿಸಿದ್ದರು. ಉಪಾಧ್ಯಕ್ಷೆ ಬಿ.ಬಿ.ಉಮಾ, ಜಿಲ್ಲಾಪಂಚಾಯಿತಿ ಸದಸ್ಯೆ ಸುಜಾತ, ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ್ ಎಚ್.ಬಂಡಿ ಇದ್ದರು.      
           
ದೇವಸ್ಥಾನ ಲೋಕಾರ್ಪಣೆ 12 ರಂದು
ಗಡಿಗೇಶ್ವರ(ನರಸಿಂಹರಾಜಪುರ): ತಾಲ್ಲೂಕಿನ ಗಡಿಗೇಶ್ವರದಲ್ಲಿ ನಿರ್ಮಿಸಿರುವ ಭವಾನಿ ಶಂಕರೇಶ್ವರ ಗಡಿಗೇಶ್ವರ ದೇವಸ್ಥಾನವು ಇದೇ 12ಕ್ಕೆ ಲೋಕಾರ್ಪಣೆಗೊಳ್ಳಲಿದೆ.

 ಗಡಿಗೇಶ್ವರದಲ್ಲಿ ಸುಮಾರು 250 ವರ್ಷಗಳ ಹಿಂದೆ ಅಂದಿನ ರಾಜಮನೆತನದವರು ಸಂತಾನ ಪ್ರಾಪ್ತಿಗಾಗಿ ಮತ್ತು ಊರಿನ ಅಭ್ಯುದಯಕ್ಕಾಗಿ ಶಿವನನ್ನು ಆರಾಧಿಸುತ್ತಿದ್ದು, ಇಲ್ಲಿ ಶಿವಕ್ಷೇತ್ರ ಮತ್ತು ಬ್ರಾಹ್ಮಣರ ಅಗ್ರಹಾರಗಳು ಇದ್ದವೆಂಬ ಪ್ರತೀತಿ ಇದೆ.

ಕಾಲಾನಂತರ ಪರಕೀಯರ ಆಕ್ರಮಣದಿಂದ ಈ ಕ್ಷೇತ್ರ ನಶಿಸಿ ಹೋಯಿತು. ಇದನ್ನು ಅರಿತ  ಈ ಕ್ಷೇತ್ರದ ಶ್ರೀಭವಾನಿಶಂಕರೇಶ್ವರ ಗಡಿಗೇಶ್ವರ ಬನಶಂಕರಿ ಮತ್ತು ಗಣಪತಿ ದೇವಾಲಯವನ್ನು ಭಕ್ತಾದಿಗಳು, ಗ್ರಾಮಸ್ಥರು ಮತ್ತು ಊರಿನ ದಾನಿಗಳ ನೇರವಿನಿಂದ ಗಡಿಗೇಶ್ವರ ಸರ್ಕಾರಿ ಪ್ರೌಢಶಾಲೆ ಸಮೀಪ ರೂ.14ಲಕ್ಷ ವೆಚ್ಚದಲ್ಲಿ ನೂತನ ದೇವಾಲಯದ ಕಟ್ಟಡ ನಿರ್ಮಾಣ ಮಾಡಿದ್ದಾರೆ.

 ಭವಾನಿ ಶಂಕರ ಗಡಿಗೇಶ್ವರ ಪ್ರತಿಷ್ಠಾ ಮಹೋತ್ಸವವು ಇದೇ 11ರ ಶನಿವಾರ ಮತ್ತು12ರ ಭಾನುವಾರ ನಡೆಯಲಿದೆ. ಭಾನುವಾರ ಶೃಂಗೇರಿ ಶ್ರೀಶಾರದ ಪೀಠದ  ಶ್ರೀಭಾರತೀತೀರ್ಥ ಸ್ವಾಮಿ ದೇವಸ್ಥಾನದ ಉದ್ಘಾಟಿಸಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT