ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗಿಲ್ಲ ಹೆಲ್ಮೆಟ್ ಕಡ್ಡಾಯ!

Last Updated 3 ಫೆಬ್ರುವರಿ 2012, 11:00 IST
ಅಕ್ಷರ ಗಾತ್ರ

ಬೆಳಗಾವಿ: ಮಹಾನಗರ ವ್ಯಾಪ್ತಿಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಹೆಲ್ಮೆಟ್ ಹಾಕಿಕೊಳ್ಳದೇ ಸಂಚರಿಸುತ್ತಿರುವ ಸಾರ್ವಜನಿಕರಿಗೆ ದಂಡ ಹಾಕಲಾಗುತ್ತಿದೆ. ಆದರೆ ಈ ಕಾನೂನು ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಅನ್ವಯವಾಗುವುದಿಲ್ಲವೇ ಎನ್ನುವುದು ಸಾರ್ವಜನಿಕರನ್ನು ಕಾಡುತ್ತಿದೆ.

ಜ.25 ರಿಂದ ಹೆಲ್ಮೆಟ್ ಧರಿಸದ ಸವಾರರಿಗೆ 100 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಈಗಾಗಲೇ ದಂಡದ ರೂಪದಲ್ಲಿಯೇ ಲಕ್ಷಾಂತರ ರೂಪಾಯಿ ವಸೂಲು ಮಾಡಲಾಗಿದೆ. ಇದೇ ಮಾನದಂಡ ಪೊಲೀಸರಿಗೆ ಅನ್ವಯವಾಗುತ್ತಿಲ್ಲ.

ಕೆಲವು ಪೊಲೀಸ್ ಸಿಬ್ಬಂದಿ ಮಾತ್ರ ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಂಡೇ ವಾಹನ ಚಲಾವಣೆ ಮಾಡುವ ಮೂಲಕ ಕಾನೂನನ್ನು ಪಾಲಿಸುತ್ತಿದ್ದಾರೆ. ಇನ್ನು ಕೆಲವರು, ನಾವೇ ಪೊಲೀಸರು; ನಮ್ಮನ್ನು ಹಿಡಿಯುವವರ‌್ಯಾರು ಎಂಬ ಮನೋಭಾವದಲ್ಲಿ ಹೆಲ್ಮೆಟ್ ಇಲ್ಲದೇ ಸಂಚರಿಸುತ್ತಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿ, ವಿವಿಧ ಪೊಲೀಸ್ ಠಾಣೆಗಳಿಗೆ ಕೆಲಸಕ್ಕೆ ಆಗಮಿಸುವ ದ್ವಿಚಕ್ರ ವಾಹನ ಹೊಂದಿದ ಸಿಬ್ಬಂದಿಯಲ್ಲಿ ಸಾಕಷ್ಟು ಜನರು ಹೆಲ್ಮೆಟ್ ಧರಿಸುವುದಿಲ್ಲ. ಸಾರ್ವಜನಿಕರ ವಾಹನಗಳನ್ನು ಹಿಡಿಯುವ ಸಂಚಾರಿ ಪೊಲೀಸ್ ಸಿಬ್ಬಂದಿಯ ಎದುರಿನಲ್ಲಿಯೇ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಧರಿಸಿದೇ ವಾಹನ ಚಲಾಯಿಸಿಕೊಂಡು ಹೋಗುತ್ತಾರೆ. ಆದರೆ ಅವರಿಗೆ ದಂಡ ಹಾಕುವ ಗೋಜಿಗೆ ಸಿಬ್ಬಂದಿ ಹೋಗುವುದಿಲ್ಲ.

ಇನ್ನು ಕೆಲವು ಪೊಲೀಸ್ ಹಾಗೂ ಸಾರ್ವಜನಿಕರು ಹೆಲ್ಮೆಟ್‌ಗಳನ್ನು ಧರಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಅವರು ಹೆಲ್ಮೆಟ್ ಹಾಕಲೇಬೇಕು ಎಂಬ ಕಾರಣಕ್ಕೆ ಕಾಟಾಚಾರದ ಹೆಲ್ಮೆಟ್ ಟೋಪಿಯನ್ನು ತಲೆ ಮೇಲೆ ಇಟ್ಟುಕೊಂಡು ಸಾಗುತ್ತಾರೆ. ಆದರೆ ಅದನ್ನು ಕಟ್ಟಿಕೊಳ್ಳುವುದಿಲ್ಲ. ಅಪಘಾತವಾದರೆ ಮೊದಲು ನೆಲಕ್ಕೆ ಬೀಳುವುದೇ ಹೆಲ್ಮೆಟ್.

ಸಾರ್ವಜನಿಕರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಆದರೆ ಇದು ಪೊಲೀಸರಿಗೆ ಅನ್ವಯಿಸುವುದಿಲ್ಲವೇ ಎಂಬುದು ದೀಪಕ ಪಾಟೀಲ ಎಂಬುವವರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT