ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಠಾಣೆಯಲ್ಲಿ ಸಚಿವ ಲಿಂಬಾವಳಿ ಗಲಾಟೆ

Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಬೆಂಗಳೂರು:  ಮಂಡೂರಿನಲ್ಲಿ ಕಸ ವಿಲೇವಾರಿಗೆ ಅಡ್ಡಿಪಡಿಸಿದ ಗ್ರಾಮಸ್ಥರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಅವರು ಬೆಂಬಲಿಗರೊಂದಿಗೆ ಭಾನುವಾರ ರಾತ್ರಿ ಆವಲಹಳ್ಳಿ ಪೊಲೀಸ್ ಠಾಣೆಗೆ ನುಗ್ಗಿ ದುಂಡಾವರ್ತಿ ನಡೆಸಿದ್ದಾರೆ.

ಮಂಡೂರಿಗೆ ಕಸ ಸುರಿಯುವುದನ್ನು ವಿರೋಧಿಸಿ ಭಾನುವಾರ ರಾತ್ರಿ ಗ್ರಾಮಸ್ಥರು ತ್ಯಾಜ್ಯ ವಿಲೇವಾರಿ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ, ಪ್ರತಿಭಟನಾನಿರತ ಗ್ರಾಮಸ್ಥರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಬಳಿಕ ಅವರೆಲ್ಲರನ್ನು ಠಾಣೆಗೆ ಕರೆತರಲಾಯಿತು. ಆ ಗ್ರಾಮಸ್ಥರನ್ನು ಬಿಡುಗಡೆಗೊಳಿಸುವಂತೆ ಸ್ಥಳೀಯ ಶಾಸಕರೂ ಆದ ಲಿಂಬಾವಳಿ ಠಾಣೆಗೆ ಬಂದು ದಾಂದಲೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

`ಬೆಂಬಲಿಗರೊಂದಿಗೆ ರಾತ್ರಿ 12 ಗಂಟೆ ಸುಮಾರಿಗೆ ಠಾಣೆಗೆ ಬಂದ ಲಿಂಬಾವಳಿ ಅವರು, ಗ್ರಾಮಸ್ಥರನ್ನು ವಶಕ್ಕೆ ತೆಗೆದುಕೊಂಡ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಎರಡು ತಾಸಿಗೂ ಹೆಚ್ಚು ಕಾಲ ಠಾಣೆಯಲ್ಲಿದ್ದ ಸಚಿವರು, ತಮ್ಮ ಪೂರ್ವಾನುಮತಿ ಪಡೆಯದೆ ಗ್ರಾಮಸ್ಥರನ್ನು ಹೇಗೆ ವಶಕ್ಕೆ ತೆಗೆದುಕೊಂಡಿರಿ ಎಂದು ಕೂಗಾಡಿದರು.

ಅಲ್ಲದೇ ಠಾಣೆಯಲ್ಲಿದ್ದ ಕಡತಗಳನ್ನು ಎಸೆದು, ಮನಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು' ಎಂದು ಠಾಣೆಯ ಸಿಬ್ಬಂದಿ ಹೇಳಿದ್ದಾರೆ. ಸಚಿವರ ಜತೆ ಅವರ ಬೆಂಬಲಿಗರಾದ ಪಾಪಣ್ಣ, ವೇಣು, ಶ್ರೀಧರ್ ಮತ್ತು ನಾಗೇಶ್ ಮತ್ತಿತರರೂ ಇದ್ದರು. ಇಡೀ ಘಟನೆಯ ಬಗ್ಗೆ ಕೇಂದ್ರ ವಲಯ ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

`ಮಂಡೂರಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಸ ವಿಲೇವಾರಿ ಮಾಡುವುದನ್ನು ಈ ತಿಂಗಳ ಅಂತ್ಯಕ್ಕೆ ನಿಲ್ಲಿಸುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಭರವಸೆ ನೀಡಿದ್ದರು. ಈ ಬಗ್ಗೆ ಭಾನುವಾರದೊಳಗೆ (ಡಿ.9) ಭರವಸೆ ಪತ್ರ ನೀಡುವುದಾಗಿ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದರು. ಆದರೆ, ಸಂಜೆಯಾದರೂ ಪತ್ರ ಕೊಡದ ಹಿನ್ನೆಲೆಯಲ್ಲಿ ಲಾರಿಗಳನ್ನು ತಡೆದು ಪ್ರತಿಭಟನೆಗೆ ಮುಂದಾದೆವು. ಆದರೆ, ನಮ್ಮನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ರಾತ್ರಿ 12 ಗಂಟೆಯಾದರೂ ಬಿಡುಗಡೆ ಮಾಡಲಿಲ್ಲ. ಹೀಗಾಗಿ ಸಚಿವರಿಗೆ ಈ ವಿಷಯ ತಿಳಿಸಿದೆವು' ಎಂದು ಮಂಡೂರು ಗ್ರಾಮಸ್ಥ ಸದಾಶಿವಯ್ಯ ಹೇಳಿದರು.

`ಘಟನೆ ಸಂಬಂಧ ಠಾಣೆಯ ಸಿಬ್ಬಂದಿ ಈವರೆಗೆ ಯಾವುದೇ ವರದಿ ನೀಡಿಲ್ಲ ಮತ್ತು ದೂರು ಸಹ ದಾಖಲಿಸಿಕೊಂಡಿಲ್ಲ' ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪ್ರಕಾಶ್ `ಪ್ರಜಾವಾಣಿ'ಗೆ ತಿಳಿಸಿದರು.

`ಘಟನೆಯಿಂದಾಗಿ ಆವಲಹಳ್ಳಿ ಠಾಣೆಯ ಬಳಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಜನಪ್ರತಿನಿಧಿಯಾದ ನಾನು ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದೆ. ಮಂಡೂರು ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ' ಎಂದು ಲಿಂಬಾವಳಿ ತಿಳಿಸಿದ್ದಾರೆ.

ನಿಷೇಧಾಜ್ಞೆ : ತ್ಯಾಜ್ಯ ವಿಲೇವಾರಿ ಸಂಬಂಧ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡೂರು, ಬೂದಿಗೆರೆ ಕ್ರಾಸ್, ಬೈಯ್ಯಪ್ಪನಹಳ್ಳಿ, ಆವಲಹಳ್ಳಿ, ಗುಂಡೂರು ಗ್ರಾಮಗಳಲ್ಲಿ ಸೋಮವಾರದಿಂದ ಬುಧವಾರ (ಡಿ.12) ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೂರ್ವ ತಾಲ್ಲೂಕು ವಿಶೇಷ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT