ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಭದ್ರತೆಯಲ್ಲಿ ಅಧಿಕಾರ ಸ್ವೀಕಾರ

Last Updated 12 ಅಕ್ಟೋಬರ್ 2012, 11:35 IST
ಅಕ್ಷರ ಗಾತ್ರ

ಕೆಜಿಎಫ್: ರಾಬರ್ಟ್‌ಸನ್‌ಪೇಟೆ ನಗರಸಭೆಯ ನೂತನ ಆಯುಕ್ತರಾಗಿ ಎಚ್.ವಿ.ಗುರುರಾಜ್ ಗುರುವಾರ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಅಧಿಕಾರ ಸ್ವೀಕರಿಸಿದರು.

ಮೂಲತಃ ಸಹಕಾರ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಅವರು, ತಾತ್ಕಾಲಿಕ ಮತ್ತು  ಆಡಳಿತಾತ್ಮಕ ನಿರ್ಧಾರದ ಮೇಲೆ ನಗರಾಭಿವೃದ್ಧಿ ಇಲಾಖೆಗೆ ನಿಯೋಜಿತರಾಗಿದ್ದಾರೆ. ಪ್ರಸ್ತುತ ಆಯುಕ್ತರಾಗಿದ್ದ ಬಾಲಚಂದ್ರರವರನ್ನು ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿ ವರ್ಗ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ನಗರಸಭೆಯ ಆಯುಕ್ತರಾಗಿದ್ದ ಬಾಲಚಂದ್ರ ಅವರನ್ನು ರಾಜಕೀಯ ಕಾರಣಗಳಿಂದ ವರ್ಗ ಮಾಡಲಾಗಿದೆ. ಅವರನ್ನು ಯಾವುದೇ ಕಾರಣದಿಂದಲೂ ರಾಬರ್ಟ್‌ಸನ್‌ಪೇಟೆ ನಗರಸಭೆಯಿಂದ ವರ್ಗ ಮಾಡಬಾರದು ಎಂದು ಈಚೆಗೆ ನಗರಸಭೆಯ ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ನಗರಸಭೆ ಆಯುಕ್ತರ ವರ್ಗಾವಣೆ ಜೆಡಿಎಸ್ ನೇತೃತ್ವದ ನಗರಸಭೆ ಮತ್ತು ಬಿಜೆಪಿ  ಶಾಸಕ ವೈ.ಸಂಪಂಗಿ ನಡುವಿನ  ವೈಯಕ್ತಿಕ ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿತ್ತು. ಶಾಸಕ ವೈ.ಸಂಪಂಗಿ ಸರ್ಕಾರ ಮೇಲೆ ತಂದ ಒತ್ತಡದ ಮೇರೆಗೆ ವರ್ಗಾವಣೆ ನಡೆದಿದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕರಿಸಲು ಬರುವ ಹೊಸ ಆಯುಕ್ತರನ್ನು ಅಡ್ಡಗಟ್ಟಿ ಅವರು ಅಧಿಕಾರ ಸ್ವೀಕರಿಸದಂತೆ ಮಾಡಲು ಯತ್ನ ನಡೆಯಲಾಗುತ್ತಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಗುರುವಾರ ಮಧ್ಯಾಹ್ನ ನಗರಸಭೆ ಆವರಣ ಪೊಲೀಸರಿಂದ ತುಂಬಿತು. ನಂತರ ತಹಶೀಲ್ದಾರ್ ಮಂಗಳ, ವಿಶೇಷ ತಹಶೀಲ್ದಾರ್ ಜಯಮಾಧವ ಅವರ ಸಮ್ಮುಖದಲ್ಲಿ ಗುರುರಾಜ್ ಅವರು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀಧರ್ ಅವರಿಂದ ಅಧಿಕಾರ ಸ್ವೀಕರಿಸಿದರು. ಆಯುಕ್ತರ ಕೊಠಡಿ ಬೀಗ ಹಾಕಿದ್ದ ಪರಿಣಾಮ ಬೇರೆ ಕೊಠಡಿಯಲ್ಲಿ ಕುಳಿತ ಆಯುಕ್ತ ಗುರುರಾಜ್ ಕೆಲವು ಪತ್ರಗಳಿಗೆ ಸಹಿ ಹಾಕಿದರು.

ಕಚೇರಿ ಬರುವ ಸಾರ್ವಜನಿಕರನ್ನು ಸತಾಯಿಸಿದೆ ಕೆಲಸ ಮಾಡಿಕೊಡಲಾಗುವುದು. ನಗರದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅದ್ಯತೆ ನೀಡಲಾಗುವುದು ಎಂದು ನೂತನ ಆಯುಕ್ತರು ತಿಳಿಸಿದರು.

ರಾಜಕೀಯ ಕಾರಣಗಳಿಂದ ಬಾಲಚಂದ್ರ ಅವರನ್ನು ಆಯುಕ್ತರ ಸ್ಥಾನದಿಂದ ಬಿಡುಗಡೆ ಮಾಡಲಾಗಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ನಾಗರಿಕರ, ಜನಪ್ರತಿನಿಧಿಗಳ ಮತ್ತು ನಗರಸಭೆ ಸಿಬ್ಬಂದಿ ವಿಶ್ವಾಸ ಗಳಿಸಿದ್ದ ಅವರನ್ನು ಪುನಃ ಸರ್ಕಾರ ರಾಬರ್ಟ್‌ಸನ್‌ಪೇಟೆ ನಗರಸಭೆಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ಹಲವು ಸಂಘ ಸಂಸ್ಥೆಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ. ನಗರಸಭೆ ಬಹುತೇಕ ಸದಸ್ಯರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಗರಸಭೆಯ ಜೆಡಿಎಸ್ ಸದಸ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT