ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ವಶಕ್ಕೆ ಅಸಾರಾಮ್

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಜೈಪುರ: ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಅವರನ್ನು ಜೋಧಪುರ ನ್ಯಾಯಾಲಯ ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಪ್ರಕರಣದ ಸಂಬಂಧ ಆಗಸ್ಟ್ 30ರೊಳಗೆ ವಿಚಾರಣೆಗೆ ಹಾಜರಾಗುವಂತೆ ರಾಜಸ್ತಾನದ ಪೊಲೀಸರು ಅವರಿಗೆ ನೋಟಿಸ್ ನೀಡಿದ್ದರು. ಸಮಯ ಮೀರಿದರೂ ಹಾಜರಾಗದ ಕಾರಣ ಶನಿವಾರ ಮಧ್ಯರಾತ್ರಿ ಮಧ್ಯ ಪ್ರದೇಶದ ಇಂದೋರ್ ಆಶ್ರಮದಲ್ಲಿ ಬಂಧಿಸಿ ಭಾನುವಾರ ಮಧ್ಯಾಹ್ನ ಜೋಧಪುರ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. 

ಪುರುಷತ್ವದ ಪರೀಕ್ಷೆ: `ಅವರು ಆರೋಗ್ಯವಾಗಿದ್ದಾರೆ ಎಂದು ವೈದ್ಯಕೀಯ ವರದಿ ತಿಳಿಸಿದ ಬಳಿಕವಷ್ಟೇ ಅವರನ್ನು ಬಂಧಿಸಲಾಗಿದೆ. ತನಿಖೆಯ ಭಾಗವಾಗಿ  ಅವರ ಪುರುಷತ್ವದ ಪರೀಕ್ಷೆ ಕೂಡ ನಡೆಸಲಾಗುವುದು' ಎಂದು ಜೋಧಪುರ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ತಿಳಿಸಿದ್ದಾರೆ.

`ಅಸಾರಾಮ್ ಅವರು ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ಆದರೆ, ಅವರ ವಿರುದ್ಧದ ಆರೋಪವನ್ನು ಒಪ್ಪಿಕೊಳ್ಳುತ್ತಿಲ್ಲ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಜೋಧಪುರ ಹೊರವಲಯದಲ್ಲಿರುವ ಮನಾಯಿ ಆಶ್ರಮಕ್ಕೆ ಬಾಪು ಅವರನ್ನು ಕರೆದೊಯ್ಯಲಾಗುವುದು' ಎಂದು ಭಾನುವಾರ ಹೇಳಿದ್ದಾರೆ.

ತಮ್ಮ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸಮರ್ಥನೆ ಮಾಡಿಕೊಳ್ಳುವಲ್ಲಿ ಬಾಪು ವಿಫಲವಾದ ಕಾರಣ ಅವರನ್ನು ಬಂಧಿಸಲಾಗಿದೆ. ಅವರ ವಕೀಲರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗಿತ್ತು ಎನ್ನುವುದನ್ನು ಅವರು ಅಲ್ಲಗಳೆದಿದ್ದಾರೆ.

ಅಜ್ಞಾತ ಸ್ಥಳಕ್ಕೆ ಬಾಪು: ಬಾಪು ಅವರನ್ನು ಭಾನುವಾರ ಮಧ್ಯಾಹ್ನ 12.30ಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ದೆಹಲಿಯಿಂದ ಜೋಧಪುರಕ್ಕೆ ಕರೆದೊಯ್ಯಲಾಯಿತು. ಬಳಿಕ ಭಾರಿ ಭದ್ರತೆಯಲ್ಲಿ ಜೋಧಪುರದ ಹೊರವಲಯದ ಮಂದೋರ್‌ನಲ್ಲಿರುವ ರಾಜಸ್ತಾನ ಸಶಸ್ತ್ರ ಪೊಲೀಸ್ (ಆರ್‌ಎಸಿ) ಪಡೆಗೆ ಸೇರಿದ ಅತಿಥಿ ಗೃಹಕ್ಕೆ ಕೊಂಡೊಯ್ಯಲಾಯಿತು. ಆರಂಭಿಕ ಹಂತದ ವಿಚಾರಣೆಗೆ ಒಳಪಡಿಸಿದ ನಂತರ ಸಂಜೆ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಬಾಪು ಅವರನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಪೊಲೀಸರು ಕೋರಿದರು. ಆದರೆ, ಕೋರ್ಟ್ ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು.

 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT