ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪೊಲೀಸ್ ಸಿಬ್ಬಂದಿ ದೌರ್ಜನ್ಯಕ್ಕೆ ಮೊದಲ ಬಲಿಪಶು ಮಹಿಳೆ'

Last Updated 6 ಏಪ್ರಿಲ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: `ದೇಶದಲ್ಲಿ ಮುಸ್ಲಿಮರ ಮೇಲೆ ಪೊಲೀಸರು ಹೆಚ್ಚು ದೌರ್ಜನ್ಯ ನಡೆಸುತ್ತಿದ್ದಾರೆ ಎಂಬ ಸಾಮಾನ್ಯ ಭಾವನೆ ಇದೆ. ಆದರೆ, ವಾಸ್ತವವಾಗಿ ಅಧಿಕ ಪ್ರಮಾಣದಲ್ಲಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಮಹಿಳೆಯರು' ಎಂದು ನಾಗರಿಕ ಹಕ್ಕುಗಳ ಸಂರಕ್ಷಣಾ ಸಂಘಟನೆ (ಎಪಿಸಿಆರ್) ವಕೀಲ ಎಸ್.ಎ. ಎಚ್.ರಜ್ವಿ ಕಳವಳ ವ್ಯಕ್ತಪಡಿಸಿದರು.

ಪಿಯುಸಿಎಲ್, ಜನರ ಪ್ರಜಾಪ್ರಭುತ್ವ ಒಕ್ಕೂಟ (ಪಿಡಿಎಫ್),  ಎಪಿಸಿಆರ್, ಕರ್ನಾಟಕ ಕೋಮು ಸೌಹಾರ್ದ ವೇದಿಕೆ  ಸೇರಿದಂತೆ ಇತರ ಸಂಘಟನೆಗಳ ಆಶ್ರಯದಲ್ಲಿ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ `ಅನುಮಾನಾಸ್ಪದ ನಡತೆ-ಭಯೋತ್ಪಾದನಾ ಪ್ರಕರಣಗಳ ಆಪಾದನೆಗೆ ಗುರಿಯಾದ ಮುಸ್ಲಿಂ ಯುವಕರು' ಸಾರ್ವಜನಿಕ ಚರ್ಚೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಪೊಲೀಸರು ಮಹಿಳೆಯರ ಮೇಲೆ ವ್ಯವಸ್ಥಿತವಾದ ಪೂರ್ವಗ್ರಹ ಭಾವನೆ ಹೊಂದಿದ್ದಾರೆ. ದೌರ್ಜನ್ಯಕ್ಕೆ ಒಳಗಾಗುವವರಲ್ಲಿ ಆ ಬಳಿಕದ ಸ್ಥಾನ ಮುಸ್ಲಿಮರು, ದಲಿತರು ಹಾಗೂ ಹಿಂದುಳಿದವರದ್ದು. ನಾವು ಕನಸು ಕಂಡ ಭಾರತ ಇದಲ್ಲ. ಕನಸಿನ ಭಾರತ ಸುಂದರವಾಗಿತ್ತು' ಎಂದು ಅವರು ಬೇಸರ ವ್ಯಕ್ತಪಡಿಸಿದರು.
`ನಮ್ಮ ಪೊಲೀಸ್ ನೇಮಕ ವ್ಯವಸ್ಥೆ ಪುರಾತನ ಕಾಲದ್ದು. ತರಬೇತಿ ಸಂದರ್ಭದಲ್ಲಿ ಹಿಂಸೆ ನಡೆಸುವುದು ಹೇಗೆಂದು  ಹೇಳಿಕೊಡಲಾಗುತ್ತಿದೆ. ನಾವು ಈ ಎಲ್ಲ ಸಮಸ್ಯೆಗಳನ್ನು ಅರಿತುಕೊಳ್ಳಬೇಕು. ಇಲ್ಲದಿದ್ದರೆ ಅಗ್ರಗಣ್ಯ ರಾಷ್ಟ್ರವಾಗುವುದು ಕನಸಾಗಿಯೇ ಉಳಿಯುತ್ತದೆ' ಎಂದು ಎಚ್ಚರಿಸಿದರು.

ನ್ಯಾಯಾಂಗ ವ್ಯವಸ್ಥೆಯಲ್ಲೂ ಸುಧಾರಣೆಗಳಾಗಬೇಕಿದೆ. ಶಂಕಿತ ವ್ಯಕ್ತಿಯೊಬ್ಬನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ `ಪೊಲೀಸರು ದೌರ್ಜನ್ಯ ನಡೆಸಿದರಾ' ಎಂದು ನ್ಯಾಯಾಧೀಶರು ಪ್ರಶ್ನಿಸುತ್ತಾರೆ. ಆರೋಪಿಯಿಂದ ನ್ಯಾಯಾಧೀಶರು 30 ಅಡಿ ದೂರದಲ್ಲಿ ಇರುತ್ತಾರೆ. ನಡುವೆ 50-60 ವಕೀಲರು ಇರುತ್ತಾರೆ. ಇಂತಹ ಸ್ಥಿತಿಯಲ್ಲಿ ಶಂಕಿತ ಆರೋಪಿ ಅಸಹಾಯಕನಾಗಿ ದೌರ್ಜನ್ಯ ನಡೆದಿಲ್ಲ ಎಂದೇ ಹೇಳುತ್ತಾನೆ ಎಂದು ಅವರು ವಾಸ್ತವ ಸಂಗತಿ ಬಿಚ್ಟಿಟ್ಟರು.

ಜೈಲಿನಲ್ಲಿ ಸಾವಿರಾರು ಮಂದಿ ಅಮಾಯಕರು ಇದ್ದಾರೆ. ಅವರಿಗೆ ಕಾನೂನಿನ ಸಾಮಾನ್ಯ ಜ್ಞಾನವೇ ಇಲ್ಲ. ಅಮಾಯಕರ ಬಂಧನವಾದಾಗ ಕುಟುಂಬದ ಸದಸ್ಯರಿಗೆ ಕಾನೂನು ಹೋರಾಟ ನಡೆಸುವುದು ಹೇಗೆಂದೇ ಗೊತ್ತಿರುವುದಿಲ್ಲ. ರೂ. 500 ಶುಲ್ಕ ಪಾವತಿಸಲು ಹರಸಾಹಸ ಪಡಬೇಕಿದೆ. ಇಂತಹ ಪರಿಸ್ಥಿತಿಯಿಂದ ಮುಕ್ತಿ ಪಡೆಯಲು ಸಾಮಾನ್ಯ ಜನರಿಗೆ ಕಾನೂನಿನ ಜ್ಞಾನ ನೀಡಿ ಅವರನ್ನು ಸಬಲೀಕರಣ ಮಾಡಬೇಕಿದೆ ಎಂದು  ಕಿವಿಮಾತು ಹೇಳಿದರು.
`ಪೊಲೀಸರು ಹೇಳುವ ಕಥೆಗಳನ್ನು ಜನಸಾಮಾನ್ಯರು ನಂಬಿ ಬಿಡುತ್ತಾರೆ. ಅಮಾಯಕರ ಬಂಧನ ನಡೆದ ಸಂದರ್ಭದಲ್ಲಿ ರಾಜಕಾರಣಿಗಳೂ ಮೌನಕ್ಕೆ ಶರಣಾಗುತ್ತಾರೆ. ನಕಲಿ ಎನ್‌ಕೌಂಟರ್‌ಗಳ ಹೆಸರಿನಲ್ಲಿ ಅಮಾಯಕರ ಬಲಿ ಪಡೆಯಲಾಗುತ್ತಿದೆ. ಇಂತಹ ದೌರ್ಜನ್ಯದ ವಿರುದ್ಧ ನಾವೆಲ್ಲ ಧ್ವನಿ ಎತ್ತಬೇಕಿದೆ. ಇಲ್ಲದಿದ್ದರೆ ನಮ್ಮ ಮಕ್ಕಳ ಕಾಲಕ್ಕೆ ಪರಿಸ್ಥಿತಿ ಭಯಾನಕವಾಗಲಿದೆ' ಎಂದು  ಕಳವಳ ವ್ಯಕ್ತಪಡಿಸಿದರು.

ಜಾಮೀಯಾ ಟೀಚರ್ಸ್‌ ಸಾಲಿಡಾರಿಟಿ ಅಸೋಸಿಯೇಶನ್‌ನ ಮನಿಷಾ ಸೇಥಿ, `ಭಯೋತ್ಪಾದನೆ ಹೆಸರಿನಲ್ಲಿ ಬಂಧನಕ್ಕೆ ಒಳಗಾಗುವವರಲ್ಲಿ ಅಮಾಯಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇದೆ. ಅವರಿಂದ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗುತ್ತದೆ. ರಸ್ತೆ ಬದಿ ವ್ಯಾಪಾರಿ ಸೇರಿದಂತೆ ಸಾಮಾನ್ಯ ಜನರು ಹೇಳುವ ಮಾತನ್ನು ನಂಬಿ ಆರೋಪಪಟ್ಟಿ ತಯಾರಿಸಲಾಗುತ್ತದೆ. ಈ ವಿಚಾರಗಳನ್ನು ಒಪ್ಪಿಕೊಳ್ಳುವಂತೆ ದೌರ್ಜನ್ಯ ಎಸಗಲಾಗುತ್ತದೆ' ಎಂದು ಕಿಡಿಕಾರಿದರು.

ಪತ್ರಕರ್ತ ಮುತಿವುರ್ ರೆಹಮಾನ್ ಸಿದ್ದಿಕಿ ಮಾತನಾಡಿ, `ಕಳೆದುಹೋದ ಜೀವನ ಮತ್ತೆ ಬರದು. ಈ ಜೀವನ ಅನೇಕ ಪಾಠ ಕಲಿಸಿದೆ. ಸಹಜ ಸ್ಥಿತಿಗೆ ಬರಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಇದು ಸುಲಭ ಅಲ್ಲ ಎಂಬುದು ಗೊತ್ತು. ಅನೇಕ ಅಮಾಯಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅಪರೂಪಕ್ಕೆ ನಮಗೆ ನ್ಯಾಯ ಸಿಕ್ಕಿದೆ' ಎಂದರು.

`ಪೊಲೀಸರು ನಮ್ಮನ್ನು ಬಂಧಿಸಿದಾಗ ಬಹುತೇಕ ಮಾಧ್ಯಮಗಳು ಉಗ್ರರೆಂದೇ ಬಿಂಬಿಸಿದವು. ಮಾಧ್ಯಮ ವೃತ್ತಿ ಸಾಮಾಜಿಕ ಸೇವೆ ಎನ್ನುವ ಗೌರವ ಇತ್ತು. ಮಾಧ್ಯಮಗಳು ಪೂರ್ವಗ್ರಹ ಪೀಡಿತವಾಗಿ ವರದಿ ಮಾಡಬಾರದು. ವಸ್ತುನಿಷ್ಠವಾಗಿ ವರದಿ ಮಾಡಬೇಕು' ಎಂದು ವಿನಂತಿ ಮಾಡಿದರು.
ಸೈಯದ್ ಯೂಸುಫ್ ನಲಬಂದ್ ಮಾತನಾಡಿ, `ದಾರಿಯಲ್ಲಿ ಹೋಗುವಾಗ ಅಕ್ಕಪಕ್ಕದವರನ್ನು ಈ ಘಟನೆ ಬಗ್ಗೆ ಅಮ್ಮನಲ್ಲಿ ಪ್ರಶ್ನಿಸುತ್ತಿದ್ದರು. ಇಂತಹ ಸ್ಥಿತಿ ಯಾರಿಗೂ ಎದುರಾಗಬಾರದು. ಬಿಡುಗಡೆ ಮಾಡಿದ ಬಳಿಕವೂ ಪೊಲೀಸರು ಬಂಧನದ ವೇಳೆ ವಶಪಡಿಸಿಕೊಂಡ ದಾಖಲೆಗಳನ್ನು ವಾಪಸ್ ಮಾಡಿಲ್ಲ' ಎಂದು ಅಳಲು ತೋಡಿಕೊಂಡರು. 

ಕಿರಿಯ ವಿಜ್ಞಾನಿ ಆಯೇಜ್ ಅಹಮ್ಮದ್ ಮಿರ್ಜಾ, `ನಾನು ಇನ್ನೂ ಸಹಜಸ್ಥಿತಿಗೆ ಬಂದಿಲ್ಲ. ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಪೊಲೀಸರು ವಶಪಡಿಸಿಕೊಂಡ ಗುರುತಿನ ಚೀಟಿಗಳನ್ನು ಇನ್ನೂ ಮರಳಿಸಿಲ್ಲ. ಗುರುತಿನ ಚೀಟಿ ಇಲ್ಲದೆ ಯಾವುದೇ ಕಾರ್ಯ ಆಗುವುದಿಲ್ಲ'ಎಂದು ಅಳಲು ತೋಡಿಕೊಂಡರು.

`ಪರಿಹಾರ ನೀಡಬೇಕು'

`ಭಯೋತ್ಪಾದಕರ ಹೆಸರಿನಲ್ಲಿ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿದ ಕಾರಣಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು' ಎಂದು `ಜನರ ಪ್ರಜಾಪ್ರಭುತ್ವ ಒಕ್ಕೂಟ'ದ ಸದಸ್ಯ ವಿ.ಎಸ್. ಶ್ರೀಧರ್ ಆಗ್ರಹಿಸಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, `ಜೀವನದ ಮಹತ್ವದ ಘಟ್ಟದಲ್ಲಿ ಈ ಯುವಕರು ಜೈಲಿನಲ್ಲಿ ಕಳೆದಿದ್ದಾರೆ. ಅವರ ಅಮೂಲ್ಯ ಸಮಯ ಹಾಳಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದೇ ಹೊತ್ತಿನಲ್ಲಿ ಮಾಧ್ಯಮಗಳು ಸಹ ಅತಿರಂಜಿತವಾಗಿ ವರದಿ ಮಾಡಿದವು' ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT