ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋರ್ಚುಗಲ್- ಮರಾಠಾ ಘರ್ಷಣೆಯ 'ಕಟ್ಟುಕತೆ'ಗೆ ವಿಕಿಪೀಡಿಯಾ ಅರ್ಧಚಂದ್ರ

Last Updated 8 ಜನವರಿ 2013, 12:48 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಪೋರ್ಚುಗಲ್ ಮತ್ತು ಭಾರತದ ಪ್ರಬಲ ಮರಾಠಾ ಸಾಮ್ರಾಜ್ಯದ ನಡುವೆ 17ನೇ ಶತಮಾನದಲ್ಲಿ ನಡೆದಿತ್ತು ಎಂದು ಬಣ್ಣಿಸಲಾದ ಘರ್ಷಣೆ 'ಬಿಚೋಲಿಮ್ ಘರ್ಷಣೆ' ನಡೆದೇ ಇಲ್ಲ ಹಾಗೂ ಇದಕ್ಕೆ ಸಂಬಂಧಿಸಿದಂತೆ ನೀಡಲಾದ ಎಲ್ಲ ಆಕರ ಮಾಹಿತಿಗಳೂ ಸಂಪೂರ್ಣ ಕಾಲ್ಪನಿಕ ಎಂಬುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೆಂಡಾಮಂಡಲವಾಗಿರುವ ವಿಕಿಪೀಡಿಯಾ ಈ ಘರ್ಷಣೆಗೆ ಸಂಬಂಧಿಸಿದ ಲೇಖನವನ್ನು ತನ್ನ ವೆಬ್ ತಾಣದಿಂದ ಕಿತ್ತು ಹಾಕಿದೆ.

'ಸಾಮ್ರಾಜ್ಯಶಾಹಿ ಪೋರ್ಚುಗಲ್ ಗೋವಾದಲ್ಲಿ ಭಾರತದ ಮರಾಠಾ ಸಾಮ್ರಾಜ್ಯದ ಜೊತೆಗೆ ನಡೆಸಿದ 'ಘರ್ಷಣೆ'ಯನ್ನು ಬಣ್ಣಿಸಿದ ಲೇಖನವನ್ನು ಐದು ವರ್ಷಗಳಿಂದ ನಿರಂತರವಾಗಿ ಪ್ರಕಟಿಸುತ್ತಾ ಬಂದಿದ್ದ ವಿಕಿಪೀಡಿಯಾ, 'ಘರ್ಷಣೆಯ ಇಡೀ ಲೇಖನ ಹಾಗೂ ಅದರಲ್ಲಿ ಮಾಹಿತಿ ಮೂಲವಾಗಿ ತೋರಿಸಲಾಗಿದ್ದ ಆಕರ ಗ್ರಂಥಗಳು ಕೇವಲ ಕಾಲ್ಪನಿಕವಾಗಿದ್ದವು' ಎಂದು ಒಪ್ಪಿಕೊಂಡಿರುವುದಾಗಿ 'ಡೈಲಿ ಮಿರರ್' ಪತ್ರಿಕೆ ವರದಿ ಮಾಡಿದೆ.

ಈ ಲೇಖನವನ್ನು ವಿಕಿಪೀಡಿಯಾ ಸಂಪಾದಕರು 2007ರಲ್ಲಿ ಲೇಖನ ಸೃಷ್ಟಿಯಾಗಿ ಸೇರ್ಪಡೆಗೊಂಡ ಎರಡೇ ತಿಂಗಳಲ್ಲಿ 'ಅತ್ಯುತ್ತಮ ಲೇಖನ' ಎಂಬುದಾಗಿ ಬಣ್ಣಿಸಿದ್ದರು. ವಿಕಿಪೀಡಿಯಾವು ಸಂಶೋಧನೆಗಾಗಿ ನೀಡುವ 'ಗೋಲ್ಡ್ ಸ್ಟಾರ್'  ಲೇಖನಗಳ ಸಂಗ್ರಹಕ್ಕೂ ಇದನ್ನು ನಾಮಕರಣ ಮಾಡಲಾಗಿತ್ತು.

4500 ಶಬ್ದಗಳ ಈ ಲೇಖನವನ್ನು ಅಪರಿಚಿತ ವಿಕಿಪೀಡಿಯಾ ಬಳಕೆದಾರ ಬರೆದಿದ್ದ.

'1640ರಿಂದ 1641ರವರೆಗಿನ ಅವಧಿಯಲ್ಲಿ ಸಾಮ್ರಾಜ್ಯಶಾಹಿ ಪೋರ್ಚುಗಲ್ ಭಾರತದ ವಿಸ್ತಾರವಾದ ಮರಾಠಾ ಸಾಮ್ರಾಜ್ಯದ ಜೊತೆಗೆ ಘರ್ಷಿಸಿತು. ಅಘೋಷಿತ ಸಮರವಾಗಿದ್ದ ಇದು ನಂತರ 'ಬಿಚೋಲಿಮ್ ಘರ್ಷಣೆ' ಎಂಬುದಾಗಿ ಪರಿಚಿತವಾಯಿತು ಎಂದು ಲೇಖನ ಹೇಳಿತ್ತು.

'ಸಮರ ಹೆಚ್ಚು ನಡೆದ ಉತ್ತರ ಭಾರತದ ಪ್ರದೇಶದ ಹೆಸರನ್ನೇ ಇರಿಸಲಾದ ಈ ಘರ್ಷಣೆಯು ಶಾಂತಿ ಒಪ್ಪಂದದೊಂದಿಗೆ ಕೊನೆಗೊಂಡಿತು. ನಂತರ ಈ ಒಪ್ಪಂದವೇ ಗೋವಾವನ್ನು ಭಾರತದ ಸ್ವತಂತ್ರ ರಾಜ್ಯವನ್ನಾಗಿ ರೂಪಿಸಲು ನೆರವಾಯಿತು' ಎಂದು ಲೇಖನ ವಿವರಿಸಿತ್ತು. 17 ಉಲ್ಲೇಖಗಳು ಹಾಗೂ ಹೆಚ್ಚಿನ ಅಧ್ಯಯನಕ್ಕಾಗಿ ಮೂರು ಸಲಹೆಗಳನ್ನೂ ನೀಡಿದ್ದ ಈ ಲೇಖನ ಸಂಪೂರ್ಣವಾಗಿ ಲೇಖಕನ ಕಲ್ಪನೆಯಾಗಿತ್ತು ಎಂದು 'ಡೈಲಿ ಡಾಟ್' ವರದಿಯನ್ನು ಉಲ್ಲೇಖಿಸಿ ಪತ್ರಿಕೆ ತಿಳಿಸಿದೆ.

'ಘರ್ಷಣೆ ಅತ್ಯಂತ ಸಂಕ್ಷಿಪ್ತ ಕಾಲದ್ದಾಗಿತ್ತು ಮತ್ತು ಅದರ ಸಾವು-ನೋವು, ಹಾನಿ ಅತ್ಯಂತ ಅಲ್ಪವಾಗಿತ್ತು. ಈ ಕಾರಣದಿಂದಾಗಿ ಇದು ಚಿತ್ರ ನಿರ್ಮಾಪಕರು ಇಲ್ಲವೇ ಗ್ರಂಥ ಕರ್ತೃಗಳ ಗಮನವನ್ನು ಸೆಳೆಯಲಿಲ್ಲ' ಎಂಬ ವಾಕ್ಯದೊಂದಿಗೆ ಈ ಲೇಖನ ಮುಕ್ತಾಯವಾಗಿತ್ತು.

ಮಿಸ್ಸೌರಿಯ ಇನ್ನೊಬ್ಬ ಬಳಕೆದಾರ ಶೆಲ್ಫ್ ಸ್ಕೆವೆಡ್ ಮೂಲಕ ಈ ಲೇಖನ ಸಂಪೂರ್ಣವಾಗಿ ಕಪೋಲ ಕಲ್ಪಿತವಾಗಿತ್ತು ಎಂಬುದು ಬೆಳಕಿಗೆ ಬಂತು ಮತ್ತು ವೆಬ್ ಸೈಟಿನಿಂದ ಅದನ್ನು ಕಿತ್ತು ಹಾಕಬೇಕೆಂದು ಸಲಹೆ ಮಾಡಲಾಯಿತು. ಈ ಬಳಕೆದಾರನ ಸಲಹೆ- ಎಚ್ಚರಿಕೆಯ ಮೇರೆಗೆ ವಿಕಿಪೀಡಿಯಾ ಲೇಖನವನ್ನು ತನ್ನ ವೆಬ್ ಸೈಟಿನಿಂದ ಕಿತ್ತು ಹಾಕಿತು.

'ಇಂತಹುದು ಹೊಸದೇನಲ್ಲ. ಆದರೆ ಅಂತಹವರನ್ನು ಪತ್ತೆಹಚ್ಚುವುದೇ ಕಷ್ಟದ ಕೆಲಸ' ಎಂದು ವಿಕಿಪೀಡಿಯಾ ಸಮಾಲೋಚಕ ಸಂಸ್ಥೆ ಬಿಯುಟ್ಲೆರ್ ವಿಕಿ ರಿಲೇಷನ್ಸ್  ಅಧ್ಯಕ್ಷ ವಿಲಿಯಮ್ ಬಿಯುಟ್ಲೆರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT