ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋರ್ಟಬಲ್ ಡೆಸ್ಕ್ ಇರಲಿ

ಕೈಬರಹ ಕೈಪಿಡಿ- ಭಾಗ 18
Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಿಮ್ಮ ಮಕ್ಕಳ ಕೈಬರಹ ಸುಧಾರಿಸಬೇಕೆಂಬ ತೀವ್ರ ಕಳಕಳಿ ನಿಮಗಿದ್ದರೆ ನೀವು ಅವರಿಗೆ ನೆಲದ ಮೇಲೆ ಕುಳಿತು ಬರೆಯಬಹುದಾದ ಒಂದು ಪೋರ್ಟಬಲ್ (ಎತ್ತಿ ಒಯ್ಯಬಹುದಾದ) ಡೆಸ್ಕ್ ಮಾಡಿಸಿ ಕೊಡಿ. ನೆಲದ ಮೇಲೆ ಚಾಪೆ, ಜಮಖಾನ ಅಥವಾ ಮ್ಯಾಟ್ ಬೇಕಾದರೆ ಹಾಸಿರಬಹುದು.

ಶಾಲೆಯಲ್ಲಿ ಮಕ್ಕಳು ಬರೆಯಲು ಡೆಸ್ಕ್‌ಗಳಿರುತ್ತವೆ. ಆದರೆ ಮನೆಯಲ್ಲಿ ಅವರು ಬರೆಯುವಾಗ ಯಾವುದೇ ಶಿಸ್ತಿಲ್ಲದೆ ನಾನಾ ಭಂಗಿಗಳಲ್ಲಿ ಕುಳಿತು ಯದ್ವಾತದ್ವಾ ಬರೆಯುತ್ತಾರೆ. ಚಿಕ್ಕಂದಿನಿಂದಲೇ ಅವರ ಬರವಣಿಗೆಗೆ ಒಂದು ಶಿಸ್ತನ್ನು ಮೂಡಿಸುವುದು ಅವಶ್ಯಕ. ಇಂತಹ ಶಿಸ್ತಿನಿಂದಾಗಿ ಮುಂದೆ ಅವರು ದೊಡ್ಡವರಾದ ಮೇಲೆ ಬೆನ್ನು ನೋವು, ಸ್ಪಾಂಡಿಲೈಟಿಸ್ ಮುಂತಾದ ತೊಂದರೆ ಅನುಭವಿಸುವ ಸಾಧ್ಯತೆ ತೀರಾ ಕಡಿಮೆ.

ಚಿತ್ರದಲ್ಲಿ ಅಂತಹ ಡೆಸ್ಕ್‌ನ ವಿನ್ಯಾಸ ಮತ್ತು ಅದನ್ನು ತಯಾರಿಸಲು ಬೇಕಾದ ವಸ್ತುಗಳನ್ನು ನೀಡಲಾಗಿದೆ. ಈ ವಿನ್ಯಾಸವನ್ನು ನೀಡಿದರೆ ಯಾವ ಕಾರ್ಪೆಂಟರ್ ಅಥವಾ ಫ್ಯಾಬ್ರಿಕೇಟರ್ ಆದರೂ ಸುಲಭವಾಗಿ ಇಂತಹ ಡೆಸ್ಕ್ ತಯಾರಿಸಿಕೊಡುತ್ತಾರೆ. ಈ ಡೆಸ್ಕನ್ನು ಎಲ್ಲಿ ಬೇಕಾದರೂ ಒಯ್ಯಬಹುದು. ಅಂದರೆ ಮಕ್ಕಳು ಇದನ್ನು ವೆರಾಂಡ, ಹಾಲ್, ಬೆಡ್‌ರೂಂ, ಕಿಚನ್, ಟೆರೇಸ್‌ಗೆ ಬೇಕಾದರೂ ಒಯ್ದು ಅಲ್ಲಿ ಬರೆಯುತ್ತಾ ಕೂಡಬಹುದು.

ಈಗಿನ ಕಾಲದಲ್ಲಿ ಯಾವ ಮಕ್ಕಳು ತಾನೇ ನೆಲದ ಮೇಲೆ ಕುಳಿತು ಬರೆಯುತ್ತಾರೆ ಎಂಬುದು ಕೆಲವರ ಪ್ರಶ್ನೆ. ಆದರೆ ಚಿಕ್ಕಂದಿನಿಂದಲೇ ಅಭ್ಯಾಸ ಮಾಡಿಸಿದರೆ ಇದು ಕಷ್ಟವೇನಲ್ಲ. ಮುಂದೆ ದೊಡ್ಡವರಾದ ಮೇಲೆ ಆರೋಗ್ಯಕ್ಕಾಗಿ ಯೋಗಾಸನ, ಪ್ರಾಣಾಯಾಮ ಮಾಡಬೇಕಾಗಿ ಬಂದರೆ, ಸೋಫಾದ ಮೇಲೆ ಕುಳಿತು ಮಾಡಲು ಸಾಧ್ಯವೇ? ಮುಂದಾಲೋಚನೆಯಿಂದ ನೋಡಿದರೆ ಇದು ತುಂಬಾ ಲಾಭಕರ.

ಈ ಡೆಸ್ಕನ್ನು ಮಂಚದ ಮೇಲೆ ಬೇಕಾದರೂ ಇಟ್ಟುಕೊಂಡು ಬರೆಯಬಹುದು. ಚಪ್ಪಾಳೆ ಹಾಕಿ ಕುಳಿತು ಬರೆದು ಕಾಲು ನೋವಾದರೆ ಇದರ ಕೆಳಗಿನಿಂದ ಕಾಲುಗಳನ್ನು ಚಾಚಿ ಕುಳಿತು ಬರೆಯಬಹುದು (ಚಿತ್ರ ನೋಡಿ). ಗೋಡೆಯ ಪಕ್ಕದಲ್ಲಿ ಹಾಕಿಕೊಂಡರೆ, ಗೋಡೆಗೆ ಒರಗಿ ಕುಳಿತು ಬರೆಯಬಹುದು.

ಇಂತಹ ಡೆಸ್ಕ್ ಪ್ರತಿ ಮನೆಯಲ್ಲೂ ಇದ್ದರೆ ಅದನ್ನು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರ ಮಾಡಬಹುದು. ಹೀಗೆ ಡೆಸ್ಕ್ ಉಪಯೋಗಿಸುವುದರಿಂದ ಬರವಣಿಗೆ ಸುಧಾರಣೆಯಾಗುತ್ತದೋ ಇಲ್ಲವೋ ಎಂಬುದನ್ನು ಪ್ರಯೋಗ ಮಾಡುವ ಸಲುವಾಗಿಯೇ ಇದನ್ನು ಬಳಸಿ ನೋಡಬಹುದು. ನನ್ನ ಅನುಭವದ ಪ್ರಕಾರ ಇಂತಹ ಡೆಸ್ಕ್ ಉಪಯೋಗಿಸಿ ಬರೆಯುವುದು ಆನಂದದಾಯಕ ಹಾಗೂ ಹಿತಕರವಾಗಿರುತ್ತದೆ.

ಈ ಡೆಸ್ಕಿನ ಕಾಲುಗಳಿಗೆ ಮರ, ಜಿ.ಐ. ಪೈಪ್, ಚೌಕದ ಪೈಪ್, ಅಲ್ಯುಮಿನಿಯಂ ಪೈಪ್ ಅಥವಾ ಪ್ಲಾಸ್ಟಿಕ್ ರಿಜಿಡ್ ಪಿ.ವಿ.ಸಿ. ಪೈಪ್ ಉಪಯೋಗಿಸಬಹುದು. ವೇಸ್ಟ್ ತುಂಡುಗಳಿದ್ದರೆ, ಕಾಲುಗಳಿಗೆ ಅವೇ ಸಾಕು. ಡೆಸ್ಕಿನ ಮೇಲ್ಭಾಗದಲ್ಲಿ ಸಾದಾ ಪ್ಲೈವುಡ್ ಅಥವಾ ಕೋಟೆಡ್ ಷೀಟ್ ಹಾಕಬಹುದು. ಇಂತಹ ಡೆಸ್ಕ್‌ಗಳಿಗೆ ಸಾಕಷ್ಟು ಬೇಡಿಕೆ ಬಂದರೆ ಪ್ಲಾಸ್ಟಿಕ್ ಕುರ್ಚಿಗಳನ್ನು ತಯಾರಿಸುವ ಕಂಪನಿಗಳು ಇದನ್ನೂ ತಯಾರಿಸಬಹುದು.

ಎಲ್ಲ ಮಕ್ಕಳೂ ಒಂದೇ ಎತ್ತರ ಇರುವುದಿಲ್ಲ. ಆದ್ದರಿಂದ ಇಂತಹ ಡೆಸ್ಕಿನ ಎತ್ತರವನ್ನು ಮಾರ್ಪಡಿಸುವಂತಿದ್ದರೆ ಒಳ್ಳೆಯದು. ಇದರ ಇಳಿಜಾರಿನ ಕೋನವನ್ನು ಮಾರ್ಪಡಿಸುವಂತಿದ್ದರೂ ಚೆಂದ. ಒಟ್ಟಿನಲ್ಲಿ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು ಸಾಧ್ಯ.

ಮಕ್ಕಳಿರುವ ಮನೆಗೆ ಇಂಥ ಡೆಸ್ಕನ್ನು ಉಡುಗೊರೆಯಾಗಿ ನೀಡುವ ಬಗ್ಗೆಯೂ ನೀವು ಯೋಚಿಸಬಹುದು. ಇದು ಕೇವಲ ಬರೆಯಲು ಅಷ್ಟೇ ಅಲ್ಲ, ಓದಲೂ ಸಹಕಾರಿ. ನಮ್ಮ ಮನೆಯಲ್ಲಿ ಇದನ್ನು ಪೇಪರ್ ಓದುವಾಗ ಮತ್ತು ಲ್ಯಾಪ್ ಟಾಪ್ ಇಟ್ಟುಕೊಂಡು ಕೆಲಸ ಮಾಡಲೂ ಉಪಯೋಗಿಸುತ್ತೇವೆ.

ಮುಂದಿನ ವಾರ: ಕ್ಯಾಲಿಗ್ರಫಿ- ಅಕ್ಷರ ವಿನ್ಯಾಸ ಕಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT