ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಲಿಗಳ ಕಾಟಕ್ಕೆ ಇತಿಶ್ರೀ ಹಾಕಲು ನಿರ್ಧಾರ

ಸಾರ್ವಜನಿಕ ಸ್ಥಳಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಕೆ * ಆಭರಣ ಮೋಹ ಕಡಿಮೆಗೊಳಿಸಲು ಸಲಹೆ
Last Updated 2 ಜುಲೈ 2013, 6:18 IST
ಅಕ್ಷರ ಗಾತ್ರ

ದೇವನಹಳ್ಳಿ: `ಸಾರ್ವಜನಿಕರು ಪ್ರತ್ಯಕ್ಷವಾಗಿ ಕಂಡ ಅಪರಾಧ ಚಟುವಟಿಕೆಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡಿ ಅಪರಾಧಗಳ ತಡೆಗೆ ಸಹಕರಿಸಬೇಕು' ಎಂದು ಪೊಲೀಸ್ ಉಪ ಆಯುಕ್ತ ಎಸ್.ಎಸ್.ನಾಯ್ಕ ತಿಳಿಸಿದರು.

ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಸಾರ್ವಜನಿಕ ಕುಂದುಕೊರತೆ ಮತ್ತು ಅಪರಾಧ ತಡೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, `ಅಪರಾಧ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಸಾರ್ವಜನಿಕರ ಹೆಸರನ್ನು ಗುಪ್ತವಾಗಿ ಇಡಲಾಗುವುದು' ಎಂಬ ಭರವಸೆ ನೀಡಿದರು.

`ಪಟ್ಟಣದಲ್ಲಿ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ, ವರದಕ್ಷಿಣೆ ಕಿರುಕುಳದಂತಹ ಪ್ರಕರಣ ಹೆಚ್ಚುತ್ತಿವೆ. ಸಾರ್ವಜನಿಕರ ಅರಿವನಲ್ಲೇ ನಡೆಯುವ ಇಂತಹ ಕೃತ್ಯಗಳ ಕುರಿತು ಪೊಲೀಸರಿಗೆ ಮುಂಚಿತವಾಗಿ ಮಾಹಿತಿ ದೊರೆತರೆ ಇವುಗಳನ್ನು ತಡೆಯಲು ಸಾಧ್ಯ. ಸಮಾಜದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಯಾರೂ ಅವಕಾಶ ನೀಡಬಾರದು. ಕಾನೂನು ಸುವ್ಯವಸ್ಥೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ' ಎಂದರು.

`ಸಭೆ, ಸಮಾರಂಭಗಳಲ್ಲಿ ಮಹಿಳೆಯರು ಹೆಚ್ಚು ಆಭರಣಗಳನ್ನು ಧರಿಸುವುದು ಒಳಿತಲ್ಲ. ಹಣ ಮತ್ತು ಆಭರಣಗಳನ್ನು ಬ್ಯಾಂಕ್‌ಗಳಲ್ಲಿ ಇಡುವುದು ಸೂಕ್ತ. ಪಟ್ಟಣದ ಆರು ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಲಾಗಿದೆ. ಇದರಿಂದ ಅಪರಾಧಗಳನ್ನು ಗುರುತಿಸಲು ಸುಲಭವಾಗುತ್ತದೆ' ಎಂದರು.

ಮೌಕ್ತಿಕಾಂಭ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಸುವರ್ಣ ಕರ್ನಾಟಕ ಕನ್ನಡ ವೇದಿಕೆ ಅಧ್ಯಕ್ಷ ರವಿ, ಲಯನ್ಸ್ ಮಾಜಿ ಅಧ್ಯಕ್ಷ ಸಿ.ಭಾಸ್ಕರ್, ಹಿಂದುಳಿದ ಜಾತಿ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಅಂಬರೀಷ್ ಮಾತನಾಡಿದರು.

`ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಹೆಣ್ಣು ಮಕ್ಕಳ ಸರ್ಕಾರಿ ಪ್ರೌಢಶಾಲೆ, ಗಿರಿಯಮ್ಮ ವೃತ್ತ, ಸರ್ಕಾರಿ ಕಿರಿಯ ಕಾಲೇಜು ಮುಂಭಾಗ, ಹೊಸ ಬಸ್ ನಿಲ್ದಾಣ ಹಿಂಭಾಗ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಅಡ್ಡಾಡುವುದೇ ದುಸ್ತರ ಎಂಬಂತಾಗಿದೆ. ಈ ಸ್ಥಳಗಳಲ್ಲಿ ವಿದ್ಯಾರ್ಥಿನಿಯರಿಗೆ ಕಾಟ ಕೊಡುವ ಪುಂಡರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ ಸಂಚಾರಿ ವ್ಯವಸ್ಥೆಯೂ ಈ ಪ್ರದೇಶಗಳಲ್ಲಿ ಸಮರ್ಪಕವಾಗಿಲ್ಲ.

ತಾಲ್ಲೂಕು ಕೇಂದ್ರದಲ್ಲಿ ಈವರೆಗೂ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಅವರು ಸಾಮೂಹಿಕವಾಗಿ ಎ.ಸಿ.ಪಿ ಅವರಲ್ಲಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎ.ಸಿ.ಪಿ ಎಸ್.ಎಸ್ ನಾಯ್ಕ, `ಎಲ್ಲಾ ಸಮುದಾಯ ಮತ್ತು ವಿವಿಧ ಸಂಘಟನೆಗಳ ಸಭೆ ನಡೆಸಿ ನಾಗರಿಕ ಸಮಿತಿ ರಚಿಸಲಾಗುವುದು. ಪೋಲಿ ಹುಡುಗರ ಕಾಟ ಹೆಚ್ಚಾಗಿರುವ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು' ಎಂದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ವೆಂಕಟನಾರಾಯಣಪ್ಪ, ಉಪಾಧ್ಯಕ್ಷ ಮುನಿಶ್ಯಾಮಪ್ಪ, ಬಿ.ಜೆ.ಪಿ ರಾಷ್ಟ್ರೀಯ ಪರಿಷತ್ ಸದಸ್ಯ ಗುರುಸ್ವಾಮಿ, ವಿ.ಎಚ್.ಪಿ ತಾಲ್ಲೂಕು ಅಧ್ಯಕ್ಷ ರಾಜಮಣಿ, ಪುರಸಭೆ ಸದಸ್ಯ ಮಂಜುನಾಥ್, ಶಶಿಕುಮಾರ್, ತಾಲ್ಲೂಕು ವರ್ತಕರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ನಾಗರಾಜ್, ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಮುನಿರಾಜು, ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿ ರವೀಂದ್ರ, ಪೊಲೀಸ್ ಇನ್‌ಸ್ಪೆಕ್ಟರ್ ಕೃಷ್ಣಮೂರ್ತಿ, ಪಿಎಸ್ಸೈ ನಂದೀಶ್, ದೇವಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT