ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರ ಕಡೆಗಣನೆ: ವೃದ್ಧಾಶ್ರಮಗಳ ಹೆಚ್ಚಳ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಮಕ್ಕಳು ಹೆತ್ತವರನ್ನು ಬೀದಿಗೆ ತಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ನಮ್ಮ ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಬೆಳೆಯುತ್ತಿದೆ. ಇದು ನಮ್ಮ ಸಂಸ್ಕೃತಿಯಲ್ಲ~ ಎಂದು ಹೆಚ್ಚುವರಿ ಕಾನೂನು ಕಾರ್ಯದರ್ಶಿ ದೇಶಪಾಂಡೆ ಹೇಳಿದರು.

ನೈಟಿಂಗೇಲ್ಸ್ ಪ್ರಾದೇಶಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರವು ಶುಕ್ರವಾರ ಹೋಟೆಲ್ ರಿಗಾಲಿಸ್‌ನಲ್ಲಿ ಏರ್ಪಡಿಸಿದ್ದ `ವೃದ್ಧಾಶ್ರಮಗಳಿಗೆ ಕನಿಷ್ಠ ಗುಣಮಟ್ಟ ಮತ್ತು ನಿಯಂತ್ರಣ ವ್ಯವಸ್ಥೆ~ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಎಲ್ಲ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ತುಂಬ ಪ್ರೀತಿಸಿ, ಅವರಿಗೆ ಭವಿಷ್ಯ ರೂಪಿಸಿ ಕೊಡುತ್ತಾರೆ. ಆದರೆ, ಅದೇ ಮಕ್ಕಳು ವಯಸ್ಸಾದ ತಮ್ಮ ತಂದೆ-ತಾಯಿಗಳನ್ನು ನೋಡಿಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ. ವಯಸ್ಸಾದವರು ಭಾರ ಎಂಬ ಭಾವ ಮೂಡುತ್ತಿದೆ~ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

`ಒಂದು ಕುಟುಂಬದಲ್ಲಿ ಹೊಂದಾಣಿಕೆ ಯಿದ್ದರೆ ಅಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಕುಟುಂಬದ ಎಲ್ಲ ಸದಸ್ಯರನ್ನೂ ಸಮಾನವಾಗಿ ನೋಡುವ ಮತ್ತು ಪರಸ್ಪರರನ್ನು ಗೌರವಿಸುವ ಭಾವನೆ ಎಲ್ಲರಲ್ಲಿ ಬೆಳೆದು ಬರಬೇಕು. ಹಾಗಾದಾಗಲೇ ಈ ಸಮಸ್ಯೆಗೆ ಒಂದು ಪರಿಹಾರ ದೊರಕುತ್ತದೆ~ ಎಂದರು.

ವಿಭಿನ್ನ ಸಾಮರ್ಥ್ಯವುಳ್ಳ ಮತ್ತು ಹಿರಿಯ ನಾಗರಿಕರ ಸಬಲೀಕರಣ ವಿಭಾಗದ ನಿರ್ದೇಶಕ ವಿ.ಎ. ಮಾಚಕನೂರು, `ಬದಲಾದ ಆರ್ಥಿಕ ಪರಿಸ್ಥಿತಿಯಲ್ಲಿ ಮತ್ತು ಕುಟುಂಬ ವ್ಯವಸ್ಥೆಯಲ್ಲಿ ವೃದ್ಧಾಶ್ರಮಗಳು ಅನಿವಾರ್ಯವಾಗಿವೆ ಹಾಗೂ ಇಂದಿನ ಅಗತ್ಯಗಳಾಗಿವೆ~ ಎಂದರು.

`ಇಂದಿನ ವೃದ್ಧಾಶ್ರಮಗಳು ಅಲ್ಲಿ ಬರುವ ವೃದ್ಧರಿಗೆ ಆರೋಗ್ಯ, ಸಂತೋಷವನ್ನು ನೀಡಬೇಕು. ಅವರು ತಮ್ಮ ಮನೆಯಲ್ಲಿರುವಂತೆ ಅವರಿಗೆ ಯಾವಾಗಲೂ ಅನಿಸುತ್ತಿರಬೇಕು. ಅಂತಹ ವಾತಾವರಣವನ್ನು ಅಲ್ಲಿ ನಿರ್ಮಿಸಬೇಕು~ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನೈಟಿಂಗೇಲ್ಸ್ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ರಾಧಾ ಎಸ್.ಮೂರ್ತಿ, ಕಾನೂನು ಸಂಸದೀಯ ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿ ಬಾಬು, ಕಾನೂನು ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಬೋರೇಗೌಡ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT