ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕ ಮಹಿಳೆ ಸಾವು, ನಿರ್ಲಕ್ಷ್ಯ ಆರೋಪ: ಶವವಿಟ್ಟು ಪ್ರತಿಭಟನೆ

Last Updated 24 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆಲಸ ನಿರ್ವಹಣೆ ವೇಳೆ ಆಯ ತಪ್ಪಿ ಬಿದ್ದು ಗಾಯಗೊಂಡಿದ್ದ ಪೌರ ಕಾರ್ಮಿಕರಾದ ಪಿಂಚಾಲಮ್ಮ (46) ಅವರು ಸಾವನ್ನಪ್ಪಿರುವ ವಿಷಯ ಮಂಗಳವಾರ ಬೆಳಕಿಗೆ ಬಂದಿದೆ. ಅವರ ಸಾವಿಗೆ ಬಿಬಿಎಂಪಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘದ ಸದಸ್ಯರು ಬಿಬಿಎಂಪಿ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ಮಾಡಿದರು.

`ಪಿಂಚಾಲಮ್ಮ ಎರಡು ದಿನಗಳ ಹಿಂದೆಯೇ ಸಾವನ್ನಪ್ಪಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯರು ಈ ಸುದ್ದಿಯನ್ನು ಕುಟುಂಬದವರಿಗೆ ತಿಳಿಸಿಲ್ಲ. ಚಿಕಿತ್ಸೆ ನೀಡುತ್ತಿರುವ ನೆಪದಲ್ಲಿ ಮೃತರ ಮಕ್ಕಳಿಂದ 50 ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ. ಪಿಂಚಾಲಮ್ಮ ಮೃತಪಟ್ಟಿರುವ ವಿಷಯವನ್ನು ಮಂಗಳವಾರ ಬೆಳಿಗ್ಗೆ ಬಹಿರಂಗಪಡಿಸಿ ಮತ್ತೆ ಮೂವತ್ತು ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಸಾವಿನ ಕಾರಣವನ್ನು ಮಾತ್ರ ಹೇಳುತ್ತಿಲ್ಲ~ ಎಂದು ಸಂಘದ ಕಾರ್ಯದರ್ಶಿ ಗೌರಿ ಆಕ್ರೋಶ ವ್ಯಕ್ತಪಡಿಸಿದರು.

`ಆಂಧ್ರಪ್ರದೇಶ ಮೂಲದ ಪಿಂಚಾಲಮ್ಮ, ಹತ್ತು ವರ್ಷಗಳಿಂದ ವಸಂತನಗರ ವಲಯದಲ್ಲಿ (ವಾರ್ಡ್ ಸಂಖ್ಯೆ 93) ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.   ಶುಕ್ರವಾರ (ಜು.20)  ತಲೆ ಸುತ್ತಿ ಬಿದ್ದ ಅವರನ್ನು ಸಹ ಕಾರ್ಮಿಕರು ಆಸ್ಪತ್ರೆಗೆ ದಾಖಲಿಸಿದ್ದರು.
 
ಆದರೆ, ಪಾಲಿಕೆ ವತಿಯಿಂದ ಚಿಕಿತ್ಸೆಗೆ ಯಾವುದೇ ನೆರವು ದೊರೆಯಲಿಲ್ಲ. ಪಾಲಿಕೆ ನಿರ್ಲಕ್ಷ್ಯದಿಂದ ಅಮಾಯಕ ಕಾರ್ಮಿಕ ಮಹಿಳೆ ಪ್ರಾಣ ಕಳೆದುಕೊಳ್ಳಬೇಕಾಯಿತು~ ಎಂದು ಸಂಘದ ಅಧ್ಯಕ್ಷ ಎಸ್.ಬಾಲನ್ ಆಕ್ರೋಶ ವ್ಯಕ್ತಪಡಿಸಿದರು.

`ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಯಾವೊಬ್ಬ ಪಾಲಿಕೆ ಅಧಿಕಾರಿಯೂ ಆಸ್ಪತ್ರೆಗೆ ಭೇಟಿ ನೀಡಲಿಲ್ಲ. ಪಿಂಚಲಮ್ಮ ಮೃತಪಟ್ಟಿರುವ ಸುದ್ದಿ ತಿಳಿದಾಗಿನಿಂದ ವಸಂತನಗರದ ಪಾಲಿಕೆ ಗುತ್ತಿಗೆದಾರ ಗೋಪಿನಾಥ್ ರೆಡ್ಡಿ ಅವರು ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ~ ಎಂದು ಬಾಲನ್ ಆರೋಪಿಸಿದರು.

ಪ್ರತಿಭಟನೆ ನಂತರ ಶವವನ್ನು ಅಂತ್ಯಕ್ರಿಯೆಗಾಗಿ ಆಂಧ್ರಪ್ರದೇಶಕ್ಕೆ ಕೊಂಡೊಯ್ಯಲಾಯಿತು. ಘಟನೆ ಸಂಬಂಧ ಎಸ್. ಬಾಲನ್ ಅವರು ಗುತ್ತಿಗೆದಾರ ಗೋಪಿನಾಥ್ ರೆಡ್ಡಿ ಮತ್ತು ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮೃತ ಕುಟುಂಬಕ್ಕೆ ಪರಿಹಾರ
`ಮೇಯರ್ ಡಿ.ವೆಂಕಟೇಶ್‌ಮೂರ್ತಿ ಅವರು ಮೃತರ ಕುಟುಂಬಕ್ಕೆ ಮೂವತ್ತು ಸಾವಿರ ರೂಪಾಯಿ ಪರಿಹಾರ ನೀಡಿದ್ದಾರೆ. ಪಾಲಿಕೆ ನಿರ್ಲಕ್ಷ್ಯದಿಂದಲೇ ಅವರು ಸಾವನ್ನಪ್ಪಿದ್ದರೆ ವಸಂತನಗರ ವಾರ್ಡ್‌ನ ಗುತ್ತಿಗೆದಾರ ಗೋಪಾಲರೆಡ್ಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅವರೊಂದಿಗೆ ಚರ್ಚಿಸಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ~ ಎಂದು ಸಂಘದ ಕಾರ್ಯದರ್ಶಿ ಗೌರಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT