ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕ ಪೂಜಾರಿಗಳು!

Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಗರ್ಭಗುಡಿಯಲ್ಲಿ ಬೆಚ್ಚಗೆ ನಿಂತಿರುವ ದೇವರಿಗೂ ಆ ದೇವಾಲಯದೊಳಕ್ಕೆ ಪ್ರವೇಶಿಸಲೂ ನಿರ್ಬಂಧ ಇರುವ ಪೌರಕಾರ್ಮಿಕರಿಗೂ ಎತ್ತಣಿಂದೆತ್ತ ಸಂಬಂಧ! ಗರ್ಭಗುಡಿಗೆ ಪ್ರವೇಶ ಮಾಡಲು ಸಾಧ್ಯವಿಲ್ಲದೇ ಇರುವವರು ದೇವರ ಪೂಜೆಯನ್ನು ಮಾಡಿ ಪೂಜಾರಿಗಳು ಎಂದು ಹೇಳಿಕೊಳ್ಳಬಹುದೇ? ಅಂತಹ ಪೂಜಾರಿಗಳೂ ಇರಬಹುದೇ?
ಹೌದು ಸ್ವಾಮಿ ಇದ್ದಾರೆ. ಮೈಸೂರಿನಲ್ಲಿಯೇ ಇದ್ದಾರೆ. ಅವರು ಪೌರಕಾರ್ಮಿಕರೂ ಹೌದು. ಪೂಜಾರಿಗಳೂ ಹೌದು.

ನಗರದ ಹೊಲಸನ್ನೆಲ್ಲಾ ತೆಗೆಯುವ, ಒಳಚರಂಡಿಗೆ ಇಳಿದು ಸ್ವಚ್ಛ ಮಾಡುವ, ಕಟ್ಟಿಕೊಂಡ ಸಂಡಾಸು ಗುಂಡಿಗಳನ್ನು ಸರಿಪಡಿಸುವ ಪೌರ ಕಾರ್ಮಿಕರಲ್ಲಿಯೂ ಪೂಜಾರಿಗಳಿದ್ದಾರೆ. ಇವರು ಕೇವಲ ದೇವರ ಮೂರ್ತಿಯ ಮೇಲೆ ಇದ್ದ ಹೂವುಗಳನ್ನು ಎತ್ತಿ ಹಾಕಿ, ನೀರು ಹಾಕಿ ತೊಳೆದು ಹೊಸ ಹೂವುಗಳನ್ನು ಏರಿಸಿ, ಧೂಪ ಹಚ್ಚಿ, ಮಂಗಳಾರತಿ ಬೆಳಗಿ ಪೂಜೆ ಸಲ್ಲಿಸುವವರಲ್ಲ. ಈ ಎಲ್ಲ ಕ್ರಿಯೆಯನ್ನು ಹೇಗೆ ಮಾಡಬೇಕು ಎಂದು ಶಾಸ್ತ್ರೋಕ್ತವಾಗಿ ಕಲಿತವರು.

ಪೂಜಾ ಮಂತ್ರ, ಅಭಿಷೇಕದ ಮಂತ್ರ, ಮಂಗಳಾರತಿಯ ಮಂತ್ರ, ಶ್ಲೋಕಗಳೆಲ್ಲ ಇವರಿಗೆ ಗೊತ್ತು. ಮಡಿ ಉಟ್ಟು ಮಂತ್ರ ಹೇಳುತ್ತಾ ಗಂಟೆ ಅಲುಗಾಡಿಸುತ್ತಾ ಕೈಯಲ್ಲಿ ಮಂಗಳಾರತಿ ಹಿಡಿದು ನಿಂತ ಇವರು ಬ್ರಾಹ್ಮಣ ಪುರೋಹಿತರ ಹಾಗೆಯೇ ಮಂತ್ರ ಹೇಳಬಲ್ಲರು. ಹೀಗೆ ಶಾಸ್ತ್ರೋಕ್ತವಾಗಿ ದೇವರ ಪೂಜೆ ಮಂತ್ರಗಳನ್ನು ಕಲಿತ 7 ಮಂದಿ ಪೌರ ಕಾರ್ಮಿಕ ಯುವಕರು ಮೈಸೂರಿನಲ್ಲಿದ್ದಾರೆ.

ಪೌರಕಾರ್ಮಿಕರು ಮಂತ್ರ ಕಲಿತ ಕತೆಯೇ ವಿಭಿನ್ನವಾಗಿದೆ. ಮೈಸೂರು ಎಚ್.ಡಿ. ಕೋಟೆ ರಸ್ತೆಯಲ್ಲಿರುವ ನಲ್ಲೂರು ಶೆಡ್‌ನಲ್ಲಿ ಒಂದು ರಾಮಮಂದಿರ ಇತ್ತು. ನಲ್ಲೂರು ಶೆಡ್‌ನಲ್ಲಿ ಇರುವವರೆಲ್ಲಾ ಪೌರಕಾರ್ಮಿಕರು. ಅದರಲ್ಲಿಯೂ ತೆಲುಗು ಮಾತನಾಡುವ ಪೌರಕಾರ್ಮಿಕರೇ ಜಾಸ್ತಿ. ಅತ್ಯಂತ ಹಳೆಯದಾದ ರಾಮಮಂದಿರವನ್ನು ಮೈಸೂರು ಮಹಾನಗರ ಪಾಲಿಕೆ ಪುನರ್ ನಿರ್ಮಾಣ ಮಾಡಿತು. ದೇವಾಲಯ ಕಟ್ಟಡ ಎದ್ದು ನಿಂತ ಮೇಲೆ ಅಲ್ಲಿ ದೇವರನ್ನು ಪ್ರತಿಷ್ಠಾಪನೆ ಮಾಡುವುದು ಹೇಗೆ ಎನ್ನುವ ಚಿಂತೆ ಪೌರಕಾರ್ಮಿಕ ಮುಖಂಡರನ್ನು ಕಾಡಿತು. ಆಗ ಅವರಿಗೆ ಹೊಳೆದ ಹೆಸರು, ಗಣಪತಿ ಸಚ್ಚಿದಾನಂದ ಸ್ವಾಮೀಜಿ.

ಪೌರ ಕಾರ್ಮಿಕರಿಗೆ ಅನ್ನದಾನ, ಸಾಮೂಹಿಕ ವಿವಾಹ ಮುಂತಾದವುಗಳನ್ನು ಮಾಡಿಸುತ್ತಿದ್ದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ತಮಗೆ ನೆರವು ನೀಡಬಲ್ಲರು ಎಂದುಕೊಂಡ ಪೌರಕಾರ್ಮಿಕ ಮುಖಂಡರು ಸ್ವಾಮೀಜಿ ಅವರನ್ನು ಭೇಟಿ ಮಾಡಿದರು. `ತಮ್ಮ ದೇವಾಲಯಕ್ಕೆ ಬಂದು ದೇವರ ಪ್ರಾಣ ಪ್ರತಿಷ್ಠಾಪನೆ ಮಾಡಿಕೊಡಬೇಕು, ದೇವರ ಮೂರ್ತಿಯನ್ನೂ ತಾವೇ ನೀಡಬೇಕು' ಎಂದು ವಿನಂತಿಸಿಕೊಂಡರು.

ಅದಕ್ಕೆ ಒಪ್ಪಿಕೊಂಡ ಸ್ವಾಮೀಜಿ 2003ರ ಏಪ್ರಿಲ್ 20ರಂದು ನಲ್ಲೂರು ಶೆಡ್‌ನಲ್ಲಿರುವ ರಾಮಮಂದಿರಕ್ಕೆ ರಾಮನ ಮೂರ್ತಿಯನ್ನೂ ನೀಡಿ ದೇವರ ಪ್ರತಿಷ್ಠಾಪನೆ ಮಾಡಿಕೊಟ್ಟರು. ಸ್ವಾಮೀಜಿ ನೇತೃತ್ವದಲ್ಲಿ ಮೂರು ದಿನಗಳ ಪ್ರತಿಷ್ಠಾಪನಾ ಮಹೋತ್ಸವ ನಡೆಯಿತು. ದೇವಾಲಯಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಮಠದಿಂದಲೇ ನೀಡಿದರು.

ದೇವರು ಬಂದದ್ದಾಯಿತು! ಪೂಜಾರಿ?
ವಿಜೃಂಭಣೆಯಿಂದ ದೇವಾಲಯದ ಉದ್ಘಾಟನೆ ಆಯಿತು, ಆದರೆ ಇದಕ್ಕೆ ದಿನಾ ಪೂಜೆ ಮಾಡುವವರು ಯಾರು ಎಂಬ ಪ್ರಶ್ನೆ ಪೌರ ಕಾರ್ಮಿಕ ಮುಖಂಡರಿಗೆ ಎದುರಾಯಿತು. ಪೌರ ಕಾರ್ಮಿಕರ ಕಾಲೋನಿಯಲ್ಲಿರುವ ದೇವಾಲಯದಲ್ಲಿ ಪೂಜೆ ಮಾಡಲು ಬ್ರಾಹ್ಮಣ ಪುರೋಹಿತರು ಬರುವುದಿಲ್ಲ. ಪೌರ ಕಾರ್ಮಿಕರಲ್ಲಿಯೇ ಪೂಜೆ ಮಾಡುವವರು ಯಾರೂ ಇರಲಿಲ್ಲ. ಈ ಸಂಕಷ್ಟವನ್ನು ಅವರು ಮತ್ತೆ ಸ್ವಾಮೀಜಿ ಅವರ ಮುಂದಿಟ್ಟರು.

`ನಿಮ್ಮಲ್ಲಿಯೇ ಯಾರಾದರೂ ಮಂತ್ರ ಕಲಿಯುವವರು ಇದ್ದರೆ ಆಶ್ರಮಕ್ಕೆ ಕಳುಹಿಸಿ. ನಾವು ಅವರಿಗೆ ಮಂತ್ರ ಕಲಿಸುತ್ತೇವೆ. ನಂತರ ಅವರೇ ಪೂಜೆಯನ್ನು ಮಾಡಿಕೊಂಡು ಹೋಗಲಿ' ಎಂದು ಸ್ವಾಮೀಜಿ ಸಲಹೆ ಮಾಡಿದರು. ಅದರಂತೆ ಮಹೇಶ, ವಿನಾಯಕ, ಮಾತಯ್ಯ, ಶಿವು, ರಮೇಶ, ಅರುಣ್, ಸೋಮಶೇಖರ್ ಎಂಬ 7 ಯುವಕರು ಮಂತ್ರ ಕಲಿಯಲು ಸಿದ್ಧರಾದರು.

ಹನುಮಂತರಾವ್ ಎಂಬ ವಿದ್ವಾಂಸರನ್ನು ಪೌರ ಕಾರ್ಮಿಕ ಯುವಕರಿಗೆ ಮಂತ್ರ ಕಲಿಸುವುದಕ್ಕಾಗಿ ಸ್ವಾಮೀಜಿ ನೇಮಿಸಿದರು. ಈ ಯುವಕರ ಮನೆ ಭಾಷೆ ತೆಲುಗು. ಇಲ್ಲಿಯೇ ಹುಟ್ಟಿ ಬೆಳೆದಿದ್ದರಿಂದ ಕನ್ನಡ ಬರುತ್ತಿತ್ತು. ಸ್ವಚ್ಛತೆಯನ್ನೇ ಕಾಣದ ಮನೆ, ಬೀದಿಯಲ್ಲಿ ಬೆಳೆದವರು. ತಂದೆ ತಾಯಿಗಳು ಈಗಲೂ ನಗರದ ಸ್ವಚ್ಛತೆಯಲ್ಲಿ ತೊಡಗಿಕೊಂಡವರು. ತಂದೆ ಒಳಚರಂಡಿ ಸ್ವಚ್ಛ ಮಾಡುವವರು. ಇಂತಹವರ ಭಾಷಾ ಜ್ಞಾನ ಹೇಗಿರಬಹುದು? ಅವರ ಬಾಯಲ್ಲಿ ಸಂಸ್ಕೃತ ಶ್ಲೋಕಗಳನ್ನು ಹೊರಡಿಸುವುದು ಹೇಗೆ ಎನ್ನುವ ಚಿಂತೆ ಹನುಮಂತರಾವ್ ಅವರನ್ನು ಕಾಡಿತು.

ಈ ಯುವಕರಲ್ಲಿ ಯಾರೂ 10ನೇ ತರಗತಿ ದಾಟಿದವರಿಲ್ಲ. ಶಾಲೆಗೆ ಹೋಗುವ ವಯಸ್ಸಿನಲ್ಲಿಯೇ ಕೈಯಲ್ಲಿ ಕಸಬರಿಗೆ ಹಿಡಿದುಕೊಂಡವರು.

ಸುಮಾರು ಮೂರೂವರೆ ವರ್ಷಗಳ ಕಾಲ ನಿರಂತರವಾಗಿ ಯುವಕರ ಮಂತ್ರ ಅಭ್ಯಾಸ ನಡೆಯಿತು. ತಕ್ಕಮಟ್ಟಿಗೆ ಅವರು ಪೂಜಾರಿ ಕೆಲಸ ಮಾಡಲು ಸಿದ್ಧರಾದರು. ಗಣಪತಿ ಆಶ್ರಮದಲ್ಲಿ ಅವರಿಗೆ ಯಾವುದಕ್ಕೂ ನಿರ್ಬಂಧ ಇರಲಿಲ್ಲ. ಅಲ್ಲಿನ ದೇವಾಲಯಕ್ಕೆ ಅವರಿಗೆ ಮುಕ್ತ ಪ್ರವೇಶವಿತ್ತು. ಸಹ ಪಂಕ್ತಿ ಭೋಜನದ ಅವಕಾಶವಿತ್ತು. `ಆಶ್ರಮದ ಆವರಣದಲ್ಲಿಯೇ ಇರುವ ವೆಂಕಟರಮಣ ದೇವಾಲಯದ ಗರ್ಭಗುಡಿಯೊಂದನ್ನು ಬಿಟ್ಟು ಉಳಿದ ಎಲ್ಲ ಕಡೆ ತಮಗೆ ಪ್ರವೇಶವಿತ್ತು' ಎನ್ನುತ್ತಾರೆ ಮಹೇಶ.

ಮಹೇಶನ ತಂದೆ ಪೌರಕಾರ್ಮಿಕನಾಗಿ ಸೇವೆ ಸಲ್ಲಿಸಿ ಈಗ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೇಸ್ತ್ರಿಯಾಗಿದ್ದಾರೆ. ನಲ್ಲೂರು ಶೆಡ್‌ನಲ್ಲಿರುವ ರಾಮ ಮಂದಿರದ ಜವಾಬ್ದಾರಿ ಅವರ ಮೇಲೇ ಇತ್ತು. ತಂದೆಯ ಕಾಲದಿಂದಲೂ ಅದನ್ನು ಅವರೇ ನೋಡಿಕೊಳ್ಳುತ್ತಿದ್ದರು. ಇದರಿಂದಾಗಿ ಮಹೇಶ ಸಹಜವಾಗಿಯೇ ರಾಮಮಂದಿರದ ಪೂಜಾರಿಯಾದರು.

ಪ್ರತಿ ದಿನ ಮಡಿ ವಸ್ತ್ರ ತೊಟ್ಟು ರಾಮ ದೇವರ ಪೂಜೆ ಮಾಡತೊಡಗಿದರು. ಪ್ರತಿ ಶನಿವಾರ ವಿಶೇಷ ಪೂಜೆಯನ್ನೂ ನಡೆಸಲು ಆರಂಭಿಸಿದರು. ವಿನಾಯಕ ಎನ್ನುವವರು ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಆರಂಭಿಸಿದರು. ನಲ್ಲೂರು ಶೆಡ್‌ನಲ್ಲಿ ಒಟ್ಟು ನಾಲ್ಕು ದೇವಾಲಯಗಳಿವೆ. ಅವುಗಳ ಪೂಜೆ ಜವಾಬ್ದಾರಿ ಇವರ ಹೆಗಲಿಗೆ ಬಿತ್ತು.

ಪೂಜೆಯೊಂದಿಗೆ ಕಾರ್ಮಿಕ ಕಾಯಕ
ಮಹೇಶ್ ಮತ್ತು ವಿನಾಯಕ- ಈ ಇಬ್ಬರಿಗೆ ಸಿಕ್ಕ ಭಾಗ್ಯ ಉಳಿದ ಐವರಿಗೆ ಸಿಗಲಿಲ್ಲ. ದೇವರ ಪೂಜೆ ಮಂತ್ರಗಳನ್ನು ಕಲಿತಿದ್ದಾರೆ ಎಂದು ಮೈಸೂರಿನ ಯಾವುದೇ ದೇವಾಲಯಗಳಲ್ಲಿ ಇವರಿಗೆ ಮುಕ್ತ ಅವಕಾಶ ದೊರಕಲಿಲ್ಲ. ಮಹೇಶ ಮತ್ತು ವಿನಾಯಕ ದೇವಾಲಯದಲ್ಲಿ ಪೂಜಾರಿಗಳಾಗಿದ್ದರೂ ಅದು ಅವರ ಹೊಟ್ಟೆ ತುಂಬಿಸಲಿಲ್ಲ.

ಯಾಕೆಂದರೆ ಈ ದೇವಾಲಯಗಳು ಅವರ ಕಾಲೋನಿಯಲ್ಲಿರುವ ಸಣ್ಣ ಸಣ್ಣ ಗುಡಿಗಳಷ್ಟೆ. ಅಲ್ಲಿ ಜೀವನೋಪಾಯಕ್ಕೆ ಬೇಕಾದಷ್ಟು ಆದಾಯ ಇರಲಿಲ್ಲ. ಈ ದೇವಾಲಯಗಳಿಗೆ ಹೊರಗಿನಿಂದ ಬರುವ ಭಕ್ತರು ಕಡಿಮೆ. ಕಾಲೋನಿಯಲ್ಲಿ 80 ಮನೆಗಳಿದ್ದು ಒಂದೊಂದು ಮನೆಯವರು ಒಂದೊಂದು ದಿನ ಪೂಜೆ ಮಾಡಿಸುತ್ತಾರೆ. ಆರತಿ ತಟ್ಟೆಯಲ್ಲಿ ಬೀಳುವ ಹಣದಿಂದ ಹಿಡಿದು ದೇವಾಲಯ ಹುಂಡಿಗೆ ಬರುವ ಹಣವೆಲ್ಲಾ ದೇವಾಲಯ ಸಮಿತಿಗೆ ಹೋಗುತ್ತದೆ. ಅದಕ್ಕೇ ವಿನಾಯಕ, ದೇವರ ಪೂಜೆ ಮಾಡುತ್ತಲೇ ಪೌರ ಕಾರ್ಮಿಕ ಕೆಲಸವನ್ನೂ ಮಾಡುತ್ತಾರೆ. ಅದೂ ಗುತ್ತಿಗೆ ಕಾರ್ಮಿಕರಾಗಿ. ಮಹೇಶ ಕೂಡ ದಿನಗೂಲಿ ಕೆಲಸ ಮಾಡುತ್ತಾರೆ.

ಉಳಿದ 5 ಮಂದಿಗೆ ಮಂತ್ರ ಬರುತ್ತದೆ. ಆದರೆ ಅವರನ್ನು ಯಾರೂ `ನಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸು, ನಮ್ಮ ದೇವರಿಗೆ ಇವತ್ತೊಂದು ದಿನ ಪೂಜೆ ಮಾಡು' ಎಂದು ಕರೆಯಲಿಲ್ಲ. ಶೈಕ್ಷಣಿಕ ಹಿನ್ನೆಲೆಯೂ ಇಲ್ಲದೇ ಇರುವುದರಿಂದ ಅವರೂ ಕೂಡ ಈಗ ದಿನಗೂಲಿ ಕೆಲಸಗಾರರೇ ಆಗಿದ್ದಾರೆ.

2003ರಲ್ಲಿ ಕಲಿತ ಮಂತ್ರಗಳೆಲ್ಲಾ ಈಗ ಮರೆತು ಹೋಗಿವೆ. ಹಾಗಾದರೆ ಮಂತ್ರ ಕಲಿತಿದ್ದರಿಂದ ಯಾವುದೇ ಲಾಭವಾಗಲಿಲ್ಲವೇ? ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಹನುಮಂತರಾವ್ ಪ್ರಯತ್ನವೆಲ್ಲಾ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾಯಿತೇ ಎಂದು ಕೇಳಿದರೆ `ಇಲ್ಲ, ನಮಗೆ ಬಹಳಷ್ಟು ಲಾಭವಾಗಿದೆ' ಎನ್ನುತ್ತಾರೆ ಮಹೇಶ ಮತ್ತು ಮಾತಯ್ಯ.

ದಲಿತರಿಗೆ ದೇವಾಲಯದಲ್ಲಿ ಪ್ರವೇಶ ನಿರಾಕರಿಸುವ ದಿನಮಾನದಲ್ಲಿ ಮಂತ್ರ ಕಲಿಯುವುದು, ಪೂಜೆ ಮಾಡುವುದು ಸುಲಭದ ವಿಷಯವಲ್ಲ. ನೀರು ಇಳಿಯದ ಗಂಟಲಲ್ಲಿ ಕಡುಬನ್ನು ಇಳಿಸಬಹುದು, ಶುದ್ಧ ಭಾಷೆಯೇ ಗೊತ್ತಿಲ್ಲದವನ ಬಾಯಲ್ಲಿ ಸಂಸ್ಕೃತ ಮಂತ್ರಗಳನ್ನು ಹೊರಡಿಸಬಹುದು. ಆದರೆ ಮನಸ್ಸಿನ ಬಾಗಿಲನ್ನು ಮುಚ್ಚಿಕೊಂಡ ಮನುಷ್ಯನಲ್ಲಿ ಜಾತಿಯ ಭಾವನೆಯನ್ನು ಹೋಗಲಾಡಿಸುವುದು ಕಷ್ಟ ಸಾಧ್ಯ.

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಒಳ್ಳೆಯ ಭಾವದಿಂದಲೇ ನಮಗೆ ಮಂತ್ರಗಳನ್ನು ಹೇಳಿಕೊಟ್ಟರೂ ಸಮಾಜ ಅದನ್ನು ಸ್ವೀಕರಿಸಲು ಸಿದ್ಧವಾಗಿಲ್ಲ. ನಾವು ಮಂತ್ರ ಹೇಳಿದರೂ ಅದನ್ನು ಕೇಳಲು ಮೇಲ್ವರ್ಗದವರು ಸಿದ್ಧರಿಲ್ಲ. ಆದರೂ ಮಂತ್ರ ಪಠಣ ನಮ್ಮ ಬದುಕಿನಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ ಎನ್ನುತ್ತಾರೆ ಅವರು.

`ಕೊಳಕು ಪರಿಸರದಲ್ಲಿಯೇ ಬೆಳೆದ ನಮಗೆ ಸ್ವಚ್ಛತೆಯ ಕಲ್ಪನೆಯೇ ಇರಲಿಲ್ಲ. ದಿನಾ ಯಾಕೆ ಸ್ನಾನ ಮಾಡಬೇಕು ಎನ್ನುವುದರ ಗುಟ್ಟು ಗೊತ್ತಿರಲಿಲ್ಲ. ಶಾಲೆಗೆ ಸರಿಯಾಗಿ ಹೋಗದೇ ಇರುವುದರಿಂದ ನಮ್ಮ ಭಾಷೆ ಶುದ್ಧವಾಗಿರಲಿಲ್ಲ. ಯಾರ ಜೊತೆ ಹೇಗೆ ಮಾತನಾಡಬೇಕು ಎನ್ನುವುದೂ ಗೊತ್ತಿರಲಿಲ್ಲ. ಆದರೆ ಮೂರೂವರೆ ವರ್ಷಗಳ ಕಾಲ ನಾವು ಆಶ್ರಮಕ್ಕೆ ಹೋಗಿ ಮಂತ್ರ ಕಲಿತಿದ್ದರಿಂದ ನಮ್ಮ ಬದುಕಿನಲ್ಲಿ ಬೆಳಕು ಮೂಡಿದೆ. ನಮ್ಮ ಭಾಷೆ ಸುಧಾರಿಸಿದೆ.

ಆಶ್ರಮದ ಬದುಕು ಹೆಚ್ಚು ನಾಗರಿಕವಾಗಿ ನಡೆದುಕೊಳ್ಳುವುದನ್ನು ಹೇಳಿಕೊಟ್ಟಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಮುಂದೆ ತರಬೇಕು ಎನ್ನುವುದನ್ನು ಕಲಿಸಿದೆ. ಯಾವುದೇ ಕಾರಣಕ್ಕೂ ನಮ್ಮ ಮಕ್ಕಳು ಪೌರ ಕಾರ್ಮಿಕರಾಗದಂತೆ ನೋಡಿಕೊಳ್ಳಬೇಕು ಎನ್ನುವುದನ್ನು ಹೇಳಿಕೊಟ್ಟಿದೆ' ಎನ್ನುತ್ತಾರೆ.

`ನಿಜ. ನಮಗೆ ಪೂಜಾರಿಯ ಕೆಲಸವನ್ನು ಯಾರೂ ಕೊಡಲಿಲ್ಲ. ಅದನ್ನು ಕೊಡಿ ಎಂದು ನಾವು ಕೇಳುತ್ತಲೂ ಇಲ್ಲ. ಆದರೆ ಈಗ ಪೌರಕಾರ್ಮಿಕರ ಕೆಲಸ ಮಾಡಲು ಮನಸ್ಸು ಒಪ್ಪುತ್ತಿಲ್ಲ. ಬೇರೆ ಕೆಲಸ ಸಿಗುತ್ತಿಲ್ಲ. ನಮಗೊಂದು ಒಳ್ಳೆಯ ಕೆಲಸ ಕೊಡಿ. ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ. ನಾವೂ ನಿಮ್ಮಂತೆಯೇ ಬದುಕುತ್ತೇವೆ. ನಿಮ್ಮ ಮಕ್ಕಳಂತೆಯೇ ನಮ್ಮ ಮಕ್ಕಳೂ ಕೂಡ ಪ್ರತಿಷ್ಠಿತ ಶಾಲೆಗೆ ಹೋಗುವಂತೆ ಮಾಡುತ್ತೇವೆ' ಎಂದು ಅವರು ಬೇಡಿಕೊಳ್ಳುತ್ತಾರೆ.

ಹೊಸ ಬದುಕಿನ ಹಂಬಲ
ಸಾಮಾನ್ಯವಾಗಿ ಪೌರ ಕಾರ್ಮಿಕರ ಸರಾಸರಿ ಆಯುಷ್ಯ 45 ವರ್ಷ. ಚಿಕ್ಕ ವಯಸ್ಸಿನಲ್ಲಿಯೇ ಕುಡಿತವನ್ನು ಅಭ್ಯಾಸ ಮಾಡಿಕೊಳ್ಳುವ ಅವರು ಬೇಗ ಆರೋಗ್ಯ ಕಳೆದುಕೊಳ್ಳುತ್ತಾರೆ. ಜೊತೆಗೆ ಬೇಗ ಸಾವನ್ನಪ್ಪುತ್ತಾರೆ. ಕೊಳೆಯನ್ನು ಸ್ವಚ್ಛ ಮಾಡಲು ಕುಡಿಯುವುದು ಅನಿವಾರ್ಯ ಎಂದೂ ಅವರು ಹೇಳುತ್ತಾರೆ. ಗುತ್ತಿಗೆ ಪದ್ಧತಿಯಿಂದ ಗುತ್ತಿಗೆದಾರರು ದೊಡ್ಡವರಾಗುತ್ತಾರೆ ವಿನಾ ಪೌರಕಾರ್ಮಿಕರಿಗೆ ಕನಿಷ್ಠ ವೇತನ ಕೂಡ ಸಿಗುವುದಿಲ್ಲ. ನಾವು ದುಡಿಯಲು ಸಿದ್ಧ. ಆದರೆ ನಮಗೆ ಸೂಕ್ತ ಸಂಬಳ, ಆರೋಗ್ಯ, ಶಿಕ್ಷಣ ನೀಡಿ ಎಂದವರು ಬೇಡಿಕೊಳ್ಳುತ್ತಾರೆ. 

ನಗರದ ಕೊಳೆಯನ್ನು ಬಾಚಿ ಶುಚಿ ಮಾಡುವ ಪೌರಕಾರ್ಮಿಕರು ಮನದ ಕೊಳೆಯನ್ನು ಸ್ವಚ್ಛ ಮಾಡುವ ವೃತ್ತಿಯನ್ನೂ ಮಾಡಬಲ್ಲರು. ಆದರೆ ಜಾತಿ, ಧರ್ಮ, ಮೇಲು, ಕೀಳು ಎಂಬ ಕೊಳೆಯನ್ನೇ ತುಂಬಿಕೊಂಡಿರುವ ಸಮಾಜವನ್ನು ಸ್ವಚ್ಛಗೊಳಿಸಿ ಪೌರಕಾರ್ಮಿಕರನ್ನೂ `ಇವ ನಮ್ಮವ' ಎಂದು ಅಪ್ಪಿಕೊಳ್ಳುವಂತೆ ಸಮಾಜ ಬದಲಾಗುವುದು ಯಾವಾಗ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT