ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಾಣಿಕ ಕಥಾನಕಗಳ ನಾಟ್ಯ ರಸದೂಟ

Last Updated 19 ಅಕ್ಟೋಬರ್ 2015, 19:56 IST
ಅಕ್ಷರ ಗಾತ್ರ

ರಸ-ಭಾವಾಶ್ರಯವಾದ ಭರತನಾಟ್ಯ ಕಲೆಯ ಸಾತ್ವಿಕ, ಆಂಗಿಕ ರಸತತ್ವವನ್ನು ‘ನಂದಿ ಭರತನಾಟ್ಯ ಕಲಾಶಾಲೆ’ಯ ನೃತ್ಯ ವಿಶಾರದೆ ಗೀತಾಲಕ್ಷ್ಮಿ ಅವರ ಶಿಷ್ಯೆ ಯಾಮಿನಿ ಎ.ಡಿ.ಎ. ರಂಗಮಂದಿರದಲ್ಲಿ ಉಣಬಡಿಸಿದರು.

ಪುಷ್ಪಾಂಜಲಿಯೊಂದಿಗೆ ವೇದಿಕೆಗೆ ಅಡಿಯಿಟ್ಟ ಯಾಮಿನಿ, ಶ್ರೀರಂಜಿನಿ ರಾಗದ ಗಣೇಶ ಸ್ತುತಿಯಿಂದ ಭಕ್ತಿ ಭಾವ ಅರಳಿಸಿದರು. ರಾವಣ, ಶಿವನಿಂದ ಪಡೆದುಕೊಂಡಿರುವ ಆತ್ಮಲಿಂಗವನ್ನು ಮರಳಿ ಪಡೆಯಲು ಬಾಲಕನಾಗಿ ಬರುವ ಗಣಪತಿ ಉಪಾಯವಾಗಿ ಆತ್ಮಲಿಂಗವನ್ನು ನೆಲದ ಮೇಲಿಡುವ ದೃಶ್ಯದ ಕಥಾಹಂದರ ಗಣೇಶ ಸ್ತುತಿಯಲ್ಲಿತ್ತು. ಗುರು ಮಧುರೈ ಮುರಳೀಧರನ್‌ ಅವರು ರಚಿಸಿರುವ ಈ ಕೃತಿಯನ್ನು ಯಾಮಿನಿ ಮನೋಜ್ಞವಾಗಿ ಅಭಿನಯಿಸಿದರು.

ಶಿವನ ಆನಂದತಾಂಡವದ ಸೌಂದರ್ಯವನ್ನು ವರ್ಣಿಸುವ ಶಿವಕೀರ್ತನಮ್‌ ಯಾಮಿನಿಯವರ ಪ್ರಬುದ್ಧ ನಟನೆಗೆ ಸಾಕ್ಷಿಯಾಯಿತು. ಇದರಲ್ಲಿ ಶಿವನಿಂದ ಆತ್ಮಲಿಂಗ ಪಡೆಯಲು ರಾವಣ ಮಾಡಿರುವ ಹೋರಾಟದ ದೃಶ್ಯವನ್ನು ಅವರು ಪ್ರದರ್ಶಿಸಿದರು. ಆತ್ಮಲಿಂಗ ಪಡೆಯಲು ರಾವಣ ಕಠಿಣ ತಪಸ್ಸನ್ನಾಚರಿಸುವುದು, ಅವನನ್ನು ಪರೀಕ್ಷಿಸಲು ಶಿವ ಪ್ರತ್ಯಕ್ಷನಾಗದೇ ಕೈಲಾಸದಲ್ಲಿ ನರ್ತಿಸುತ್ತಿರುವುದು, ಇದರಿಂದ ಸಿಟ್ಟುಗೊಂಡ ರಾವಣ ತನ್ನ ಕೈಗಳಿಂದ ಕೈಲಾಸ ಪರ್ವತವನ್ನೇ ಎತ್ತಿಹಿಡಿಯುವುದು, ಶಿವ ತನ್ನ ಕಾಲಿನ ಹೆಬ್ಬೆರಳಿನಿಂದ ಕೈಲಾಸವನ್ನು ಸಮಸ್ಥಿತಿಗೆ ತರುವುದು, ಇನ್ನಷ್ಟು ಕುಪಿತಗೊಂಡ ರಾವಣ ತನ್ನ ಹೊಟ್ಟೆಯನ್ನು ಬಗೆದು ನರಗಳನ್ನು ತೆಗೆದು ಅವುಗಳಿಂದ ವೀಣೆಯ ತಂತಿಯನ್ನಾಗಿಸಿ ಮೂಳೆಗಳನ್ನು ವೀಣೆಯ ದಂಡಿಗೆಯನ್ನಾಗಿ ನುಡಿಸುವುದು, ಇದರಿಂದ ಸಂತೃಪ್ತನಾದ ಶಿವ ಪ್ರತ್ಯಕ್ಷನಾಗುವುದು... ಈ ಕಥೆಯನ್ನಾಧರಿಸಿ ಪದ್ಮಚರಣ್‌ ಅವರ ‘ಪ್ರದೋಷ ಸಮಯದಿ ಪರಶಿವ ತಾಂಡವ...’ ಕೃತಿಯನ್ನು ಯಾಮಿನಿ ಪ್ರಬುದ್ಧವಾಗಿ ಅಭಿನಯಿಸಿದರು.

ಆಕೆಯ ಮತ್ತಷ್ಟು ಪ್ರತಿಭೆಗೆ ಸಾಕ್ಷಿಯಾದದ್ದು ಕಮಾಸ್‌ ರಾಗದ ವರ್ಣಂ. ಸುಮಾರು 45 ನಿಮಿಷಗಳ ಕಾಲ ವರ್ಣಂ ಅಭಿನಿಯಿಸಿದ ಯಾಮಿನಿ, ಇದರಲ್ಲಿ ಶಿವ-ಪಾರ್ವತಿ, ಗಣಪತಿ- ಸುಬ್ರಹ್ಮಣ್ಯರ ವಿವಿಧ ಕಥೆಗಳನ್ನು ವಿವರಿಸಿದರು. ಗಣಪತಿ ಹಾಗೂ ಸುಬ್ರಹ್ಮಣ್ಯ (ಮುರುಗ)ನನ್ನು ಪರೀಕ್ಷಿಸಲು ಶಿವ-ಪಾರ್ವತಿ ಮೂರುಲೋಕವನ್ನು ಯಾರು ಮೊದಲು ಸುತ್ತು ಬರುತ್ತಾರೋ ಅವರಿಗೆ ಮಾವಿನ ಹಣ್ಣು ನೀಡುವುದಾಗಿ ಹೇಳುತ್ತಾರೆ.

ಸುಬ್ರಹ್ಮಣ್ಯ ತನ್ನ ವಾಹನ ನವಿಲನ್ನೇರಿ ಮೂರು ಲೋಕ ಸುತ್ತಲು ಹೋದರೆ, ಗಣಪತಿ ತನ್ನ ಅಪ್ಪ-ಅಮ್ಮನೇ ಮೂರುಲೋಕ ಎಂದು ಎಣಿಸಿ ಅವರ ಸುತ್ತಲು ಸುತ್ತಿ ಮಾವಿನ ಹಣ್ಣನ್ನು ಪಡೆದುಕೊಳ್ಳುತ್ತಾನೆ. ಇದರಿಂದ ಸಿಟ್ಟುಗೊಂಡ ಮುರುಗ ತನ್ನ ವೇಷಭೂಷಣಗಳನ್ನು ಕಳಚಿ ಕಾವಿ-ರುದ್ರಾಕ್ಷಿ ಧರಿಸಿ ಪಳನಿ ಗಿರಿಯನ್ನೇರಿ ಕುಳಿತುಬಿಡುತ್ತಾನೆ. ಈ ಕಥೆ ಹಾಗೂ ಇದರ ಉಪಕಥೆಯಾಗಿ ಮುರುಗ ತನ್ನ ಭಕ್ತೆ ಅವ್ವೈಯಾರ್‌ ಎಂಬ ಮುದುಕಿಗೆ ದರ್ಶನ ನೀಡುವುದನ್ನು ಮನಮುಟ್ಟುವಂತೆ ನೃತ್ಯದ ಮೂಲಕ ವಿವರಿಸಿದರು ಯಾಮಿನಿ.

ನಂತರ ಅಭೇರಿ ರಾಗದ ದೇವಿ ಕೀರ್ತನೆಯಲ್ಲಿ ದೇವಿಯ ಮಹಿಮೆ, ಕೀರವಳಿ ರಾಗದ ವಾದಿರಾಜರ ದೇವರನಾಮದಲ್ಲಿ ಕೃಷ್ಣನ ಲೀಲೆ, ತಮಿಳುನಾಡಿನಲ್ಲಿ  ಕಂಡುಬರುವ ಪಾರಂಪರಿಕ ಭಕ್ತಿ ಮಾರ್ಗ ಕಾವಡಿ ಚಿಂದುವಿನಲ್ಲಿ ಭಕ್ತರು ಸುಬ್ರಹ್ಮಣ್ಯ ಸ್ವಾಮಿಗೆ ಹಕರೆ ಸಲ್ಲಿಸುವ ಶೈಲಿಗಳ ಅಭಿನಯವು ಯಾಮಿನಿಯವರ ಪ್ರತಿಭೆಯ ಪೂರ್ಣ ದರ್ಶನ ಮಾಡಿಸಿತು. ಅಮೃತವರ್ಷಿಣಿ ರಾಗದ ತಿಲ್ಲಾಣ ಅವರ ನೃತ್ಯ ಮಾಧುರ್ಯಕ್ಕೆ ಕನ್ನಡಿ ಹಿಡಿಯಿತು.

ಕೆಮಿಕಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುತ್ತಿರುವ ಯಾಮಿನಿ, ಮೂರನೇ ವರ್ಷದಿಂದಲೇ ಭರತನಾಟ್ಯ ಹಾಗೂ ಕರ್ನಾಟಕ ಸಂಗೀತ ತರಬೇತಿ ಪಡೆಯುತ್ತಿದ್ದಾರೆ. 2001ರಿಂದ ಗುರು ಗೀತಾಲಕ್ಷ್ಮಿ ಅವರಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ಈಕೆ, ಭರತನಾಟ್ಯ ಜೂನಿಯರ್‌ ಪರೀಕ್ಷೆಯನ್ನು ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ. ಕಾಲೇಜಿನಲ್ಲಿಯೂ ಉನ್ನತ ಸ್ಥಾನ ಗಳಿಸುತ್ತಿರುವ ಈಕೆ, ಈಗ ಸೀನಿಯರ್‌  ವಿಭಾಗದ ಭರತನಾಟ್ಯ ಸಂಗೀತವನ್ನು ಅಭ್ಯಸಿಸುತ್ತಿದ್ದಾರೆ.

ಬಹು ಪರಿಣತಿಯ ಕ್ರಿಯಾಶೀಲ ಭರತನಾಟ್ಯ ಕಲಾವಿದರಾಗಿರುವ, ದೇಶದಾದ್ಯಂತ ನೃತ್ಯದ ಛಾಪು ಮೂಡಿಸಿರುವ ನೃತ್ಯಪಟು ‘ನಾಟ್ಯಕಲಾ ಭೂಷಣ’ ಗೀತಾಲಕ್ಷ್ಮಿ ಅವರ ಹಿರಿಮೆ- ಘನತೆಗಳನ್ನು ಎತ್ತಿ ತೋರುವಂತಹ ಭರತನಾಟ್ಯ ಪ್ರದರ್ಶನ ಅವರ ಶಿಷ್ಯೆ ಯಾಮಿನಿ ಅವರದ್ದಾಗಿತ್ತು.

ನೃತ್ಯದ ಒನಪು, ಗಾಂಭೀರ್ಯಕ್ಕೆ ಹದವಾಗಿ ನಟುವಾಂಗ ಮಾಡಿದವರು ಗುರು ಗೀತಾಲಕ್ಷ್ಮಿ. ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ ಅವರ ಗಾಯನ ಕರ್ಣಾನಂದಕರವಷ್ಟೇ ಆಗಿರದೆ ಸಾಹಿತ್ಯ ಮತ್ತು ಭಾವಕ್ಕೆ ಹೊಂದುವಂತಿತ್ತು. ಮೃದಂಗದಲ್ಲಿ ವಿದ್ವಾನ್ ಲಿಂಗರಾಜು, ಕೊಳಲಿನಲ್ಲಿ ವಿದ್ವಾನ್ ವಿವೇಕ್ ಕೃಷ್ಣ, ವಯೋಲಿನ್ ನುಡಿಸಿದ ವಿದ್ವಾನ್ ನಟರಾಜಮೂರ್ತಿ, ರಿದಂ ಪ್ಯಾಡ್ ನುಡಿಸಿದ ವಿದ್ವಾನ್ ಕಾರ್ತಿಕ್ ದಾತಾರ್ ಅವರ ಸಾಥ್ ನೃತ್ಯದ ಸೊಬಗನ್ನು ಇನ್ನಷ್ಟು ಹೆಚ್ಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT