ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಂಕ್ರಿಯಾಸ್ ಕ್ಯಾನ್ಸರ್ ಹೆಚ್ಚಳ!

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಪ್ಯಾಂಕ್ರಿಯಾಸ್ ಮಾನವ ದೇಹದ ಪ್ರಮುಖ ಅಂಗವಾಗಿದ್ದು ಪ್ರತ್ಯೇಕವಾಗಿ ಎರಡು ಪ್ರಮುಖ ಹಾರ್ಮೋನ್‌ಗಳಾದ ಇನ್ಸುಲಿನ್, ಗ್ಲೂಕಾಗಾನ್‌ಗಳ ಉತ್ಪಾದನೆ  ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹೊಣೆಗಾರಿಕೆ ಹೊಂದಿವೆ. ಹೊಟ್ಟೆಯ ಭಾಗದಲ್ಲಿ ಕರುಳು ಮತ್ತು ಜಠರದ ಆಳವಾದ ಹಿಂಭಾಗದಲ್ಲಿರುವ ಪ್ಯಾಂಕ್ರಿಯಾಸ್‌ಗಳನ್ನು ಕಾಡುವ ಹಲವಾರು ರೋಗಗಳ ಪೈಕಿ ಕ್ಯಾನ್ಸರ್ ಅತ್ಯಂತ ಮಾರಕವಾಗಿದೆ.

8ನೇ ಪ್ರಮುಖ ಕಾರಣ:
ವಿಶ್ವವ್ಯಾಪಿಯಾಗಿ ಕ್ಯಾನ್ಸರ್‌ನಿಂದ ಉಂಟಾಗುವ ಸಾವುಗಳ ಪೈಕಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ 8ನೇ ಪ್ರಮುಖ ಕಾರಣವಾಗಿದೆ. ಅಭಿವೃದ್ಧಿಶೀಲ ದೇಶವಾದ ಭಾರತದಂತಹ ರಾಷ್ಟ್ರಗಳಲ್ಲಿ ಈ ಸಂಭವ ಪಾಶ್ಚಿಮಾತ್ಯ ದೇಶಗಳಿಗಿಂತ ಕಡಿಮೆಯಾಗಿವೆ. ಬದಲಾಗುತ್ತಿರುವ ಜೀವನಶೈಲಿ ಮತ್ತು ಭಾರತದಲ್ಲಿನ ಹೆಚ್ಚುತ್ತಿರುವ ಮಧುಮೇಹಿಗಳ ಸಂಖ್ಯೆಯಿಂದಾಗಿ ಮುಂಬರುವ ವರ್ಷಗಳಲ್ಲಿ ಇಲ್ಲಿಯೂ ಸಹ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.

 ಈ ಕ್ಯಾನ್ಸರ್‌ಗೆ ಅತ್ಯುತ್ತಮ ರೀತಿಯ ವೈದ್ಯಕೀಯ ಚಿಕಿತ್ಸೆ ನೀಡಿದರೂ ಫಲಿತಾಂಶಗಳು   ಉತ್ತಮವಾಗಿರದ ಕಾರಣ ಗಂಭೀರವಾದ ಪರಿಣಾಮಗಳು ಉಂಟಾಗಬಹುದಾಗಿದೆ.

ಕಾರಣಗಳು: ಇದಕ್ಕೆ ಕಾರಣವಾಗುವ ನಿಖರವಾದ ಅಂಶಗಳು ತಿಳಿದುಬಂದಿಲ್ಲ. ಆದರೆ   ದೀರ್ಘಕಾಲೀನ ಮಧುಮೇಹ, ತೀವ್ರವಾದ ಕ್ಯಾಲ್ಸಿಫಿಕ್ ಪ್ಯಾಂಕ್ರಿಯಾಟೈಟೀಸ್, ಧೂಮಪಾನ, ಕೊಬ್ಬಿನ ಆಹಾರಗಳು, ವ್ಯಾಯಾಮರಹಿತ ಜೀವನಶೈಲಿ ಮತ್ತು ವಂಶವಾಹಿ ಕಾರಣಗಳ ಜೊತೆಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಸಂಬಂಧವಿದೆ ಎಂದು ಹಲವಾರು ಅಧ್ಯಯನಗಳು ಸೂಚಿಸಿವೆ. ನಿರ್ದಿಷ್ಟವಾದ ಕಾರಣ ಕಾಣಿಸದೆ ಇರುವುದರಿಂದ ಈ ರೋಗ ಕುರಿತು ಜಾಗೃತಿ, ಶೀಘ್ರ ಪತ್ತೆ ಮತ್ತು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ  ಕಷ್ಟವಾಗುತ್ತದೆ.

ವಿಧಗಳು
ಅಡೆನೊ ಕ್ಯಾರ್ಸಿನೋಮ(ಶಿರ ಅಥವ ದೇಹ ಮತ್ತು ಕೆಳಗಿನ ಭಾಗ)
ನ್ಯೂರೊಎಂಡೊಕ್ರೈನ್ ಟ್ಯೂಮರ್‌ಗಳು
ಲಿಂಫೋಮಾ

ಲಕ್ಷಣಗಳು
ಇದು 60 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಅತ್ಯಂತ ಸಾಮಾನ್ಯವಾದ ಲಕ್ಷಣಗಳಲ್ಲಿ ವಿವರಿಸಲಾಗದ ಹಸಿವಿನ ನಷ್ಟ, ತೂಕ ನಷ್ಟ ಮತ್ತು ಹೊಟ್ಟೆಯ ಭಾಗದಲ್ಲಿ ನೋವು ಕಾಣಿಸಿಕೊಂಡು ಈ ನೋವು ಬೆನ್ನಿನ ಭಾಗಕ್ಕೂ ವಿಸ್ತರಿಸಬಹುದು. ಇತರೆ ಲಕ್ಷಣಗಳು ಗಡ್ಡೆ ಇರುವ ನಿರ್ದಿಷ್ಟವಾದ ಸ್ಥಳವನ್ನು ಮತ್ತು ಅದು ಉತ್ಪಾದಿಸುವ ಹೆಚ್ಚಿನ ಹಾರ್ಮೊನ್‌ಗಳನ್ನು ಆಧರಿಸಿರುತ್ತದೆ. ಪ್ಯಾಂಕ್ರಿಯಾಸ್‌ನ ಶಿರ ಭಾಗದಲ್ಲಿ ಉಂಟಾಗುವ ಗಡ್ಡೆಗಳಿಂದ ಜಾಂಡೀಸ್ ಮತ್ತು ಗಾಢ ಬಣ್ಣದ ಮೂತ್ರ, ಪೇಲವ ವರ್ಣದ ಮಲ ಮತ್ತು ಅತಿಯಾದ ತುರಿಕೆ ಕಾಣಿಸುತ್ತದೆ. ಪ್ಯಾಂಕ್ರಿಯಾದ ದೇಹ ಮತ್ತು ಬಾಲದ ಭಾಗದಲ್ಲಿ ಉಂಟಾಗುವ ಗಡ್ಡೆಗಳಿಂದ ಜಾಂಡೀಸ್ ಕಾಣಿಸಿಕೊಳ್ಳುವುದಿಲ್ಲ. ಇವುಗಳಿಂದ ಕೇವಲ ಹಸಿವು ಮತ್ತು ತೂಕದ ನಷ್ಟ ಕಾಣಿಸಿಕೊಳ್ಳುತ್ತದೆ. ಹಿಂದಿನಿಂದಲೂ ಮಧುಮೇಹ ಹೊಂದಿರುವ ರೋಗಿಗಳಿಗೆ  ಹಿಂದೆ ಸೂಚಿಸಿರುವ ಔಷಧೀಯ ಪ್ರಮಾಣದಲ್ಲಿ ಸಾಮಾನ್ಯವಾಗಿ ರಕ್ತದ ಮಟ್ಟದ ನಿಯಂತ್ರಣ ಕಷ್ಟವಾಗುತ್ತದೆ. ಪ್ಯಾಂಕ್ರಿಯಾದಲ್ಲಿನ ಫಂಕ್ಷನಲ್ ಟ್ಯೂಮರ್‌ಗಳು ಅಪರೂಪವಾಗಿದ್ದು ಹೆಚ್ಚಾದ ಹಾರ್ಮೋನ್‌ನ ವಿಧವನ್ನು ಆಧರಿಸಿರುತ್ತದೆ.

ರೋಗನಿದಾನ
ಜ್ಯಾಂಡೀಸ್,  ರೋಗಲಕ್ಷಣಗಳಲ್ಲಿ ಒಂದಾಗಿದ್ದರೆ  ಈ ರೋಗವನ್ನು ಬೇಗನೇ ಪತ್ತೆ ಮಾಡಬಹುದು. ಏಕೆಂದರೆ ಚಿಕಿತ್ಸೆ ನೀಡುವ ವೈದ್ಯರು ರಕ್ತದ ಪರೀಕ್ಷೆ ಮತ್ತು ಇಮೇಜಿಂಗ್‌ಗಳನ್ನು ಬಳಸಿ ಪ್ಯಾಂಕ್ರಿಯಾದ ರೋಗಕ್ಕಾಗಿ ಪರೀಕ್ಷೆ ಮಾಡುತ್ತಾರೆ.

ಅದಿಲ್ಲದಾಗ  ಸಾಮಾನ್ಯವಾಗಿ ನಡೆಸುವ ರಕ್ತದ ಪರೀಕ್ಷೆಗಳಾದ ಕಂಪ್ಲೀಟ್ ಹೀಮೊಗ್ರೋಮ್, ಕಿಡ್ನಿ ಕಾರ‌್ಯಪರೀಕ್ಷೆ,  ಲಿವರ್ ಕಾರ‌್ಯ ಪರೀಕ್ಷೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದು.

ಆದರೆ ಚಾಣಾಕ್ಷ ವೈದ್ಯರು  ವಿವರಿಸಲಾಗದ ಹಸಿವಿನ ಮತ್ತು ತೂಕದ ನಷ್ಟದ ಜೊತೆಗೆ ಸ್ವಲ್ಪ ಹೊಟ್ಟೆಯಲ್ಲಿನ ಕಸಿವಿಸಿ ಸ್ಥಿತಿಯನ್ನು ಶೀಘ್ರವಾಗಿ ಗುರುತಿಸಬಲ್ಲರು. ಹೊಟ್ಟೆಯ ಭಾಗದ ಸಿಟಿ ಸ್ಕ್ಯಾನ್  ರೋಗ ಪತ್ತೆ ಮಾಡಲು ಅಗತ್ಯವಾಗಿದ್ದು ಇದರಲ್ಲಿ ಗಡ್ಡೆಗಳನ್ನು ಅವು ಯಾವುದೇ ಲಕ್ಷಣಗಳನ್ನು ಸೂಚಿಸುವ ಮುನ್ನವೇ ಗುರುತಿಸಬಹುದು. ಬ್ಲಡ್ ಸಿಎ 19-9 ಕ್ಯಾನ್ಸರ್ ಮಾರ್ಕರ್ ಆಗಿ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಅದರಲ್ಲಿಯೂ ಕೆಲವು ಮಿತಿಗಳಿರುತ್ತವೆ.

ಹಂತಗಳ ಗುರುತಿಸುವಿಕೆ: ಯಾವುದೇ ರೀತಿಯ ಕ್ಯಾನ್ಸರ್‌ಗೆ ಚಿಕಿತ್ಸೆಯ ಯೋಜನೆ ಗಂಭೀರವಾದ ಪೂರ್ವ ಅಗತ್ಯವಾಗಿರುತ್ತದೆ. ಹೊಟ್ಟೆಯ ಭಾಗದ ಸಿಟಿ ಸ್ಕ್ಯಾನ್, ಎದೆಯ ಎಕ್ಸರೆ ಮತ್ತು ಸಂಪೂರ್ಣ ದೇಹದ ಪಿಇಟಿ (ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ)ಸ್ಕ್ಯಾನ್‌ಗಳ ಮೂಲಕ ರೋಗದ ಸ್ಥಿತಿಯನ್ನು ಗುರುತಿಸಬಹುದಾಗಿದೆ.

ಚಿಕಿತ್ಸೆಯ ಆಯ್ಕೆ
ಚಿಕಿತ್ಸೆಯ ಆಯ್ಕೆಗಳು ರೋಗದ ಹಂತವನ್ನು ಆಧರಿಸಿರುತ್ತವೆ. ವೈದ್ಯರು ಶಸ್ತ್ರಕ್ರಿಯೆಯ ಮತ್ತು ಶಸ್ತ್ರಕ್ರಿಯೇತರ ಆಯ್ಕೆಗಳಾದ ಎಂಡೋಸ್ಕೋಪಿಕ್ ಬಿಲಿಯರಿ ಸ್ಟೆಂಟಿಂಗ್‌ಗಳನ್ನು ಆರಿಸಿಕೊಳ್ಳಬಹುದು. ಶಸ್ತ್ರಕ್ರಿಯೆ ಮೂಲಕ ಪ್ಯಾಂಕ್ರಿಯಾದ ರೋಗಿಷ್ಟ ಭಾಗಗಳನ್ನು ಸಾಧ್ಯವಾಗುವಲ್ಲಿ ತೆಗೆದುಹಾಕುವುದು ಗುಣವಾಗುವ ಅತ್ಯುತ್ತಮ ಅವಕಾಶವನ್ನು ನೀಡುತ್ತವೆ.

ಕೆಲವೊಮ್ಮೆ ಪ್ರಮುಖ ಪ್ಯಾಂಕ್ರಿಯಾದ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮುನ್ನ ವೈದ್ಯರು ಎಂಡೋಸ್ಕೋಪಿಕ್ ಬಿಲಿಯರಿ ಸ್ಟೆಂಟಿಂಗ್‌ನ್ನು ಜ್ಯಾಂಡೀಸ್ ಕಡಿಮೆ ಮಾಡಲು ಮತ್ತು ರೋಗಿಯ ಸ್ಥಿತಿಯನ್ನು ಅತ್ಯುತ್ತಮ ಪಡಿಸಲು ಸೂಚಿಸಬಹುದು. ಎಂಡೋಬಿಲಿಯರಿ ಸ್ಟೆಂಟಿಂಗ್ ಪರಿಣಾಮಕಾರಿ ಯೋಜನೆಯಾಗಿದ್ದು ಶಸ್ತ್ರಕ್ರಿಯೆ ಸಾಧ್ಯವಾಗದೇ ಇದ್ದಾಗ ರೋಗಿಯ ತುರಿಕೆ ಕಡಿಮೆಯಾಗಲು ನೆರವಾಗುತ್ತದೆ. ಕೀಮೊಥರಪಿ ಅಥವಾ ರೇಡಿಯೋಥೆರಪಿಯನ್ನು ಈ ಮೇಲಿನ ಆಯ್ಕೆಗಳಿಗೆ ಸೇರಿಸುವುದರಿಂದಲೂ ಫಲಿತಾಂಶಗಳನ್ನು ಸುಧಾರಿಸಲು ನೆರವಾಗುತ್ತವೆ.

ವೈದ್ಯರ ಭೇಟಿ?
ಆರಂಭ ಹಂತದಲ್ಲಿಯೇ ರೋಗವನ್ನು ಪರಿಣತ ಕೇಂದ್ರಗಳಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದಾಗ ಫಲಿತಾಂಶಗಳು ಉತ್ತಮವಾಗಿರುತ್ತವೆ. ಈ ಲಕ್ಷಣಗಳನ್ನು ಕಡೆಗಣಿಸಬೇಡಿ.

ವಿವರಿಸಲಾಗದ ಹಸಿವು ಮತ್ತು ತೂಕದ ನಷ್ಟ. ಅದರಲ್ಲೂ ಮುಖ್ಯವಾಗಿ 60 ವರ್ಷ ಮೇಲ್ಪಟ್ಟಿದ್ದಲ್ಲಿ.

ಪದೇ ಪದೇ ಕಾಣಿಸಿಕೊಳ್ಳುವಂತಹ ಹೊಟ್ಟೆಯ ಮೇಲ್ಭಾಗದಲ್ಲಿನ ನೋವು ಬೆನ್ನಿಗೂ ಹರಡಿರುವುದು.

ಮಧುಮೇಹಿಗಳಲ್ಲಿ ಸಕ್ಕರೆಯ ನಿಯಂತ್ರಣ ಕಷ್ಟವಾಗುತ್ತಿರುವುದು.

ದೀರ್ಘಕಾಲದ ತೀವ್ರವಾದಂತಹ ಪ್ಯಾಂಕ್ರಿಯಾಟೈಟೀಸ್ ಹೊಂದಿರುವ ರೋಗಿಗಳಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಲಕ್ಷಣಗಳು.

(ಲೇಖಕರ ಸಂಪರ್ಕ ಸಂಖ್ಯೆ:  9916559455) 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT