ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಟೆ ಹುಡ್ಗೀರ ಹಳ್ಳಿ ಲೈಫು

Last Updated 25 ಫೆಬ್ರುವರಿ 2012, 5:45 IST
ಅಕ್ಷರ ಗಾತ್ರ

ಹಾಸನ: ನಗರದಲ್ಲಿ ಕಳೆದ ವಾರವಿಡೀ ಶಾಲಾ-ಕಾಲೇಜು ವಿದ್ಯಾರ್ಥಿಗಳ ಕಲರವವೇ ಹೆಚ್ಚಾಗಿತ್ತು. ಪೇಟೆ ಹುಡುಗಿಯರು ಹಳ್ಳಿಗೆ ಹೋಗಿ ರಾಗಿ ಬೀಸಿ, ರಂಗೋಲಿ ಹಾಕಿದ್ದು ಒಂದೆಡೆಯಾದರೆ ಮಕ್ಕಳ ಹಬ್ಬದಲ್ಲಿ ಮಕ್ಕಳು ಗದ್ದಲ ಎಬ್ಬಿಸಿದ್ದು ಇನ್ನೊಂದೆಡೆ. ಇದರ ಜತೆಜತೆಯಲ್ಲೇ ಬಂದ ಆಕಾಶವಾಣಿ ಹಬ್ಬದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತೊಮ್ಮೆ ಚೈತನ್ಯದ ಚಿಲುಮೆಗಳಾಗಿ ಶ್ರೋತೃಗಳು ಹಾಗೂ ವೀಕ್ಷಕರನ್ನು ರಂಜಿಸಿದರು.

ಹಾಸನಕ್ಕೆ ಇನ್ನೂ ನಗರದ ಗಾಳಿ ಪೂರ್ಣ ಪ್ರಮಾಣದಲ್ಲಿ ಬೀಸಿಲ್ಲ. ನಗರದಿಂದ ಒಂದೈದು ಕಿ.ಮೀ. ಆಚೆ ಹೋದರೆ ಅಪ್ಪಟ ಹಳ್ಳಿಯ ವಾತಾವರಣ ಇದೆ. ಆದರೆ ಹಿಂದಿನ ಹಳ್ಳಿ ಸಂಸ್ಕೃತಿ ಮಾಯವಾಗುವ ಹಂತದಲ್ಲಿದೆ.

ವಿಶೇಷವಾಗಿ ಈಗಿನ ತಲೆಮಾರಿನವರು ಆಧುನಿಕ ಯಂತ್ರೋಪಕರಣ, ಜೀವನ ಶೈಲಿಗಳಿಗೆ ಒಗ್ಗುತ್ತ ಹಿಂದಿನ ಸಂಪ್ರದಾಯಗಳಿಂದ ಸ್ವಲ್ಪ ದೂರ ಸರಿಯುತ್ತಿದ್ದಾರೆ ಎಂಬ ದೂರು ಇದೆ. ನಗರದ ಬಹುತೇಕ ಕಾಲೇಜಿನವರು ಹಳ್ಳಿಗಳಲ್ಲಿ ಎನ್‌ಎಸ್‌ಎಸ್ ಶಿಬಿರಗಳನ್ನು ಆಯೋಜಿಸುತ್ತ ವಿದ್ಯಾರ್ಥಿಗಳಿಗೆ ಹಳ್ಳಿ ಜೀವನವನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಾರೆ.

ಇಲ್ಲಿನ ಮಹಿಳಾ ಸರ್ಕಾರಿ ಪದವಿ ಕಾಲೇಜಿನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿದ್ಯಾರ್ಥಿನಿಯರ ಕೈಗೆ ರಾಗಿ ಬೀಸುವ ಕಲ್ಲುಗಳನ್ನು ಕೊಟ್ಟು ರಾಗಿ ಬೀಸುವಂತೆ ಮಾಡಿದರು.

ಕಾಲೇಜಿನವರು ಎನ್ನುವುದಕ್ಕಿಂತ, ಹಳ್ಳಿಯ ಜನರೇ ಮಕ್ಕಳ ಕೈಗೆ ರಾಗಿ ಬೀಸುವ ಕಲ್ಲುಗಳನ್ನು ಕೊಟ್ಟಿದ್ದರು ಎಂದರೆ ಹೆಚ್ಚು ಸರಿ. ಕಾಲೇಜಿನವರು ಸಮೀಪದ ಕೆಂಚಟ್ಟಹಳ್ಳಿಯಲ್ಲಿ ಎನ್‌ಎಸ್‌ಎಸ್ ಶಿಬಿರ ಹಮ್ಮಿಕೊಂಡಿದ್ದರು.
 
ಹಳ್ಳಿಗೆ ಹೋದ ವಿದ್ಯಾರ್ಥಿನಿಯರಿಗೆ ಊರವರಿಂದ ಪ್ರೀತಿಯ ಸ್ವಾಗತ ಲಭಿಸಿತ್ತು. ವಿದ್ಯಾರ್ಥಿಗಳು ಮಾಡುವ ಎಲ್ಲ ಕೆಲಸ–ಗಳಿಗೂ ಊರವರು ಕೈಜೋಡಿಸಿದರು. ಕೊನೆಗೆ ನಾವೂ ವಿದ್ಯಾರ್ಥಿ–ಗಳಿಗಾಗಿ ಏನಾದರೂ ಮಾಡಬೇಕು ಎಂದು ಅವರು ಯೋಚಿಸಿದರ ಪರಿಣಾಮ ಇಂಥ ಒಂದು ಅಪರೂಪದ ಕಾರ್ಯಕ್ರಮ ನಡೆಯಿತು.
 
ಊರವರೆಲ್ಲ ಸೇರಿ ಒಟ್ಟು ಹತ್ತು ರಾಗಿ ಬೀಸುವ ಕಲ್ಲುಗಳನ್ನು ತಂದಿಟ್ಟರು. ಒಂದಿಷ್ಟು ರಾಗಿಯನ್ನೂ ಕೊಟ್ಟು ಬೀಸಿ ಎಂದರು. ವಿದ್ಯಾರ್ಥಿಗಳು ಒಂದಿಷ್ಟೂ ಅಳುಕದೆ ರಾಗಿ ಬೀಸಿಯೇ ಬಿಟ್ಟರು. ಅಷ್ಟೇ ಅಲ್ಲ ಅವರಲ್ಲಿ ಕೆಲವು ವಿದ್ಯಾರ್ಥಿಗಳು ಸೋಬಾನೆ ಪದಗಳನ್ನೂ ಹಾಡಲಾರಂಭಿಸಿದರು. ಸ್ಪರ್ಧೆ ಆಯೋಜಿಸಿದ್ದವರಿಗೂ ಈ ಕಾರ್ಯಕ್ರಮ ಖುಷಿ ನೀಡಿತ್ತು.

ಇದಾಗುತ್ತದ್ದಂತೆ ಅದೇ ಊರಲ್ಲಿ ರಂಗೋಲಿ ಸ್ಪರ್ಧೆಯೂ ನಡೆಯಿತು. ನೋಡನೋಡುತ್ತಿದ್ದಂತೆ ವಿದ್ಯಾರ್ಥಿನಿಯರು ಊರ ರಸ್ತೆಯನ್ನು ಗುಡಿಸಿ ಸ್ವಚ್ಛಮಾಡಿ ರಸ್ತೆಯುದ್ದಕ್ಕೂ ಬಣ್ಣ ಬಣ್ಣದ ರಂಗೋಲಿ ಬಿಡಿಸಿಟ್ಟರು. `ನಾವು ಪೇಟೆಯಲ್ಲಿದ್ದುಕೊಂಡೇ ರಾಗಿ ಬೀಸುತ್ತೇವೆ, ರಂಗೋಲಿ ಹಾಕುತ್ತೇವೆ. ನಿವೇಕೆ ಇವನ್ನೆಲ್ಲ ಬಿಟ್ಟಿದ್ದೀರಿ ?~ ಎಂದು ವಿದ್ಯಾರ್ಥಿ–ನಿಯರೇ ಹಳ್ಳಿಯ ಮಕ್ಕಳಿಗೆ ಬುದ್ಧಿ ಹೇಳಿದರು.

ಅದೇ ದಿನ ಸಂಜೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶಿಕ್ಷಕರೂ ಸೇರಿಕೊಂಡು ದಂಡಿನ ಮಾರಿಹಬ್ಬವನ್ನೂ ಆಚರಿಸಿದರು. ಇದು ಮಕ್ಕಳಿಗಷ್ಟೇ ಅಲ್ಲ ಉಪನ್ಯಾಸಕರಿಗೂ ವಿಶೇಷ ಅನುಭವವಾಗಿತ್ತು. ಹರಕೆ ಹೊತ್ತು ಒಂದು ವರ್ಷದೊಳಗೆ ತೀರಿಸದಿದ್ದರೆ ಮುಂದಿನ ಬಾರಿ ಅಡ್ಡೆ ನೇರವಾಗಿ ಅಂಥವರ ಮನೆಗೆ ಹೋಗುತ್ತದೆ ಎಂಬುದು ನಂಬಿಕೆ.
 
ಇದನ್ನು ಪರೀಕ್ಷಿಸಬೇಕೆಂಬ ತವಕವೋ ಏನೋ,  ಅಂದು ಶಿಕ್ಷಕರೇ ಅಡ್ಡೆಯನ್ನು ಹೊತ್ತರು. `ಅಚ್ಚರಿ ಎನ್ನುವಂತೆ ನಾವು ಅಡ್ಡೆ ಹೊತ್ತಾಗಲೂ ನಮಗರಿವಿಲ್ಲದಂತೆ ಅಂಥವರ ಮನೆಗೇ ಹೋದೆವು. ನಂಬುವುದು ಸ್ವಲ್ಪ ಕಷ್ಟ, ಆದರೂ ನಮಗೆ ಆ ಅನುಭವ ಆಗಿದೆ~ ಎಂದು ಶಿಕ್ಷಕರು ನುಡಿಯುತ್ತಿದ್ದಾರೆ.

ಒಟ್ಟಿನಲ್ಲಿ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ಶಿಬಿರ ನಿಜಾರ್ಥದಲ್ಲಿ ವಿದ್ಯಾರ್ಥಿಗಳಿಗೆ ಹಳ್ಳಿಯ ಪರಿಚಯ ಮಾಡಿಸಿದೆ. ಸಂತ ಜೋಸೆಫರ ಶಾಲೆಯ ಲೊಯೆಲಾ ಸಭಾಂಗಣ ಒಂದೇ ವಾರದಲ್ಲಿ ಎರಡು ಬಾರಿ ಜಿಲ್ಲೆಯ ಮಕ್ಕಳ ಪ್ರತಿಭೆ ಸಾರುವ ವೇದಿಕೆಯಾಯಿತು.

ಮಕ್ಕಳ ಹಬ್ಬದಲ್ಲಿ ಜಿಲ್ಲೆಯ ಹಲವು ಶಾಲೆಗಳ ಮಕ್ಕಳು ವಿವಿಧ ವೇಷಭೂಷಣಗಳಿಂದ ಗಮನ ಸೆಳೆದರೆ, ಆಕಾಶವಾಣಿಯವರು ಹಮ್ಮಿಕೊಂಡ ಚಿಣ್ಣರ ಹಬ್ಬದಲ್ಲಿ ಆಯ್ದಶಾಲೆಗಳ ಮಕ್ಕಳು ತಮ್ಮ ಪ್ರತಿಭೆಯ ಮೂಲಕ ನಿಜಾರ್ಥದಲ್ಲಿ ನೋಡು ಗರನ್ನು ಬೆರಗಾಗಿಸಿದರು.
 
ಎ.ವಿ.ಕೆ ಮಹಿಳಾ ಕಾಲೇಜಿನಲ್ಲಿ ಆಕಾಶವಾಣಿ ಹಬ್ಬದ ಸಮಾರೋಪ ನಡೆಯಿತು.  ಪರೀಕ್ಷೆಗಳು ಸಮೀಪಿಸುತ್ತಿದ್ದರೂ ವಿದ್ಯಾರ್ಥಿಗಳು ಇಂಥ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವ ಮೂಲಕ ಒತ್ತಡವನ್ನು ನೀಗಿಸಿ ಹಗುರವಾಗುತ್ತಿರುವುದು ಖುಷಿಕೊಡುವ ವಿಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT