ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪ್ಯಾರಾ ಗ್ಲೈಡರ್'ನಿಂದ `ವೈಮಾನಿಕ' ಸಂದೇಶ!

Last Updated 5 ಏಪ್ರಿಲ್ 2013, 20:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮತದಾರರಲ್ಲಿ ಜಾಗೃತಿ ಮೂಡಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ `ಪ್ಯಾರಾ ಗ್ಲೈಡರ್' ಮೂಲಕ `ವೈಮಾನಿಕ ಸಂದೇಶ' ನೀಡಲು ಚುನಾವಣಾ ಆಯೋಗ ನಿರ್ಧರಿಸಿದೆ.

ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸುವ ಸಂದೇಶವನ್ನೊಳಗೊಂಡ ಕರಪತ್ರಗಳನ್ನು ಜನದಟ್ಟಣೆ ಇರುವ ನಗರ, ಕಾಲೇಜು, ಮಾಲ್‌ಗಳ ಬಳಿ ಕೆಳಮಟ್ಟದಲ್ಲಿ ಹಾರುವ ಪ್ಯಾರಾ ಮೋಟಾರ್‌ಗಳ ಮೂಲಕ ಆಕಾಶದಿಂದ ಉದುರಿಸಲಾಗುವುದು. ಈ ಯೋಜನೆಗೆ ಬೆಂಗಳೂರಿನಲ್ಲಿ ಶನಿವಾರ (ಏ.6) ಚಾಲನೆ ನೀಡಲಾಗುವುದು.

ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಮಹಾನಗರಗಳಲ್ಲಿ  ಮತದಾನ ಸಂದೇಶದ ಕರಪತ್ರಗಳೊಂದಿಗೆ `ಪ್ಯಾರಾ ಗ್ಲೈಡರ್'ಗಳು ಹಾರಾಡಲಿವೆ ಎಂದು ಚುನಾವಣಾ ಆಯೋಗ ರೂಪಿಸಿರುವ `ಸಿಸ್ಟಮೆಟಿಕ್ ವೋಟರ್ಸ್‌ ಎಜುಕೇಶನ್ ಅಂಡ್ ಇಲೆಕ್ಟ್ರೋರಲ್ ಪಾರ್ಟಿಸಿಪೇಶನ್ ಪ್ಲ್ಯಾನ್' (ಎಸ್‌ವಿಇಇಪಿ-ಸ್ವೀಪ್) ವಿಶೇಷ ಅಧಿಕಾರಿ ಕೆ.ಎಸ್.ಬೇವಿನಮರದ `ಪ್ರಜಾವಾಣಿ'ಗೆ ತಿಳಿಸಿದರು.

ಹಾಲಿನ ಪ್ಯಾಕೆಟ್ ಮೇಲೂ: ಅಲ್ಲದೆ, ಗೂಗಲ್, ಫೇಸ್‌ಬುಕ್, ಯೂ ಟ್ಯೂಬ್.. ಹೀಗೆ ಅಂತರ್ಜಾಲದ ಮೂಲಕ ಐ.ಟಿ, ಬಿ.ಟಿ ಕಂಪೆನಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಲ್ಲೂ ಪಾರದರ್ಶಕ ಮತದಾನ ಮತ್ತು ಮತದಾನದ ಹಕ್ಕು ಕುರಿತು ಜಾಗೃತಿ ಮೂಡಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಹಾಲಿನ ಪ್ಯಾಕೆಟ್‌ಗಳಲ್ಲೂ ಮತದಾನದ ಮಹತ್ವ ಅರಿಯಿರಿ, ಮತದಾನದ ದಿನ ಮರೆಯದೆ ನಿಮ್ಮ ಹಕ್ಕು ಚಲಾಯಿಸಿ...' ಎಂದು ಮತದಾರರಲ್ಲಿ ಜಾಗೃತಿ ಮೂಡಿಸುವ ಸಂದೇಶ ರವಾನಿಸಲು ಚಿಂತನೆ ನಡೆದಿದೆ.

ಮತದಾನ ಪ್ರಮಾಣವನ್ನು ಶೇಕಡಾ 90ರಿಂದ 95ರಷ್ಟು ಹೆಚ್ಚಿಸುವ ನಿಟ್ಟಿನಲ್ಲಿ `ಸ್ವೀಪ್' ಕಾರ್ಯಕ್ರಮದಡಿ ರಾಜ್ಯದಲ್ಲಿ ಪ್ರಮುಖ ಬಹುರಾಷ್ಟ್ರೀಯ ಕಂಪೆನಿಗಳ ಮಾನವ ಸಂಪನ್ಮೂಲ (ಎಚ್‌ಆರ್) ವಿಭಾಗದ ಮುಖ್ಯಸ್ಥರು ಸಿಬ್ಬಂದಿಗಳಿಗೆ `ಇ- ಮೇಲ್', ಮೊಬೈಲ್ ಎಸ್‌ಎಂಎಸ್ ಮತ್ತು ಧ್ವನಿ ಸಂದೇಶದ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ತಿಳಿವಳಿಕೆ ನೀಡಲು ಆಯೋಗ ಸೂಚಿಸಿದೆ. ಕಂಪೆನಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮತದಾನದ ಹಕ್ಕಿನ ಮಹತ್ವ ಕುರಿತು ತಿಳಿವಳಿಕೆ ನೀಡಲು ತೀರ್ಮಾನಿಸಲಾಗಿದೆ.

ರೂ. 2.5 ಲಕ್ಷ  ವೆಚ್ಚ: ಮತದಾನದಲ್ಲಿ ನಿರುತ್ಸಾಹ ತೋರಿಸುವ ಸುಶಿಕ್ಷಿತ ಮತದಾರರನ್ನು ಆಕರ್ಷಿಸುವ ಸಲುವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ, ಮತ್ತು ಮಂಗಳೂರು ಮಹಾನಗರದಲ್ಲಿರುವ ಮಾಲ್‌ಗಳಲ್ಲಿ ನೃತ್ಯ, ಬೀದಿ ನಾಟಕಗಳನ್ನು ಪ್ರದರ್ಶಿಸಲು ಆಯಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಆಯೋಗ ಸೂಚಿಸಿದೆ. `ಸ್ವೀಪ್' ಯೋಜನೆಯಡಿ ವಿವಿಧ ಕಾರ್ಯಕ್ರಮಗಳನ್ನು ಅಳವಡಿಸಿ ಕಾರ್ಯರೂಪಕ್ಕಿಳಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ್ಙ 2.5 ಲಕ್ಷ  ವೆಚ್ಚ ಮಾಡುವಂತೆ ನಿಗದಿಪಡಿಸಿದೆ.

ಬುಡಕಟ್ಟು ಜನರು ಹೆಚ್ಚು ವಾಸಿಸುವ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬುಡಕಟ್ಟು ಅಭಿವೃದ್ಧಿ ಇಲಾಖೆ ಮೂಲಕ ವಿಶೇಷ ಯೋಜನೆ ರೂಪಿಸಿ ಮತದಾರರನ್ನು ಸೆಳೆಯಲು ಕಾರ್ಯಯೋಜನೆ ಸಿದ್ಧಪಡಿಸಲು ಸೂಚಿಸಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ರೈಲು, ವಿಮಾನ ಪ್ರಯಾಣದ ಟಿಕೆಟ್‌ಗಳಲ್ಲೂ ಮತದಾನ ಹಕ್ಕಿನ ಮಹತ್ವದ ಕುರಿತು ಸ್ವೀಪ್ ಸಂದೇಶ ಮುದ್ರಿಸಲು ತಿಳಿಸಲಾಗಿದೆ.

ಮೊಹರುಗಳಲ್ಲಿ ಸಂದೇಶ: ಬ್ಯಾಂಕ್, ಅಂಚೆ ಕಚೇರಿಗಳಿಗೆ ಬರುವ ಗ್ರಾಹಕರಲ್ಲಿ ಮತದಾನದ ಜಾಗೃತಿ ಮೂಡಿಸಲು ಒಂದು ವಾಕ್ಯದ ಸಂದೇಶವನ್ನು ಮೊಹರುಗಳಲ್ಲಿ ಮುದ್ರಿಸಲು ಸೂಚಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಪ್ರತಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆಯಾ ಅಂಗನವಾಡಿ ಕಾರ್ಯಕರ್ತರು ಮತ್ತು ಸ್ವ ಸಹಾಯ ಗುಂಪುಗಳಿಗೆ ತರಬೇತಿ ನೀಡುವ ಹೊಣೆ ವಹಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರಿಗೆ ಮತ್ತು ಮತದಾರರ ನೋಂದಣಿ, ಮತದಾನದಲ್ಲಿ ಭಾಗವಹಿಸುವಿಕೆ, ಬೂತ್ ಮಟ್ಟದ ಅಧಿಕಾರಿಗಳ ಪಾತ್ರ, ಗುರುತಿನ ಚೀಟಿ, ಮತದಾರರ ಚೀಟಿ ತಲುಪಿಸುವ ಬಗ್ಗೆ ತರಬೇತಿ ನೀಡುವ ಹೊಣೆಯನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ.

`ಆಶಾ' ಕಾರ್ಯಕರ್ತೆಯರೂ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವಂತೆ ತಿಳಿಸಲಾಗಿದೆ. ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ, ಪ್ರಾಥಮಿಕ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ತಾಲ್ಲೂಕು ಮತ್ತು ಜ್ಲ್ಲಿಲಾ ಆಸ್ಪತ್ರೆಗಳಲ್ಲಿ `ಸ್ವೀಪ್' ಕಾರ್ಯಕ್ರಮ ಸಂಬಂಧಿಸಿದ ಪೋಸ್ಟರ್ ಅಂಟಿಸಲು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT