ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಲೆಸ್ಟೈನ್ ಹೋರಾಟಕ್ಕೆ ಭಾರತ ಬೆಂಬಲ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ರಾಮಲ್ಲಾ, ಪಶ್ಚಿಮ ದಂಡೆ (ಪಿಟಿಐ): ಪ್ರತ್ಯೇಕ ರಾಷ್ಟ್ರ ಸ್ಥಾನಮಾನಕ್ಕಾಗಿ ಹೋರಾಡುತ್ತಿರುವ ಪ್ಯಾಲೆಸ್ಟೈನ್‌ಗೆ ಭಾರತ ಬುಧವಾರ ಇಲ್ಲಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಪ್ರವಾಸದ ಬಳಿಕ ಇಲ್ಲಿಗೆ ಆಗಮಿಸಿದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಪ್ಯಾಲೆಸ್ಟೈನ್ ಉನ್ನತ ನಾಯಕರನ್ನು ಭೇಟಿಯಾದ ಸಂದರ್ಭದಲ್ಲಿ ಈ ಭರವಸೆ ನೀಡಿದರು.

ಸಚಿವರು ಪ್ಯಾಲೆಸ್ಟೈನ್ ಆಡಳಿತದ ಅಧ್ಯಕ್ಷ ಮಹಮದ್ ಅಬ್ಬಾಸ್, ಪ್ರಧಾನಿ ಸಲಾಮ್ ಫಯ್ಯಾದ್ ಹಾಗೂ ರಿಯಾದ್ ಅಲ್-ಮಲ್ಕಿ ಅವರನ್ನು ಭೇಟಿಯಾಗಿ ಸಮಾಲೋಚಿಸಿದರು. ಉಭಯ ದೇಶಗಳ ನಾಯಕರು ಸಮಾನ ಆಸಕ್ತಿಯ ಹಲವು ವಿಷಯಗಳು ಮತ್ತು ಪ್ರಾದೇಶಿಕ ಸಮಸ್ಯೆಗಳ ಕುರಿತು ಚರ್ಚಿಸಿದರು. ಎರಡೂ ಕಡೆಯ ನಾಯಕರು ಸಹಕಾರ ಬಲಗೊಳಿಸುವ ಬಗ್ಗೆ ಮಾತುಕತೆ ನಡೆಸಿದರು.

ಇತ್ತೀಚೆಗೆ ಯುನೆಸ್ಕೊ ಸದಸ್ಯತ್ವ ಪಡೆಯಲು ಪಾಲೆಸ್ಟೇನ್‌ಗೆ ಬೆಂಬಲ ನೀಡಿದ ಭಾರತಕ್ಕೆ ಈ ನಾಯಕರು ಕೃತಜ್ಞತೆ ಸಲ್ಲಿಸಿದರು.

ಕಳೆದ ಒಂದು ದಶಕದಲ್ಲಿ ಪ್ಯಾಲೆಸ್ಟೈನ್‌ಗೆ ಭಾರತದ ವಿದೇಶಾಂಗ ಸಚಿವರೊಬ್ಬರು ಬಂದಿರಲಿಲ್ಲ., ಕೃಷ್ಣ ಈಗ ಆ ಕೊರತೆಯನ್ನು ನೀಗಿಸಿದರು.

ಇಸ್ರೇಲ್ ಜತೆ ಒಪ್ಪಂದ
ಜೆರುಸಲೇಮ್ ವರದಿ: ಭಯೋತ್ಪಾದನೆ ವಿರುದ್ಧದ ಹೋರಾ ಟಕ್ಕೆ ಸಹಕರಿಸಲು ಅನುಕೂಲವಾಗುವಂತೆ ಗಡೀಪಾರಾದ ಮತ್ತು ಶಿಕ್ಷೆಗೊಳಗಾದ ಆರೋಪಿಗಳನ್ನು ಪರಸ್ಪರ ಹಸ್ತಾಂತರಿಸಿಕೊಳ್ಳುವ ಒಪ್ಪಂದಕ್ಕೆ ಭಾರತ ಮತ್ತು ಇಸ್ರೇಲ್ ಸಹಿ ಹಾಕಿವೆ.

ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಇಸ್ರೇಲ್‌ಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಈ ಒಪ್ಪಂದಗಳಿಗೆ ಉಭಯ ದೇಶಗಳ ನಾಯಕರು ಸಹಿ ಹಾಕಿದ್ದಾರೆ ಎಂದು ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ಇಸ್ರೇಲ್‌ನ ವಿದೇಶಾಂಗ ಸಚಿವ ಅವಿಗ್ದಾರ್ ಲೀಬರ್‌ಮನ್ ಅವರನ್ನು ಮಂಗಳವಾರ ಭೇಟಿ ಮಾಡಿದ ಕೃಷ್ಣ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. `ತಮ್ಮ ಈ ಪ್ರವಾಸ ಅತ್ಯಂತ ಅದ್ಭುತ ಹಾಗೂ ಫಲಪ್ರದ~ ಎಂದು ಬಣ್ಣಿಸಿದ್ದಲ್ಲದೆ, ಉಭಯ ದೇಶಗಳ ನಡುವಣ ಬಾಂಧವ್ಯ  ಸಹಜವಾಗಿಯೇ ಮುಂದುವರಿದ್ದು ಈ ಭೇಟಿಯಿಂದ ಮತ್ತಷ್ಟು ಗಾಢವಾಗಿದೆ ಎಂದು ಅಭಿಪ್ರಾಯಪಟ್ಟರು.

ಮುಷರಫ್ ಸಲಹೆಗೆ ಪ್ರತಿಕ್ರಿಯೆ: ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ಹೇಗಿರಬೇಕು ಎಂಬುದನ್ನು ಆಯಾ ದೇಶಗಳೇ ನಿರ್ಧರಿಸುತ್ತವೆ ಎಂದು ಕೃಷ್ಣ ಇದೇ ವೇಳೆ ಸ್ಪಷ್ಟಪಡಿಸಿದರು.

ಪಾಕ್‌ನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್, `ಭಾರತ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧ ಪಾಕಿಸ್ತಾನದ ಕ್ಷೇಮಾಭ್ಯುದಯದ ಆಶಯಗಳಿಗೆ ಪೂರಕವಾಗಿರಲಿ~ ಎಂದು ಹೇಳಿದ್ದರು. ಇದಕ್ಕೆ ಪತ್ರಕರ್ತರು ಪ್ರತಿಕ್ರಿಯೆ ಬಯಸಿದಾಗ , `ಇಸ್ರೇಲ್ ಜೊತೆಗಿನ ಗಾಢ ಸಂಬಂಧವು ಭಾರತಕ್ಕೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಅನುಕೂಲವಾಗುತ್ತದೆ~ ಎಂದು ತಿರುಗೇಟು ನೀಡಿದರು.

ಟೆನಿಸ್ ರ‌್ಯಾಕೆಟ್ ಉಡುಗೊರೆ: ಟೆನಿಸ್ ಕ್ರೀಡಾಪ್ರೇಮಿ ಮತ್ತು ಸ್ವತಃ ಆಟಗಾರರಾದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಗೆ ಇಸ್ರೆಲ್ ವಿದೇಶಾಂಗ ಸಚಿವರು ಟೆನಿಸ್ ರ‌್ಯಾಕೆಟ್ ನೀಡಿ ಗೌರವಿಸಿದರು. ಈ ರ‌್ಯಾಕೆಟ್ ಮೇಲೆ ಇಸ್ರೇಲ್‌ನ ಪ್ರಮುಖ ಟೆನಿಸ್ ಆಟಗಾರರ ಸಹಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT