ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕಾಶಿಸಿದ ಬಿಜೆಪಿ; ಒಡೆಯರ್‌ ರಾಜಕೀಯ ಅಂತ್ಯ

Last Updated 2 ಏಪ್ರಿಲ್ 2014, 11:08 IST
ಅಕ್ಷರ ಗಾತ್ರ

ಮೈಸೂರು: ಪುಟಿದೆದ್ದ ಜಾತ್ಯತೀತ ಜನತಾ ದಳದ (ಜೆಡಿಎಸ್‌) ಪ್ರಬಲ ಪೈಪೋಟಿಯ ನಡುವೆಯೂ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಕಾಶಿಸಿತು. ಬಿಜೆಪಿ ಅಭ್ಯರ್ಥಿ ಸಿ.ಎಚ್‌. ವಿಜಯಶಂಕರ್‌ ಪ್ರಯಾಸದ ಗೆಲುವಿಗೆ ಜೆಡಿಎಸ್‌ಗೆ ಪಕ್ಷಾಂತರಗೊಂಡ ಕಾಂಗ್ರೆಸ್‌ ಶಾಸಕ ಎ.ಎಸ್‌. ಗುರುಸ್ವಾಮಿ ಕಾರಣರಾದರು. ತೃತೀಯ ಸ್ಥಾನಕ್ಕೆ ಕುಸಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ರಾಜಕೀಯ ಇಲ್ಲಿಗೆ ಅಂತ್ಯವಾಯಿತು.

ಲೋಕಸಭಾ ಹಾಗೂ ಕರ್ನಾಟಕ ವಿಧಾನಸಭೆಗೆ 2004ರಲ್ಲಿ ಮತ್ತೆ ಏಕಕಾಲದಲ್ಲಿ ಚುನಾವಣೆ ಘೋಷಣೆಯಾಯಿತು. ಕೇಂದ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಹಾಗೂ ರಾಜ್ಯದಲ್ಲಿ ಎಸ್‌.ಎಂ. ಕೃಷ್ಣ ಸಾರಥ್ಯದ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸಿದ್ದವು. ರಾಜ್ಯದಲ್ಲಿ ಬಿಜೆಪಿಗೆ ತೋರಿದ ಒಲವನ್ನು ಮತದಾರ ಕಾಂಗ್ರೆಸ್‌ಗೆ ವ್ಯಕ್ತಪಡಿಸುವ ಪರಿಸ್ಥಿತಿ ಇರಲಿಲ್ಲ.

ಆಡಳಿತ ವಿರೋಧಿ ಅಲೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ ಅನ್ನು ಬಾಧಿಸಿತು. ಆದರೆ, 1999ರಲ್ಲಿ ಹೀನಾಯ ಸೋಲು ಅನುಭವಿಸಿದ್ದ ಜೆಡಿಎಸ್‌ 2004ರ ಹೊತ್ತಿಗೆ ರಾಜಕೀಯ ಭೂಮಿಕೆ ಸಿದ್ಧ ಮಾಡಿಕೊಂಡಿತು. ‘ಭಾರತ ಪ್ರಕಾಶಿಸುತ್ತಿದೆ’ ಎಂದು ಚುನಾವಣೆಗೆ ಧುಮುಕಿದ ಬಿಜೆಪಿ ಅಭ್ಯರ್ಥಿಯನ್ನು ಮೈಸೂರಿನ ಜನತೆ ಕೈ ಹಿಡಿದರು.

ಗುರುಸ್ವಾಮಿ ಪಕ್ಷಾಂತರ:
ಶಾಸಕರಾಗಿದ್ದ ಎ.ಎಸ್‌. ಗುರುಸ್ವಾಮಿ ಚುನಾವಣೆಯ ವೇಳೆಗೆ ಕಾಂಗ್ರೆಸ್‌ಗೆ ಮರ್ಮಾಘಾತ ನೀಡಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 1999ರ ವಿಧಾನಸಭಾ ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿ ಪ್ರವರ್ಧಮಾನಕ್ಕೆ ಬಂದಿದ್ದ ಗುರುಸ್ವಾಮಿಗೆ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿತು.

ನಿವೃತ್ತ ಡಿಜಿಪಿ ಎಲ್‌. ರೇವಣಸಿದ್ದಯ್ಯ ಅವರಿಗೆ ‘ಬಿ’ ಫಾರ್ಮ್ ನೀಡಿತು. ಇದರಿಂದ ಅಸಮಾಧಾನಗೊಂಡ ಗುರುಸ್ವಾಮಿ ಅವರಿಗೆ ಸಿದ್ದರಾಮಯ್ಯ ನೆರವಾದರು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಅವರನ್ನು ಕಣಕ್ಕೆ ಇಳಿಸಲಾಯಿತು. ಆಡಳಿತ ವಿರೋಧಿ ಅಲೆಯಲ್ಲಿ ಕರಗಿ ಹೋಗಿದ್ದ ಕಾಂಗ್ರೆಸ್‌ಗೆ ಇದು ನುಂಗಲಾರದ ತುತ್ತಾಯಿತು.

ವಾಜಪೇಯಿ ಸಾಧನೆಯನ್ನು ಮುಂದಿಟ್ಟುಕೊಂಡು ಬಿಜೆಪಿ, ರಾಜ್ಯದ ಎಸ್‌.ಎಂ. ಕೃಷ್ಣ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತಾ ಜೆಡಿಎಸ್‌ ಚುನಾವಣಾ ಅಖಾಡಕ್ಕೆ ಇಳಿದವು. ಹೀಗಾಗಿ, ಜೆಡಿಎಸ್‌, ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತು. ಎರಡೂ ಚುನಾವಣೆ ಒಟ್ಟಿಗೆ ಬಂದಿದ್ದು ಜೆಡಿಎಸ್‌ಗೆ ಸಹಕಾರಿಯಾಯಿತು. ಚಾಮುಂಡೇಶ್ವರಿ (ಸಿದ್ದರಾಮಯ್ಯ), ಕೃಷ್ಣರಾಜ (ಎಂ.ಕೆ. ಸೋಮಶೇಖರ್‌), ಹುಣಸೂರು (ಜಿ.ಟಿ. ದೇವೇಗೌಡ), ಎಚ್‌.ಡಿ.ಕೋಟೆ (ಎಂ.ಪಿ. ವೆಂಕಟೇಶ್‌), ಕೆ.ಆರ್‌.ನಗರ (ಮಹದೇವ್‌), ಪಿರಿಯಾಪಟ್ಟಣ (ಕೆ. ವೆಂಕಟೇಶ್‌) ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಕೈ ಹಿಡಿದ ಮತದಾರರು, ಲೋಕಸಭೆಯ ಜೆಡಿಎಸ್‌ ಅಭ್ಯರ್ಥಿ ಗುರಸ್ವಾಮಿಗೂ ಒಲವು ತೋರಿದರು. ಹೀಗಾಗಿ, ಕೇವಲ 10,150 ಮತಗಳ ಅಂತರದಿಂದ ಬಿಜೆಪಿಯ ವಿಜಯಶಂಕರ್‌ ಪ್ರಯಾಸದ ಗೆಲುವು ಸಾಧಿಸಿದರು.

‘1999ರ ಚುನಾವಣೆ ಸಾಕಷ್ಟು ಪಾಠ ಕಲಿಸಿತ್ತು. ಹೀಗಾಗಿ, ಮುಂದಿನ ಚುನಾವಣೆಗೆ ಐದು ವರ್ಷ ಸಿದ್ಧತೆ ನಡೆಸಿದೆ. ಜನರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡೆ. ಸಮಸ್ಯೆಗಳಿಗೆ ಸ್ಪಂದಿಸಿದೆ. ಅಲ್ಲದೇ, ದೇಶದಲ್ಲಿ ಅಟಲ್‌ಜಿ ಪರ ಅಲೆ ಇತ್ತು. ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂಬುದು ಮೈಸೂರು ಮತದಾರರ ಅಪೇಕ್ಷೆಯಾಗಿತ್ತು. ಹೀಗಾಗಿ, ವಿಜಯ ಸಾಧಿಸಲು ಸಾಧ್ಯವಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಸಿ.ಎಚ್‌. ವಿಜಯಶಂಕರ್‌.

ಒಡೆಯರ್‌ ರಾಜಕೀಯ ಅಂತ್ಯ:
1984ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರಿಗೆ 2004ರ ಚುನಾವಣೆಯೇ ಕೊನೆಯದಾಯಿತು. ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರು, ಈ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದರು. ಹಿಂದಿನ ಚುನಾವಣೆಯಲ್ಲಿ ಮತದಾರರು ತೋರಿದ್ದ ‘ರಾಜಭಕ್ತಿ’ ಈ ಚುನಾವಣೆಯಲ್ಲಿ ಲಭಿಸಲಿಲ್ಲ. ಆ ಬಳಿಕ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೂಡ ಕೈತಪ್ಪಿತು. ಹೀಗಾಗಿ, ಒಡೆಯರ್‌ ರಾಜಕೀಯ ಇಲ್ಲಿಗೆ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT