ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ಆರಾಧಕ ಲೆವಿಟನ್ !

Last Updated 7 ಜುಲೈ 2012, 19:30 IST
ಅಕ್ಷರ ಗಾತ್ರ

ಆಗಸ್ಟ್ 30 1860ರಲ್ಲಿ ಜನಿಸಿದ ಕಲಾವಿದ ಐಸಾಕ್ ಲೆವಿಟನ್‌ನ ತಾಯ್ನಾಡು ರಷ್ಯ. ರಮಣೀಯ ಭೂದೃಶ್ಯಗಳು ಆತನ ಕಲಾವಸ್ತು. ಬಡ, ಆದರೆ ವಿದ್ಯಾವಂತ ಯಹೂದಿ ಕುಟುಂಬದಿಂದ ಬಂದಾತ ಲೆವಿಟನ್. ಜಾರ್ ದೊರೆಗಳ ಆಡಳಿತದಲ್ಲಿ ಯಹೂದಿಗಳಿಗೆ ಅಷ್ಟೇನೂ ಮನ್ನಣೆ ಇರಲಿಲ್ಲ. ಇದೇ ಕಾರಣಕ್ಕೆ ಆತ ತನ್ನ ಬದುಕಿನ ಹಲವು ಘಟ್ಟಗಳನ್ನು ಒಂಟಿಯಾಗಿ ಕಳೆದ.

ಕಲಾವಿದ ಐಸಾಕ್ ಲೆವಿಟನ್ ಮಾಸ್ಕೊ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ. ಅವನು ಅಭ್ಯಸಿಸುತ್ತಿದ್ದ ವಿಷಯ ಪ್ರಕೃತಿ. ಆಗ ಪರಿಚಯವಾಗಿದ್ದು ಗುರು ಸಾವ್ರಸೋವ್. ಅವರು ಕೇವಲ ಗುರುವಷ್ಟೇ ಆಗಿರಲಿಲ್ಲ ಆತನ ಪಾಲಿನ ಮಾರ್ಗದರ್ಶಕರಾಗಿದ್ದರು. ಆತನ ಚಿಂತನೆಗಳನ್ನು ರೂಪಿಸುವ ಶಿಲ್ಪಿಯಾಗಿದ್ದರು.

ಒಮ್ಮೆ ಇಬ್ಬರೂ ಹೋಟೆಲ್ ಕೋಣೆಯೊಂದರಲ್ಲಿ ಕುಳಿತಿದ್ದ ಸಂದರ್ಭ. ನಡುಗುತ್ತಿದ್ದ ಕೈಗಳನ್ನು ಬಿಗಿ ಹಿಡಿದು ಸಾವ್ರಸೋವ್ ಹೇಳಿದ ಮಾತುಗಳಿವು: ನಾವು ರಷ್ಯನ್ನರು ರಣಹೇಡಿಗಳು. ದೇಶದ ಸ್ಥಿತಿಗೆ ಕಂಗಾಲಾಗಿದ್ದರೂ ಜನರ ಕಷ್ಟ ಕಾರ್ಪಣ್ಯಗಳನ್ನು ಕಲೆಯ ಮೂಲಕ ತೋರಿಸುವ ಧೈರ್ಯ ತಾಳದವರು.
 
ಫ್ರಾನ್ಸ್‌ನ ಕೊರೋಟ್ ತನ್ನ ದೇಶವನ್ನು ಎಷ್ಟು ಪ್ರೀತಿಸುತ್ತಾನೆ ನೋಡು. ಅವನೂ ನಮ್ಮ ಹಾಗೆ ಪ್ರಕೃತಿ ಆರಾಧಕ ಕಲಾವಿದ. ಆದರೆ ಅವನಿಗೆ ತನ್ನ ದೇಶದ ಪ್ರಕೃತಿಯನ್ನು ತೋರಿಸುವ ಎದೆಗಾರಿಕೆಯಿದೆ. ನಾವು ಶುದ್ಧ ಕುರುಡರು...

ವಿದ್ಯಾಭ್ಯಾಸದ ತರುವಾಯ ಲೆವಿಟನ್ ಬದುಕು ಹೊಸ ತಿರುವು ಪಡೆಯಿತು. ಅಂಥ ಸಂಕ್ರಮಣದ ಕಾಲದಲ್ಲಿಯೇ ಸಹಪಾಠಿ ನಿಕೊಲಾಯ್ ಚೆಕಾಫ್‌ನ ಸಹೋದರ ಆ್ಯಂಟನ್ ಚೆಕಾಫ್‌ನನ್ನು ಆತ ಸಂಧಿಸಿದ. (ಚೆಕಾಫ್ ಮುಂದೆ ವಿಶ್ವಪ್ರಸಿದ್ಧ ಸಾಹಿತಿಯಾದ).

ಈತನ ಕಲಾಕೃತಿಗಳಿಗೆ ಮಾರು ಹೋಗಿ ಚೆಕಾಫ್ ಸುಂದರವಾದುದನ್ನೆಲ್ಲಾ ಲೆವಿಟನ್‌ಗೆ ಹೋಲಿಸುತ್ತಿದ್ದನು. ಅಷ್ಟೇ ಅಲ್ಲದೆ ಆತನಿಗಾಗಿ ಹೊಸ ವಿಶೇಷಣವನ್ನೇ ಹುಟ್ಟು ಹಾಕಿದನು. ಉದಾಹರಣೆಗೆ ಏನಾದರೂ ಇಷ್ಟವಾಗದಿದ್ದಲ್ಲಿ ಚೆಕಾಫ್ ತಕ್ಷಣ `ನಾಟ್ ಯಾಸ್ ಲೆವಿಟನಿಸ್ಟಿಕಲಿ ಬ್ಯೂಟಿಫುಲ್~ ಎಂದು ಹೇಳಿ ಬಿಡುತ್ತಿದ್ದ.

ಬರಬರುತ್ತಾ ಆ ಪದ ವಿಮರ್ಶಕರನ್ನೂ, ಕಲಾ ಇತಿಹಾಸಕಾರರನ್ನು ಅಷ್ಟೇಕೆ ಸಾಹಿತಿಗಳನ್ನೂ ಸೆಳೆಯಿತು. ಲೆವಿಟನ್ ಕಲಾಕೃತಿಗಳನ್ನು ವಿಮರ್ಶಿಸುವ ಸಂದರ್ಭಗಳಲ್ಲಂತೂ ಅದು ಎಡೆಬಿಡದೆ ಬಳಕೆಯಾಗತೊಡಗಿತು.

ಲೆವಿಟನ್‌ನ ಕಲಾಕೃತಿಗಳು ಸ್ಫುರಿಸುತ್ತಿದ್ದ ದುಃಖಭಾವ ಹಾಗೂ ಸಾಮಾಜಿಕ ಬದಲಾವಣೆಗಳ ಬಗೆಗಿದ್ದ ಆತನ ಕಾಳಜಿ ಚೆಕಾಫ್‌ಗೆ ಅರ್ಥವಾಗುತ್ತಿತ್ತು. ಸಣ್ಣಪುಟ್ಟ ಜಗಳಗಳಿದ್ದರೂ ಅವು ಇಬ್ಬರನ್ನೂ ಬೇರೆ ಮಾಡಲಿಲ್ಲ.

`ಸನ್ನಿ ಡೇ~, `ಬ್ರಿಡ್ಜ್~, `ಬಿರ್ಚ್ ಫಾರೆಸ್ಟ್~ `ಸ್ಪ್ರಿಂಗ್ ಹೈ ವಾಟರ್~, `ವಾಟರ್ ಲಿಲ್ಲೆಸ್~ `ಶೋರ್~, `ಡಾನ್~ ಅವನ ಪ್ರಸಿದ್ಧ ಕಲಾಕೃತಿಗಳಲ್ಲಿ ಕೆಲವು. ವಿಮರ್ಶಕರ ಪಾಲಿಗೆ ಆತನ ಅನೇಕ ಕಲಾಕೃತಿಗಳು ಕಳೆದುಹೋದ ಬಾಲ್ಯವನ್ನು ಅರಸುವಂತೆ ತೋರಿವೆ.

ಇಂಥ ಲೆವಿಟನ್ 1900ರಲ್ಲಿ ಕ್ಷಯರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ. ಆಗ ಆತನ ವಯಸ್ಸು ಕೇವಲ ನಲವತ್ತು ವರ್ಷ. ಕಡೆಯ ದಿನಗಳನ್ನು ಆತ ಕಳೆದಿದ್ದು ಗೆಳೆಯ ಚೆಕಾಫ್‌ನೊಂದಿಗೆ.

ಲೆವಿಟನ್‌ನ ಕೊನೆಯ ದಿನಗಳ ಕಲಾಕೃತಿಗಳು ಭಾವಾವೇಶದಿಂದ ಅಧ್ಯಾತ್ಮದ ಹೊಳಹಿನಿಂದ ಕೂಡಿದ್ದವು. ಅಷ್ಟು ಹೊತ್ತಿಗೆ ಲೆವಿಟನ್ ಬದುಕಿನಲ್ಲೂ ಹರ್ಷ ಎದ್ದು ತೋರುತ್ತಿತ್ತು. ರಷ್ಯ ತನ್ನ ಮೇಲಾದ ಆಕ್ರಮಣಗಳಿಂದ ಕ್ರಮೇಣ ಹೊರಬರುತ್ತಿದ್ದುದು ಕೂಡ ಇದಕ್ಕೆ ಕಾರಣವಿರಬಹುದು ಎಂಬ ಅಭಿಪ್ರಾಯಗಳಿವೆ.

ರಷ್ಯದಲ್ಲಿ ಆತ ಎಷ್ಟು ಪ್ರಸಿದ್ಧನೆಂದರೆ ಸೋವಿಯತ್ ಖಗೋಳ ವಿಜ್ಞಾನಿಯೊಬ್ಬ ತಾನು ಕಂಡು ಹಿಡಿದ ಪುಟ್ಟ ಗ್ರಹಕ್ಕೆ ಲೆವಿಟನ್‌ನ ಹೆಸರಿಟ್ಟಿದ್ದಾನೆ!

ಹೀಗೆ ಅಲೆಯಬಹುದು ನೀನು 

ಮಾಗಿದೆಲೆಯನು ಬೀಳ್ಕೊಡಲು
ಚಳಿಗಾಲದ ನಿನ್ನ ಗೌನು
ಸಣ್ಣಗೆ ತೂಗಿ ತುಯ್ದೊಡಿದ ಪರಿಗೆ
ಗೋಧಿ ತೆನೆ ಗರಿಕೆಯಾದದ್ದು
ಕಾಲ ಗಮಾರನು ಗುರುತಿಸಲೇಯಿಲ್ಲ ಮೆಪಲ್
  
ಇಷ್ಟಕ್ಕು ಮೊದಲು ನಡೆದವಳಿಗೆ 
ದಾರಿಯೊಂದಿತ್ತೇ ಈ ಊರಿನಲ್ಲಿ
ಹೋದ ಹಾದಿಯಲ್ಲಿ ಸಿಗುವ ಚಂದಿರರಿಗೇನು
ಹೆಜ್ಜೆಯಿಟ್ಟಲ್ಲಿ ಮುತ್ತಿಕ್ಕುವ ಮಾಗಿ ದೂಳಿನಂತೆ

ಹಸಿರು ಬರೆಯಲು ತೋಫು
ಅಳಿಸಿಬಿಡುವುದು ಬಾನು
ಇನ್ನು ಎಷ್ಟು ಪ್ರೀತಿಯಿಲ್ಲದಿದ್ದರೆ
ಹೀಗೆ ಅಲೆಯಬಹುದು ನೀನು!

ಋತು ಉಯಿಲಿನ ಭಾಷೆ ಅರ್ಥವಾಗಿದ್ದರೆ
ಸಾಲು ಮರನೆಟ್ಟ ಬೇಸಾಯಗಾರ
ಪಾಪ ನೆರಳು ಹುಡುಕಿ ಹೋಗುತ್ತಿರಲೇ ಇಲ್ಲ
ಅದೇನು ಕಂಡನೋ ಆಗಸದಲ್ಲಿ
ಚಪ್ಪಲಿಯೂ ಬಿಟ್ಟು ಹೋದ ಇಲ್ಲಿಯೇ

ಅಲ್ಲಿ ಆ ತಿರುವಿನಲ್ಲಿ ಅರವಟ್ಟಿಗೆ ಮಡಿಕೆಯಲಿ
ಸ್ವರ್ಗದ ಶವಯಾತ್ರೆಗೆ ಹೂವು ಎತ್ತಿಟ್ಟಿರುವೆ
ಎಲೆ ಋತುವಿನ ಮಗಳೆ; ಸಿಕ್ಕರೆ ಅವನಿಗೂ ಸ್ವಲ್ಪ ಕೊಡು
ಹೋಗಿ ಬಾ ಇನ್ನು ನಿನಗೀಗ ವಿದಾಯ!

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT