ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ಚಿಕಿತ್ಸೆಗೆ ಸರ್ಕಾರದ ಆದ್ಯತೆ: ಕಾಗೇರಿ

Last Updated 3 ಅಕ್ಟೋಬರ್ 2012, 6:05 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಐದು ರಸ್ತೆ ಸಮೀಪ ನಿರ್ಮಾಣಗೊಂಡಿರುವ ಅನಂತರಾವ್ ಬಿಳಗಿ ಸ್ಮಾರಕ ನಿಸರ್ಗ ಆಸ್ಪತ್ರೆ ಇನ್ನು ಮುಂದೆ ನೂತನ ಕಟ್ಟಡದಲ್ಲಿ ಹೈಟೆಕ್ ಪ್ರಕೃತಿ ಚಿಕಿತ್ಸಾ ಸೌಲಭ್ಯ ಒದಗಿಸಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಆಸ್ಪತ್ರೆಯ ನಾಲ್ಕು ಅಂತಸ್ತಿನ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿದರು. ರಾಜ್ಯ ಸರ್ಕಾರ ಭಾರತೀಯ ಮೂಲದ ಪ್ರಕೃತಿ ಚಿಕಿತ್ಸೆಗೆ ಸಾಕಷ್ಟು ಮಹತ್ವ ನೀಡಿದ್ದು, ನಾಲ್ಕು ವರ್ಷಗಳ ಅವಧಿಯಲ್ಲಿ ಆಯುಷ್ ಇಲಾಖೆಗೆ ಬಜೆಟ್‌ನಲ್ಲಿ ರೂ 76 ಕೋಟಿ ಅನುದಾನ ನೀಡಲಾಗಿದೆ.
 
2008-09ನೇ ಸಾಲಿನಲ್ಲಿ ಆಯುಷ್ ಇಲಾಖೆ ಬಜೆಟ್ ಕೇವಲ ರೂ.3.5 ಕೋಟಿ ಆಗಿತ್ತು. ಸರ್ಕಾರ ಮೂರು ಸ್ಥಳಗಳಲ್ಲಿ ಪ್ರಕೃತಿ ಚಿಕಿತ್ಸೆ ಕಾಲೇಜ್ ಆರಂಭಿಸಲು ಅನುಮತಿ ನೀಡಿದೆ. 10ರಷ್ಟು ಯೋಗ ಘಟಕಗಳಿಗೆ ಅನುಮತಿ ನೀಡಿದ್ದು, ಮೂರು ಕೇಂದ್ರ ಕಾರ್ಯ ಆರಂಭಿಸಿದೆ ಎಂದರು.

ಉನ್ನತ ವ್ಯಾಸಂಗ ಮಾಡಿ ವಿದೇಶಕ್ಕೆ ತೆರಳಿ ಉದ್ಯೋಗ ಮಾಡಿ ಹಣ ಗಳಿಸುವುದಕ್ಕಿಂತ ಹುಟ್ಟಿದ ನೆಲದಲ್ಲಿದ್ದು ಹೆಚ್ಚಿನ ಸಾಧನೆ ಮಾಡುವುದು ಮಹತ್ವದ್ದಾಗಿದೆ ಎಂದರು.

ವಿ.ಆರ್. ದೇಶಪಾಂಡೆ ಸ್ಮಾರಕ ಯೋಗ ಭವನ ಉದ್ಘಾಟಿಸಿದ ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಮನುಷ್ಯ ತನ್ನ ದಿನಚರಿ ವ್ಯವಸ್ಥಿತವಾಗಿ ಇಟ್ಟುಕೊಂಡರೆ ಆರೋಗ್ಯ ಭಾಗ್ಯ ಲಭಿಸುತ್ತದೆ ಎಂದರು.

ಸಂಸದ ಅನಂತಕುಮಾರ ಹೆಗಡೆ  ಒಳರೋಗಿ ವಿಭಾಗ ಉದ್ಘಾಟಿಸಿದರು. ಭಾರತೀಯ ಜೀವನ ಪದ್ಧತಿ ಉತ್ತಮವಾಗಿದ್ದರೂ, ಅದರ ಅರಿವಿಲ್ಲದೆ ಯುವ ಜನತೆ ಪಾಶ್ಚಾತ್ಯ ಅನುಕರಣೆ ಮಾಡುತ್ತಿದೆ ಎಂದು ವಿಷಾದಿಸಿದರು.

ಆಯುಷ್ ಇಲಾಖೆ ನಿರ್ದೇಶಕ ಜಿ.ಎನ್.ಶ್ರೀಕಂಠಯ್ಯ ಮಾತನಾಡಿ, `ಸೂಕ್ತ ಉಸಿರಾಟದ ಪದ್ಧತಿ ಕಲಿತರೆ ಮುಕ್ಕಾಲು ಭಾಗ ರೋಗ ತಡೆಗಟ್ಟಬಹುದು. ಯೋಗ, ಸರಳ ಸಾತ್ವಿಕ ಆಹಾರ ಪದ್ಧತಿಯಿಂದ ರೋಗ ನಿಯಂತ್ರಣ ಸಾಧ್ಯ~ ಎಂದರು.

ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಅಶೀಸರ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಪರಿಷತ್ ಮಾಜಿ ನಿರ್ದೇಶಕ ಡಾ.ಚಿದಾನಂದ ಮೂರ್ತಿ, ಹೈಕೋಟ್ ವಕೀಲ ಎಂ.ಎಸ್.ಭಾಗವತ, ಅನಂತರಾವ್ ಬಿಳಗಿ ಟ್ರಸ್ಟ್‌ನ ರಾಮಾ ಜೋಶಿ, ಡಾ. ಸಂತೋಷ ನಾಡಿಗೇರ, ರವಿ ಸಭಾಹಿತ, ಡಾ.ವೆಂಕಟ್ರಮಣ ಹೆಗಡೆ, ಡಾ.ಜಿತೇಶ ಪಿ. ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT