ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ಮಡಿಲಲ್ಲಿ ಚಿತ್ರಕಲೆ ಸಂಭ್ರಮ

ಚಂದ್ರವಳ್ಳಿಯಲ್ಲಿ ಗಮನಸೆಳೆದ ಚಿತ್ರಕಲಾ ಸ್ಪರ್ಧೆ
Last Updated 6 ಜನವರಿ 2014, 5:53 IST
ಅಕ್ಷರ ಗಾತ್ರ

ಚಿತ್ರದುರ್ಗ: ಸುಮಾರು 181 ವಿದ್ಯಾರ್ಥಿಗಳು ಭಾಗವಹಿಸಿದ್ದ ಚಿತ್ರ ಬಿಡಿಸುವ ಸ್ಪರ್ಧೆ ಮಕ್ಕಳಲ್ಲಿ ಎಲ್ಲಿಲ್ಲದ ಉತ್ಸಾಹ, ಉಲ್ಲಾಸಕ್ಕೆ ಸಾಕ್ಷಿಯಾಯಿತು. ಜತೆಗೆ, ಚಂದ್ರವಳ್ಳಿಯ ನಿಸರ್ಗದ ಮಡಿಲ ಮುಂದೆ ಕುಳಿತ್ತಿದ್ದೇವೆ ಎನ್ನುವಂಥ ಸಂಭ್ರಮದ ವಾತಾವರಣ ಮಕ್ಕಳ ಮನದಲ್ಲಿ ಸೃಷ್ಟಿಯಾಗಿತ್ತು.

ಮಕ್ಕಳು ಭಾನುವಾರ ಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ನಗರದ ಹೊರವಲಯದ ಚಂದ್ರವಳ್ಳಿಗೆ ಆಗಮಿಸಿದರು. ಬೆನ್ನಿನ ಹಿಂದೆ ಚೀಲಗಳನ್ನು ಕಟ್ಟಿಕೊಂಡು ನಾ ಮುಂದು ತಾ ಮುಂದು ಎನ್ನುವಂತೆ ಸ್ಪರ್ಧೆ ಸ್ಥಳದತ್ತ ಸಾಗಿದರು.  ನಂತರ ಚಿತ್ರ ಬಿಡಿಸಲು ಶುರು ಮಾಡಿದ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಕುಳಿತು ಚಿತ್ತಾರ ಬಿಡಿಸಲು ಮುಂದಾದರು.

ಭೂಮಿಗೀತಾ, ಇನ್ನರ್‌ವ್ಹೀಲ್ ಕ್ಲಬ್, ಚೈತನ್ಯ ಟ್ಯುಟೋರಿಯಲ್ಸ್ ಹಾಗೂ ಸಲ್ಯೂಷನ್ ಕೋಚಿಂಗ್ ಸೆಂಟರ್ ಆಶ್ರಯದಲ್ಲಿ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ವನ್ಯಜೀವಿ ಛಾಯಾಗ್ರಾಹಕ ಎಚ್.ಎಸ್.ಅನಂತ್ ಈ ಸಂದರ್ಭದಲ್ಲಿ ಮಾತನಾಡಿ, ಪ್ರಕೃತಿ ಮಡಿಲಲ್ಲಿ ಇಂತಹ ಕಾರ್ಯಕ್ರಮ ನಡೆದಾಗ ಮಕ್ಕಳ ಮನಸ್ಸು ಪರಿಸರದ ಬಗ್ಗೆ ಹೆಚ್ಚಿನ ಒಲವು ಮೂಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಮಾನವನ ದುರಾಸೆಯಿಂದ ಅಭಿವೃದ್ಧಿಯ ಹೆಸರಲ್ಲಿ ಅರಣ್ಯ, ಪ್ರಾಣಿ ಹಾಗೂ ಪಕ್ಷಿಗಳ ನಿರಂತರ ಮಾರಣಹೋಮ ನಡೆಯುತ್ತಿದ್ದು, ಇಂದಿನ ಯುವ ಪೀಳಿಗೆ ಪರಿಸರ ರಕ್ಷಿಸುವಲ್ಲಿ ಪಣ ತೊಡಬೇಕಾಗಿದೆ ಎಂದು ತಿಳಿಸಿದರು.

ಭೂಮಿಗೀತಾ ಸಂಸ್ಥೆಯ ಮಿಠಾಯಿ ಆರ್.ಮುರುಗೇಶ್ ಪ್ರಾಸ್ತಾವಿಕ ಮಾತನಾಡಿ, ಮಕ್ಕಳಿಗೆ ಪರಿಸರದ ಕಾಳಜಿ ಮೂಡಿಸುವಲ್ಲಿ ಸಂಸ್ಥೆ ಶ್ರಮಿಸುತ್ತಿದ್ದು, ಭೂ, -ಜಲ-, ವಾಯು ಸಾಹಸ ಶಿಬಿರಗಳ ಮೂಲಕ ಮಕ್ಕಳಲ್ಲಿ ಏಕಾಗ್ರತೆ ಬೆಳೆಸಲಾಗುತ್ತಿದೆ. ಪರಿಸರ ರಕ್ಷಣೆ, ಪ್ರಾಣಿ ಪಕ್ಷಿಗಳ ಮಹತ್ವದ ಬಗ್ಗೆ ತಿಳಿಸಿಕೊಡಲಾಗುತ್ತಿದೆ ಎಂದರು.

ಸುತ್ತಮುತ್ತ ಪರಿಸರದಲ್ಲಿ ನೂರಾರು ಗಿಡ ನೆಟ್ಟು ಪೋಷಿಸುತ್ತಿರುವ ಎ.ಜೆ.ಶಶಾಂಕ್‌ ಅವರನ್ನು ಈ ಸಂದರ್ಭದಲ್ಲಿ ಪರಿಸರ ಸ್ನೇಹಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಮೊದಲು ಮಕ್ಕಳಿಗೆ ನಮ್ಮ ಸುತ್ತಮುತ್ತ ಪರಿಸರ ಹಾಗೂ ವನ್ಯಜೀವಿ ಸಂಕುಲಗಳ ಸಂರಕ್ಷಿಸುವ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಕಾವೇರಿ ಸುಲ್ತಾನಿಪುರಿ, ವೈಷ್ಣವಿ ಹಂಚಾಟೆ ಸೇರಿದಂತೆ ನಗರದ ನಾನಾ ಶಾಲೆಗಳ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಶೈಲಾ ಅರುಣ್ ಮಾತನಾಡಿದರು. ಶಿಕ್ಷಕ ಡಿ.ಎಸ್.ಶಂಕರ್, ಗಣೇಶ್, ಎಂ.ಬಿ.ವೀರೇಶ್ ಹಾಜರಿದ್ದರು.

ಚಿತ್ರಕಲಾ ಸ್ಪರ್ಧೆ ವಿಜೇತರು
ಪ್ರಾಥಮಿಕ ವಿಭಾಗ:
ಎಸ್.ದೀಪಾರಾಣಿ (ವಾಸವಿ ವಿದ್ಯಾಸಂಸ್ಥೆ) 1, ಶಾಜಿಯಾ ಶಾಹೀನ್ (ಡಾನ್ ಬಾಸ್ಕೊ ವಿದ್ಯಾಸಂಸ್ಥೆ) 2, ಆರ್ಶಿಯಾ ಕೌಸರ್ (ಪಾರ್ಶ್ವನಾಥ ವಿದ್ಯಾಸಂಸ್ಥೆ) 3. ಡಾನ್ ಬಾಸ್ಕೊ ಶಾಲೆಯ ಮಹಮದ್ ಇಬ್ರಾಹಿಂ ಸಮಾಧಾನಕರ ಬಹುಮಾನ ಪಡೆದರು.

ಪ್ರೌಢಶಾಲಾ ವಿಭಾಗ: ಮನೋಜ್ ಕುಮಾರ್ (ಡಾನ್ ಬಾಸ್ಕೊ ವಿದ್ಯಾಸಂಸ್ಥೆ) 1, ಕಾವೇರಿ ಸುಲ್ತಾನಿಪುರಿ (ಡಾನ್ ಬಾಸ್ಕೊ ವಿದ್ಯಾಸಂಸ್ಥೆ) 2, ಶಾಲೆಯ ಅದಿತ ಸಿ.ಗುಪ್ತ (ಸೆಂಟ್ ಜೋಸೆಫ್ ಕಾನ್ವೆಂಟ್) 3. ವಾಸವಿ ವಿದ್ಯಾಸಂಸ್ಥೆಯ ಎನ್.ಭಾಸ್ಕರ್ ಸಮಾಧಾನಕರ ಬಹುಮಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT