ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಗೆ ವಿರುದ್ಧವಾದ ವಿಜ್ಞಾನ ಬೇಡ: ಪರಮೇಶ್

Last Updated 12 ಫೆಬ್ರುವರಿ 2011, 9:15 IST
ಅಕ್ಷರ ಗಾತ್ರ

ಹಾಸನ: ‘ವಿಜ್ಞಾನದಲ್ಲಿ ಅನುಕೂಲ, ಅನಾನುಕೂಲ ಎರಡೂ ಇದೆ. ಅನಾನುಕೂಲಗಳನ್ನು ನಿರ್ಲಕ್ಷಿಸಿ ವಿಜ್ಞಾನದ ಬೆಳವಣಿಗೆಯಿಂದಾಗುವ ಅನುಕೂಲಗಳತ್ತ ಗಮನ ಹರಿಸಬೇಕು. ಪ್ರಕೃತಿಗೆ ವಿರುದ್ಧವಾಗಿ ಹೋಗುವ ಕಾರ್ಯವನ್ನು ಯಾರೂ ಮಾಡ ಬಾರದು’ ಎಂದು ಹಾಸನದ ವೈದ್ಯ ಕೀಯ ಕಾಲೇಜಿನ ಜೀವ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್. ಪರಮೇಶ್ ನುಡಿದರು.

ಕಾಲೇಜು ಶಿಕ್ಷಣ ಇಲಾಖೆ ಹಾಗೂ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.‘ಈಚಿನ ದಿನಗಳಲ್ಲಿ ಕಾಲೇಜುಗಳಲ್ಲಿ ವಿಜ್ಞಾನ ವಸ್ತುಪ್ರದರ್ಶನಗಳೇ ವಿರಳವಾಗುತ್ತಿವೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿಸುವಲ್ಲಿ ಇಂಥ ಪ್ರದರ್ಶನಗಳು ಸಹಾಯ ಮಾಡುತ್ತವೆ. ಮಕ್ಕಳು ಪ್ರದರ್ಶಿಸಿದ ಮಾದರಿಗಳಲ್ಲಿ ತಪ್ಪುಗಳಿರಬಹುದು. ಆದರೆ ನಾವು ಅವರು ಮಾಡಿದ ಒಳ್ಳೆಯ ಕೆಲಸವನ್ನು ಗಮನಿಸಿ ಪ್ರೋತ್ಸಾಹ ನೀಡಬೇಕು’ ಎಂದು ಪರಮೇಶ್ ನುಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಚ್.ಎಸ್. ಪ್ರಕಾಶ್, ‘ಈಚಿನ ಕೆಲವು ದಶಕಗಳಲ್ಲಿ ವೈಜ್ಞಾನಿಕವಾಗಿ ಭಾರತ ಜಗತ್ತೇ ಬೆರಗಾಗುವಂಥ ಸಾಧನೆ ಮಾಡುತ್ತಿದೆ. ಆದರೆ ಅಷ್ಟೇ ಮೌಢ್ಯವೂ ನಮ್ಮಲ್ಲಿ ತುಂಬಿಕೊಂಡಿದೆ. ಗ್ರಾಮೀಣ ಜನರಲ್ಲಿ ತುಂಬಿರುವ ಮೌಢ್ಯವನ್ನು ಕಡಿಮೆ ಮಾಡುವ ಕಾರ್ಯ ಆಗಬೇಕಾಗಿದೆ’ ಎಂದರು.

‘ಗಂಟೆಗೆ 800 ಕಿ.ಮೀ ವೇಗದ ವಿಮಾನ ನಿರ್ಮಿಸಿದ ನಗರದಲ್ಲೇ ಮಾಟ, ಮಂತ್ರಗಳ ಬಗೆಗೂ ಭಾರಿ ಚರ್ಚೆ ನಡೆಯುತ್ತದೆ. ಮೌಢ್ಯ ಮತ್ತು ವಿಜ್ಞಾನ ಜತೆಜತೆಯಾಗಿರಲಾರದು.  ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಇದು ತಂತ್ರಜ್ಞಾನದ ಯುಗ. ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಯಾವ್ಯಾವ ರೂಪ ತಾಳುವುದು ಎಂದು ಊಹಿಸುವುದೇ ಕಷ್ಟ. ಇದನ್ನು ಅಭಿವೃದ್ಧಿಗೆ ಬಳಸಿಕೊಳ್ಳಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ವಿ. ಕೃಷ್ಣಪ್ಪ ‘ವೈದ್ಯಕೀಯ ಎಂಜಿನಿಯರಿಂಗ್ ಕೋರ್ಸ್‌ಗಳ ಅಬ್ಬರದಲ್ಲಿ ಮೂಲ ವಿಜ್ಞಾನವನ್ನು ನಮ್ಮ ವಿದ್ಯಾರ್ಥಿಗಳು ಮರೆಯುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಈ ಪ್ರದರ್ಶನದ ಉದ್ದೇಶ’ ಎಂದರು. ನಗರಸಭೆಯ ಅಧ್ಯಕ್ಷ ಸಿ.ಆರ್. ಶಂಕರ್ ಅತಿಥಿಯಾಗಿದ್ದರು.

ಸಂಜೆ ನಡೆದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಕೃಷಿ ವಿಜ್ಞಾನ ಕಾಲೇಜಿನ ಡೀನ್ ಡಾ.ಎಂ.ಎ. ಶಂಕರ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಆರ್.ಮಲ್ಲೇಶಗೌಡ, ಹಾಗೂ ಉಪನ್ಯಾಸಕಿ ಎಚ್.ಆರ್. ಸುಲೋಚನಾ ಕೃಷ್ಣೇಗೌಡ ಮುಖ್ಯ ಅತಿಥಿಯಾಗಿದ್ದರು. ನಗರಸಭೆ ಸದಸ್ಯ ಎಚ್.ಎನ್. ಯಶವಂತ್ ಹಾಗೂ ಯೋಗೇಂದ್ರಕುಮಾರ ಬಾಬು ಉಪಸ್ಥಿತರಿದ್ದರು. ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್ ಬಹುಮಾನ ವಿತರಿಸಿದರು.

ಸ್ಪರ್ಧೆಯ ವಿಜೇತರು: ಸ್ಪರ್ಧೆ ಯಲ್ಲಿ ‘ಜಾಗತಿಕ ತಾಪಮಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರದರ್ಶಿಸಿದ ಸರ್ಕಾರಿ ಗೃಹವಿಜ್ಞಾನ ಕಾಲೇಜಿನ ಅನುಶ್ರೀ ವಿ. ಹಳ್ಳಿ ಮತ್ತು ಲತಾ ಪ್ರಥಮ ಬಹುಮಾನ ಪಡೆದರು. ‘ಉಪಗ್ರಹಗಳ ಅನ್ವಯಿಕತೆ’ ಕುರಿತ ಮಾದರಿ ಸಿದ್ಧಪಡಿಸಿದ್ದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಶ್ರವ್ಯಾ ಅಂಜುಮ್ ಮತ್ತು ಶ್ರುತಿ ಅಬೋಲೆ ದ್ವಿತೀಯ ಬಹುಮಾನ ಹಾಗೂ ‘ಅರಣ್ಯೀಕರಣ ಮತ್ತು ಅರಣ್ಯ ನಾಶ’ ಕುರಿತ ಮಾದರಿ ಪ್ರದರ್ಶಿಸಿದ ಮಹಿಳಾ ಸರ್ಕಾರಿ ಕಾಲೇಜಿನ ಕೆ.ಎಂ. ರಶ್ಮಿ  ಹಾಗೂ ಸುಹಾನಾ ಕೌಜಲ್ ತೃತೀಯ ಬಹುಮಾನ ಪಡೆದರು.

ಸಾಮಾನ್ಯ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ದೇಶಗಳ ನಾಣ್ಯ ಮತ್ತು ನೋಟುಗಳನ್ನು ಪ್ರದರ್ಶಿಸಿದ ಸರ್ಕಾರಿ ಮಹಿಳಾ ಕಾಲೇಜಿನ ಎಚ್. ಎಂ. ಭಾನುಪ್ರಿಯಾ ಮತ್ತು ಹರ್ಷಿತಾ ಜಿ. ಪ್ರಥಮ ಹಾಗೂ ಸೇಂಟ್ ಜೋಸೆಫ್ ಕಾಲೇಜಿನ ಪ್ರದೀಪ್ ಪ್ರಭು ಮತ್ತು ಪವನ್ ಕಷ್ಯಪ್ ದ್ವಿತೀಯ ಬಹುಮಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT