ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಪ್ರಿಯ ವಿನ್ಯಾಸಕ

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಿಜ್ಞಾನದಲ್ಲಿ ಪದವಿ ಪಡೆದರೂ ಹವ್ಯಾಸವಾಗಿ, ಉದ್ಯೋಗವಾಗಿ ಹರೀಶ್ ಗರ್ಗ್ ಅವರು ಆರಿಸಿಕೊಂಡಿದ್ದು ವಸ್ತ್ರ ವಿನ್ಯಾಸ ಕ್ಷೇತ್ರವನ್ನು. 14 ವರ್ಷದಿಂದ ಇಂದಿರಾನಗರದಲ್ಲಿ `ಆತ್ಮ' ಡಿಸೈನಿಂಗ್ ಸ್ಟುಡಿಯೊ ನಡೆಸುತ್ತಿರುವ ಇವರಿಗೆ ವಿನ್ಯಾಸದೊಂದಿಗೆ ಆಡುವುದೆಂದರೆ ತುಂಬಾ ಇಷ್ಟವಂತೆ. ಒಂದೊಂದು ಉಡುಪಿನ ವಿನ್ಯಾಸವೂ ಹೊಸತನವನ್ನು ಮೈಗೂಡಿಸಿಕೊಂಡಂತೆ ಕಾಣುವ ಅವರ ವಸ್ತ್ರಸಂಗ್ರಹದ ಕುರಿತು ಅನುಭವ ಹಂಚಿಕೊಂಡಿದ್ದು ಹೀಗೆ...

ಶಿಕ್ಷಣಕ್ಕೂ, ಫ್ಯಾಷನ್ ಕ್ಷೇತ್ರಕ್ಕೂ ನಂಟು ಬೆಸೆದಿದ್ದು ಹೇಗೆ?
ಪದವಿ ವಿಜ್ಞಾನದಲ್ಲಾಯಿತು. ತಾತ್ಕಾಲಿಕ ನಿರುದ್ಯೋಗ ಎದುರಾಗಿತ್ತು. ಆ ಸಮಯದಲ್ಲಿ ಫ್ಯಾಷನ್ ಡಿಸೈನಿಂಗ್ ಕಾಲೇಜಿನ ಪ್ರೊ. ವಿದ್ಯಾಸಾಗರ್ ಅವರ ಪರಿಚಯವಾಯಿತು. ಅವರನ್ನು ಕಾಲೇಜಿಗೆ ಬಿಟ್ಟು, ಕರೆದುಕೊಂಡು ಬರುವಾಗ ಇದ್ದ ಬಿಡುವಿನ ಸಮಯದಲ್ಲಿ ನಿಂತಲ್ಲೇ ಸುಮ್ಮನೆ ಚಿತ್ರ ಬಿಡಿಸುತ್ತಾ ಕೂರುತ್ತಿದ್ದೆ. ಅದನ್ನು ನೋಡಿದ ಅವರು, `ನೀನೇಕೆ ಫ್ಯಾಷನ್ ಡಿಸೈನಿಂಗ್‌ನಲ್ಲಿ ತೊಡಗಿಕೊಳ್ಳಬಾರದು' ಎಂದರು. ಆಗ ಪ್ರಯೋಗಾತ್ಮಕವಾಗಿ ದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ ತರಬೇತಿ ಪಡೆದುಕೊಂಡೆ.

ವಸ್ತ್ರ ವಿನ್ಯಾಸದಲ್ಲಿ ಆಸಕ್ತಿ ಮೂಡಿದ್ದು ಹೇಗೆ?
ಚಿಕ್ಕಂದಿನಿಂದಲೇ ಚಿತ್ರಕಲೆ ಬಗ್ಗೆ ಅಪರಿಮಿತ ಆಸಕ್ತಿಯಿತ್ತು. ಒಂದೈದು ನಿಮಿಷ ಬಿಡುವು ಸಿಕ್ಕರೂ ಕ್ಯಾನ್ವಾಸ್ ಮೇಲೆ ಕೈಯಾಡಿಸುತ್ತಿದ್ದೆ. ಕ್ಯಾನ್ವಾಸ್ ಮೇಲಿನ ಚಿತ್ರ, ಬಣ್ಣಗಳನ್ನು ಉಡುಪುಗಳಲ್ಲಿ ಬಿಂಬಿಸಲು ಆರಂಭಿಸಿದೆ. ಆ ಪ್ರಯತ್ನ ಫಲಿಸಿತು.

`ಆತ್ಮ' ಸ್ಟುಡಿಯೊ ಬಗ್ಗೆ ಹೇಳಿ.
ಆತ್ಮ ಸ್ಟುಡಿಯೊ ಪ್ರಾರಂಭಿಸಿ 14 ವರ್ಷಗಳು ಕಳೆದಿವೆ. ಮೊದಲು ಅಮ್ಮನಿಗೆ ಉಡುಪುಗಳ ವಿನ್ಯಾಸ ಮಾಡಿಕೊಡಲು ಆರಂಭಿಸಿದೆ. ಅವರಿಗೆ ತುಂಬಾ ಇಷ್ಟವಾಯಿತು. ನಂತರ ಅದನ್ನು ಮುಂದುವರಿಸಿದೆ. ಈಗ ಅದೇ ಉದ್ಯಮವಾಗಿ ಬೆಳೆದಿದೆ. ಸ್ಟುಡಿಯೊದಲ್ಲಿ ನನ್ನೊಂದಿಗೆ 25 ಮಂದಿ ಕೆಲಸ ಮಾಡುತ್ತಿದ್ದಾರೆ.

ಕಾಲಕ್ಕೆ ತಕ್ಕಂತೆ ವಿನ್ಯಾಸವನ್ನು ಪರಿಷ್ಕರಿಸಿಕೊಂಡಿದ್ದು ಹೇಗೆ?
ನಾನು ಟೀವಿಯನ್ನು ಹೆಚ್ಚು ನೋಡುತ್ತೇನೆ. ಅದರಲ್ಲೂ ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ನನ್ನಿಷ್ಟದ್ದು. ಅದರಲ್ಲಿ ಪ್ರಸಾರವಾಗುವ ಸಾಗರದಾಳದ ಮೀನುಗಳ ಕಾರ್ಯಕ್ರಮವೇ ನನಗೆ ಸ್ಫೂರ್ತಿ. ಸಾವಿರಾರು ಬಗೆಯ ಮೀನುಗಳ ಬಣ್ಣ, ಅದರ ಮೈ ಮೇಲಿನ ಪಟ್ಟೆ, ಚುಕ್ಕೆಗಳು, ಎಲ್ಲವೂ ಅದ್ಭುತ ಬಣ್ಣದ ಲೋಕವನ್ನೇ ಒಳಗೊಂಡಿವೆ. ಅದನ್ನು ನೋಡುತ್ತಿದ್ದರೆ ಅತ್ಯಾಕರ್ಷಕ ಬಣ್ಣ, ವಿನ್ಯಾಸ ಕಣ್ಣೆದುರಿಗೆ ಮೂಡಿಬರುತ್ತದೆ. ಅದನ್ನು ಉಡುಪುಗಳ ಮೇಲೆ ಅಚ್ಚಾಗಿಸುತ್ತೇನಷ್ಟೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪ್ರಕೃತಿಗೆ ಸಮನಾದುದು ಯಾವುದೂ ಇಲ್ಲ ಎಂಬುದು ಇಂಥ ಸುಂದರ ಬಣ್ಣಗಳನ್ನು ನೋಡಿದರೆ ಅರಿವಾಗುತ್ತದೆ.

ಯಾವ ಸಿನಿಮಾಗಳಿಗೆ ವಸ್ತ್ರವಿನ್ಯಾಸ ಮಾಡಿದ್ದೀರಿ?
ಸುದೀಪ್ ಅವರ ಮೊದಲ ಚಿತ್ರ `ಸ್ಪರ್ಶ' ಸಿನಿಮಾದಲ್ಲಿ ಸಂಪೂರ್ಣ ಕಾಸ್ಟ್ಯೂಮ್ ಡಿಸೈನ್ ನಾನೇ ಮಾಡಿದ್ದೆ, ನಂತರ `ಬ್ಲ್ಯಾಕ್ ಅಂಡ್ ವೈಟ್' ಸಿನಿಮಾಕ್ಕೂ ವಸ್ತ್ರವಿನ್ಯಾಸಕನಾಗಿದ್ದೆ. ನಟಿ ರಮ್ಯಾ ಅವರಿಗೂ ವಸ್ತ್ರ ವಿನ್ಯಾಸ ಮಾಡಿದ್ದಿದೆ.

ನಿಮ್ಮ ವಿನ್ಯಾಸದ ಮುಖ್ಯ ಆಕರ್ಷಣೆ?
ಪ್ರಕೃತಿ ನನಗೆ ತುಂಬಾ ಆತ್ಮೀಯ ಗೆಳೆಯನಂತೆ. ಆದ್ದರಿಂದ ಉಡುಪುಗಳ ಮೇಲೆ ಹೂವು, ನಿಸರ್ಗದ ತುಣುಕುಗಳನ್ನೇ ಹೆಚ್ಚು ಮೂಡಿಸುತ್ತೇನೆ. ನನ್ನದು ಸಾಂಪ್ರದಾಯಿಕತೆ ರೂಢಿಸಿಕೊಂಡ ವಿನ್ಯಾಸ. ಕಲರ್ ಕಾಂಬಿನೇಷನ್‌ಗೇ ಪ್ರಾಮುಖ್ಯ. ಗಾಢ ಕಿತ್ತಳೆ ಬಣ್ಣ, ತಿಳಿ ನೀಲಿ, ಕೆಂಪು, ಹಸಿರು ಹೀಗೆ ತರಹೇವಾರಿ ಬಣ್ಣಗಳನ್ನು ವಿನ್ಯಾಸಕ್ಕೆ ಒಗ್ಗಿಸಿಕೊಳ್ಳುತ್ತೇನೆ. ಒಂದೇ ಬಣ್ಣ, ವಿನ್ಯಾಸದ ಉಡುಪುಗಳನ್ನು ನೋಡಿ ಬೇಸತ್ತಿರುವವರು ತಮ್ಮ ಹುಡುಕಾಟವನ್ನು ಇಲ್ಲಿ ಕೊನೆಗೊಳಿಸಿಕೊಳ್ಳುತ್ತಾರೆ. ರೇಷ್ಮೆಯ ಮೇಲಿನ ಬ್ರಷ್ ಪೇಂಟಿಂಗ್ ಎಲ್ಲರಿಗೂ ಇಷ್ಟವಾಗಿದೆ.

ಯಾವ ಉಡುಪುಗಳನ್ನು ವಿನ್ಯಾಸಕ್ಕೆ ಒಳಪಡಿಸಿದ್ದೀರಿ?
ಸ್ಟೋಲ್, ಟ್ರೌಸರ್, ಘಾಗ್ರ, ಚೂಡಿ, ಉದ್ದದ ಮತ್ತು ಶಾಟ್ ಕುರ್ತಾ, ಸೀರೆ ಹೀಗೆ ಹಲವು ನಮೂನೆಯ ವಿನ್ಯಾಸಿತ ವಸ್ತ್ರಗಳಿವೆ. ಇತ್ತೀಚೆಗೆ `ಮದುಮಗಳ ವಸ್ತ್ರ'ಕ್ಕೆ ಪ್ರಾಮುಖ್ಯ ನೀಡುತ್ತಿದ್ದೇನೆ. ಪುರುಷರಿಗೂ ವಿನ್ಯಾಸಿತ ಉಡುಪುಗಳಿವೆ. ಆದರೆ ಅವರು ಪ್ರಯೋಗ ಒಪ್ಪಿಕೊಳ್ಳುವುದು ಕಡಿಮೆ. ಆದ್ದರಿಂದ ಪುರುಷರಿಗೆ ಆಯ್ಕೆಯೂ ಕಡಿಮೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT