ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಯ ಮಡಿಲಲ್ಲಿ ಅರಳಿದ ಹೃದಯ

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

ಧ್ಯಾನ, ಪ್ರಾರ್ಥನೆ, ಪ್ರಾಣಾಯಾಮ, ಶ್ರಮದಾನ, ಪಾಠ, ಪ್ರವಚನ, ಕಲಿಕೆ, ಸಂಶೋಧನೆ. ದಿನದ 24 ಗಂಟೆಯಲ್ಲಿ ಎಲ್ಲಕ್ಕೂ ನಿರ್ದಿಷ್ಟ, ನಿಗದಿತ ಸಮಯ ಮೀಸಲು.
ತೀರ್ಥಹಳ್ಳಿ ತಾಲ್ಲೂಕು ಹೆದ್ದೂರಿನ ದೇವಿತೊ ನಾಗೇಶ್ ಅವರ `ವನಚೇತನದ~ ಪರಿಸರದಲ್ಲಿ ನಾಡಿನ ವಿವಿಧೆಡೆಯಿಂದ ಬಂದ ಮಕ್ಕಳಿಗಾಗಿ ನಡೆದ ಪ್ರತಿಭಾ ಶಿಬಿರ ಇಂಥ ಅಚ್ಚುಕಟ್ಟುತನಕ್ಕೆ ಸಾಕ್ಷಿಯಾಗಿತ್ತು.

ಮಕ್ಕಳು ಇಲ್ಲಿ 15 ದಿನ ತಮ್ಮ ಮನೆ ಬಿಟ್ಟು ಅಪರಿಚಿತ ಸ್ಥಳದಲ್ಲಿ ಒಂದೇ ಸೂರಿನಡಿ ತಮ್ಮ ಕೆಲಸ ತಾವೇ ಮಾಡಿಕೊಂಡು ಹಳ್ಳಿವಾಸದ ಅನುಭವ ಪಡೆದರು. ಶಿಬಿರದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರಲಿಲ್ಲ ಎನ್ನುವ ವಿಶೇಷದ ಜತೆಗೆ ಹಳ್ಳಿಯ ಅಜ್ಜಿಯ ಮನೆಯ ಎಲ್ಲ ಖುಷಿಯನ್ನು ಇದು ತುಂಬಿಕೊಟ್ಟಿತ್ತು.

ಗುರುಗಳ ಮಾರ್ಗದರ್ಶನ, ದೇವಿತೊರ ಅಕ್ಕಂದಿರಿಂದ ಅತ್ತೆಯರ ವಾತ್ಸಲ್ಯ, ಆಟದೊಂದಿಗೆ ಪಾಠ, ಹಾಸ್ಯ, ಮನೋರಂಜನೆ, ಕಥೆ, ಕಾವ್ಯ, ಗಣಿತ, ಚಮತ್ಕಾರ, ವಿಜ್ಞಾನ, ಚಿತ್ರಕತೆ, ಜಾದೂ ಪ್ರದರ್ಶನ ಹೀಗೆ ವೈವಿಧ್ಯಮಯ ಸಂಗತಿಗಳು ಶಿಬಿರಕ್ಕೆ ಮೆರುಗು ನೀಡಿದವು. ಸಾಹಿತ್ಯ  ಪ್ರಜ್ಞೆ ಮೂಡಿಸಲು ಕವಿತೆ ರಚನೆ ಉತ್ತೇಜಿಸಲಾಯಿತು.

ಉಮೇಶ್ಚಂದ್ರ ಕಿರಣ್‌ಕೆರೆಯವರ `ರಾಮ ಮಂಟಪ~ ಕಥಾ ಸಂಕಲನ ಹಾಗೂ ದೇವಿತೊ ಅವರ  ಸಂಗ್ರಹಿತ `ಸ್ವರ ಸ್ವಾರಸ್ಯ~ ಕೃತಿಗಳ ಲೋಕಾರ್ಪಣೆ ಮಾಡಲಾಯಿತು.
ಮಳೆಯಲ್ಲಿ ನೆನೆದರೆ ನೆಗಡಿ, ಮಣ್ಣಾಡಿದರೆ ಮೈಕೈ ನೋವೆಂದು ಮನೆಯ ಗೋಡೆಗಳ ಮಧ್ಯೆ ಕೂಡಿ ಹಾಕುವ ಇಂದಿನ ಪೋಷಕರಿಗೆ ಅಪವಾದವೆಂಬಂತೆ ಮಕ್ಕಳು ಶಿಬಿರದಲ್ಲಿ ಎಣ್ಣೆಸ್ನಾನ (ತಣ್ಣೀರು, ಬಿಸಿನೀರು) ನದಿಸ್ನಾನ, ಕಲ್ಪವೃಕ್ಷ ಸ್ನಾನ ಮಾಡಿದರು.

ಶ್ರಮದಾನದ ಮೂಲಕ ಮಣ್ಣು ಹದ ಮಾಡಿ ಬಿತ್ತಿದರು. ಅಡಿಕೆ ಹಾಳೆ, ಬಾಳೆ ಎಲೆಯಲ್ಲಿ ಸೊಗಸಾದ ಊಟ, ತಾವೇ ತಯಾರಿಸಿದ ಕಾಡು ಹಣ್ಣುಗಳ ಪಾನೀಯ, ಕಷಾಯ ಸೇವಿಸಿದರು. ಗ್ರಾಮೀಣ ಆಟದ ಮೋಜು ಅನುಭವಿಸಿದರು. ಚಿಪ್ಪಲುಗುಡ್ಡ, ನವಿಲುಗುಡ್ಡ, ಮೃಗವಧೆಗೆ ಟ್ರಾಕ್ಟರ್ ಹಾಗೂ ಎತ್ತಿನಗಾಡಿಗಳಲ್ಲಿ ಪ್ರವಾಸ ಹೋಗಿ ಬಂದರು. ದೇಹ, ಮನಸ್ಸು ಎರಡೂ ಚಟುವಟಿಕೆಯಿಂದ ಇದ್ದ ಕಾರಣ ಶಿಬಿರದಲ್ಲಿ ಅವರಿಗೆ ಟಾನಿಕ್, ಮಾತ್ರೆಗಳ ಅವಶ್ಯಕತೆ ಬೀಳಲಿಲ್ಲ.

ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಲು ನಡೆದ ಪ್ರಯೋಗವಂತೂ ವಿಶಿಷ್ಟವಾಗಿತ್ತು. ಅಮಾವಾಸ್ಯೆಯ ಹತ್ತಿರದ ಕತ್ತಲೆಯ ದಿನಗಳಲ್ಲಿ ಅನೇಕ ಮಕ್ಕಳು ಟಾರ್ಚ್ ಹಿಡಿದುಕೊಂಡು ರಾತ್ರಿ 12 ರ ನಂತರ ಒಬ್ಬಂಟಿಗರಾಗಿ ಹೊರ ಸಂಚಾರ  ನಡೆಸಿದರು. ಇದು ಅವರಲ್ಲಿ ಅವರಲ್ಲಿದ್ದ ಕತ್ತಲೆ ಹಾಗೂ ದೆವ್ವ, ಭೂತದ ಭಯ ಹೋಗಲಾಡಿಸಿ ಧೈರ್ಯ ಬೆಳೆಸಲು ಸಹಕಾರಿಯಾಯಿತು.

 ಶಿಬಿರದ ಮುಕ್ತಾಯಕ್ಕೂ 2 ದಿನ ಮೊದಲು ದೇವಿತೊ ಅವರ 99 ವರ್ಷದ ತಾಯಿ ನಿಧನ ಹೊಂದಿದರು. ಅವರ ಸರಳ ಅಂತ್ಯಸಂಸ್ಕಾರದಲ್ಲಿ ಮಕ್ಕಳೂ ಅಂಜಿಕೆ, ಅಳುಕಿಲ್ಲದೆ ಪಾಲ್ಗೊಂಡರು. ಹುಟ್ಟು ಸಾವು ಒಂದು ಸಹಜ ಕ್ರಿಯೆ ಎಂದು ಅರಿತುಕೊಂಡರು.

ನಿಸರ್ಗದ ಮಡಿಲಿನಲ್ಲಿ ಸ್ವಾನುಭವದಲ್ಲಿ ಮಿಂದೆದ್ದ ಮಕ್ಕಳು ಇಲ್ಲಿ ಗಳಿಸಿದ್ದು ಅಂಕೆಗೂ ಮೀರಿದ ಅನುಭವ. ಶಿಬಿರವೆಂಬ ಯಜ್ಞಕುಂಡದಲ್ಲಿ ಋಷಿಗಳಾಗಿ ಬದಲಾದ ಅವರು ಹೊರಟು ನಿಂತಾಗ ಹೃದಯ ಅರಳಿ ವಿಸ್ತಾರಗೊಂಡಿತ್ತು. ಮುಗ್ಧತೆಯ ಜೊತೆ ಜೊತೆಗೆ ಪ್ರಬುದ್ಧತೆ ಅಲ್ಲಿ ಎದ್ದು ಕಾಣುತ್ತಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT