ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಯ ಸೊಬಗಿನ ಚಿತ್ತಾರ

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಘಟ್ಟದ ಮಗ್ಗುಲಿನಲ್ಲಿ ಸುರಿವ ಮುಂಗಾರಿನ ಮುಸಲಧಾರೆಗೆ ಆ ಮಳೆಯೇ ಸಾಟಿ, ಶರತ್ಕಾಲದ ಮೋಡಕ್ಕೆ ಆ ಮೋಡವೇ ಬಿಳುಪು. ಸುತ್ತ ಹಸಿರುಗಟ್ಟಿ ನಿಂತಿರುವ ನಿಸರ್ಗಕ್ಕೆ ಪ್ರಕೃತಿಯೇ ಬೆರಗು.

ಇವುಗಳಲ್ಲಿ ಒಂದೊಂದೂ ಚೆಂದವೆ. ಹೌದು. ಕಲೆ ಕಲಾವಿದನಿಗೆ ಆತ್ಮ ಸಂತೋಷವನ್ನು ಒದಗಿಸಿದರೆ, ಕಲೆಯನ್ನು ಆಸ್ವಾದಿಸುವ ಕಲಾ ರಸಿಕನಿಗೆ ಅವು ಮುದ ನೀಡುತ್ತದೆ.

ಕಲಾವಿದರಾದ ಡಿ.ಎಚ್.ಸುರೇಶ್, ಕೆ.ವಿ.ಶಂಕರ್, ಎಚ್.ಎಸ್.ಮಂಜುನಾಥ್ ಹಾಗೂ ಜಿ.ಎಸ್.ಸುಜಿತ್ ಕುಮಾರ್ ಮಂಡ್ಯ ಅವರು ಜತೆಗೂಡಿ ಏರ್ಪಡಿಸಿರುವ `ಇನ್ನರ್ ಎಕ್ಸ್‌ಪ್ರೆಶನ್~ನಲ್ಲಿ ಕಲಾವಿದರ ಭಾವನೆಗಳನ್ನು ಚಿತ್ರರೂಪದಲ್ಲಿ ಕಾಣಬಹುದು.

ಕಲಾವಿದ ಸುರೇಶ್ ಅವರು ಗ್ರಾಮೀಣ ದೇವತೆಗಳ ವಾಹನಗಳನ್ನು ತಮ್ಮ ಕಲಾಕೃತಿಗಳಲ್ಲಿ ಚೆಂದವಾಗಿ ಚಿತ್ರಿಸಿದ್ದಾರೆ. ವಿಷ್ಣುವಿನ ವಾಹನ ಗರುಡ, ದೇವಿಯ ವಾಹನ ಸಿಂಹ, ಅಯ್ಯಪ್ಪನ ವಾಹನ ಹುಲಿ, ಗಣಪನ ವಾಹನ ಇಲಿ ಹೀಗೆ ಎಲ್ಲ ದೇವಾನುದೇವತೆಗಳ ವಾಹನಗಳನ್ನು ಕುಂಚದಲ್ಲಿ ಸೆರೆಹಿಡಿದ್ದಾರೆ. ಜೊತೆಗೆ ಹಳ್ಳಿಗಾಡಿನ ಪ್ರೇಮಿಗಳ ಚಿತ್ರವನ್ನು ಅಂದವಾಗಿ ಕಟ್ಟಿಕೊಟ್ಟಿದ್ದಾರೆ.

ಕಲಾವಿದ ಶಂಕರ್ ಅವರು ಹಿಂದು-ಮುಸ್ಲಿಂ ಭಾವೈಕ್ಯದ ಸಂಗಮದಂತಿರುವ ಮೊಹರಂ ಹಬ್ಬದಲ್ಲಿ ಹರಕೆ ಕಟ್ಟಿಕೊಂಡು ಕುಣಿಯುವ ಹುಲಿವೇಷಧಾರಿಗಳ ಚಿತ್ರಣವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಇವರ ಟೈಗರ್ ಬಾಯ್ ಕಲಾಕೃತಿ ಆಕರ್ಷಣೀಯವಾಗಿದೆ.

ಇವರ ಎಲ್ಲ ಕಲಾಕೃತಿಗಳಿಗೆ ಜನಪದದ ಸೊಗಡಿದೆ. ಜೋಗತಿ, ಜೋಗಯ್ಯ, ಕೋಲೆ ಬಸವ ಹೀಗೆ ಎಲ್ಲ ಜನಪದ ಚಿತ್ರಣಗಳು ಇವರ ಕಲೆಯಲ್ಲಿ ಸಾಕಾರಗೊಂಡಿವೆ.
ಕಲಾವಿದ ಮಂಜುನಾಥ್ ಅವರ ಕಲೆಯಲ್ಲಿ ಅನೇಕವು ಅಮೂರ್ತ ಕಲಾಕೃತಿಗಳು.

ವೀಕ್ಷಕರ ಭಾವಕ್ಕೆ ಅನುಗುಣವಾಗಿ ಅವುಗಳ ಅರ್ಥ ಮೈದಳೆಯುತ್ತಾ ಹೋಗುತ್ತದೆ. ಜೊತೆಗೆ ಇವರ ಲ್ಯಾಂಡ್‌ಸ್ಕೇಪ್ ಕಲಾಕೃತಿಗಳು ಮುದನೀಡುತ್ತವೆ.

ಕಲಾವಿದ ಸುಜಿತ್ ಅವರು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ತಮ್ಮ ಕಲೆಯಲ್ಲಿ ಸೆರೆಹಿಡಿದ್ದಾರೆ. ಜನರು ಸಂಚಾರ ದಟ್ಟಣೆಯಿಂದ ಎದುರಿಸುವ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಇವರ ಎಲ್ಲ ಕಲಾಕೃತಿಗಳು ಸಮಕಾಲೀನವಾದವುಗಳು.

ಸ್ಥಳ: ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. ಪ್ರದರ್ಶನ ಗುರುವಾರ ಮುಕ್ತಾಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT