ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಖರ ಬಣ್ಣಗಳು! (ಚಿತ್ರ: ಲಕ್ಕಿ)

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಡಾ. ಸೂರಿ ನಿರ್ದೇಶನದ `ಲಕ್ಕಿ~ ಚಿತ್ರದಲ್ಲಿ ಚಿತ್ರಮಂದಿರದಾಚೆಯೇ ಗಮನಸೆಳೆಯುವ ಎರಡು ಕಾರಣಗಳಿವೆ. ನಟಿಯಾಗಿ ಗಮನಸೆಳೆದಿದ್ದ ರಾಧಿಕಾ ಅವರು, ರಾಧಿಕಾ ಕುಮಾರಸ್ವಾಮಿ ಹೆಸರಿನಲ್ಲಿ ನಿರ್ಮಿಸಿರುವ ಮೊದಲ ಸಿನಿಮಾ ಇದೆನ್ನುವುದು ಮೊದಲ ಕಾರಣ. ಈಚಿನ ಚಿತ್ರಗಳಲ್ಲಿ ಯಶಸ್ಸು ಕಂಡಿರುವ ರಮ್ಯಾ ಹಾಗೂ ಯಶ್ ಒಟ್ಟಿಗೆ ನಟಿಸಿರುವ ಚಿತ್ರ `ಲಕ್ಕಿ~ ಎನ್ನುವುದು ಇನ್ನೊಂದು ಕಾರಣ.

ಚಿತ್ರಮಂದಿರದೊಳಗೂ `ಲಕ್ಕಿ~ ಗಮನಸೆಳೆಯಲು ಕಾರಣಗಳಿವೆ. ಅವುಗಳಲ್ಲಿ ಮೊದಲನೆಯದು ನಾಯಕ ನಾಯಕಿಯ ಅಭಿನಯ.  ಬಣ್ಣಬಣ್ಣದ ಉಡುಪು ತೊಟ್ಟ ದಸರಾ ಗೊಂಬೆಗಳಂತೆ ಚಿತ್ರದುದ್ದಕ್ಕೂ ಇಬ್ಬರೂ ಮುದ್ದಾಗಿ ಕಾಣಿಸುತ್ತಾರೆ. ಕುಣಿತ ಮತ್ತು ಹೊಡೆದಾಟದ ದೃಶ್ಯಗಳು ಯಶ್‌ಗೆ ಹಬ್ಬವಿದ್ದಂತೆ.
 
ಇದಕ್ಕೆ ಪ್ರತಿಯಾಗಿ ತಮ್ಮ ಮೋಹಕತೆಯಿಂದಲೇ ರಮ್ಯಾ ನೋಡುಗರ ಕಾಡುತ್ತಾರೆ. ಈ ಇಬ್ಬರ ನಡುವೆ ನಾಯಿಯೊಂದು ಪ್ರೇಮದೂತನಂತೆ ಕಾಣಿಸಿಕೊಳ್ಳುತ್ತದೆ. ಅದನ್ನು `ನಾಯಿಮುಂಡೇದು~ ಎಂದು ಪ್ರೀತಿಯಿಂದ ಮೆಚ್ಚಿಕೊಳ್ಳಬಹುದು. ಸಾಧು ಕೋಕಿಲ, ತಬಲಾ ನಾಣಿ, ಉಮೇಶ್, ಶರಣ್ ಅವರು ಪೋಷಕ ಪಾತ್ರಗಳಲ್ಲಿ ಗಮನಸೆಳೆಯುತ್ತಾರೆ. ಗೀತೆಗಳ ಸಂದರ್ಭದಲ್ಲಿ ಛಾಯಾಗ್ರಾಹಕ ಕೃಷ್ಣ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಮ್ಮ ಛಾಪು ಮೂಡಿಸಿದ್ದಾರೆ. ಇವಿಷ್ಟು ಚಿತ್ರದ ಗಮನಸೆಳೆಯುವ ಅಂಶಗಳು.

ಸಿನಿಮಾ ಮಾಧ್ಯಮದ ಬಗೆಗಿನ ನಿರ್ದೇಶಕ ಡಾ. ಸೂರಿ ಅವರ ಪ್ರೀತಿ ಕೂಡ ಎದ್ದುಕಾಣುವಂತಿದೆ. ಮೊದಲ ಬಾರಿಗೆ ಕಥೆ ಬರೆದಿರುವ, ಸಂಭಾಷಣೆಯನ್ನೂ ನಿಭಾಯಿಸಿರುವ ಗೀತರಚನೆಕಾರ ಗೌಸ್‌ಪೀರ್ ಅವರ ಪ್ರಯತ್ನವೂ ಪರಿಣಾಮಕಾರಿಯಾಗಿದೆ. ಇಷ್ಟೆಲ್ಲಾ ಇದ್ದು, `ಲಕ್ಕಿ~ ಸಿನಿಮಾ ನೋಡುಗನನ್ನು ಗಾಢವಾಗಿ ತಟ್ಟದೆ ಹೋಗುತ್ತದೆ. ಅದಕ್ಕೂ ಕಾರಣಗಳಿವೆ.

`ಲಕ್ಕಿ~ ಚಿತ್ರ ಭಾವನಾತ್ಮಕವಾದುದು. ಲಕ್ಕಿ ಮತ್ತು ವಿಕ್ಕಿ ಎನ್ನುವ ಎರಡು ವ್ಯಕ್ತಿತ್ವಗಳಲ್ಲಿ ನಾಯಕ ಕಾಣಿಸಿಕೊಳ್ಳುತ್ತಾನೆ. ನಾಯಕಿ, ನಾಯಕನನ್ನು ಪ್ರೇಮಪರೀಕ್ಷೆಗೆ ಒಡ್ಡುತ್ತಾಳೆ.

ಇಬ್ಬರ ನಡುವೆ ಭಾವನೆಗಳ ತಾಕಲಾಟ ತಳಮಳ, ಪ್ರೇಮ ಪಯಣದಲ್ಲಿ ಒಂದಿಷ್ಟು ತಿರುವುಗಳು, ಮಾತನಾಡುವ ಮನುಷ್ಯರಿಗಿಂತಲೂ ನಾನೇ ವಾಸಿ ಎನ್ನುವಂತೆ ವರ್ತಿಸುವ ಜೋ ಜೋ ನಾಯಿ- ಇವೆಲ್ಲವುಗಳ ಜೋಡಣೆಯಲ್ಲೊಂದು ಹದ ದೊರಕಿದ್ದರೆ ಸಿನಿಮಾದ ಪರಿಣಾಮ ಮತ್ತಷ್ಟು ಹೆಚ್ಚಾಗುತ್ತಿತ್ತು. ಆದರೆ, ತೆಳುವಾದ ಕಥೆಯ ಅನೇಕ ಸಂಗತಿಗಳ ನಡುವೆ ತರ್ಕ ಕಲ್ಪಿಸುವುದರಲ್ಲಿಯೇ ಚಿತ್ರತಂಡ ಹೆಚ್ಚು ತೊಡಗಿಕೊಂಡಂತಿದ್ದು, ಚಿತ್ರಕಥೆಯ ಬಿಗು ಸಡಿಲವಾಗಿದೆ. ಚಿತ್ರದ ನಿರೂಪಣೆ ಹೊಸಕಾಲದ ಪ್ರೇಕ್ಷಕರ ಸಹನೆಯನ್ನು ಪರೀಕ್ಷಿಸುವಂತಿದೆ.

ಚಿತ್ರತಂಡದ ಸದಭಿರುಚಿ ಹಾಗೂ ಕೆಲಸದಲ್ಲಿನ ತಂತ್ರಜ್ಞರ ತುಡಿತ ಸಿನಿಮಾದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ, ಆ ಕೆಲಸ ಒಟ್ಟಂದದ ಸಿನಿಮಾ ಆಗಿ ರೂಪುಗೊಳ್ಳುವುದಕ್ಕಿಂತಲೂ ಮಿಗಿಲಾಗಿ, ವೈಯಕ್ತಿಕ ಮಟ್ಟದಲ್ಲಿ ಬಿಡಿಬಿಡಿಯಾಗಿ, ಪ್ರಖರವಾಗಿ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT