ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಗತಿ ಭಾರತ

Last Updated 15 ಮೇ 2012, 19:30 IST
ಅಕ್ಷರ ಗಾತ್ರ

ಆರ್ಥಿಕ ಶಕ್ತಿ ವೃದ್ಧಿ, ಪ್ರಗತಿಗತಿ ವಿಚಾರ, ಉತ್ಪಾದನೆ ಕ್ಷೇತ್ರ ಮತ್ತು  ತಂತ್ರಜ್ಞಾನದಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ ಸಡ್ಡು ಹೊಡೆಯುತ್ತಿರುವ ಪೂರ್ವದ ದೇಶಗಳಲ್ಲಿ ಚೀನಾ ನಂತರದ ಸ್ಥಾನದಲ್ಲಿ ಭಾರತವಿದೆ ಎಂಬುದು ಕಳೆದ ಕೆಲವು ವರ್ಷಗಳಿಂದ ಆಗಾಗ್ಗೆ ಕೇಳಿ ಬರುತ್ತಿರುವ ಮಾತು. ಆದರೆ, ಪ್ರಸಕ್ತ ಸನ್ನಿವೇಶ ಬೇರೆಯದೇ ಚಿತ್ರಣ ನೀಡುವಂತಿದೆ.

ಭಾರತದ ಪ್ರಗತಿಯ ಹಾದಿಯಲ್ಲಿ ಸಾಕಷ್ಟು ಎಡರುತೊಡರು, ಹೊಸ ಸಮಸ್ಯೆಗಳು ಈಗ ಎದುರಾಗಿವೆ. `ವಿಶ್ವ ಮಾರುಕಟ್ಟೆಯಲ್ಲಿನ ವಾಣಿಜ್ಯ ವಹಿವಾಟು ದಿಢೀರನೆ ಕುಸಿದಿರುವುದೇ ಈಗಿನ ಪರಿಸ್ಥಿತಿಗೆ ಕಾರಣ~ ಎಂಬ  ವಿಶ್ಲೇಷಣೆಯೂ ನಡೆಯುತ್ತಿದೆ..

                                   =======

ಭಾರತದ ಪ್ರಗತಿಗತಿಯ ವೇಗ ದಿಢೀರ್ ಎಂದು ತಗ್ಗಿದೆಯೆ?
ಅನುಮಾನವೇ ಇಲ್ಲ. ಮೊನ್ನೆ ಹೊರಬಿದ್ದ ದೇಶದ ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ಕುರಿತ ಅಂಕಿ-ಅಂಶವೇ ಅದನ್ನು ಬಹಳ ದೊಡ್ಡದಾಗಿ ಎತ್ತಿತೋರಿಸಿದೆ.

ಜತೆಗೆ ಇತ್ತೀಚಿನ ಬಹಳಷ್ಟು ಬೆಳವಣಿಗೆಗಳು, ಕಾರ್ಪೊರೇಟ್ ಪ್ರಪಂಚದ ಬಹುದೊಡ್ಡ ಕಂಪೆನಿಗಳ ಹಾಗೂ ಮುಂಚೂಣಿ ಬ್ಯಾಂಕಿಂಗ್ ಸಂಸ್ಥೆಗಳ ಸಾಧನೆಯ ಚಿತ್ರಣ, ತೈಲ ಕಂಪೆನಿಗಳ ನಷ್ಟ ಹೆಚ್ಚಳ, ಷೇರುಪೇಟೆಯಲ್ಲಿನ ಕುಸಿತ ಮತ್ತು ಅಸ್ಥಿರತೆ, ಆಮದು-ರಫ್ತು ಪ್ರಮಾಣದಲ್ಲಿನ ಭಾರಿ ಅಂತರ, ರೂಪಾಯಿಯ ಅಪಮೌಲ್ಯ, ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಕುಸಿತ, ಅಮೂಲ್ಯ ಮಾನವ ಸಂಪನ್ಮೂಲ ವ್ಯರ್ಥವಾಗುತ್ತಿರುವುದು, ದಿನಸಿ -ತರಕಾರಿ ಬೆಲೆಗಳಲ್ಲಿನ ಏರಿಕೆ, ಕೃಷಿ ಕ್ಷೇತ್ರದ ಸಮಸ್ಯೆಗಳು, ಆಹಾರ ಧಾನ್ಯ ಉತ್ಪಾದನೆ- ಸಂಗ್ರಹ-ಸರಬರಾಜು ಸರಣಿಯಲ್ಲಿ ಕೊಂಡಿ ಸಡಿಲವಾಗಿರುವುದು, ಇದರ ಪರಿಣಾಮ ಗ್ರಾಮೀಣ ಭಾರತದಲ್ಲಿನ ಅಪೌಷ್ಠಿಕತೆ ಸಮಸ್ಯೆ ದೊಡ್ಡದಾಗುತ್ತಿರುವುದು...

ಇವೆಲ್ಲವೂ ಭಾರತದ ಬೆಳವಣಿಗೆಯ ನಡೆ ಯಾವ ದಿಕ್ಕಿನಲ್ಲಿದೆ ಎನ್ನುವುದರ ಸ್ಪಷ್ಟ ಚಿತ್ರಣ ನೀಡುತ್ತವೆ.

ಆರ್ಥಿಕ ಶಕ್ತಿ ವೃದ್ಧಿ, ಪ್ರಗತಿಗತಿ ವಿಚಾರ, ಉತ್ಪಾದನೆ ಕ್ಷೇತ್ರ ಮತ್ತು  ತಂತ್ರಜ್ಞಾನದಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ ಸಡ್ಡು ಹೊಡೆಯುತ್ತಿರುವ ಪೂರ್ವದ ದೇಶಗಳಲ್ಲಿ ಚೀನಾ ನಂತರದ ಸ್ಥಾನದಲ್ಲಿ ಭಾರತವಿದೆ ಎಂಬುದು ಕಳೆದ ಕೆಲವು ವರ್ಷಗಳಿಂದ ಆಗ್ಗಾಗ್ಗೆ ಕೇಳಿಬರುತ್ತಿರುವ ಮಾತು. ಆದರೆ, ಪ್ರಸಕ್ತ ಸನ್ನಿವೇಶ ಬೇರೆಯದೇ ಚಿತ್ರಣ ನೀಡುವಂತಿದೆ. ಭಾರತದ ಪ್ರಗತಿಯ ಹಾದಿಯಲ್ಲಿ ಸಾಕಷ್ಟು ಎಡರುತೊಡರು, ಹೊಸ ಸಮಸ್ಯೆಗಳು ಈಗ ಎದುರಾಗಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗರ್ವನರ್ ಸುಬೀರ್ ಗೋಕರ್ಣ್ ಸಹ ಇದನ್ನು ಒಪ್ಪುತ್ತಾರೆ.

ಅವರು ಕಳೆದ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದರು. ಅದೇ ದಿನ ದೇಶದ ಕೈಗಾರಿಕಾ ಕ್ಷೇತ್ರದ ಕಳಪೆ `ಸಾಧನೆ~ಯ ಅಂಕಿ ಅಂಶ ಪ್ರಕಟಗೊಂಡಿತು.

ಅಂದು ಬೆಳಿಗ್ಗೆ ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ)ದ ದಕ್ಷಿಣ ಭಾರತ ವಲಯದ ಪ್ರತಿನಿಧಿಗಳ ಸಭೆ ಹಾಗೂ ಸಂಜೆ ಬೆಂಗಳೂರು ಬ್ಯಾಂಕರ್ಸ್ ಕ್ಲಬ್ ಕಾರ್ಯಕ್ರಮದಲ್ಲಿ ಗೋಕರ್ಣ್ ಅವರು `ಭಾರತದ ಪ್ರಗತಿಯ ಹಾದಿಯಲ್ಲಿ ಸಾಕಷ್ಟು ಎಡರುತೊಡರು, ಹೊಸ ಹೊಸ ಸಮಸ್ಯೆಗಳು ಎದುರಾಗಿವೆ~ ಎಂಬುದರ ಕುರಿತೇ ಮಾತನಾಡಿದರು. ಹಣಕಾಸು ನಿಯಂತ್ರಣ ನೀತಿಯಲ್ಲಿ ಕೆಲವು ಸುಧಾರಣಾ ಕ್ರಮಗಳ ಅಗತ್ಯವಿದೆ ಎಂದೇ ಪ್ರತಿಪಾದಿಸಿದರು.

ಸದ್ಯದ ಜಾಗತಿಕ ಪರಿಸ್ಥಿತಿ, ಭಾರತದ ಪ್ರಗತಿ-ಹಣದುಬ್ಬರದ ಗತಿ, ಹಣಕಾಸು ಒತ್ತಡ, ಬಾಹ್ಯ ಮಾರುಕಟ್ಟೆ ಒತ್ತಡ, ದೇಶ ಕೈಗೊಳ್ಳಬೇಕಾದ ಹಣಕಾಸು ನೀತಿ, ಅದರ ಪ್ರಕ್ರಿಯೆಗಳು ಮತ್ತಿತರ ವಿಷಯಗಳತ್ತಲೇ ಕೇಂದ್ರೀಕರಿಸಿದ್ದ ಅವರ ಮಾತಿನಲ್ಲಿ `ವಿಶ್ವ ಮಾರುಕಟ್ಟೆಯಲ್ಲಿನ ವಾಣಿಜ್ಯ ವಹಿವಾಟು ದಿಢೀರನೆ ಕುಸಿದಿರುವುದೇ ಈಗಿನ ಪರಿಸ್ಥಿತಿಗೆ ಕಾರಣ~ ಎಂಬ  ವಿಶ್ಲೇಷಣೆಯೂ ಇದ್ದಿತು.

ಜಾಗತಿಕ ಮಟ್ಟದಲ್ಲಿ ಕೊಡು- ಕೊಳ್ಳುವ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಏರಿಳಿತವಾಗಿರುವುದು ನಿಜವಾದರೂ ಅದು ಭಾರತದ ಮೇಲೆ ಎಷ್ಟು ಪರಿಣಾಮ ಬೀರಬಹುದು?

ಈ ಜಾಗತಿಕ ಪರಿಸ್ಥಿತಿ ನಮ್ಮ ಮೇಲೆ ಭಾರಿ ಪರಿಣಾಮ ಬೀರುವಷ್ಟು ಭಾರತ ದೊಡ್ಡ ರಫ್ತುದಾರ ದೇಶವೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಲೇ, `ಇಲ್ಲ, ಭಾರತ ವಿಶ್ವದ ಮಾರುಕಟ್ಟೆ ಗಾತ್ರಕ್ಕೆ ಹೋಲಿಸಿದರೆ ಅಷ್ಟು ಪ್ರಮುಖ ರಫ್ತುದಾರ ಏನಲ್ಲ~ ಎಂಬ ಉತ್ತರವನ್ನೂ ಕೊಟ್ಟುಕೊಂಡರು ಗೋಕರ್ಣ್.

ಹಾಗೆಂದು ವಿಶ್ವದ ವಿದ್ಯಮಾನ ಭಾರತದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದೇ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಲೂ ಆಗದು. ಗ್ರೀಸ್, ಟರ್ಕಿ, ಸ್ಪೇನ್ ಸೇರಿದಂತೆ ದೂರದ ಯೂರೋಪಿನ ದೇಶಗಳಲ್ಲಿ ಸದ್ಯ ಉಂಟಾಗಿರುವ ದೊಡ್ಡ ಕಂಪನ ತೀವ್ರವಾಗಿ ಅಲ್ಲವಾದರೂ ಲಘುವಾಗಿ ನಮ್ಮ ಮನೆಯ ಗೋಡೆಯನ್ನು ಅಲುಗಾಡಿಸುವುದು ನಿಜ ಎಂಬ ಅಂಶವೂ ಅವರ ಮಾತಿನಲ್ಲಿತ್ತು.

`ಯೂರೋ~ ಚಲಾವಣೆಯಲ್ಲಿರುವ ದೇಶಗಳು ಸದ್ಯ ಭಾರಿ ಒತ್ತಡದಲ್ಲಿರುವುದು ನಿಜ. ಅದರ ನೆರಳು ಕೆಲವು ತಿಂಗಳುಗಳಿಂದ ಜಾಗತಿಕ ಆರ್ಥಿಕ ಸ್ಥಿತಿ ಮೇಲೆಯೂ ಬೀಳುತ್ತಿರುವುದೂ ನಿಜ. ಹಾಗಾಗಿ ಭಾರತ ಸರ್ಕಾರವೂ ತನ್ನ ಹಣಕಾಸು ನೀತಿಯಲ್ಲಿ ಇನ್ನಷ್ಟು ಹೆಚ್ಚಿನ ರಚನಾತ್ಮಕ ಸುಧಾರಣೆಗಳನ್ನು ತರಬೇಕಿದೆ ಎನ್ನುವ ಈ ಅರ್ಥಶಾಸ್ತ್ರಜ್ಞ, `ನೋಡೋಣ ಈ ಪರಿಹಾರದ ಕ್ರಮಗಳು ಹೇಗೆ ಕೆಲಸ ಮಾಡುತ್ತವೋ?~ ಎಂಬ ಕುತೂಹಲವನ್ನೂ ಹುಟ್ಟುಹಾಕಿದರು.

ದೇಶದಲ್ಲಿನ ಹಣಕಾಸು ವ್ಯವಸ್ಥೆ ಈಗಲೂ ಸ್ವಲ್ಪ ಒತ್ತಡದಲ್ಲಿಯೇ ಇದೆ. ವಿವಿಧ ಬಗೆಯ ಆಸ್ತಿಗಳ ಗುಣಮಟ್ಟದಲ್ಲಿ, ಆ ಆಸ್ತಿಗಳನ್ನು ನಿರ್ವಹಿಸುವ ವಿಧಾನದಲ್ಲಿ ನಮ್ಮ ವ್ಯವಸ್ಥೆ `ಹೊರೆ ಹೊತ್ತು ನಿಂತ~ ಸ್ಥಿತಿಯಲ್ಲಿಯೇ ಇದೆ ಎಂಬುದೂ ನಿಜ ಎಂಬುದನ್ನು ಆರ್‌ಬಿಐನ ಡೆಪ್ಯುಟಿ ಗರ್ವನರ್ ಒಪ್ಪಿಕೊಳ್ಳುತ್ತಾರೆ.

ದೇಶದ ಮುಂಚೂಣಿ ಬ್ಯಾಂಕ್‌ಗಳು, ದೊಡ್ಡ ಹಣಕಾಸು ಸಂಸ್ಥೆಗಳಲ್ಲಿನ ಅನುತ್ಪಾದಕ ಆಸ್ತಿ(ಎನ್‌ಪಿಎ) ಪ್ರಮಾಣ ಸಣ್ಣ ಮಟ್ಟಿಗಾದರೂ ಹೆಚ್ಚಾಗಿರುವುದು ಇದನ್ನು ಸಮರ್ಥಿಸುವಂತೆಯೇ ಇದೆ.

`ನಮ್ಮ ಆರ್ಥಿಕ ಪ್ರಗತಿ ಏಕೆ ಮಂದಗತಿಯಲ್ಲಿದೆ?~ ಎಂಬ ಪ್ರಶ್ನೆ ಮುಂದೊಡ್ಡುತ್ತಲೇ, ಹಣಕಾಸು ನಿರ್ವಹಣಾ ನೀತಿಯನ್ನು ಭಿನ್ನ ರೀತಿಯಲ್ಲಿ ವಿಶ್ಲೇಷಿಸುತ್ತಾರೆ.

ಹಿಂದಿನ ವರ್ಷ ಹಣದುಬ್ಬರ ವಿಪರೀತ ಎನ್ನುವಷ್ಟು ಹೆಚ್ಚಿದ್ದರಿಂದ ಬ್ಯಾಂಕ್‌ಗಳಲ್ಲಿನ ಬಡ್ಡಿದರ ಹೆಚ್ಚಿಸಲಾಯಿತು. ಆದರೆ ಇದರ ಪ್ರತಿಕೂಲ ಪರಿಣಾಮದ ಫಲವಾಗಿ ತಯಾರಿಕಾ ಕ್ಷೇತ್ರ ಮತ್ತು ಸಣ್ಣ ಕೈಗಾರಿಕೆಗಳು ಪೆಟ್ಟು ತಿಂದವು. ರಫ್ತು ವಹಿವಾಟಿನ ಮೇಲೆಯೂ ಪ್ರಹಾರವಾಯಿತು. ಪರಿಣಾಮ ದೇಶದ ಒಟ್ಟಾರೆ ಆಂತರಿಕ ಉತ್ಪಾದನೆ (ಜಿಡಿಪಿ) ಪ್ರಮಾಣವೂ ತಗ್ಗಿತು(ಇದಂತೂ ಸರ್ಕಾರದ, ಅರ್ಥಶಾಸ್ತ್ರಜ್ಞರ ನಿರೀಕ್ಷೆಗೆ ವಿರುದ್ಧವಾಗಿತ್ತು). ಪ್ರಗತಿ ಮಂದಗತಿಗೆ ಇಳಿಯಿತು.

ಇನ್ನೊಂದೆಡೆ `ಸುಧಾರಣಾ ಕ್ರಮಗಳತ್ತ~ ಗಮನ ಹರಿಸಿದರೆ ದೇಶಕ್ಕೆ ಹರಿದುಬಂದ ದೊಡ್ಡ ಮಟ್ಟದ ಬಂಡವಾಳ ಹೂಡಿಕೆಯೂ `ಬೃಹತ್ ಪ್ರಮಾಣದ್ದು~ ಎನ್ನುವಂತೇನೂ ಇಲ್ಲ. ಜಿಡಿಪಿಗೆ ಹೂಡಿಕೆ ಕ್ಷೇತ್ರದ ಕೊಡುಗೆಯ ಹೆಚ್ಚಳ ಕಳೆದ ಹತ್ತು ವರ್ಷಗಳಲ್ಲಿ ಕೇವಲ ಶೇ 10ರಷ್ಟಿದೆ. 2002ರಲ್ಲಿ ಶೇ 28ರಷ್ಟಿದ್ದ ಹೂಡಿಕೆ ಜಿಡಿಪಿ ಈಗ ಶೇ 38ರಷ್ಟಿದೆ ಅಷ್ಟೆ.

ಇದೆಲ್ಲ ಋಣಾತ್ಮಕ ಅಂಶಗಳ ಮಧ್ಯೆಯೂ ಒಂದು ಸಮಾಧಾನದ ಸಂಗತಿ ಇದೆ ಎಂದು ಗಮನ ಸೆಳೆಯುವ ಗೋಕರ್ಣ್ ಅವರು, `ಕಳೆದ ಮೂರು ತಿಂಗಳುಗಳಿಂದ ಹಣದುಬ್ಬರ ಪ್ರಮಾಣ ಇಳಿಕೆಯಾಗಿದೆ ನೋಡಿ~ ಎಂದು ನೀಲಿ ಬಣ್ಣದ ಗ್ರಾಫ್‌ನತ್ತ ಬೊಟ್ಟು ಮಾಡುತ್ತಾರೆ.
ದೇಶದ ಬೊಕ್ಕಸಕ್ಕೆ ಹೊರೆಯಾಗಿರುವುದು `ಸಹಾಯಧನ~ (ಸಬ್ಸಿಡಿ) ವಿಚಾರ ಎನ್ನುವ ಆರ್‌ಬಿಐ ಡೆಪ್ಯುಟಿ ಗವರ್ನರ್, ಹಾಗೆಂದು ಈ ಅಗತ್ಯ ಸೌಲಭ್ಯವನ್ನು ಪೂರ್ಣವಾಗಿ ತೆಗೆದುಹಾಕಲು ಸಾಧ್ಯವೂ ಇಲ್ಲ ಎಂಬುದನ್ನೂ ಒಪ್ಪುತ್ತಾರೆ.

ಬಹಳಷ್ಟು ದೇಶಗಳಲ್ಲಿ ಸಹಾಯಧನ ಎಂಬುದು ವಿವಿಧ ರೂಪಗಳಲ್ಲಿದೆ. ಆದರೆ ನಮ್ಮ ದೇಶದ ಸಮಸ್ಯೆ ಎಂದರೆ ತೈಲ ಕ್ಷೇತ್ರದ ಸಬ್ಸಿಡಿ. ಇದೊಂದೇ ನಮ್ಮ ಬೊಕ್ಕಸಕ್ಕೆ ದೊಡ್ಡ ಹೊರೆ ಎಂಬುದೇ ಅವರ ಚಿಂತೆ.

ಆದರೆ ಮೊದಲು ಜಿಡಿಪಿಯ ಶೇ. 6ರಷ್ಟಿದ್ದ ಸಹಾಯಧನ ಪ್ರಮಾಣ ಈಗ ಶೇ. 2.9ಕ್ಕೆ ತಗ್ಗಿರುವುದು ಅವರ ಸಮಾಧಾನಕ್ಕೂ ಕಾರಣ.

ಕಡೆಗೆ ಅವರು ಹೇಳಿದ್ದು; `ಜಾಗತಿಕ ಮಟ್ಟದಲ್ಲಿನ ಸದ್ಯದ ಪರಿಸ್ಥಿತಿ ಮುಂದಿನ ಕೆಲವು ಸಮಯದವರೆಗೆ ಎಲ್ಲ ದೇಶಗಳಿಗೂ ಸವಾಲು ಒಡ್ಡಲಿದೆ. ತೈಲ ಬೆಲೆ ಇನ್ನಷ್ಟು ಹೆಚ್ಚಬಹುದು, ಬಂಡವಾಳದ ಹರಿವಿನ ಮೇಲೆಯೂ  ಪರಿಣಾಮವಾಗಬಹುದು. ಹಾಗಿದ್ದೂ ನಮ್ಮ ದೇಶದ ಪ್ರಗತಿಗತಿಗೆ ದೊಡ್ಡ ಹೊಡೆತವೇನೂ ಬೀಳದು. ಏಕೆಂದರೆ ನಮ್ಮಲ್ಲಿನ ಹಣದುಬ್ಬರ ಸದ್ಯ ಸಮತೋಲಿತವಾಗಿದ್ದು, ಸುಸ್ಥಿರವಾಗಿದೆ~.

ಆದರೆ, ಅವರು ಮಧ್ಯದಲ್ಲೊಮ್ಮೆ ಹೇಳಿದ, `ಪ್ರತಿ ಮನೆಯೂ ಪೌಷ್ಠಿಕಾಂಶಭರಿತ ಆಹಾರ ಪಡೆಯುವಂತೆ ಇರಬೇಕು. ಆದರೆ, ದುರ್ಬಲವಾದ ಸರಬರಾಜು ವ್ಯವಸ್ಥೆಯ ಕಾರಣದಿಂದಾಗಿ ಇದು ಸಾಧ್ಯವಾಗುತ್ತಿಲ್ಲ~ ಎಂಬ ಕೊರಗಿನಲ್ಲಿಯೇ ದೇಶದ ಪ್ರಗತಿ ಗತಿಯ ಚಿತ್ರಣವೂ ಇದ್ದಿತು!

ರಫ್ತು-ಆಮದು
ಒಂದು ದೇಶದ ಬೆಳವಣಿಗೆಯಲ್ಲಿ, ಆರ್ಥಿಕ ಸಾಮರ್ಥ್ಯ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವುದು ರಫ್ತು ಮತ್ತು ಆಮದು. ರಫ್ತು ಹೆಚ್ಚಾಗಿದ್ದು ಆಮದು ಕಡಿಮೆ ಇದ್ದರೆ ಆ ದೇಶದ ಆರ್ಥಿಕ ಆರೋಗ್ಯ ಚೆನ್ನಾಗಿದೆ ಎಂದೇ ಅರ್ಥ. ಆದರೆ, ಭಾರತದ ಪರಿಸ್ಥಿತಿ ಸದಾ ಇದಕ್ಕೆ ವ್ಯತಿರಿಕ್ತ.

2011-12ನೇ ಹಣಕಾಸು ವರ್ಷದಲ್ಲಿ ರೂ15.90ಲಕ್ಷ ಕೋಟಿ ರಫ್ತು ವಹಿವಾಟು (ಶೇ 21ರಷ್ಟು ಹೆಚ್ಚಳ) ನಡೆದಿದೆ. ಈ ವರ್ಷ ರಫ್ತು ರೂ. 18.55ಲಕ್ಷ ಕೋಟಿಗೆ ಹೆಚ್ಚಿಸಬೇಕು ಎಂಬುದು ಅದರ ಗುರಿ.

ಸಬ್ಸಿಡಿ ಹೆಚ್ಚಳ, ಕಚ್ಚಾ ತೈಲದ ಬೆಲೆ ಏರಿಕೆ, ರೂಪಾಯಿ ಅಪಮೌಲ್ಯ, ಚಿನ್ನದ ಆಮದು ಇತ್ಯಾದಿಗಳಿಂದಾಗಿ ದೇಶದ ವಿತ್ತೀಯ ಕೊರತೆ ಅಂತರ ಗಣನೀಯವಾಗಿ ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸಲು ರಫ್ತು ವಹಿವಾಟು ಹೆಚ್ಚಿಸಲೇಬೇಕಿದೆ ಎನ್ನುತ್ತದೆ ಭಾರತ ಸರ್ಕಾರ.
`ಆದರೆ ಅಂಥ ಸಾಧ್ಯತೆ  ಕಡಿಮೆ. ಯೂರೋಪ್ ವಲಯದ ಬಿಕ್ಕಟ್ಟು ಈಗಿರುವಂತೆಯೇ ಮುಂದುವರಿದರೆ ಈ ಗುರಿ ಮುಟ್ಟುವುದು ಅಸಾಧ್ಯ~ ಎನ್ನುತ್ತಾರೆ `ಎಫ್‌ಐಇಒ~ ಅಧ್ಯಕ್ಷ ರಫೀಕ್ ಅಹಮದ್.

ಇವರ ಈ ಮಾತೂ ಸಹ ದೇಶದ ಪ್ರಗತಿ ಗತಿಯ ಮುನ್ನೋಟ ನೀಡುವಂತಿದೆ.             

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT