ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಯ ಧರ್ಮ ಸಾಕಾರಗೊಳ್ಳಲಿ: ಹೆಗ್ಗಡೆ

Last Updated 21 ಜುಲೈ 2012, 6:30 IST
ಅಕ್ಷರ ಗಾತ್ರ

ಚಾಮರಾಜನಗರ: `ಆರ್ಥಿಕ ಬಡತನ ಹಾಗೂ ಹೃದಯದ ಬಡತನವನ್ನು ಕೊನೆಗಾಣಿಸಿ ಪ್ರಗತಿಯ ಧರ್ಮವನ್ನು ಸಾಕಾರಗೊಳಿಸುವುದೇ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಉದ್ದೇಶ~ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಪ್ರತಿಪಾದಿಸಿದರು.

ನಗರದಲ್ಲಿ ಶುಕ್ರವಾರ ಯೋಜನೆಯಡಿ ಚಾಮರಾಜನಗರ ತಾಲ್ಲೂಕಿನಲ್ಲಿ ರಚಿಸಿರುವ 1,501ನೇ ಪ್ರಗತಿಬಂಧು ಸ್ವಸಹಾಯ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಪ್ರಕೃತಿ, ಮಾನವನ ಬೆಳವಣಿಗೆಯಲ್ಲಿ ಪರಿವರ್ತನೆ ನೋಡುತ್ತವೆ. ಋತುಮಾನಕ್ಕೆ ಅನುಗುಣವಾಗಿ ಪರಿಸರದ ಚಟುಚಟಿಕೆಗಳಲ್ಲಿ ಪರಿವರ್ತನೆ ನಡೆಯುತ್ತಲೇ ಇರುತ್ತದೆ. ಹೀಗಾಗಿ, ಮನುಷ್ಯನಲ್ಲಿರುವ ಅಜ್ಞಾನ, ಸೋಮಾರಿತನ ಹಾಗೂ ಅವಲಂಬನೆ ಗುಣ ಬದಲಾಗಬೇಕಿದೆ. ಆರ್ಥಿಕ ಬಡತನವನ್ನು ಹೋಗಲಾಡಿಸುವುದು ಕಷ್ಟಕರವಲ್ಲ. ಆದರೆ, ಹೃದಯದ ಬಡತನವನ್ನು ಕೊನೆಗಾಣಿಸುವುದು ಕಷ್ಟ. ಒಳ್ಳೆಯ ಮನಸ್ಸಿದ್ದರೆ ಇದು ಕೂಡ ಕಷ್ಟಕರವಲ್ಲ. ಈ ಹಿನ್ನೆಲೆಯಲ್ಲಿಯೇ `ಬಡತನ ಶಾಶ್ವತವಲ್ಲ~ ಎಂಬ ಧ್ಯೇಯ ವಾಕ್ಯದೊಂದಿಗೆ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನಗೊಂಡಿದೆ~ ಎಂದು ವಿವರಿಸಿದರು.

ಯೋಜನೆಯಡಿ ಸಾಲ ಸಿಗುತ್ತದೆಂಬ ಕಾರಣಕ್ಕೆ ಸಂಘ ರಚಿಸಿಕೊಳ್ಳಬಾರದು. ಬ್ಯಾಂಕ್ ಮೂಲಕ ಸಂಘಗಳಿಗೆ ಮಂಜೂರಾಗುವ ಸಾಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜಾತಿ, ಧರ್ಮ ನಿಮ್ಮ ಮನೆಗಳಿಗೆ ಸೀಮಿತವಾಗಿರಲಿ. ಸಂಘದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು. ಪ್ರಗತಿಯ ಧರ್ಮದ ಹಾದಿನಲ್ಲಿ ಸಂಘದ ಸದಸ್ಯರು ಸಾಗಬೇಕಿದೆ ಎಂದರು.

ಒಳ್ಳೆಯ ಉದ್ದೇಶಕ್ಕೆ ಸಾಲ ಪಡೆದುಕೊಳ್ಳಬೇಕು. ಸಂಘದಲ್ಲಿರುವ ಇತರೇ ಸದಸ್ಯರಿಗೂ ಈ ಬಗ್ಗೆ ಅರಿವು ಇರಬೇಕು. ವಾರಕ್ಕೊಮ್ಮೆ ಹಣ ಕಟ್ಟುವುದರಿಂದ ಹೊರೆ ಕಡಿಮೆಯಾಗಲಿದೆ. ನಮ್ಮ ಸಂಸ್ಥೆಯ ಕಾರ್ಯಕರ್ತರೊಂದಿಗೆ ಸದಸ್ಯರು ಮುಕ್ತವಾಗಿ ವ್ಯವಹರಿಸಬೇಕು. ಅವರಿಗೆ ಸಹಕಾರ ನೀಡಬೇಕು ಎಂದು ಕೋರಿದರು.

ಸಂಸದ ಆರ್. ಧ್ರುವನಾರಾಯಣ ಮಾತನಾಡಿ, `ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆ ತೆರೆಯಲು ವೀರೇಂದ್ರ ಹೆಗ್ಗಡೆ ಅವರು ಮುಂದಾಗಬೇಕಿದೆ~ ಎಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ಹೇರಳವಾಗಿ ಪ್ರಾಕೃತಿಕ ಸಂಪತ್ತಿದೆ. ಆದರೆ, ಶೈಕ್ಷಣಿಕವಾಗಿ ಜಿಲ್ಲೆ ಹಿಂದುಳಿದಿದೆ. ನೈರ್ಮಲ್ಯಕ್ಕೆ ಒತ್ತು ನೀಡುವಲ್ಲಿ ಗ್ರಾಮೀಣರು ಹಿಂದೇಟು ಹಾಕಿದ್ದಾರೆ.

ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ಶೌಚಾಲಯ ನಿರ್ಮಾಣಕ್ಕೆ 8,200 ರೂ ಪ್ರೋತ್ಸಾಹಧನ ನೀಡಲಾಗುತ್ತಿದೆ. ಆದರೆ, ಅದನ್ನು ಬಳಸಿಕೊಳ್ಳುವಲ್ಲಿ ಹಿಂದೇಟು ಹಾಕಲಾಗುತ್ತಿದೆ ಎಂದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ ಸ್ವಸಹಾಯ ಸಂಘಗಳಿಗೆ ದಾಖಲಾತಿ ಹಸ್ತಾಂತರ ಮಾಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಾ ಚಂದ್ರು, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್, ಪ್ರಾದೇಶಿಕ ನಿರ್ದೇಶಕ ಎ. ಶ್ರೀಹರಿ, ಜಿಲ್ಲಾ ನಿರ್ದೇಶಕ ಗಣೇಶ್ ಹಾಜರಿದ್ದರು.

13 ಸಾವಿರ ಸಂಘ ರಚನೆ
ಚಾಮರಾಜನಗರ: `ಪ್ರಸ್ತುತ ಜಿಲ್ಲೆಯಲ್ಲಿ 13 ಸಾವಿರ ಸ್ವಸಹಾಯ ಸಂಘ ರಚಿಸಲಾಗಿದ್ದು, 42 ಸಾವಿರ ಮಂದಿ ಸದಸ್ಯರಿದ್ದಾರೆ. ಮುಂಬರುವ ಮಾರ್ಚ್ ಅಂತ್ಯದೊಳಗೆ 1.25 ಲಕ್ಷ ಸದಸ್ಯರನ್ನು ಯೋಜನೆ ವ್ಯಾಪ್ತಿಗೆ ಒಳಪಡಿಸುವ ಗುರಿ ಹೊಂದಲಾಗಿದೆ~ ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದರು.

ಜಿಲ್ಲೆಯಲ್ಲಿ ಶೇ. 60ರಷ್ಟು ಬಯಲು ಶೌಚಾಲಯವಿದೆ. ಈ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ 4 ಸಾವಿರ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಸಂಸ್ಥೆ ಹಾಗೂ ಸರ್ಕಾರದ ಅನುದಾನ ಬಳಸಿಕೊಂಡು ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದ ಅವರು, ಮಹಿಳೆಯರು ನೈರ್ಮಲ್ಯದ ಬಗ್ಗೆ ಅರಿವು ಹೊಂದಬೇಕು. ಸಂಘಟಿತ ಶಕ್ತಿ ಬೆಳೆಸಿಕೊಂಡರೆ ಪರಿವರ್ತನೆಯ ಹಾದಿಯಲ್ಲಿ ಸಾಗಬಹುದು ಎಂದರು.

ಮುಂದಿನ ವರ್ಷದಿಂದ ಜಿಲ್ಲೆಯಲ್ಲಿ ಸಂಪೂರ್ಣ ಸುರಕ್ಷಾ ವಿಮಾ ಯೋಜನೆಯನ್ನೂ ಅನುಷ್ಠಾನಗೊಳಿಸಲಾಗುವುದು. ಸುಜ್ಞಾನನಿಧಿ ಶಿಷ್ಯವೇತನದ ಸೌಲಭ್ಯವೂ ಇದೆ. ಹಂತ ಹಂತವಾಗಿ ಈ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT