ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಯ ಪಥಕ್ಕೆ ಮರಳಿದ ಆರ್ಥಿಕ ಸ್ಥಿತಿ

2013-14ರಲ್ಲಿ ಶೇ6.4 `ಜಿಡಿಪಿ' ನಿರೀಕ್ಷೆ: ಪಿಎಂಇಎಸಿ
Last Updated 23 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಆರ್ಥಿಕ ಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಮಂದಗತಿ ಪ್ರಗತಿ ಕೊನೆಗೊಂಡಿದ್ದು, ದೇಶ ಮತ್ತೆ ಅಭಿವೃದ್ಧಿಯ ಪಥಕ್ಕೆ ಮರಳಿದೆ. ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ (ಜಿಡಿಪಿ) 2013-14ರಲ್ಲಿ ಶೇ 6.4ಕ್ಕೆ ಏರಲಿದೆ ಎಂದು ಪ್ರಧಾನ ಮಂತ್ರಿಗಳ ಸಲಹಾ ಸಮಿತಿ(ಪಿಎಂಇಎಸಿ) ವಿಶ್ವಾಸ ವ್ಯಕ್ತಪಡಿಸಿದೆ.

ಕೃಷಿ ಮತ್ತು ಪರಿಕರ ತಯಾರಿಕೆ ಕ್ಷೇತ್ರದ ಸಾಧನೆ ಉತ್ತಮಗೊಂಡಿದ್ದರ ಪರಿಣಾಮವಾಗಿ `ಜಿಡಿಪಿ' ಮತ್ತೆ ಮೇಲ್ಮುಖವಾಗಿದೆ. 2012-13ನೇ ಹಣಕಾಸು ವರ್ಷದಲ್ಲಿ `ಜಿಡಿಪಿ' ಶೇ 5ರಷ್ಟು ದಾಖಲಾಗಿದ್ದುದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 1.4ರಷ್ಟು ಹೆಚ್ಚಳ ಸಾಧಿಸಲಿದೆ ಎಂದು `ಪಿಎಂಇಎಸಿ' ಅಧ್ಯಕ್ಷ ಸಿ.ರಂಗರಾಜನ್ ಹೇಳಿದರು.

ಮಂಗಳವಾರ ಇಲ್ಲಿ ಆರ್ಥಿಕ ಪರಾಮರ್ಶೆ ಪ್ರಕಟಿಸಿದ ಅವರು, ಸದ್ಯ ದೇಶದ ಬೆಳವಣಿಗೆಯ ಗತಿ ಆಶಾದಾಯಕವಾಗಿದೆ. ಸರ್ಕಾರ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡರೆ ಮತ್ತು ನಿಗದಿತ ಯೋಜನೆಗಳು ತ್ವರಿತಗತಿಯಲ್ಲಿ  ಅನುಷ್ಠಾನಕ್ಕೆ ಬಂದರೆ ಮುಂದಿನ ದಿನಗಳಲ್ಲಿ ಶೇ 7.5ರಿಂದ 8ರವರೆಗೂ `ಜಿಡಿಪಿ' ಪ್ರಗತಿಯನ್ನು ಕಾಣುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

2012-13ನೇ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಕೇಂದ್ರ ಸರ್ಕಾರ ಸಬ್ಸಿಡಿ ನೆರವಿನ ಅಡುಗೆ ಅನಿಲ ಸಿಲಿಂಡರ್ ಮಿತಿಗೊಳಿಸಿದ್ದು, ಡೀಸೆಲ್ ದರ ನಿಗದಿ ನಿಯಂತ್ರಣ ತೆಗೆದುಹಾಕಿದ್ದು, ಸಕ್ಕರೆ ವಲಯವನ್ನೂ ಮುಕ್ತಗೊಳಿಸಿದ್ದು ಸೇರಿದಂತೆ ಹಲವು ಕಠಿಣ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದಿತು. ಆ ಮೂಲಕ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡಿಕೊಂಡಿದ್ದನ್ನು ಸ್ಮರಿಸಬಹುದು.

ಆಡಳಿತಾತ್ಮಕ ತೊಡಕು
`ಪ್ರಗತಿಯ ವಿಚಾರದಲ್ಲಿ ಕಳೆದ ಸಾಲಿನಲ್ಲಿ ಕೆಳಕ್ಕೆ ಜಾರಿದ್ದೆವು. ಆದರೆ, ಈಗ ಬೆಳವಣಿಗೆಯ ಗತಿಗೆ ವೇಗ ಬಂದಿದೆ. ಮುಂದಿನ ದಿನಗಳಲ್ಲಿಯೂ ಹೀಗೆಯೇ ಮುಂದುವರಿಯಲಿದೆ. ಆದರೆ, ಆಡಳಿತಾತ್ಮಕವಾದ ಕೆಲವು ತೊಡಕುಗಳಿದ್ದು, ಅವು ಪರಿಹಾರವಾಗಬೇಕಿದೆ' ಎಂದು ಹಿರಿಯ ಅರ್ಥಶಾಸ್ತ್ರಜ್ಞ ರಂಗರಾಜನ್ ಗಮನ ಸೆಳೆದರು.

`ಪಿಎಂಇಎಸಿ' ಕಳೆದ ವರ್ಷದ ಆಗಸ್ಟ್‌ನಲ್ಲಿಯೂ ಇದೇ ಬಗೆಯಲ್ಲಿ 2012-13ರಲ್ಲಿ ಶೇ 6.7ರಷ್ಟು `ಜಿಡಿಪಿ' ದಾಖಲಾಗಲಿದೆ ಎಂದು ಭವಿಷ್ಯ ನುಡಿದಿದ್ದಿತು.

ಚಾಲ್ತಿ ಖಾತೆ ಕೊರತೆ
ಆರ್ಥಿಕ ಮಂದಗತಿ ಪ್ರಗತಿಗೆ `ಚಾಲ್ತಿ ಖಾತೆ ಕೊರತೆ' (ಸಿಎಡಿ) ಸಹ ಕಾರಣವಾಗಿದೆ. 2012-13ರಲ್ಲಿ `ಸಿಎಡಿ' ಶೇ 5.1ಕ್ಕೇರಿದ್ದು, 2013-14ರಲ್ಲಿ ಶೇ 4.7ಕ್ಕೆ ತಗ್ಗಲಿದೆ ಎಂದು `ಪಿಎಂಇಎಸಿ' ವರದಿಯಲ್ಲಿ ಹೇಳಿದೆ.

ರಫ್ತು-ಆಮದು ನಡುವಿನ ಅಂತರದ ಕೊರತೆ ಕಳೆದ ಹಣಕಾಸು ವರ್ಷದಲ್ಲಿ `ಜಿಡಿಪಿ'ಯ ಶೇ 6.7ಕ್ಕೆ ಏರಿಕೆ ಆಗಿದ್ದುದು ಕಳವಳಕ್ಕೆ ಕಾರಣವಾಗಿದ್ದಿತು.
`ಸಿಎಡಿ'ಯತ್ತ ಗಮನ ಸೆಳೆದ ರಂಗರಾಜನ್, ರಫ್ತು ಚಟುವಟಿಕೆಯನ್ನು ಹೆಚ್ಚಿಸಬೇಕಾದ ತುರ್ತು ಅಗತ್ಯವಿದೆ. ಸರಕು ಮತ್ತು ಸೇವೆಗಳ ರಫ್ತು ಎರಡೂ ವಿಭಾಗದಲ್ಲಿಯೂ ವೃದ್ಧಿ ಕಾಣಬೇಕಿದೆ ಎಂದರು.

ಹಣದುಬ್ಬರ ಸದ್ಯ ಮೇಲಿನ ಮಟ್ಟದಲ್ಲಿಯೇ ಇದ್ದರೂ ಕೆಲ ಸಮಯದ ತರುವಾಯ `ಸಗಟು ಧಾರಣೆ ಸೂಚ್ಯಂಕ' (ಡಬ್ಲ್ಯುಪಿಐ) ನಿಧಾನವಾಗಿ ತಗ್ಗಲಿದೆ. ಒಂದೊಮ್ಮೆ ಹಣದುಬ್ಬರ ತಗ್ಗಿದರೆ ಆಗ ಒಟ್ಟಾರೆ ಪ್ರಗತಿಗೆ ಅಗತ್ಯವಾದ ಹಣಕಾಸು ನೀತಿಯನ್ನು ಪ್ರಕಟಿಸಲು ಸರ್ಕಾರಕ್ಕೂ ಅವಕಾಶವಾಗಲಿದೆ ಎಂದು ರಂಗರಾಜನ್ ಅಭಿಪ್ರಾಯಪಟ್ಟರು.

ಕೃಷಿ-ಕೈಗಾರಿಕೆ ಕ್ಷೇತ್ರ ಪ್ರಗತಿ
2012-13ನೇ ಹಣಕಾಸು ವರ್ಷದಲ್ಲಿ ಶೇ 1.8ರಷ್ಟು ಕಳಪೆ ಸಾಧನೆ ತೋರಿದ್ದ ದೇಶದ ಕೃಷಿ ಕ್ಷೇತ್ರ, ಈ ಬಾರಿ ಶೇ 3.5ರಷ್ಟು ಪ್ರಗತಿ ದಾಖಲಿಸುವ ನಿರೀಕ್ಷೆ ಇದೆ.

ಸಾಧಾರಣ ಮುಂಗಾರು ಆಗಮಿಸಿದರೂ ಈ ಬಾರಿ ಕೃಷಿ ಕ್ಷೇತ್ರದಲ್ಲಿ ಶೇ 3.5ರಷ್ಟು ಸಾಧನೆ ಸಾಧ್ಯವಾಗಲಿದೆ ಎಂದು `ಪಿಎಂಇಎಸಿ' ಭವಿಷ್ಯ ನುಡಿದಿದೆ.
ಇದರೊಟ್ಟಿಗೆ ಕೈಗಾರಿಕಾ ವಲಯವೂ ಸಾಧನೆಯನ್ನು ಶೇ 3.1ರಿಂದ ಶೇ 4.9ಕ್ಕೆ, ಸೇವಾ ಕ್ಷೇತ್ರ ಶೇ 6.6ರಿಂದ ಶೇ 7.7ಕ್ಕೆ ಸುಧಾರಿಸಿಕೊಳ್ಳುವ ಸಾಧ್ಯತೆ ಇದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT